Basavaraj Bommai: ಯಡಿಯೂರಪ್ಪ ಉತ್ತರಾಧಿಕಾರಿ ಬಸವರಾಜ ಬೊಮ್ಮಾಯಿ, ಹೋರಾಟದ ಹಾದಿಯಲ್ಲಿ ಅರಳಿದ ನಾಯಕ

Karnataka New CM: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದಾರೆ. ಸಂಘ ಪರಿವಾರದ ಸಹವಾಸ ಇಲ್ಲದೇ, ಹೊರಗಿನಿಂದ ಬಂದವನೊಬ್ಬನನ್ನು ಮುಖ್ಯಮಂತ್ರಿ ಮಾಡಿದ್ದು ಅತಿ ಮುಖ್ಯ ಬೆಳವಣಿಗೆ. ಅದಕ್ಕೆ ಎರಡು ಕಾರಣ ಮೇಲ್ನೋಟಕ್ಕೆ ಕಾಣುತ್ತಿದೆ.

Basavaraj Bommai: ಯಡಿಯೂರಪ್ಪ ಉತ್ತರಾಧಿಕಾರಿ ಬಸವರಾಜ ಬೊಮ್ಮಾಯಿ, ಹೋರಾಟದ ಹಾದಿಯಲ್ಲಿ ಅರಳಿದ ನಾಯಕ
ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
Follow us
ಡಾ. ಭಾಸ್ಕರ ಹೆಗಡೆ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jul 27, 2021 | 8:12 PM

ಬೆಂಗಳೂರು: ವಿಕಿಪೀಡಿಯಾ ನೋಡಿದರೆ ಹೇಳಿಬಿಡಬಹುದು, ಬಸವರಾಜ್ ಬೊಮ್ಮಾಯಿ ಯಾರು ಅಂತ. ಅವರ ವ್ಯಕ್ತಿತ್ವ ಹೇಗೆ? ಹಾಗೆ ಗೂಗಲ್ನಲ್ಲಿ ಇಳಿದರೆ ಹಲವಾರು ಮಾಹಿತಿ ಸಿಗುವುದು ದೊಡ್ಡ ವಿಚಾರವೇನಲ್ಲ. ಆದರೆ ನಿಜವಾಗಿ ನೋಡಿದರೆ ಅವರ ವ್ಯಕ್ತಿತ್ವ ಅಷ್ಟೇನಾ? ವಿಕಿಪೀಡಿಯಾ ಒಂದು ಡಿಜಿಟಲ್ ಗೋಡೆ ಬರಹ ಅಷ್ಟೇ. 61 ವರ್ಷದ ಬಸವರಾಜ್ ಬೊಮ್ಮಾಯಿ ಎರಡನೇ ತಲೆಮಾರಿನ ರಾಜಕಾರಿಣಿ. ಅವರ ತಂದೆ 1980 ರ ದಶಕದಲ್ಲಿ ಮುಖ್ಯಮಂತ್ರಿ ಆಗಿದ್ದರು. ಅದು ಕೂಡ ಜನತಾ ಪರಿವಾರದಲ್ಲಿ.

ಕರ್ನಾಟಕದಲ್ಲಿದ್ದ ಆ ಜನತಾ ಪರಿವಾರ ಈಗ ಇಲ್ಲ. ಅರ್ಧ ಭಾಗ ಜೆಡಿಎಸ್ ಆಗಿ ಉಳಿದಿದ್ದರೆ ಇನ್ನರ್ಧ ಭಾಗ ಬಿಜೆಪಿಯಲ್ಲಿ ವಿಲೀನವಾಗಿ ಎರಡು ದಶಕಗಳೇ ಕಳೆಯಿತು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದು ಒಂದು ಹೊಸ ಬೆಳವಣಿಗೆಯ ಮೊದಲ ಹೆಜ್ಜೆ ತರಹ ಕಾಣುತ್ತಿದೆ: ಇತ್ತೀಚಿನ ವರ್ಷಗಳಲ್ಲಿ ಸಂಘ ಪರಿವಾರದ ಸಹವಾಸ ಇಲ್ಲದೇ, ಹೊರಗಿನಿಂದ ಬಂದವನೊಬ್ಬನನ್ನು ಗುರುತಿಸಿ ಮುಖ್ಯಮಂತ್ರಿ ಮಾಡಿದ್ದು ಅತೀ ಮುಖ್ಯ ಬೆಳವಣಿಗೆ. ಅದಕ್ಕೆ ಎರಡು ಕಾರಣ ಮೇಲ್ನೋಟಕ್ಕೆ ಕಾಣುತ್ತಿದೆ.

