Opinion: ಬಸವರಾಜ ಬೊಮ್ಮಾಯಿ ಮೇಲೆ ರಬ್ಬರ್​ ಸ್ಟಾಂಪ್​ ಆರೋಪ, ಕಾಂಗ್ರೆಸ್​ಗೆ ಮುಳುವಾಗಬಹುದೇ?

ಭಾಸ್ಕರ ಹೆಗಡೆ

| Edited By: guruganesh bhat

Updated on: Jul 31, 2021 | 8:05 PM

Basavaraj Bommai: ಬಸವರಾಜ ಬೊಮ್ಮಾಯಿ ಸರಕಾರಕ್ಕೆ ಹೇಗಾದರೂ ಮಾಡಿ ಮಸಿ ಬಳಿಯಲು ಹೊಂಚು ಹಾಕುತ್ತಿರುವ ಕಾಂಗ್ರೆಸ್ ಪಕ್ಷ ಸ್ವಲ್ಪ ಹೆಚ್ಚು ಕಡಿಮ ಆಗಿ ಎಡವಿದರೆ, 2023 ರಲ್ಲಿ ಭಾರಿ ದಂಡ ತೆರಬೇಕಾಗಿ ಬರಬಹುದು.

Opinion: ಬಸವರಾಜ ಬೊಮ್ಮಾಯಿ ಮೇಲೆ ರಬ್ಬರ್​ ಸ್ಟಾಂಪ್​ ಆರೋಪ, ಕಾಂಗ್ರೆಸ್​ಗೆ ಮುಳುವಾಗಬಹುದೇ?
ಸಿದ್ದರಾಮಯ್ಯ ಮತ್ತು ಬಸವರಾಜ ಬೊಮ್ಮಾಯಿ
Follow us

