AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರು ಮಕ್ಕಳ ಆಟಿಕೆಯಲ್ಲ: ಅಪಘಾತದಲ್ಲಿ ಮೂವರ ಬಲಿತೆಗೆದುಕೊಂಡ ಬಾಲಕನ ತಂದೆಯ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್!

ಮೈಸೂರಿನಲ್ಲಿ 14 ವರ್ಷದ ಬಾಲಕನ ಕಾರು ಅಪಘಾತದಿಂದ ಮೂವರು ಸಾವನ್ನಪ್ಪಿದ ಪ್ರಕರಣದಲ್ಲಿ, ಅಪ್ರಾಪ್ತನ ತಂದೆಯ ವಿರುದ್ಧದ ನರಹತ್ಯೆಗೆ ಸಮಾನವಲ್ಲದ ಕೊಲೆ ಆರೋಪದ ವಿಚಾರಣೆ ಮುಂದುವರಿಯಲಿದೆ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ. ಕಾರು ಮಕ್ಕಳ ಆಟಿಕೆಯಲ್ಲ ಎಂದು ಎಚ್ಚರಿಸಿರುವ ನ್ಯಾಯಾಲಯ, ಪೋಷಕರು ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗದು ಎಂದು ತಿಳಿಸಿದೆ.

ಕಾರು ಮಕ್ಕಳ ಆಟಿಕೆಯಲ್ಲ: ಅಪಘಾತದಲ್ಲಿ ಮೂವರ ಬಲಿತೆಗೆದುಕೊಂಡ ಬಾಲಕನ ತಂದೆಯ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್!
ಕರ್ನಾಟಕ ಹೈ ಕೋರ್ಟ್​Image Credit source: gettyimages.com
ಭಾವನಾ ಹೆಗಡೆ
|

Updated on: Oct 20, 2026 | 12:57 PM

Share

ಮುಖ್ಯಾಂಶಗಳು

  • ಮಕ್ಕಳ ಕೈಗೆ ಕಾರು ನೀಡುವುದು ಆಟಿಕೆಯಲ್ಲ ಎಂದು ಹೈಕೋರ್ಟ್ ಎಚ್ಚರಿಕೆ.
  • ಮೂವರ ಸಾವಿಗೆ ಕಾರಣರಾದ ಅಪ್ರಾಪ್ತನ ತಂದೆಗೆ ವಿಚಾರಣೆ ಎದುರಿಸಲು ಸೂಚನೆ.
  • ರಾಜ್ಯದಲ್ಲಿ ಅಪ್ರಾಪ್ತರ ವಾಹನ ಚಾಲನೆ ಹಾಗೂ ಅಪಘಾತಗಳ ಬಗ್ಗೆ ಕಳವಳ.

ಬೆಂಗಳೂರು, ಅಕ್ಟೋಬರ್ 20: ಮಕ್ಕಳ ಕೈಗೆ ಮೋಟಾರು ವಾಹನಗಳನ್ನು ನೀಡುವುದಕ್ಕೆ ಅದು ಆಟಿಕೆಯಲ್ಲ ಮತ್ತು ಸಾರ್ವಜನಿಕ ರಸ್ತೆಗಳು ಆಟದ ಮೈದಾನವಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಮೈಸೂರಿನಲ್ಲಿ 14 ವರ್ಷದ ಬಾಲಕನೋರ್ವ ಕಾರು ಚಲಾಯಿಸಿ ನಡೆಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದ ಪ್ರಕರಣದಲ್ಲಿ, ಅಪರಾಧ ಮುಕ್ತಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಳ್ಳಿಹಾಕಿದೆ. ಅಲ್ಲದೆ, ಆರೋಪಿ ಬಾಲಕನ ತಂದೆಯ ವಿರುದ್ಧದ ಉದ್ದೇಶಪೂರ್ವಕವಲ್ಲದ ನರಹತ್ಯೆ (Culpable Homicide) ಆರೋಪದ ವಿಚಾರಣೆ ಮುಂದುವರಿಯಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಮಕ್ಕಳ ಅಪ್ರಾಪ್ತತೆಯನ್ನು ಮುಂದಿಟ್ಟು ಪಾಲಕರು ನುಣುಚಿಕೊಳ್ಳಲಾಗದು ಎಂದ ಕೋರ್ಟ್​

