ಹೆಚ್ಚುವರಿ ಶುಲ್ಕ ವಿಧಿಸಲು ಅವಕಾಶ ಕೋರಿ ಹೈಕೋರ್ಟ್​ಗೆ ಓಲಾ, ಉಬರ್ ಅರ್ಜಿ: 5 ದಿನದಲ್ಲಿ ಪ್ರತಿಕ್ರಿಯಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 07, 2022 | 12:42 PM

ಹೆಚ್ಚುವರಿ ಶುಲ್ಕ ವಿಧಿಸಲು ಅನುಮತಿ ನೀಡಬೇಕು ಎನ್ನುವ ಓಲಾ, ಊಬರ್ ಕಂಪನಿಗಳ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರವು 5 ದಿನಗಳ ಕಾಲಾವಕಾಶ ನೀಡಿದೆ.

ಹೆಚ್ಚುವರಿ ಶುಲ್ಕ ವಿಧಿಸಲು ಅವಕಾಶ ಕೋರಿ ಹೈಕೋರ್ಟ್​ಗೆ ಓಲಾ, ಉಬರ್ ಅರ್ಜಿ: 5 ದಿನದಲ್ಲಿ ಪ್ರತಿಕ್ರಿಯಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಆ್ಯಪ್ ಆಧರಿತ ಸೇವೆ ಒದಗಿಸುವ ಓಲಾ, ಊಬರ್ ಕಂಪನಿಗಳು ಕರ್ನಾಟಕ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್​ನಲ್ಲಿ ಪ್ರಶ್ನಿಸಿವೆ. ಅಗ್ರಿಗೇಟರ್ ಆ್ಯಪ್​ಗಳ ಮೂಲಕ ಸಾರಿಗೆ ಸೇವೆ ಒದಗಿಸುವ ಕಂಪನಿಗಳಿಗೆ ಕನಿಷ್ಠ ಶುಲ್ಕ ನಿಗದಿಪಡಿಸಲು ರಾಜ್ಯ ಸರ್ಕಾರವು ಪ್ರಯತ್ನಿಸಿತ್ತು. ಆದರೆ ಸಾರಿಗೆ ಇಲಾಖೆ ಕ್ರಮ ರದ್ದು ಕೋರಿ ಈ ಕಂಪನಿಗಳು ನ್ಯಾಯಾಲಯದ ಮೊರೆ ಹೋಗಿವೆ. ಸಂಬಂಧಿಸಿದವರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುತ್ತೇವೆ. ಇದಕ್ಕೆ 4 ವಾರಗಳ ಕಾಲಾವಕಾಶ ಬೇಕು ಎಂದು ರಾಜ್ಯ ಸರ್ಕಾರವು ನ್ಯಾಯಾಲಯವನ್ನು ಕೋರಿದೆ.

ಹೆಚ್ಚುವರಿ ಶುಲ್ಕ ವಿಧಿಸಲು ಅನುಮತಿ ನೀಡಬೇಕು ಎನ್ನುವ ಓಲಾ, ಊಬರ್ ಕಂಪನಿಗಳ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರವು 5 ದಿನಗಳ ಕಾಲಾವಕಾಶ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್​ 16ಕ್ಕೆ ಮುಂದೂಡಲಾಗಿದೆ.

ಈ ಮೊದಲು ಹೈಕೋರ್ಟ್​ ಎರಡೂ ಕಂಪೆನಿಗಳ ಜೊತೆಗೆ ಸಭೆ ನಡೆಸಿ ಕನಿಷ್ಠ ದರ ನಿಗದಿಪಡಿಸಲು ಸೂಚಿಸಿತ್ತು. ಆದರೆ ಕನಿಷ್ಠ ದರ ನಿಗದಿಪಡಿಸಲು ಸಾರಿಗೆ ಇಲಾಖೆ ವಿಫಲವಾಗಿತ್ತು. ಈ ಸಂಬಂಧ ಓಲಾ, ಉಬರ್​, ಱಪಿಡೋ ಕಂಪನಿ ಜತೆ ಸಾರಿಗೆ ಇಲಾಖೆ ಅಧಿಕಾರಿಗಳು ಸಭೆ ನಡೆಸಿದ್ದರು. ಆದರೆ ಏನೂ ಪ್ರಯೋಜನವಾಗಿರಲಿಲ್ಲ. ಕನಿಷ್ಠ ದರವಾಗಿ 2 ಕಿಮೀಗೆ ₹ 100 ನಿಗದಿಪಡಿಸಬೇಕು ಎಂದು ಕಂಪನಿಗಳು ಬೇಡಿಕೆಯಿಟ್ಟಿವೆ. ಈ ಬೇಡಿಕೆಗೆ ಸಾರಿಗೆ ಇಲಾಖೆ ಅಧಿಕಾರಿಗಳು ಒಪ್ಪುತ್ತಿಲ್ಲ. ಹೀಗಾಗಿ ದರ ನಿಗದಿ ಗೊಂದಲ ಹಾಗೆಯೇ ಮುಂದುವರಿದಿದೆ.