ಬಸವರಾಜ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇತ್ತಾದರೂ ಅದಕ್ಕಾಗಿ ಅವರು ಪ್ರಯತ್ನ ಮಾಡಿರಲಿಲ್ಲ. ಹಾಗಾಗಿ ಆ ಪಟ್ಟ ಅವರಿಗೆ ಅನಪೇಕ್ಷಿತವಾಗಿ ದಕ್ಕಿತು ಎಂದರೆ ತಪ್ಪಾಗಲಿಕ್ಕಿಲ್ಲ. ಬಿ.ಎಸ್. ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ಬಿ.ಎಲ್. ಸಂತೋಷ್ ಅಥವಾ ಪ್ರಲ್ಹಾದ ಜೋಷಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತಾರೆ. ಬಿಜೆಪಿಯ ಆ ನಿರ್ಧಾರ ತನಗೆ ಅನುಕೂಲವಾಗುತ್ತದೆ ಎಂದು ಲೆಕ್ಕಾಚಾರ ಹಾಕಿದ ಕಾಂಗ್ರೆಸ್ ನಾಯಕರು ಇದನ್ನು ಜನರಿಗೆ ಹೇಗೆ ತಿಳಿಹೇಳಬೇಕೆಂಬ ತಂತ್ರ ಕೂಡ ಹೆಣೆದಿದ್ದರು. ಲಿಂಗಾಯತರ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿ ಲಿಂಗಾಯತರಿಗೆ ಮೋಸ ಮಾಡಿದೆ. ಅವರನ್ನು ನಂಬಬೇಡಿ, ನಮ್ಮನ್ನು ನಂಬಿ ಎಂದು ರಾಜ್ಯಾದ್ಯಂತ ಹೇಳಲು ಕಾಂಗ್ರೆಸ್ ನಾಯಕರು ತಯಾರಾಗಿದ್ದರು. ಆದರೆ ಆ ಲೆಕ್ಕಾಚಾರ ತಲೆಕೆಳಗಾಯ್ತು. ರೇಸ್​ನಲ್ಲಿ ಇಲ್ಲದ, ಲಿಂಗಾಯತ ನಾಯಕ ಬಸವರಾಜ ಬೊಮ್ಮಾಯಿ (Basavaraj Bommai) ಮುಖ್ಯಮಂತ್ರಿ ಆದರು. ಅದಕ್ಕೂ ಮುಖ್ಯವಾಗಿ ಯಾವ ಆರೋಪ ಇಲ್ಲದ, ಇಲ್ಲೀತನಕ ತನ್ನ ಹೆಸರು ಕೆಡಿಸಿಕೊಂಡಿರದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದೇ ತಡ, ಕಾಂಗ್ರೆಸ್ ನಾಯಕರಿಗೆ ಅವರ ವಿರುದ್ಧ ಒಂದು ‘ರಾಜಕೀಯ ಸಂಕಥನ’ (political narrative) ಕಟ್ಟಲೇ ಬೇಕಾಗಿತ್ತು. ಕೊನೆಗೆ ಏನೂ ಇಲ್ಲ ಎಂದಾದರೆ ಸುಮ್ಮನೆ ಕುಳಿತುಕೊಳ್ಳಲು ಆಗಲ್ಲ ನೋಡಿ. ಅದಕ್ಕೆ ಈಗ ಒಂದು ‘ರಾಜಕೀಯ ಸಂಕಥನ’ ಕಟ್ಟಲು ಮುಂದಾಗಿದ್ದಾರೆ. ಅದೇನೆಂದರೆ, ಬಸವರಾಜ ಬೊಮ್ಮಾಯಿ ಒಂದು ರಬ್ಬರ್ ಸ್ಟಾಂಪ್, ಮತ್ತು ಯಡಿಯೂರಪ್ಪ ಆಡಳಿತದಲ್ಲಿ ಮಧ್ಯಪ್ರವೇಶಿಸದೇ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂಬ ವಿಚಾರವನ್ನು ಪದೇಪದೇ ಹೇಳುತ್ತಿದ್ದಾರೆ. ಇದನ್ನು ಹೀಗೆ ಮುಂದುವರೆಸಿ, ಟೀಕೆಯನ್ನು ಇನ್ನೂ ತೀವ್ರಗೊಳಿಸಿದರೆ ಪರಿಣಾಮ ಏನಾಗಬಹುದು ಎಂಬ ಅಂಶವನ್ನು ಅಧ್ಯಯನ ಮಾಡಿದರೆ ಕುತೂಹಲಕಾರಿ ಅಂಶ ಬೆಳಕಿಗೆ ಬರುತ್ತದೆ.  

ಇತಿಹಾಸ ಏನು ಹೇಳುತ್ತದೆ? ಹಾಗೆ ನೋಡಿದರೆ ಇದಕ್ಕೆ ಕಾರಣ ಇಲ್ಲದಿಲ್ಲ. 2011 ರಲ್ಲಿ ಯಡಿಯೂರಪ್ಪ ಕೆಳಗಿಳಿದಾಗ ಮತ್ತು ಅವರೇ ಸೂಚಿಸಿದ ಡಿ.ವಿ. ಸದಾನಂದ ಗೌಡ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತಂದಾಗ ಏನು ನಡೆದಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಯಡಿಯೂರಪ್ಪ ಸುಮ್ಮನೆ ಕೂರುತ್ತಿರಲಿಲ್ಲ. ನೌಕರರ ವರ್ಗಾವರ್ಗಿಯಿಂದ ಪ್ರಾರಂಭಿಸಿ ಎಲ್ಲ ಕಡೆ ಕೈ ಆಡಿಸುತ್ತಿದ್ದರು. ಕೊನೆಗೆ ಅದಕ್ಕೆ ತೀವ್ರ ವಿರೋಧ ಬಂದಾಗ ಅವರು ಹೊರಬಿದ್ದರು. ಆ ಸಮಯಕ್ಕೆ ಕಾಯುತ್ತಿದ್ದ ಕೆಲವು ಬಿಜೆಪಿಯೇತರ ನಾಯಕರು ಸರಕಾರದ ನಿರ್ಣಯಗಳಲ್ಲಿ ಕೈ ಆಡಿಸಲು ಶುರುಮಾಡಿದರು. ಈಗ ಅದು ಪುನರಾವೃತ್ತಿಯಾಗಬಹುದೇ? ಮತ್ತೆ ಈ ಬಾರಿ ಕೂಡ ಯಡಿಯೂರಪ್ಪ ಕೈ ಆಡಿಸುತ್ತಾರೆ ಎಂಬುದು ಕಾಂಗ್ರೆಸ್ ನಾಯಕರ ವಾದ.