2020ರ ಡಿಸೆಂಬರ್‌ನಲ್ಲಿ ಹಳೆ ಬೆಂಗಳೂರು-ಮೈಸೂರು ರಸ್ತೆಯಲ್ಲಿ ನಡೆದ ಈ ದುರ್ಘಟನೆಯಲ್ಲಿ ದಂಪತಿ ಹಾಗೂ ಅವರ 5 ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿದ್ದರು. ಅಪಘಾತ ನಡೆಸಿದ ವೋಕ್ಸ್‌ವ್ಯಾಗನ್ ವೆಂಟೋ ಕಾರನ್ನು ಅರ್ಜಿದಾರ ನದೀಮ್-ಉರ್-ರೆಹಮಾನ್ ಅವರ ಮಾಲೀಕರು ಅವರಿಗೆ ನೀಡಿದ್ದರು. ತನಗೆ ಅರಿವಿಲ್ಲದಂತೆ ಮಗ ಆ ಕಾರನ್ನು ತೆಗೆದುಕೊಂಡು ಹೋಗಿದ್ದಾನೆಂದು ನದೀಮ್ ಹೇಳಿದ್ದರು. ಹೀಗಾಗಿ ಇದು ಉದ್ದೇಶಪೂರ್ವಕವಲ್ಲದ ನರಹತ್ಯೆಯೆಂದು ಪರಿಗಣಿಸಿ ದೋಷಾರೋಪ ಪಟ್ಟಿ ರದ್ದುಪಡಿಸಬೇಕೆಂದು ಅರ್ಜಿದಾರರಪರ ವಕೀಲರು ವಾದಿಸಿದ್ದರು. ಆದರೆ ಈ ವಾದವನ್ನು ತಳ್ಳಿಹಾಕಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ಕಷ್ಟ ಬಂದಾಗ ಮಗನ ಅಪ್ರಾಪ್ತತೆಯ ಸಬೂಬು ಹೇಳಿ ಪೋಷಕರು ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗದು ಎಂದು ಅಭಿಪ್ರಾಯಪಟ್ಟಿದೆ.

ರಾಜ್ಯದಲ್ಲಿ ಅಪ್ರಾಪ್ತರಿಂದಲೇ 751 ಅಪಘಾತಗಳು

ಅರ್ಜಿದಾರರು ತಾವೇ ಮಗನಿಗೆ ಗಾಡಿಯ ಕೀ ಕೊಟ್ಟು ಕಳುಹಿಸಿರುವುದು ದೋಷಾರೋಪ ಪಟ್ಟಿಯಲ್ಲಿ ಸಾಬೀತಾಗಿದೆ. ಪೋಷಕರು ಸ್ವಇಚ್ಛೆಯಿಂದ ವಾಹನದ ಕೀಗಳನ್ನು ಅಪ್ರಾಪ್ತರಿಗೆ ನೀಡಿದಾಗ ಸಂಭವಿಸುವ ದುರಂತಗಳಿಗೆ ಅವರೇ ಹೊಣೆಯಾಗಬೇಕಾಗುತ್ತದೆ. ಇದು ಕೇವಲ ನಿರ್ಲಕ್ಷ್ಯವೇ ಅಥವಾ ಕುಕೃತ್ಯವೇ ಎಂಬುದು ವಿಚಾರಣೆಯ ಹಂತದಲ್ಲಿ ನಿರ್ಧಾರವಾಗಲಿದೆ ಎಂದು ಕೋರ್ಟ್ ತಿಳಿಸಿದೆ. ಕರ್ನಾಟಕದಲ್ಲಿ ಅಪ್ರಾಪ್ತರು ನಡೆಸುವ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ನ್ಯಾಯಾಲಯ, 2025-26ರಲ್ಲಿ ರಾಜ್ಯದಲ್ಲಿ ಅಪ್ರಾಪ್ತರಿಂದಲೇ 751 ಅಪಘಾತಗಳು ಸಂಭವಿಸಿವೆ ಎಂದು ಕಳವಳ ವ್ಯಕ್ತಪಡಿಸಿದೆ. ಈ ಕಠಿಣ ಆದೇಶದ ಮೂಲಕ ಅಪ್ರಾಪ್ತರಿಗೆ ವಾಹನ ಚಲಾಯಿಸಲು ನೀಡುವ ಪೋಷಕರಿಗೆ ಹೈಕೋರ್ಟ್ ಎಚ್ಚರಿಕೆ ನೀಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಭಾವನಾ ಹೆಗಡೆ
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More