ಒಂದು ಮಾಜೀ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಆಪ್ತವಾಗಿ ನಿಂತಿರುವ ಬೊಮ್ಮಾಯಿಯ ಆಯ್ಕೆಯಿಂದ ಯಡಿಯೂರಪ್ಪನವರನ್ನು ಖುಷಿಪಡಿಸುವ ಪ್ರಯತ್ನವಿರಬಹುದು. ಅದಕ್ಕೂ ಹೆಚ್ಚಾಗಿ, ವೀರಶೈವ ಲಿಂಗಾಯತ ಸಮುದಾಯಕ್ಕೆ ಬಿಜೆಪಿ ಒಂದು ಸಂದೇಶ ಕೊಟ್ಟಂತಿದೆ: ಯಡಿಯೂರಪ್ಪನವರನ್ನು ತೆಗೆಯುವ ಮೂಲಕ ಆದ ‘ಅನ್ಯಾಯ’ಕ್ಕೆ ನ್ಯಾಯ ಒದಗಿಸಿ, ಆ ಮೂಲಕ ಮತ ಬ್ಯಾಂಕನ್ನು ತನ್ನ ಕೈನಲ್ಲಿ ಇಟ್ಟುಕೊಳ್ಳುವ ವ್ಯಾವಹಾರಿಕ (pragmatic) ನಿರ್ಧಾರವಿರಬಹುದು.

ಮರುಕಳಿಸಿದ ಇತಿಹಾಸ ಈ ಹಿಂದೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಎಸ್. ಆರ್. ಬೊಮ್ಮಾಯಿ ಸೇವೆ ಸಲ್ಲಿಸಿದ್ದರು. ಇದೀಗ ಅವರ ಮಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಇದು ಕರ್ನಾಟಕ ರಾಜಕಾರಣದ ಇತಿಹಾಸವೊಂದು ಮರುಕಳಿಸಿದಂತಾಗಿದೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಜೋಡಿಯಂತೆಯೇ ತಂದೆ-ಮಗ ಮುಖ್ಯಮಂತ್ರಿಯಾದ ಇತಿಹಾಸ ಮತ್ತೊಮ್ಮೆ ಮರುಕಳಿಸಿದೆ.

ಈ ಹಿಂದೆ ಹುಬ್ಬಳ್ಳಿ ಪ್ರಾಂತ್ಯವನ್ನು ಪ್ರತಿನಿಧಿಸಿ ಮುಖ್ಯಮಂತ್ರಿಯಾಗಿದ್ದ ಎಸ್ ಆರ್ ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್ ಇಬ್ಬರೂ ಕೇವಲ 6 ತಿಂಗಳ ನಂತರ ಮಾತ್ರ ಆಡಳಿತ ನಡೆಸಿದ್ದರು. 2004ರಲ್ಲಿ ಜಗದೀಶ್ ಶೆಟ್ಟರ್ ಅವರಿಂದ ಹುಬ್ಬಳ್ಳಿಯಲ್ಲಿ ಚುನಾವಣೆಯಲ್ಲಿ ಸೋಲುಂಡಿದ್ದ ಬಸವರಾಜ ಬೊಮ್ಮಾಯಿ 2008ರ ನಂತರ ಶಿಗ್ಗಾಂವ್ ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವ ಕಂಡುಕೊಂಡರು. ಅವರು ಇದೀಗ ಮುಖ್ಯಮಂತ್ರಿಯಾಗುತ್ತಿದ್ದಾರೆ. ಹುಬ್ಬಳ್ಳಿ ಒಡನಾಟ ಹೊಂದಿರುವ ಮೂರನೇ ಮುಖ್ಯಮಂತ್ರಿ ಅವರು ಎಂಬುದು ಸಹ ವಿಶೇಷವಾದದ್ದು. ಅಲ್ಲದೇ 6 ತಿಂಗಳ ಕಾಲವಷ್ಟೇ ಎಸ್.ಆರ್.ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದನ್ನೂ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು. ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ವರ್ಷಗಳಿದ್ದು, ಬಿಜೆಪಿಯ ಎಲ್ಲ ಸುಳಿಗಳನ್ನೂ ಸಮರ್ಥವಾಗಿ ನಿಭಾಯಿಸಿದಲ್ಲಿ ಬಸವರಾಜ ಬೊಮ್ಮಾಯಿ ಎರಡೂ ವರ್ಷ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲು ಸಾಧ್ಯ.