ಕಾಂಗ್ರೆಸ್ ನಾಯಕರು ಒಂದು ವಿಚಾರವನ್ನು ಗೊತ್ತಿದ್ದರೂ ಹೇಳುತ್ತಿಲ್ಲ. ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ 10 ವರ್ಷ ನಿಜವಾಗಿ ದೇಶ ಆಳುತ್ತಿದ್ದವರು ಯಾರು? ಸಂಜಯ ಬಾರು ಅವರ ಪುಸ್ತಕ ಓದಬೇಕು. ಕೆಲವು ನಿವೃತ್ತ ಮತ್ತು ಹಾಲಿ ಸೇವೆಯಲ್ಲಿರುವ ಐಎಎಸ್ ಅಧಿಕಾರಿಗಳನ್ನು ಖಾಸಗಿಯಾಗಿ ಮಾತನಾಡಿಸಬೇಕು. ಆಗ ಒಳಗುಟ್ಟು ಗೊತ್ತಾಗುತ್ತದೆ. ಒಂದು ಹಂತದಲ್ಲಿ, ಸರ್ವೊಚ್ಛ ನ್ಯಾಯಾಲಯಕ್ಕೆ ಸಿಬಿಐ ಸಲ್ಲಿಸಿದ ಅಫಿಡವಿಟ್​ನ್ನು ರಾಜಕೀಯ ನಾಯಕರು ಮೊದಲೇ ನೋಡಿದ್ದರು ಎಂಬ ವಿಚಾರ ನ್ಯಾಯಾಲಯಕ್ಕೆ ಗೊತ್ತಾಗಿ, ನ್ಯಾಯ ಪೀಠ ಸಿಬಿಐನ್ನು ತರಾಟೆಗೆ ತೆಗೆದುಕೊಂಡಿತ್ತು. ಅಷ್ಟೆಲ್ಲ ದೂರ ಯಾಕೆ ಹೋಗಬೇಕು? ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿ ಧರಮ್ ಸಿಂಗ್ ಅವರಿಗೆ ಕಮಾಂಡ್ ಎಲ್ಲಿಂದ ಬರುತ್ತಿತ್ತು; ಕೆಲವು ಕಡತಗಳು ಯಾಕೆ ಬಾಲಬ್ರೂಯಿ ಗೆಸ್ಟ್ ಹೌಸ್​ಗೆ ಹೋಗುತ್ತಿದ್ದವು ಎಂಬುದು ಎಲ್ಲಾ ಕಾಂಗ್ರೆಸ್ ನಾಯಕರಿಗೂ ಗೊತ್ತು. ಇದಕ್ಕೆ ಕಾಂಗ್ರೆಸ್ ನಾಯಕರ ಉತ್ತರ ಏನು ಗೊತ್ತಾ? ಅದು ಸಮ್ಮಿಶ್ರ ಸರಕಾರವಾಗಿತ್ತು, ಕಾಂಗ್ರೆಸ್ ಸರಕಾರವಿದ್ದಾಗ ಯಾವಾಗಲೂ ಹಾಗೆ ಆಗಿಲ್ಲ. ಇದನ್ನು ಯಾರು ಒಪ್ಪಿಕೊಳ್ಳಬಹುದು? ಓರ್ವ ಮುಖ್ಯಮಂತ್ರಿ ಅಧಿಕಾರದ ಪ್ರಮಾಣ ವಚನವನ್ನು ಸ್ವೀಕರಿಸುತ್ತಾನೆ. ಸಮ್ಮಿಶ್ರ ಸರಕಾರವಿರಲಿ ಅಥವಾ ಒಂದೇ ಪಕ್ಷದ ಅಧಿಕಾರವಿರಲಿ, ಗೌಪ್ಯತೆಯ ಪ್ರಮಾಣ ಸ್ವೀಕರಿಸಿದ ಮಂತ್ರಿ ಅಥವಾ ಮುಖ್ಯಮಂತ್ರಿ ಅದಕ್ಕೆ ತಕ್ಕುದಾಗಿ ತಡೆದುಕೊಳ್ಳಬೇಕು. ಇಲ್ಲವೆಂದಾದರೆ ಅದು ಅಪರಾಧವಾಗುತ್ತದೆ. 10 ವರ್ಷ, ಫೈಲ್​ಗಳನ್ನು ಅಧಿಕಾರದಲ್ಲಿರದ ವ್ಯಕ್ತಿಯ ಮನೆಗೆ ಕಳಿಸಿರುವ ಟೀಕೆಯನ್ನು ಎದುರಿಸುತ್ತಿರುವ ಕಾಂಗ್ರೆಸ್ ಪಕ್ಷ ಬಸವರಾಜ ಬೊಮ್ಮಾಯಿ ಮೇಲೆ ಯಾಕೆ ಈ ಆರೋಪ ಮಾಡಲು ಮುಂದಾಗುತ್ತಿದೆ?

