ಬೆಂಗಳೂರು: ಬಾಲಬ್ರೂಯಿ ಅತಿಥಿ ಗೃಹ ಕೆಡವಿ ಕ್ಲಬ್ ನಿರ್ಮಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಇದೀಗ ಹಿನ್ನಡೆಯಾಗಿದೆ. ಈ ಕುರಿತು ಮಧ್ಯಂತರ ಆದೇಶ ನೀಡಿರುವ ಕರ್ನಾಟಕ ಹೈಕೋರ್ಟ್ ಯಥಾಸ್ಥಿತಿ ಕಾಪಾಡಿಕೊಳ್ಳಲು ಆದೇಶಿಸಿದೆ. ಬಾಲಬ್ರೂಯಿ ಆವರಣದ ಮರಗಳನ್ನು ಕಡಿಯಬಾರದು ಎಂದು ಹೈಕೋರ್ಟ್ ಸ್ಪಷ್ಟವಾಗಿ ಸೂಚಿಸಿದೆ. ಬಾಲಬ್ರೂಯಿ ಆವರಣದ ಮರಗಳ ಸರ್ವೆ ನಡೆಸಿ ವರದಿ ಸಲ್ಲಿಸಬೇಕು. ಕೋರ್ಟ್ ಅನುಮತಿಯಿಲ್ಲದೇ ಮರಗಳನ್ನು ಕಡಿಯಬಾರದು ಎಂದು ಹೈಕೋರ್ಟ್ ವಿಭಾಗೀಯ ಪೀಠವು ಮಧ್ಯಂತರ ಆದೇಶದಲ್ಲಿ ತಿಳಿಸಿದೆ. ವಿಚಾರಣೆಯನ್ನು ನ್ಯಾಯಾಲಯವು ನವೆಂಬರ್ 19ಕ್ಕೆ ಮುಂದೂಡಿದೆ.
ಪಾರಂಪರಿಕ ಮೌಲ್ಯ ಹೊಂದಿರುವ ಬಾಲಬ್ರೂಯಿ ಕಟ್ಟಡದಲ್ಲಿ ಕಾನ್ಸ್ಟಿಟ್ಯೂಷನ್ ಕ್ಲಬ್ ನಿರ್ಮಿಸುವ ಸರ್ಕಾರಕ್ಕೆ ಪ್ರಸ್ತಾವಕ್ಕೆ ಈ ಹಿಂದೆ ಪರಿಸರವಾದಿಗಳು ಮತ್ತು ನಗರದ ಇತಿಹಾಸ ತಜ್ಞರಿಂದ ವಿರೋಧ ವ್ಯಕ್ತವಾಗಿತ್ತು. ‘ಬೆಂಗಳೂರಿನ ಪರಂಪರೆ ಸಾರುವ ಇಂಥ ತಾಣಗಳನ್ನು ಕಾಪಾಡಬೇಕು. ಒಮ್ಮೆ ಇಂಥ ಕಟ್ಟಡಗಳ ಮೂಲ ಸ್ವರೂಪ ನಾಶಪಡಿಸಿದರೆ ಮತ್ತೆ ರೂಪಿಸುವುದು ಅಸಾಧ್ಯ’ ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದರು.
‘ಮಹಾತ್ಮ ಗಾಂಧಿ, ರವೀಂದ್ರನಾಥ ಟ್ಯಾಗೋರ್ ಅವರಂಥ ಮಹನೀಯರು ಬಾಲಬ್ರೂಯಿ ಕಟ್ಟಡದಲ್ಲಿ ಉಳಿದುಕೊಂಡಿದ್ದರು. ಇಂಥ ಕಟ್ಟಡವನ್ನು, ಅಲ್ಲಿರುವ ಪ್ರಾಕೃತಿಕ ಸೌಂದರ್ಯವನ್ನು ಮರು ಸೃಷ್ಟಿಸಲು ಸಾಧ್ಯವಿಲ್ಲ. ಈ ಕಟ್ಟಡವನ್ನು ಮ್ಯೂಸಿಯಂ ಆಗಿ ರೂಪಿಸಬೇಕು’ ಎಂದು ಬಿ ಪ್ಯಾಕ್ ಸಂಸ್ಥೆಯ ಶರತ್ ಈ ಹಿಂದೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು.