ತೂಕದ ಮಾತಿನ ರಾಜಕಾರಿಣಿ 2012ರಲ್ಲಿ ಯಡಿಯೂರಪ್ಪ ಕರ್ನಾಟಕ ಜನತಾ ಪಕ್ಷ ಕಟ್ಟಿದಾಗ ಹೊರಗಿನಿಂದ ಬಂದ ಅನೇಕರು ಬಿಜೆಪಿ ಬಿಟ್ಟು ಕೆಜೆಪಿಗೆ ಹೋಗಲಿಲ್ಲ. ಅಂಥವರಲ್ಲಿ ಬಸವರಾಜ ಬೊಮ್ಮಾಯಿ ಕೂಡ ಒಬ್ಬರು. ಅಷ್ಟೇ ಅಲ್ಲ, ಬಿಜೆಪಿಯ ಟಿಕೆಟ್ ಮೇಲೆ ನಿಂತು ಅವರು ಶಿಗ್ಗಾಂವ್ ಕ್ಷೇತ್ರದಿಂದ ಗೆದ್ದು ಬಂದಿದ್ದರು. ಹಾಗಂತ ಅವರು ಯಡಿಯೂರಪ್ಪನವರ ಮೇಲೆ ದ್ವೇಷ ಕಟ್ಟಿಕೊಂಡು ಅವರನ್ನು ದೂರ ಮಾಡಿಕೊಳ್ಳಲಿಲ್ಲ. ಇದೇ ಕಾರಣಕ್ಕೆ ಇರಬಹುದು, 2019 ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರನ್ನು ಮತ್ತೆ ತಮ್ಮ ಹತ್ತಿರದಲ್ಲಿಟ್ಟುಕೊಂಡರು. ರಾಜಕೀಯದಲ್ಲಿ ಬೊಮ್ಮಾಯಿ ಅವರಿಗೆ ಈ ಕಲೆ ರಕ್ತಗತವಾದಂತಿದೆ. ಪ್ರಾಯಶಃ ಅತೀ ಸಣ್ಣ ವಯಸ್ಸಿನಿಂದ ರಾಜಕೀಯವನ್ನು ನೋಡಿರುವ ಬೊಮ್ಮಾಯಿ ಯಾರನ್ನೂ ದ್ವೇಷಿಸಿ ದೂರ ಮಾಡಿಕೊಳ್ಳುವ ರಾಜಕಾರಿಣಿ ಅಲ್ಲ.

ಆಯ್ಕೆಗೆ ಹಲವು ಕಾರಣ ಕರ್ನಾಟಕದ ಮಟ್ಟಿಗೆ ಒಂದು ಮಾತು ಸತ್ಯ: ಜನತಾ ಪರಿವಾರದಿಂದ ಬಂದ ಹಲವಾರು ನಾಯಕರು ತೂಕ ತಪ್ಪದೇ ತಾರ್ಕಿಕವಾಗಿ ಭಾಷಣ ಮಾಡುತ್ತಾರೆ. ಈ ಪಟ್ಟಿಯಲ್ಲಿ ಬಸವರಾಜ ಬೊಮ್ಮಾಯಿ ಅವರ ಹೆಸರು ಬರುತ್ತದೆ. ಬಸವರಾಜ ಬೊಮ್ಮಾಯಿ, ಮತ್ತೋರ್ವ ಲಿಂಗಾಯತ ನಾಯಕ ದಿವಂಗತ ಎಮ್.ಪಿ. ಪ್ರಕಾಶ ಥರ ಅಲ್ಲ. ತುಂಬಾ ಓದಿಕೊಂಡು ಪ್ರಖರ ವೈಚಾರಿಕ ವಿಚಾರವನ್ನು ಮಾತನಾಡುತ್ತಿದ್ದ ಪ್ರಕಾಶ್ ಬೇರೆ, ಬೊಮ್ಮಾಯಿ ಅವರೇ ಬೇರೆ. ಹಾಗಂತ, ಮಾತಾಡುತ್ತ ಹಳಿ ತಪ್ಪಿ ಮತ್ತೆ ಮತ್ತೆ ವಿವಾದಕ್ಕೆ ಗುರಿಯಾಗುವ ಜನಪ್ರಿಯ ಲಿಂಗಾಯತ ನಾಯಕ, ಉಮೇಶ್ ಕತ್ತಿ ತರಹ ಕೂಡ ಅಲ್ಲ. ಇವರದೇ ಬೇರೆ ಛಾಪು. ಅಳೆದು ತೂಗಿ ಮಾತನಾಡುವ ವ್ಯಕ್ತಿ ಬಸವರಾಜ ಬೊಮ್ಮಾಯಿ. ವಿಧಾನಸಭೆಯಲ್ಲಾಗಲೀ ಹೊರಗೇ ಆಗಲಿ, ವಿವಾದ ಹುಟ್ಟಿ ಹಾಕುವವ ವ್ಯಕ್ತಿ ಬಸವರಾಜ ಬೊಮ್ಮಾಯಿ ಅಲ್ಲ. ಆರ್​ಎಸ್​ಎಸ್​ ನಾಯಕರು ಕೂಡ ಇವರನ್ನು ಒಪ್ಪಿಕೊಳ್ಳಲು ಇದೇ ಕಾರಣವಿರಬಹುದು.

