ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಕುರ್ಚಿಗಾಗಿ ಗುದ್ದಾಟ: ವರ್ಗಾವಣೆಯಾದರೂ ಪೀಠ ಬಿಟ್ಟುಕೊಡದ ಮಾಜಿ ಎಂಡಿ
ಹೊಸ ಎಂಡಿ ಸುರೇಶ್ ನಾಯಕ್ ಅಕ್ರಮವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಸುರೇಶ್ ಕುಮಾರ್ ಆರೋಪಿಸಿದ್ದಾರೆ.
ಬೆಂಗಳೂರು: ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ (ಎಂಡಿ) ಸುರೇಶ್ ನಾಯಕ್ ಅವರನ್ನು ಕರ್ನಾಟಕ ಸರ್ಕಾರವು ನೇಮಿಸಿದೆ. ಆದರೆ ಈ ಮೊದಲು ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ಎಂ.ಸುರೇಶ್ ಕುಮಾರ್ ಅವರು ಬೇರೆಡೆಗೆ ವರ್ಗಾವಣೆಯಾಗಿದ್ದರೂ ಸೀಟು ಬಿಟ್ಟುಕೊಡುತ್ತಿಲ್ಲ. ಈ ಹಿಂದೆ ನಾಯಕ್ ಅವರು ಅಧಿಕಾರ ಸ್ವೀಕರಿಸಲೂ ಸುರೇಶ್ ಕುಮಾರ್ ಅಡ್ಡಿಪಡಿಸಿದ್ದರು. ಬಳಿಕ ಸುರೇಶ್ ಕುಮಾರ್ ಅವರು ಉನ್ನತ ಅಧಿಕಾರಿಗಳ ಗಮನಕ್ಕೆ ತಂದು, ಒತ್ತಾಯದಿಂದ ಅಧಿಕಾರ ಸ್ವೀಕರಿಸಿದರು.
ನಿಗಮದ ಹಿಂದಿನ ಎಂಡಿ ಸುರೇಶ್ ಕುಮಾರ್ ಹೆಸರು ಕೊಳವೆಬಾವಿ ಹಗರಣದಲ್ಲಿ ಕೇಳಿಬಂದಿತ್ತು. ಈ ಹಗರಣದ ಬಗ್ಗೆ ಸದನದಲ್ಲಿಯೂ ಪ್ರಸ್ತಾಪವಾಗಿತ್ತು. ಹಗರಣದ ಬಗ್ಗೆ ವಿಸ್ತೃತ ತನಿಖೆ ನಡೆಸಲು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಸೂಚಿಸಿದ್ದರು. ಶಿಕ್ಷೆ ಕೊಡುವ ರೀತಿಯಲ್ಲಿ ಯಾವುದೇ ಸ್ಥಾನ ತೋರಿಸದೆ ವರ್ಗಾವಣೆ ಮಾಡಲಾಗಿದೆ. ಆದರೂ ಸುರೇಶ್ ಕುಮಾರ್ ಕುಮಾರ್ ಅವರು ಎಂಡಿ ಸೀಟು ಬಿಟ್ಟುಕೊಡುತ್ತಿಲ್ಲ. ‘ವರ್ಗಾವಣೆ ಆದೇಶ ಸರಿಯಾಗಿಲ್ಲ, ಸರ್ಕಾರ ಬೇರೆ ಹುದ್ದೆ ತೋರಿಸಿಲ್ಲ. ಹೊಸ ಎಂಡಿ ಸುರೇಶ್ ನಾಯಕ್ ಅಕ್ರಮವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ’ ಎಂದು ಸುರೇಶ್ ಕುಮಾರ್ ಆರೋಪಿಸಿದ್ದಾರೆ.
ಸುರೇಶ್ ನಾಯಕ್ ಈ ವಾರವನ್ನು ಒಪ್ಪುತ್ತಿಲ್ಲ. ಸರ್ಕಾರದ ಆದೇಶದ ಅನ್ವಯ ಅಧಿಕಾರ ವಹಿಸಿಕೊಂಡಿದ್ದೇನೆ. ಹಳೇ ಎಂಡಿ ಸುರೇಶ್ ಕುಮಾರ್ ಅಕ್ರಮವಾಗಿ ಕಚೇರಿಯಲ್ಲಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಎಂಡಿ ಛೇಂಬರ್ನಲ್ಲಿ ಕೆಲ ಖಾಸಗಿ ವ್ಯಕ್ತಿಗಳು ಕಾಣಿಸಿಕೊಳ್ಳುತ್ತಿದ್ದಾರೆ. ಈ ಬೆಳವಣಿಗೆಯ ಬಗ್ಗೆಯೂ ಸುರೇಶ್ ನಾಯಕ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಂಬೇಡ್ಕರ್ ನಿಗಮದ ಬದಲಾಗಿ ಅಂಬಿಗರ ಚೌಡಯ್ಯ ನಿಗಮದಲ್ಲಿ ನಿಯೋಜಿತ ಎಂಡಿ ಸುರೇಶ್ ನಾಯಕ್ ಕಾಲ ಕಳೆಯುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆಯೂ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಮಾಹಿತಿ ನೀಡಲಾಗಿದೆ.
ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿಯ ಸೂಚನೆಯನ್ನು ಉಲ್ಲೇಖಿಸಿ ಸುರೇಶ್ ಕುಮಾರ್‌ಗೆ ಅ. 27 ರಂದು ನೋಟಿಸ್ ನೀಡಿರುವ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಮೇಜರ್ ಮಣಿವಣ್ಣನ್, ಅಮಾನತುಪಡಿಸಿ ತನಿಖೆಗೆ ಆದೇಶಿಸುವ ಬಗ್ಗೆ ತಿಳಿಸಿದ್ದಾರೆ. ಅಲ್ಲದೆ, ಆರೋಪಗಳಿಗೆ ಸಂಬಂಧಿಸಿದಂತೆ 15 ದಿನಗಳ ಒಳಗೆ ವಿವರಣೆ ನೀಡಬೇಕು ಎಂದೂ ನೋಟಿಸ್‌ನಲ್ಲಿ ಹೇಳಿದ್ದಾರೆ. ಆ ಬೆನ್ನಲ್ಲೆ, ಸುರೇಶ್ ಕುಮಾರ್ ಅವರನ್ನು (ಅ. 29) ಯಾವುದೇ ಸ್ಥಳ ತೋರಿಸದೆ ವರ್ಗಾವಣೆ ಮಾಡಲಾಗಿದೆ.
ಅಧಿಕಾರ ಸ್ವೀಕರಿಸಲೆಂದು ಅ 31ರಂದು ಸುರೇಶ್ ನಾಯಕ್ ನಿಗಮಕ್ಕೆ ತೆರಗಿದ್ದರು. ಆದರೆ ಅಂದು ಸುರೇಶ್ ಕುಮಾರ್ ಅವರು ಪ್ರವಾಸದ ನೆಪ ಹೇಳಿ ಕಚೇರಿಗೆ ಬಂದಿರಲಿಲ್ಲ. ಅವರ ಅನುಪಸ್ಥಿತಿಯಲ್ಲಿಯೇ ಸುರೇಶ್ ನಾಯಕ್ ಅವರು ಇಲಾಖೆಯ ಕಾರ್ಯದರ್ಶಿ ಮತ್ತು ಸಚಿವರಿಗೆ ಮಾಹಿತಿ ನೀಡಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ ಇದನ್ನು ಸುರೇಶ್ ಕುಮಾರ್ ಒಪ್ಪಿಕೊಂಡಿರಲಿಲ್ಲ.
ಸುರೇಶ್ ನಾಯಕ್ ಅಧಿಕಾರ ವಹಿಸಿಕೊಂಡ ಮಾರನೇ ದಿನ ನವೆಂಬರ್ 1, ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸರ್ಕಾರಿ ರಜೆ ಇತ್ತು. ನವೆಂಬರ್ 2ರಂದು ಕಚೇರಿ ಆರಂಭವಾಗುವ ಹೊತ್ತಿಗೆ ಹಳೇ ಎಂಡಿ ಸುರೇಶ್ ಕುಮಾರ್ ಅವರೇ ಚೇಂಬರ್ನ ಎಂಡಿ ಕುರ್ಚಿಯಲ್ಲಿದದರು. ತಾವು ಅಧಿಕಾರ ಸ್ವೀಕರಿಸಿರುವುದಾಗಿ ತಿಳಿಸಿದರೂ ಸುರೇಶ್ ಕುಮಾರ್ ಕುರ್ಚಿ ಬಿಡಲಿಲ್ಲ. ತಮ್ಮೊಂದಿಗೆ ತಮ್ಮ ಬೆಂಬಲಿಗರನ್ನೂ ಅಲ್ಲಿಯೇ ಕೂಡಿಸಿಕೊಂಡಿದ್ದರು. ಹೀಗಾಗಿ ಸುರೇಶ್ ನಾಯಕ್ ಕಚೇರಿಯಿಂದ ಹೊರಗೆ ತೆರಳಬೇಕಾಯಿತು.