ಬೆಂಗಳೂರು, (ಅಕ್ಟೋಬರ್ 11): ಕರ್ನಾಟಕ ಹೈಕೋರ್ಟ್ (Karnataka High Court) ಆದೇಶದ ನಡುವೆಯೂ ಬೆಂಗಳೂರು ನಗರದಲ್ಲಿ ಫೆಕ್ಸ್, ಬ್ಯಾನರ್ಸ್, ಹೋರ್ಡಿಂಗ್ಸ್, ಹಾವಳಿ ಹೆಚ್ಚುತ್ತಲ್ಲೇ ಇದೆ. ಮತ್ತೊಂದೆಡೆ ಈ ಜಾಹಿರಾತು ಫಲಕಗಳ ತಡೆಗೆ ಬಿಬಿಎಂಪಿ (BBMP) ಸೂಕ್ತ ಕಟ್ಟುನಿಟ್ಟಿನ ಕ್ರಮಕೈಗೊಂಡಿಲ್ಲ. ಇದರಿಂದ ಇದೀಗ ಹೈಕೋರ್ಟ್, ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಬೆಂಗಳೂರಿನಾದ್ಯಂತ ಫ್ಲೆಕ್ಸ್, ಹೋರ್ಡಿಂಗ್ ಗಳ ಸರ್ವೆಗೆ ಸಿಜೆ ಪ್ರಸನ್ನ ಬಿ ವರಾಳೆ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಪೀಠ ಆದೇಶ ಹೊರಡಿಸಿದೆ.
ಎಷ್ಟು ಜಾಹಿರಾತುಗಳಿಗೆ ಅನುಮತಿ ನೀಡಲಾಗಿದೆ? ಜಾಹಿರಾತು ಫಲಕಗಳಿಂದ ಎಷ್ಟು ಆದಾಯ ಸಂಗ್ರಹಿಸಲಾಗಿದೆ? ಅವಧಿ ಮೀರಿದ ಜಾಹಿರಾತು ಫಲಕಗಳ ವಿರುದ್ಧ ಕ್ರಮವೇನು? ಅನುಮತಿಯಿಲ್ಲದೇ ಅಳವಡಿಸಲಾದ ಫಲಕಗಳ ವಿರುದ್ಧ ಕೈಗೊಂಡ ಕ್ರಮಗಳೇನು? ಎಂದು ನವೆಂಬರ್ 28ರೊಳಗೆ ಸರ್ವೆ ನಡೆಸಿ ವರದಿ ಸಲ್ಲಿಸಲು ಹೈಕೋರ್ಟ್ ಸೂಚಿಸಿದೆ.
ಇದನ್ನೂ ಓದಿ: ಹೈಕೋರ್ಟ್ ಛೀಮಾರಿ ಹಾಕಿದ ಬಳಿಕ ಎಚ್ಚೆತ್ತ ಬಿಬಿಎಂಪಿ, 59,000 ಫ್ಲೆಕ್ಸ್ ಬ್ಯಾನರ್ ತೆರವು
ಬಿಬಿಎಂಪಿ ನಡೆ ಬಗ್ಗೆ ಗರಂ ಆದ ಸಿಜೆ ಪ್ರಸನ್ನ ಬಿ ವರಾಳೆ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಪೀಠ, ಅಕ್ರಮ ಹೋರ್ಡಿಂಗ್ ಗಳಿಂದ ಬಿಬಿಎಂಪಿಗೆ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿದೆ. ಜಾಹಿರಾತಿನಿಂದ ಪಡೆಯಬೇಕಾದ ತೆರಿಗೆಯನ್ನು ನಾಗರಿಕರ ಮೇಲೆ ಹೊರಿಸುತ್ತಿದ್ದೀರಿ. ಬಿಬಿಎಂಪಿ ವೈಫಲ್ಯದಿಂದ ಜನಸಾಮಾನ್ಯರ ಮೇಲೆ ತೆರಿಗೆ ಹೊರೆ ಬಿದ್ದಿದೆ. ಬಿಬಿಎಂಪಿ ನಗರಕ್ಕೆ ಮೊದಲ ಶತ್ರು ವಾಗಿ ಪರಿಣಮಿಸಿದೆ. ಒಂದೆಡೆ ಜಾಹಿರಾತು ಫಲಕಗಳಿಂದ ತೆರಿಗೆ ಸಂಗ್ರಹಿಸಲು ವಿಫಲರಾಗಿದ್ದೀರಿ. ಮತ್ತೊಂದೆಡೆ ನಾಗರಿಕರಿಗೆ ಸೌಲಭ್ಯ ಕಲ್ಪಿಸಲು ಬಿಬಿಎಂಪಿ ಹಣವಿಲ್ಲವೆನ್ನುತ್ತಿದ್ದು, ಬೆಂಗಳೂರಿನ ಅಭಿವೃದ್ಧಿಗೆ ಹಣವಿಲ್ಲವೆಂದು ಬಿಬಿಎಂಪಿ ಕೈ ಮೇಲೆತ್ತಿದೆ ಎಂದು ತರಾಟೆಗೆ ತೆಗೆದುಕೊಂಡಿತು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:31 pm, Wed, 11 October 23