ಮಾಸ್​ ಲೀಡರ್​ಗಳು ಮತ್ತು ಬಿಜೆಪಿಯ ಹೊಸ ಹೈಕಮಾಂಡ್​ ಸಂಸ್ಕೃತಿ: ಯಡಿಯೂರಪ್ಪ ಎಂಬ ಜೀವಂತ ಅಧ್ಯಾಯ

Political Analysis: ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡುವಂತೆ ಆಗಿದ್ದು ಹೈಕಮಾಂಡ್ ಮಟ್ಟದಲ್ಲಿ ಬಿಜೆಪಿ ರೂಪಿಸಿರುವ ಮೆಗಾ ಪ್ಲಾನ್​ನ ಮೊದಲ ಹೆಜ್ಜೆ ಮಾತ್ರ. ದೇಶದ ಇತರ ರಾಜ್ಯಗಳಲ್ಲಿಯೂ ಮುಂದಿನ ದಿನಗಳಲ್ಲಿ ಇಂಥದ್ದೇ ಬೆಳವಣಿಗೆಗಳು ನಡೆಯಬಹುದು ಎಂಬ ವಿಶ್ಲೇಷಣೆಗಳು ಚಾಲ್ತಿಯಲ್ಲಿದೆ.

ಮಾಸ್​ ಲೀಡರ್​ಗಳು ಮತ್ತು ಬಿಜೆಪಿಯ ಹೊಸ ಹೈಕಮಾಂಡ್​ ಸಂಸ್ಕೃತಿ: ಯಡಿಯೂರಪ್ಪ ಎಂಬ ಜೀವಂತ ಅಧ್ಯಾಯ
ಅಮಿತ್ ಶಾ, ಯಡಿಯೂರಪ್ಪ ಮತ್ತು ನರೇಂದ್ರ ಮೋದಿ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on: Jul 27, 2021 | 6:40 PM

ಭಾರತೀಯ ಜನತಾ ಪಕ್ಷವು (ಬಿಜೆಪಿ) ನರೇಂದ್ರ ಮೋದಿ ನೇತೃತ್ವದಲ್ಲಿ 2014ರ ಲೋಕಸಭೆ ಚುನಾವಣೆ ಎದುರಿಸಿ, ಅಭೂತಪೂರ್ವ ಜಯ ತನ್ನದಾಗಿಸಿಕೊಂಡಿತು ಎಂದು ಮತ್ತೊಮ್ಮೆ ಹೇಳಬೇಕಿಲ್ಲ. ಬ್ರಿಟನ್​ನ ಲೇಖಕ ಲ್ಯಾನ್ಸ್​ ಪ್ರೈಸ್ ಸಹ ತಮ್ಮ ಪುಸ್ತಕ ‘ದಿ ಮೋದಿ ಎಫೆಕ್ಟ್​’ನಲ್ಲಿ ಇದನ್ನೇ ಹೇಳಿದ್ದಾರೆ. ಆದರೆ ಈ ಪುಸ್ತಕದಲ್ಲಿ ಮೋದಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಅವರು ಬರೆದಿರುವ ಸಾಲೊಂದನ್ನು ಅರಗಿಸಿಕೊಳ್ಳಲು ಬಹುಕಾಲ ಸಂಘ ಪರಿವಾರಕ್ಕೆ ಸಾಧ್ಯವಾಗಿರಲಿಲ್ಲ. ಇಂದಿಗೂ ಸಾಧ್ಯವಾಗಿದೆ ಎನ್ನಲು ಅಂಥ ಗಟ್ಟಿ ಆಧಾರಗಳೂ ಸಿಗುವುದಿಲ್ಲ. ‘2014ರ ಚುನಾವಣೆ ವೇಳೆ ಜನರು ನನ್ನನ್ನು ಒಂದು ನಂಬಿಕೆಯ ಹೆಸರಾಗಿ ನೋಡುತ್ತಿದ್ದರು, ಪಕ್ಷದ ಹೆಸರಾಗಿ ಅಲ್ಲ’ (a trusted name, not a party name) ಎಂಬ ಮೋದಿ ಅವರ ಹೇಳಿಕೆ ಈ ಪುಸ್ತಕದಲ್ಲಿತ್ತು.