ಹದಿನೈದು ದಿನದೊಳಗೆ ಮೂರೂ ಕಂಪನಿಗಳು, ಆಟೋ ಸಂಘಟನೆಗಳು ‌ಹಾಗೂ ಪ್ರಯಾಣಿಕರ ಜೊತೆ ಸಭೆ ನಡೆಸಿ ನ್ಯಾಯಯುತ ದರ ನಿಗದಿ ಪಡಿಸಬೇಕು. ನಂತರ ಈ ಕುರಿತ ವರದಿಯನ್ನು ಹೈಕೋರ್ಟ್​ಗೆ ಸಲ್ಲಿಸಬೇಕು ಎಂದು ನ್ಯಾಯಾಧೀಶರು ಸೂಚಿಸಿದ್ದರು. ಆದರೆ ಹದಿನೈದು ದಿನಗಳ ಅವಧಿಯಲ್ಲಿ ಸಾರಿಗೆ ಇಲಾಖೆಯು ಕೇವಲ ಒಂದು ಸಭೆ ಮಾಡಿ ಸುಮ್ಮನಾಗಿದೆ. ಈ ಬಗ್ಗೆ ಆಟೊ ಚಾಲಕರು ಮತ್ತು ಮಾಲೀಕರ ಸಂಘಟನೆಗಳು, ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಸಾರಿಗೆ ಇಲಾಖೆಯು ಕಂಪನಿಗಳ ಪರವಾಗಿ ಕೆಲಸ ಮಾಡುತ್ತಿದೆ ಎಂದೂ ಹಲವರು ಅನುಮಾನ ವ್ಯಕ್ತಪಡಿಸಿದ್ದರು. ಸದ್ಯ ಹೈಕೋರ್ಟ್ ಸೂಚನೆಯಂತೆ ಈ ಕಂಪನಿಗಳು ಕನಿಷ್ಠ ಪ್ರಯಾಣ ದರ ಪಡೆಯುತ್ತಿವೆ. ಹೀಗಾಗಿ ಪ್ರಯಾಣಿಕರು ನೆಮ್ಮದಿಯಾಗಿ ಅಟೋಗಳಲ್ಲಿ ಸಂಚರಿಸುತ್ತಿದ್ದಾರೆ.

ಸಾರಿಗೆ ಇಲಾಖೆ ಆಯುಕ್ತ ವರ್ಗಾವಣೆ

ಓಲಾ ಮತ್ತು ಊಬರ್ ಕಂಪನಿಗಳ ಆಟಾಟೋಪಕ್ಕೆ ಕಡಿವಾಣ ಹಾಕಿದ್ದ ಸಾರಿಗೆ ಇಲಾಖೆ ಆಯುಕ್ತ ಎಚ್​.ಎಂ.ಟಿ.ಕುಮಾರ್ ಅವರನ್ನು ರಾಜ್ಯ ಸರ್ಕಾರವು ವರ್ಗಾವಣೆ ಮಾಡಿದೆ. ಅವರ ಸ್ಥಾನಕ್ಕೆ ಐಪಿಎಸ್​ ಅಧಿಕಾರಿ ಸಿದ್ದರಾಮಯ್ಯ ಅವರನ್ನು ನೇಮಿಸಲಾಗಿದೆ. ದರ ಪಟ್ಟಿ ನಿಗದಿ ಕಾರ್ಯದಲ್ಲಿ ಸಕ್ರಿಯರಾಗಿದ್ದ ಕುಮಾರ್ ಅವರ ವರ್ಗಾವಣೆಗೆ ಆಟೊ ಚಾಲಕರ ಸಂಘವು ವಿರೋಧ ವ್ಯಕ್ತಪಡಿಸಿದೆ. ‘ರಾಜ್ಯ ಸರ್ಕಾರವು ಓಲಾ ಮತ್ತು ಊಬರ್​ನಂಥ ಬಹುರಾಷ್ಟ್ರೀಯ ಕಂಪನಿಗಳ ಪರವಾಗಿದೆ. ಹೀಗಾಗಿಯೇ ಜನಪರ ಕೆಲಸ ಮಾಡುತ್ತಿದ್ದ ಆಯುಕ್ತರ ವರ್ಗಾವಣೆಯಾಗಿದೆ’ ಎಂದು ಭಾರತ್ ಟ್ರಾನ್ಸ್​ಪೋರ್ಟ್​ ಅಸೋಸಿಯೇಷನ್ ಆಕ್ಷೇಪ ವ್ಯಕ್ತಪಡಿಸಿದೆ.

Published On - 12:42 pm, Mon, 7 November 22