ಇನ್ನೊಂದು ಕಾರಣವಿದೆ ಬಸವರಾಜ ಬೊಮ್ಮಾಯಿ ಆಯ್ಕೆಗೆ. ಓರ್ವ ಮಂತ್ರಿ ಆಗಿ ಅವರು ಖಾತೆಯನ್ನು ಕಾರ್ಯ ನಿರ್ವಹಿಸುವ ರೀತಿ ವಿಭಿನ್ನವಾಗಿದ್ದು. ಯಾವುದೇ ಯೋಜನೆ ಬಗ್ಗೆ ಚರ್ಚೆ ಬಂದರೂ ಅವರು ಅಧಿಕಾರಿಗಳಿಗೆ ಕೇಳುವುದು ಒಂದೇ ಮಾತು: ಇದನ್ನು ಹೇಗೆ ಜಾರಿಗೊಳಿಸುತ್ತೀರಾ? ಅಧಿಕಾರಿಗಳು ನೀಡಿದ roadmap ನಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಅಥವಾ ಅವರಿಗೆ ಸಂಪೂರ್ಣ ಒಪ್ಪಿಗೆ ಆಗದೇ ಇದ್ದರೆ, ಮುಲಾಜಿಲ್ಲದೇ ಹೊಸ ಯೋಜನಾ ಕರಡು ತಯಾರಿಸಲು ಅಧಿಕಾರಿಗಳಿಗೆ ಸೂಚಿಸುವುದು ಅವರ ಕಾರ್ಯ ವೈಖರಿ. ಇದು ಯಡಿಯೂರಪ್ಪನವರ ಕಾರ್ಯವೈಖರಿಗಿಂತ ಭಿನ್ನ.

ಇನ್ನೊಂದು ವಿಚಾರದಲ್ಲಿ ಅವರು ಯಡಿಯೂರಪ್ಪನವರಿಗಿಂತ ಭಿನ್ನ. ತಾವು ಮಾಡುವ ಭಾಷಣದ ಮಧ್ಯೆ ಕಾಗದದಲ್ಲಿ ಬರೆದ ವಿಚಾರವನ್ನು ನೋಡಿಕೊಂಡು ಮಾತನಾಡುವುದು ಯಡಿಯೂರಪ್ಪನವರ ರೀತಿ. ಅವರಿಗಿಂತ ಭಿನ್ನ, ಬಸವರಾಜ ಬೊಮ್ಮಾಯಿ. ಯಾವ ಬರಹದ ಬೆಂಬಲ ಇಲ್ಲದೇ ನೆನಪಿನ ಸುಳಿ ಬಿಚ್ಚಿ ಮಾತನಾಡುವ ವ್ಯಕ್ತಿ ಬೊಮ್ಮಾಯಿ. ಹಾಗೇ ನೋಡಿದರೆ ಮೂಲ ಬಿಜೆಪಿ ಕೆಲ ನಾಯಕರಿಗಿಂತ ಕೆಲ ವಿಚಾರದಲ್ಲಿ ಅವರು ಭಿನ್ನ: ಪತ್ರಕರ್ತರು ಪ್ರಶ್ನೆ ಕೇಳಿದರೆ, ತುಂಬಾ ವಿಚಾರ ಮಾಡಿ, ಅಳೆದು ತೂಗಿ ಉತ್ತರಿಸುತ್ತಾರೆ ಬಸವರಾಜ ಬೊಮ್ಮಾಯಿ. ಕರ್ನಾಟಕ ರಾಜಕೀಯದಲ್ಲಿ ಮತ್ತಿಬ್ಬರು ಇದೇ ರೀತಿ ಇದ್ದರು. ಅವರೇ ರಾಮಕೃಷ್ಣ ಹೆಗಡೆ ಮತ್ತು ಎಸ್.ಎಮ್. ಕೃಷ್ಣ. ಪ್ರಾಯಶಃ ಬಸವರಾಜ ಬೊಮ್ಮಯಿ ಅವರಿಗೆ ಈ ಕಲೆ ಜನತಾ ಪರಿವಾರದಿಂದ ಬಂದಂತಿದೆ.