ತಿರುಗುಬಾಣ? ಕಾಂಗ್ರೆಸ್ ನಾಯಕರ ತಂತ್ರವೇನಾಗಿರಬಹುದೆಂದರೆ, ಬೊಮ್ಮಾಯಿ ಮೇಲೆ ಈ ರೀತಿ ಆರೋಪ ಮಾಡುತ್ತ ಹೋದರೆ ಅವರಿಗೂ ಒಂದು ಕಳಂಕ ತಟ್ಟಬಹುದು. ಆಗ ಒಂದಲ್ಲ ಒಂದು ದಿನ ಈ ವಾದವನ್ನು ಒಪ್ಪಿಕೊಂಡ ಜನ ಮುಂದಿನ ಚುನಾವಣೆ ಹೊತ್ತಿಗೆ ಬಿಜೆಪಿ ಸರಕಾರದ ಮೇಲೆ ರೇಜಿಗೆ ಹುಟ್ಟಿ ಕಾಂಗ್ರೆಸ್​ಗೆ​ ಬೆಂಬಲ ನೀಡಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ ನಾಯಕರಿದ್ದಿರಬಹುದು. ಆದರೆ ಅದು ಹಾಗಾಗಲಿಕ್ಕಿಲ್ಲ. ರಾಜ್ಯ ರಾಜಕೀಯ ಇತಿಹಾಸವನ್ನು ಸೂಕ್ಷ್ಮವಾಗಿ ನೋಡಿದರೆ ಒಂದಂಶ ಗೋಚರವಾಗುತ್ತದೆ: ಒಕ್ಕಲಿಗ ಇರಲಿ ಅಥವಾ ಲಿಂಗಾಯತ ಇರಲಿ ಈ ಎರಡು ಪ್ರಬಲ ಸಮುದಾಯದ ನಾಯಕರ ಮೇಲೆ, ವಿರೋಧ ಪಕ್ಷ, ಅದು ಯಾರೇ ಇರಲಿ, ಇಲ್ಲ ಸಲ್ಲದ ಆರೋಪವನ್ನು ಪದೇಪದೇ ಮಾಡುತ್ತ ಹೋದರೆ, ಆ ಸಮುದಾಯದ ಮತದಾರರರು ಒಪ್ಪಿಕೊಳ್ಳುವುದಿಲ್ಲ. 2018 ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವೇಗೌಡ ಮತ್ತು ಅವರ ಮಕ್ಕಳ ಮೇಲೆ ಮಾಡಿದ ಆರೋಪಕ್ಕೆ ಹೇಗೆ ಜನ ಪ್ರತಿಕ್ರಿಯೆ ನೀಡಿದರು ಎಂಬ ತಾಜಾ ಉದಾಹರಣೆ ನಮ್ಮ ಮುಂದಿದೆ. ಒಂದೊಮ್ಮೆ ಬೊಮ್ಮಾಯಿಯವರು ಯಾವ ಆರೋಪ ಬಾರದಿರುವಂತೆ ಮುಂದಿನ ಎರಡು ವರ್ಷ ನಡೆದುಕೊಂಡು, ಸಾಮಾನ್ಯಕ್ಕಿಂತ ಸ್ವಲ್ಪ ಉತ್ತಮ ಆಡಳಿತ ನೀಡಿದರೆ ಸಾಕು. ಆಗ ಕಾಂಗ್ರೆಸ್ ಮಾಡುವ ಈ ರಬ್ಬರ್ ಸ್ಟಾಂಪ್​ನಂಥ ಆರೋಪ ಅವರಿಗೇ ತಿರುಗುಬಾಣವಾಗುವ ಸಾಧ್ಯತೆ ಜಾಸ್ತಿ ಇದೆ.