ಬಾಲಬ್ರೂಯಿ ಕಟ್ಟಡವನ್ನು ಕಾನ್ಸ್ಟಿಟ್ಯೂಶನ್ ಕ್ಲಬ್ಗೆ ಬಳಸುವ ಪ್ರಸ್ತಾವ ವಿರೋಧಿಸಿ ಬೆಂಗಳೂರು ಪರಿಸರ ಟ್ರಸ್ಟ್ ಅಧ್ಯಕ್ಷ ಯಲ್ಲಪ್ಪ ರೆಡ್ಡಿ, ಭಾರತೀಯ ಸಸ್ಯಶಾಸ್ತ್ರ ಸರ್ವೆ ಸಂಸ್ಥೆಯ ಮಾಜಿ ನಿರ್ದೇಶಕ ಎಂ.ಸಂಜಪ್ಪ, ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಮಾಜಿ ಡೀನ್ ಪ್ರೊ.ಬಾಲಕೃಷ್ಣ ಗೌಡ, ಐಐಎ ಮಾಜಿ ಅಧ್ಯಕ್ಷ ಪ್ರೊ. ಜೈಸಿಂಹ ಶಾಸಕರಿಗೆ ಪತ್ರ ಬರೆದಿದ್ದರು.
14 ಎಕರೆ ಪ್ರದೇಶದಲ್ಲಿ 1850ರಲ್ಲಿ ಬಾಲಬ್ರೂಯಿ ಕಟ್ಟಡವನ್ನು ನಿರ್ಮಿಸಲಾಗಿತ್ತು. ಮೈಸೂರು ರಾಜ್ಯದಲ್ಲಿ ಸುದೀರ್ಘ ಕಾಲ ಆಯುಕ್ತರಾಗಿ ಸೇವೆ ಸಲ್ಲಿಸಿದ್ದ ಮಾರ್ಕ್ ಕಬ್ಬನ್ ತಮ್ಮ ಐರಿಶ್ ಸಮುದ್ರದ ದ್ವೀಪದ ಊರಿನಲ್ಲಿರುವ ರಚನೆಯನ್ನು ನಿರ್ಮಿಸಲು ಉದ್ದೇಶಿಸಿದ್ದರು. ಇಲ್ಲಿ 100 ವರ್ಷಗಳಿಗೂ ಹಳೆಯ ಸುಮಾರು 150 ವಿವಿಧ ಮರಗಳಿವೆ ಎಂದು ಪರಿಸರವಾದಿಗಳು ಹೇಳುತ್ತಾರೆ.
ಇದನ್ನೂ ಓದಿ: ಪ್ರೆಸ್ನವರಿಗೆ ಹೈಕೋರ್ಟ್ ಪಕ್ಕ ಕ್ಲಬ್ ಇರಬಹುದಾದರೆ, ಶಾಸಕರಿಗೆ ಬಾಲಬ್ರೂಯಿ ಕಟ್ಟಡದಲ್ಲಿ ಕ್ಲಬ್ ಯಾಕಾಗಬಾರದು? ಸಿದ್ದರಾಮಯ್ಯ
ಇದನ್ನೂ ಓದಿ: Opinion: ಬಸವರಾಜ ಬೊಮ್ಮಾಯಿ ಮೇಲೆ ರಬ್ಬರ್ ಸ್ಟಾಂಪ್ ಆರೋಪ, ಕಾಂಗ್ರೆಸ್ಗೆ ಮುಳುವಾಗಬಹುದೇ?