ಕೆಲ ವಿಚಾರಗಳಲ್ಲಿ ಸುಧಾರಿಸಬೇಕಿದೆ ಆದರೂ ಮೊಸರಿನಲ್ಲಿ ಕಲ್ಲು ಇದ್ದರೆ ಎದ್ದು ಕಾಣುವುದು ಸಹಜ: ಅವರು status quo ರಾಜಕಾರಿಣಿ ತರಹ ಅನ್ನಿಸುತ್ತಾರೆ. ಈಗ ಗೃಹ ಸಚಿವರಾಗಿ ಆ ಇಲಾಖೆ ನಡೆಸಿದ್ದನ್ನು ನೋಡಿದರೆ ಹಾಗೇ ಅನ್ನಿಸಿದರೆ ಆಶ್ಚರ್ಯವಿಲ್ಲ. ಹೊಸ ಹೊಸ ವಿಚಾರವನ್ನು ಮುನ್ನೆಲೆಗೆ ತಂದು ಅದನ್ನು ಜಾರಿಗೆ ತರುವ ಮೂಲಕ, 1983 ರಲ್ಲಿ ರಾಮಕೃಷ್ಣ ಹೆಗಡೆ ಹೇಗೆ ಒಂದು ಹೊಸ ಗಾಳಿ ಬೀಸಿದ್ದರೋ ಆ ರೀತಿ ಮಾಡುವ ಕಲೆಯನ್ನು ಬಸವರಾಜ ಬೊಮ್ಮಾಯಿ ತೋರಿಸಿಲ್ಲ. ಹಾಗಾಗಿ, ಈಗ ಇರುವ ಸರಕಾರದ ಯಂತ್ರವನ್ನು ಯಾವ ಗಲಾಟೆ ಅಥವಾ ವಿವಾದ ಇಲ್ಲದೇ ಮುನ್ನಡೆಸಿಕೊಂಡು ಹೋಗುವ ಕಲೆ ಇದೆ. ಅಥವಾ ಅದನ್ನೇ ಹೈಮಾಂಡ್ ನಿರೀಕ್ಷಿಸುತ್ತಿರಬಹುದು. ಆದರೆ, ಪ್ರತಿ ಕಾನೂನಿಗೂ ಒಂದು ವಿನಾಯಿತಿ ಇರುತ್ತದೆ. ಅದೇ ಪ್ರಕಾರ ಮುಂದಿನ ಎರಡು ವರ್ಷದಲ್ಲಿ ಮೈ ಛಳಿ ಬಿಟ್ಟು ಆಡಳಿತ ಯಂತ್ರಕ್ಕೆ ಬಡಿದ ಗರ ಬಿಡಿಸಿ ಎಬ್ಬಸಿದರೆ ಅವರು ಯಡಿಯೂರಪ್ಪನವರಿಗಿಂತ ಹೆಚ್ಚಿನ ಮೆಚ್ಚುಗೆ ಗಳಿಸುವುದರಲ್ಲಿ ಸಂದೇಹವಿಲ್ಲ.