ಈ ಪುಸ್ತಕ ಮತ್ತು ಆ ಪುಸ್ತಕದಲ್ಲಿರುವ ಮೋದಿ ಹೇಳಿದ್ದಾರೆ ಎನ್ನುವ ಮಾತು ಇದೀಗ ನೆನಪಾಗಲು ಕಾರಣವಿದೆ. ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ನಿರೀಕ್ಷೆಯಂತೆಯೇ ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಯ ಕಾರಣ ಮತ್ತು ಪರಿಣಾಮಗಳು, ಯಡಿಯೂರಪ್ಪ ಮುಂದಿನ ನಡೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ, ನಡೆಯುತ್ತಿವೆ. ಈ ಎಲ್ಲದರ ನಡುವೆ ಕಣ್ತಪ್ಪಿ ಹೋಗಿರುವ ಅಂಶವೆಂದರೆ ಅದು ಸಂಘ ಪರಿವಾರದ ರಾಜಕೀಯ ಗ್ರಹಿಕೆ.

ಬಿಜೆಪಿಯು ಸಂಘ ಪರಿವಾರದ ಭಾಗ ಎನ್ನುವುದು ನಿಜವೇ ಆದರೂ, ನಾವು ಮೂಲ ಸಂಘದ ಬಗ್ಗೆ ಅಂದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್​ಎಸ್​ಎಸ್​) ರಾಜಕೀಯ ಚಿಂತನೆಗಳನ್ನು ಒಮ್ಮೆ ಅವಲೋಕಿಸೋಣ. ಈ ಚಿಂತನೆಗಳಲ್ಲಿ ಎದ್ದು ಕಾಣುವ ಅಂಶವೆಂದರೆ ವ್ಯಕ್ತಿಗಿಂತ ಸಂಘಟನೆ, ವ್ಯಕ್ತಿಗಿಂತ ಪಕ್ಷ ಯಾವಾಗಲೂ ದೊಡ್ಡದು. ವೈಯಕ್ತಿಕ ಹಿತಾಸಕ್ತಿಗಿಂತಲೂ ಸಮಷ್ಟಿಯ ಹಿತಾಸಕ್ತಿಗೆ ಆದ್ಯತೆ ಸಿಗಬೇಕು ಎಂಬ ಧೋರಣೆ. ಈ ಧೋರಣೆಯ ಸರಿ ಅಥವಾ ತಪ್ಪುಗಳನ್ನು ವಿಶ್ಲೇಷಿಸುವುದು ಈ ಲೇಖನದ ಉದ್ದೇಶವಲ್ಲ.

ಈ ಚಿಂತನೆ ಮತ್ತು ಧೋರಣೆಯನ್ನು ಮೀರಿ ಯಾರೇ ಬೆಳೆದರೂ ಅಂಥವರ ವೇಗಕ್ಕೆ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ತಡೆಯೊಡ್ಡುವ ಬೆಳವಣಿಗೆಗಳು ಕಾಲಕಾಲಕ್ಕೆ ನಡೆಯುತ್ತವೆ. ಈ ಮಾತಿಗೆ ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಸಾಕ್ಷ್ಯಗಳೂ ಸಿಗುತ್ತವೆ. ಅದು ಹೇಗೋ ಪ್ರಧಾನಿ ನರೇಂದ್ರ ಮೋದಿ ಮಾತ್ರ ಈ ಚಿಂತನೆಯ ಹಿಡಿತವನ್ನು ಮೀರಿ ಬೆಳೆದು ಬೆಳಗುತ್ತಿದ್ದಾರೆ. ಸದ್ಯದ ಅವರ ಜನಪ್ರಿಯತೆಯನ್ನು ಗಮನಿಸಿದರೆ, ಅವರನ್ನು ಕಟ್ಟಿಹಾಕಲು ಸಂಘ ಪರಿವಾರಕ್ಕೆ ಸಾಧ್ಯವಿಲ್ಲ. ಅವರ ಬೆಳವಣಿಗೆಯನ್ನೂ ಒಂದು ಪಾಠ ಎಂದುಕೊಂಡಿರುವ ಸಂಘವು ಉಳಿದವರಿಗೆ ಅಂಥ ಅದೃಷ್ಟವನ್ನು ಕೊಡುವ ಆಲೋಚನೆಯನ್ನೂ ಹೊಂದಿಲ್ಲ.

