ಹೈಕೋರ್ಟ್ ಛೀಮಾರಿ ಹಾಕಿದ ಬಳಿಕ ಎಚ್ಚೆತ್ತ ಬಿಬಿಎಂಪಿ, 59,000 ಫ್ಲೆಕ್ಸ್ ಬ್ಯಾನರ್ ತೆರವು
ಕರ್ನಾಟಕ ಹೈಕೋರ್ಟ್ ಛೀಮಾರಿ ಹಾಕಿದ ಬಳಿಕ ಎಚ್ಚೆತ್ತುಕೊಂಡ ಬಿಬಿಎಂಪಿ ಕೊನೆಗೂ ಎಚ್ಚೆತ್ತುಕೊಂಡಿದ್ದು, ಕೊನೆಗೂ ಅಕ್ರಮ ಬ್ಯಾನರ್-ಫ್ಲೆಕ್ಸ್ ತೆರವಿಗೆ ಮುಂದಾಗಿದೆ.
ಬೆಂಗಳೂರು, (ಆಗಸ್ಟ್ 09): ಕರ್ನಾಟಕ ಹೈಕೋರ್ಟ್(Karnataka High Court) ಛೀಮಾರಿ ಹಾಕಿದ ಬೆನ್ನಲ್ಲೇ ಬಿಬಿಎಂಪಿ(BBMP), ಬೆಂಗಳೂರು ನಗರದಲ್ಲಿ ಬರೋಬ್ಬರಿ 59,000 ಫ್ಲೆಕ್ಸ್ ಬ್ಯಾನರ್ ಮತ್ತು ಹೋರ್ಡಿಂಗ್‌ಗಳನ್ನು(flex banners) ತೆರವುಗೊಳಸಿದೆ. ಬೆಂಗಳೂರಿನಲ್ಲಿ ಅನಧಿಕೃತ ಜಾಹೀರಾತು ಹಾವಳಿ ತಡೆಯಲು ಪಂಚವಾರ್ಷಿಕ ಯೋಜನೆ ಬೇಕೆ? ಫ್ಲೆಕ್ಸ್ ತೆರವಿಗೆ ಶುಭ ಮುಹೂರ್ತಕ್ಕಾಗಿ ಕಾಯುತ್ತಿದ್ದೀರಾ? ಅಂತೆಲ್ಲಾ ಹೈಕೋರ್ಟ್ ಮೊನ್ನೇ ಅಷ್ಟೇ ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಇದರ ಬೆನ್ನಲ್ಲೇ ಇದೀಗ ಬಿಬಿಎಂಪಿ ಎಚ್ಚೆತ್ತುಕೊಂಡಿದ್ದು, ನಗರದ ವಿವಿದೆಡೆ ತಲೆ ಎತ್ತಿದ್ದ 59,000 ಫ್ಲಕ್ಸ್, ಬ್ಯಾನರ್ಗಳನ್ನು ತೆರವು ಮಾಡಿದೆ. ಅಕ್ರಮ ಹೋರ್ಡಿಂಗ್‌ಗಳಿಗೆ ಸಂಬಂಧಿಸಿದಂತೆ ಬಿಬಿಎಂಪಿಗೆ 134 ದೂರುಗಳು ಬಂದಿದ್ದು, 44 ಎಫ್‌ಐಆರ್‌ಗಳು ದಾಖಲಾಗಿವೆ.
ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನ್ಯಾಯಾಲಯದ ನಿರ್ದೇಶನಗಳನ್ನು ಜಾರಿಗೆ ತರಲು ಬಿಬಿಎಂಪಿಯು ನಗರದಾದ್ಯಂತ ಫ್ಲೆಕ್ಸ್ ಬ್ಯಾನರ್‌ಗಳಿಗೆ ಅವಕಾಶ ನೀಡುವುದಿಲ್ಲ ಮತ್ತು ಉಲ್ಲಂಘಿಸುವವರಿಗೆ 50,000 ರೂ. ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಯಾವುದೇ ರಾಜಕೀಯ ಪಕ್ಷಗಳು ಮತ್ತು ಮುಖಂಡರಿಗೆ ಹೋರ್ಡಿಂಗ್‌ಗಳನ್ನು ಹಾಕಲು ಅವಕಾಶ ನೀಡುವುದಿಲ್ಲ. ನಿಷೇಧಾಜ್ಞೆ ಜಾರಿ ಕುರಿತು ಪಕ್ಷಾತೀತವಾಗಿ ಶಾಸಕರೊಂದಿಗೆ ಮಾತನಾಡಿದ್ದೇನೆ. ಎರಡ್ಮೂರು ದಿನಗಳಲ್ಲಿ ಇದು ಜಾರಿಗೆ ಬರಲಿದೆ ಎಂದಿದ್ದಾರೆ.
ನಿಷೇಧಾಜ್ಞೆ ಜಾರಿಗೊಳಿಸುವಂತೆ ಬಿಬಿಎಂಪಿಗೆ ಹೈಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ ನೀಡಿರುವುದರಿಂದ ರಾಜಕೀಯ ಪಕ್ಷಗಳು ನಿಯಮಾವಳಿಗೆ ಬದ್ಧವಾಗಿರಬೇಕು. ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲು ಹಾಗೂ ಅಕ್ರಮ ಹೋರ್ಡಿಂಗ್‌ಗಳನ್ನು ತೆಗೆಯಲು ವಿಫಲವಾಗಿರುವ ಬಿಬಿಎಂಪಿಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಅದನ್ನು ತೆಗೆದುಹಾಕಲು ವಿಫಲವಾದರೆ ನ್ಯಾಯಾಲಯಕ್ಕೆ ದಂಡ ಪಾವತಿಸುವಂತೆ ಬಿಬಿಎಂಪಿಗೆ ಸೂಚಿಸಿತ್ತು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