ಮುರುಘಾ ಮಠ, ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಯನ್ನು ಉಪವಾಸಕ್ಕೆ ದೂಡಬಾರದು: ಹೈಕೋರ್ಟ್​ ಸೂಚನೆ

ಪ್ರತಿತಿಂಗಳು 200ಕ್ಕೂ ಚೆಕ್​ಗಳಿಗೆ ಮುರುಘಾ ಶರಣರು ಸಹಿ ಹಾಕಬೇಕಿದೆ. ಇಲ್ಲದಿದ್ದರೆ ವೇತನ ಪಾವತಿ ಸಾಧ್ಯವಾಗುವುದಿಲ್ಲ ಎಂದು ಮುರುಘಾ ಶರಣರ ಪರ ವಕೀಲ‌ರು ವಾದ ಮಂಡಿಸಿದರು.

ಮುರುಘಾ ಮಠ, ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಯನ್ನು ಉಪವಾಸಕ್ಕೆ ದೂಡಬಾರದು: ಹೈಕೋರ್ಟ್​ ಸೂಚನೆ
ಕರ್ನಾಟಕ ಹೈಕೋರ್ಟ್​ ಮತ್ತು ಶಿವಮೂರ್ತಿ ಮುರುಘಾ ಶರಣರು
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 28, 2022 | 2:40 PM

ಬೆಂಗಳೂರು: ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನದಲ್ಲಿರುವ ಶಿವಮೂರ್ತಿ ಮುರುಘಾ ಶರಣರಿಗೆ ಚೆಕ್ ಹಾಗೂ ಇತರ ದಾಖಲೆಗಳಿಗೆ ಸಹಿ ಹಾಕಲು ಅವಕಾಶ ನೀಡಬೇಕು ಎಂದು ಕೋರಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್​ ಆರಂಭಿಸಿದೆ. ಮಠದ ಸಿಬ್ಬಂದಿ ಮತ್ತು ಶಿಕ್ಷಣ ಸಂಸ್ಥೆಯ ಸಿಬ್ಬಂದಿಗೆ ವೇತನ ಪಾವತಿ ಹಾಗೂ ಇತರ ಖರ್ಚುಗಳಿಗಾಗಿ ಪ್ರತಿತಿಂಗಳು 200ಕ್ಕೂ ಚೆಕ್​ಗಳಿಗೆ ಮುರುಘಾ ಶರಣರು ಸಹಿ ಹಾಕಬೇಕಿದೆ. ಇಲ್ಲದಿದ್ದರೆ ವೇತನ ಪಾವತಿ ಸಾಧ್ಯವಾಗುವುದಿಲ್ಲ ಎಂದು ಮುರುಘಾ ಶರಣರ ಪರ ವಕೀಲ‌ ಸಂದೀಪ್ ಪಾಟೀಲ್ ವಾದ ಮಂಡಿಸಿದರು.

ವಾದ ಆಲಿಸಿದ ಹೈಕೋರ್ಟ್, ‘ನಿಮ್ಮ ಸಮಸ್ಯೆಯಿಂದ‌ ಯಾವುದೇ ಸಿಬ್ಬಂದಿಯನ್ನು ಉಪವಾಸಕ್ಕೆ ದೂಡಬಾರದು. ಬಂಧನಕ್ಕೆ ಮೊದಲು ಹೇಗೆ ಸಂಬಳ ನೀಡಲಾಗುತ್ತಿತ್ತು ಎನ್ನುವ ಬಗ್ಗೆ ವಿವರವಾದ ಮಾಹಿತಿ ಇರುವ ಮೆಮೊ ಸಲ್ಲಿಸಿ’ ಎಂದು ಮುರುಘಾ ಶರಣರ ಪರ ವಕೀಲರಿಗೆ ಸೂಚನೆ ನೀಡಿತು.

ಹೈಕೋರ್ಟ್​ ಮೆಟ್ಟಿಲೇರುವ ಮೊದಲು ಜೈಲಿನಿಂದಲೇ ಚೆಕ್, ದಾಖಲೆಗಳಿಗೆ ಸಹಿ ಹಾಕಲು ಅನುಮತಿ ಕೋರಿ ಮುರುಘಾ ಶರಣರ ಪರ ವಕೀಲರು ಚಿತ್ರದುರ್ಗದ ಸೆಷನ್​ ಕೋರ್ಟ್​ಗೆ ಮನವಿ ಮಾಡಿದ್ದರು. ಆದರೆ ಕೋರ್ಟ್, ಸೆ 20ರಂದು ಅನುಮತಿ ನಿರಾಕರಿಸಿ ಆದೇಶ ಹೊರಡಿಸಿತ್ತು. ಮುರುಘಾ ಮಠದಿಂದ ನಡೆಸಲಾಗುತ್ತಿರುವ ಎಸ್​ಜೆಎಂ ವಿದ್ಯಾಪೀಠದ ಸುಮಾರು 5000 ನೌಕರರಿಗೆ ವೇತನ ನೀಡಲು ಚೆಕ್​ಗೆ ಅಧ್ಯಕ್ಷರಾದ ಶಿವಮೂರ್ತಿ ಶರಣರ ಸಹಿ ಅಗತ್ಯವಾಗಿದೆ ಎಂಬ ಸ್ವಾಮೀಜಿ ವಕೀಲರ ವಾದವನ್ನು ಸೆಷನ್ ಕೋರ್ಟ್​ ಒಪ್ಪಿರಲಿಲ್ಲ.

ಮುರುಘಾ ಶರಣರ ಪರ ವಕೀಲರ ವಾದವನ್ನು ವಿರೋಧಿಸಿದ್ದ ಸರ್ಕಾರಿ ವಕೀಲರು, ಕಾರಾಗೃಹದಲ್ಲಿವವರಿಗೆ ಸಹಿ ಮಾಡುವ ಅಧಿಕಾರ ಕೊಟ್ಟರೆ ಮುಂದಿನ ದಿನಗಳಲ್ಲಿ ಶ್ರೀಮಠದ ಆಸ್ತಿ-ಪಾಸ್ತಿಗಳಿಗೆ ತೊಂದರೆಗಳಾಗುವ ಸಾಧ್ಯತೆ ಇರುತ್ತದೆ. ಈಗಾಗಲೇ ಮಠಕ್ಕೆ ಪ್ರಭಾರ ಸ್ವಾಮೀಜಿ ಹಾಗೂ ಆಡಳಿತಾಧಿಕಾರಿಯನ್ನು ನೇಮಿಸಲಾಗಿದೆ. ಹೀಗಾಗಿ ಮುರುಘಾ ಶರಣರಿಗೆ ಸಹಿ ಹಾಕುವ ಅಧಿಕಾರ ಕೊಡುವ ಅಗತ್ಯವಿಲ್ಲ ಎಂದು ಹೇಳಿದ್ದರು. ಸರ್ಕಾರಿ ವಕೀಲರ ವಾದ ಒಪ್ಪಿದ್ದ ಕೋರ್ಟ್ ಚೆಕ್​ಗೆ​ ಸಹಿ ಮಾಡಲು ಶ್ರಿಗಳಿಗೆ ಅವಕಾಶ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಮುರುಘಾ ಶರಣರು ಹೈಕೋರ್ಟ್​ಗೆ​ ಮೊರೆ ಹೋಗಿದ್ದಾರೆ.

Published On - 2:40 pm, Wed, 28 September 22