ರಾಜಕೀಯವಾಗಿ ಕೂಡ ಮುಂದಿನ ಎರಡು ವರ್ಷ ಅವರಿಗೆ ದೊಡ್ಡ ಸವಾಲು. ಸಾಮಾಜಿಕ ಜಾಲತಾಣವನ್ನು ಅಷ್ಟೇನು ಮೆಚ್ಚದ ಬೊಮ್ಮಾಯಿ ಅವರದು ಹಳೇ ಧಾಟಿಯ ರಾಜಕಾರಣ. ಆದರೆ ಎದುರುಗಡೆ ಇರುವುದು- ಸಿದ್ದರಾಮಯ್ಯ-ಡಿಕೆಶ ಜೋಡಿ. ಬೊಮ್ಮಾಯಿ ಅವರಿಗೆ ಸೆಡ್ಡು ಹೊಡೆಯುವ ತಂತ್ರವನ್ನು ಅವರು ಹೆಣೆಯುತ್ತಾರೆ. ಒಂದು ಇಮೇಜ್ ಮೇಕ್ಒವರ್ ಕಂಪೆನಿಯ ಸಹಾಯದಿಂದ ಹೊಸ ಹೊಸ ರೀತಿಯ ರಾಜಕೀಯ ಪ್ರಯೋಗಕ್ಕೆ ಇಳಿದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೊಮ್ಮಾಯಿಯವರ ಹಳೇ ಮಾದರಿಯ ರಾಜಕೀಯ ತಂತ್ರವನ್ನು ಹಣಿಯಲು ಶಕ್ತರು. ಚುನಾವಣಾ ತಂತ್ರಗಾರಿಕೆಯ ಎಲ್ಲ ಮಾದರಿಗಳನ್ನು ಮುರಿದು ಹೊಸ ಪ್ರಯೋಗಕ್ಕೆ ಇಳಿದಿರುವ ಶಿವಕುಮಾರ್ ಅವರ ಮಾತು ಮತ್ತು ಕೃತಿಗೆ ಸರಿಯಾಗಿ ಸೆಡ್ಡು ಹೊಡೆಯಲು ಬಸವರಾಜ ಬೊಮ್ಮಾಯಿ ಅವರಿಗೆ ಯಡಿಯೂರಪ್ಪ ಬೆಂಬಲ ಮತ್ತು ಬಲ ನೀಡಬಹುದೇ ಎಂಬುದು ಯಕ್ಷ ಪ್ರಶ್ನೆ.

ಬಸವರಾಜ ಬೊಮ್ಮಾಯಿ ಬದುಕಿನ ವಿವರ • ಹುಟ್ಟಿದ್ದು: 28ನೇ ಜನೇವರಿ 1960 • ಓದಿದ್ದು: ಇಂಜಿನಿಯರಿಂಗ್ • 1998 ಮತ್ತು 2004 ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಕೆಲಸ • 2008 ರಲ್ಲಿ ರಾಜೀನಾಮೆ, ಶಿಗ್ಗಾಂವ್ ಕ್ಷೇತ್ರದಿಂದ ವಿಧಾನ ಸಭೆ ಪ್ರವೇಶ; ಭಾರೀ ನೀರಾವರಿ ಖಾತೆ ನಿರ್ವಹಣೆ 2013 ಮತ್ತು 2018 ರಲ್ಲಿ ಕೂಡ ಅಲ್ಲಿಂದ ವಿಧಾನ ಸಭೆ ಪ್ರವೇಶ, 2019 ರಿಂದ ಗೃಹ ಖಾತೆ ನಿರ್ವಹಣೆ. ಮುಖ್ಯಮಂತ್ರಿಗಳ ಪರವಾಗಿ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಪಾಲ್ಗೊಳ್ಳುವ ಹೊಣೆಗಾರಿಕೆ. ರಮೇಶ ಜಾರಕಿಹೊಳಿ ರಾಜೀನಾಮೆ ಕೊಟ್ಟ ಮೇಲೆ ಭಾರೀ ನೀರಾವರಿ ಖಾತೆಯನ್ನು ನೋಡಿಕೊಳ್ಳುವ ಜವಾಬ್ದಾರಿ ಇವರ ಹೆಗಲ ಮೇಲೆ.

(Basavaraj Bommai Profile Wiki Age Caste Family Bio personal and Political life and more data after elected as CM Of Karnataka)

ಇದನ್ನೂ ಓದಿ: ಮಾಸ್​ ಲೀಡರ್​ಗಳು ಮತ್ತು ಬಿಜೆಪಿಯ ಹೊಸ ಹೈಕಮಾಂಡ್​ ಸಂಸ್ಕೃತಿ: ಯಡಿಯೂರಪ್ಪ ಎಂಬ ಜೀವಂತ ಅಧ್ಯಾಯ

ಇದನ್ನೂ ಓದಿ: ಮುಂದಿನ ಸಂಪುಟದಲ್ಲಿ ಯಡಿಯೂರಪ್ಪ ಪಾತ್ರ ಇರಲ್ಲ. ಇನ್ನು ಮಕ್ಕಳ ಪಾತ್ರ ಎಲ್ಲಿಂದ ಬಂತು?: ಸಂಸದ ಬಿ ವೈ ರಾಘವೇಂದ್ರ

Published On - 8:05 pm, Tue, 27 July 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