ಇಲ್ಲಿ ಇನ್ನೊಂದು ಅಂಶ ಇದೆ. ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿರುವ ಸಿದ್ದರಾಮಯ್ಯ ಸರಕಾರವನ್ನು ತರಾಟೆಗೆ ತೆಗದುಕೊಳ್ಳಲೇಬೇಕಾಗುತ್ತದೆ. ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಭರದಲ್ಲಿ, ಮೊನ್ನೆ ಗಾಂಧೀಜಿಯ ಮಕ್ಕಳಿಗೆ ಹೋಲಿಕೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆದಂತೆ, ಮುಂದೆ ಕೂಡ ಆಗುವ ಸಾಧ್ಯತೆ ಇದೆ. ಇದಕ್ಕೊಂದು ಕಾರಣ ಇದೆ. ಅದೇನೆಂದರೆ, ಸಿದ್ದರಾಮಯ್ಯನವರ ಹೆಸರಿನ ಸಾಮಾಜಿಕ ಜಾಲತಾಣಕ್ಕೆ ವಿಷಯ ನೀಡುವವರು ಬೇರೆ. ಅವರು ಮಾಡುವ ತಪ್ಪಿಗೆ ಸಿದ್ದರಾಮಯ್ಯ ಬೆಲೆ ತೆರುವ ಸಾಧ್ಯತೆ ಇದೆ. ಪದೇ ಪದೇ ಈ ರೀತಿಯ ವ್ಯಂಗ್ಯಕ್ಕೆ ಗುರಿ ಆಗುವಂತಹ ಟೀಕೆ ಟಿಪ್ಪಣಿ ಸಿದ್ದರಾಮಯ್ಯ ಅವರಿಂದ ಬರಲು ಪ್ರಾರಂಭವಾದರೆ ಆಗ ಲಿಂಗಾಯತ ಸಮುದಾಯದ ಮತದಾರ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುದನ್ನು ಊಹಿಸುವುದು ಕಷ್ಟವೇನಲ್ಲ. ಅಂಥ ಸನ್ನಿವೇಶದಲ್ಲಿ, ಓರ್ವ ಲಿಂಗಾಯತ ಮತದಾರ ಖಂಡಿತ ಕಾಂಗ್ರೆಸ್ ಕಡೆ ಹೋಗಲಾರ ಎಂದು ಊಹೆ ಮಾಡಬಹುದು. ಆಗ ದಕ್ಷಿಣದಲ್ಲಿ ಏನಾಗಬಹುದು? ಲಿಂಗಾಯತರು ಬಿಜೆಪಿ ಕಡೆ ವಾಲುತ್ತಿದ್ದಂತೆ, 2018 ರಲ್ಲಿ ಆದಂತೆ ದಕ್ಷಿಣದಲ್ಲಿರುವ ಒಕ್ಕಲಿಗ ಮತದಾರರು ಪ್ರಾಯಶಃ ಜೆಡಿಎಸ್ ಕಡೆ ವಾಲಿದರೂ ಆಶ್ಚರ್ಯ ಪಡಬೇಕಾಗಿಲ್ಲ.  ಇಂತಹ ಬೆಳವಣಿಗೆ ಕಾಂಗ್ರೆಸ್​​ಗೆ ಮತ್ತಷ್ಟು ಸಂಕಷ್ಟ ತರಬಲ್ಲದು. ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಮತ ಮತ್ತು ದಕ್ಷಿಣದಲ್ಲಿ ಒಕ್ಕಲಿಗ ಮತ ಕೈ ತಪ್ಪಿದರೆ ಏನಾಗುತ್ತದೆ ಎಂಬ ವಿಚಾರ ಕಾಂಗ್ರೆಸ್ ನಾಯಕರಿಗೆ ಗೊತ್ತು. ಇಲ್ಲಿ ಇನ್ನೂ ಒಂದು ವಾದ ಮಾಡಬಹುದು. 2013 ರಲ್ಲಿ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದಾಗ ಬಿಜೆಪಿಯ ನಾಯಕರನ್ನು ಹೀನಾಯವಾಗಿ ಟೀಕಿಸಿ, ಆ ಪಕ್ಷವನ್ನು ಸೋಲಿಸಿ ಅಧಿಕಾರಕ್ಕೆ ಬಂದಿರಲಿಲ್ಲವೇ? ಸಿದ್ದರಾಮಯ್ಯ  ಮುಖ್ಯಮಂತ್ರಿ ಆಗಿರಲಿಲ್ಲವೇ? ಆ ವಾದದಲ್ಲಿ ಹುರುಳಿಲ್ಲ. ಆಗ ಬಿಜೆಪಿ ಮೂರು ಪಕ್ಷವಾಗಿ ಹೋಳಾಗಿತ್ತು ಮತ್ತು ಅದಕ್ಕೂ ಹೆಚ್ಚಾಗಿ ಯಡಿಯೂರಪ್ಪ ಬಿಜೆಪಿಯಲ್ಲಿರಲಿಲ್ಲ. ಈ ಬಾರಿ ಹಾಗಾಗಲ್ಲ. ಈ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ಸರಕಾರಕ್ಕೆ ಹೇಗಾದರೂ ಮಾಡಿ ಮಸಿ ಬಳಿಯಲು ಹೊಂಚು ಹಾಕಿರುವ ಕಾಂಗ್ರೆಸ್ ಪಕ್ಷ, ಹೆಚ್ಚು ಕಡಿಮೆ ಆಗಿ ಎಡವಿದರೆ, 2023 ರಲ್ಲಿ ಭಾರೀ ದಂಡ ತೆರಬೇಕಾಗಿ ಬರಬಹುದು.

ಇದನ್ನೂ ಓದಿ: 

ರಾಜ್ಯ ಕಾಂಗ್ರೆಸ್​ನಲ್ಲಿ ಭಿನ್ನಮತವಿದೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡ ಉಸ್ತುವಾರಿ ರಣದೀಪ್ ಸುರ್ಜೇವಾಲಾ

ಮತ್ತೊಮ್ಮೆ ದೆಹಲಿಗೆ ತೆರಳಿ ಹೈಕಮಾಂಡ್ ಜತೆ ಚರ್ಚಿಸಿ ಸಚಿವ ಸಂಪುಟ ರಚಿಸುತ್ತೇನೆ: ಸಿಎಂ ಬಸವರಾಜ ಬೊಮ್ಮಾಯಿ

ತಾಜಾ ಸುದ್ದಿ

Related Stories

Click on your DTH Provider to Add TV9 Kannada