‘ದಿ ಮೋದಿ ಎಫೆಕ್ಟ್’​ ಪುಸ್ತಕ ಪ್ರಕಟಣೆಯಾಗಿ ಸುಮಾರು ಆರು ವರ್ಷಗಳಾಗಿವೆ. ಈ ಅವಧಿಯಲ್ಲಿ ಮೋದಿ ಪ್ರಭಾವ ಮತ್ತಷ್ಟು ಹೆಚ್ಚಾಗಿದೆ. ಆದರೆ ಪ್ರಾದೇಶಿಕ ನೆಲೆಗಳಲ್ಲಿ ಬಿಜೆಪಿಯ ಆಧಾರಗಳೆನಿಸಿದ್ದ ಕರ್ನಾಟಕದ ಬಿ.ಎಸ್.ಯಡಿಯೂರಪ್ಪ, ರಾಜಸ್ಥಾನದ ವಸುಂಧರ ರಾಜೆ, ಛತ್ತೀಸಗಡದ ರಮಣ್ ಸಿಂಗ್, ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಅವರ ಪರಿಸ್ಥಿತಿ ಏನಾಗಿದೆ?

ಇದನ್ನೂ ಓದಿ: BS Yediyurappa: ಬಿಎಸ್ ಯಡಿಯೂರಪ್ಪ ತಮ್ಮ ವಿದಾಯವನ್ನು ದಕ್ಕಿಸಿಕೊಂಡ ಬಗೆಯೇ ಅಪೂರ್ವ!

BJP

ಪೆಟ್ಟು ಒಬ್ಬರಿಗೆ ಸಂದೇಶ ಮತ್ತೊಬ್ಬರಿಗೆ ರಾಜಸ್ಥಾನದ ಶಾಸಕ, ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧಿಯಾ ಅವರ ಆಪ್ತ ರೋಹಿತಾಶ್ವ ಶರ್ಮಾ ಅವರನ್ನು ಈಚೆಗಷ್ಟೇ ಬಿಜೆಪಿ ಹೈಕಮಾಂಡ್​ ಪಕ್ಷದಿಂದ ಉಚ್ಚಾಟನೆ ಮಾಡಿತ್ತು. ‘ನಾಯಕರು ಕಚೇರಿಗಳಲ್ಲಿ ಕುಳಿತಿದ್ದರೆ ಸಾಲದು, ಹಳ್ಳಿಗಳಿಗೆ ಹೋಗಬೇಕು’ ಎಂದು ಹೇಳಿದ್ದರು. ಹೈಕಮಾಂಡ್​ ಪ್ರಕಾರ ಇದು ರೋಹಿತಾಶ್ವ ಮಾಡಿದ ತಪ್ಪು. ಆದರೆ ಪರೋಕ್ಷವಾಗಿ ಇದು ವಸುಂಧರಾಗೆ ನೀಡಿದ ಎಚ್ಚರಿಕೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ರಾಜನನ್ನು ನೇರವಾಗಿ ಹೊಡೆಯಲು ಸಾಧ್ಯವಾಗದಿದ್ದಾಗ, ಸೈನಿಕನನ್ನು ಹೊಡೆದು ರಾಜನ ಶಕ್ತಿ ಕಡಿಮೆ ಮಾಡಬೇಕು ಎನ್ನುವುದು ಒಂದು ರಾಜಕೀಯ ತಂತ್ರ.

ಬಿಜೆಪಿಯ ಛತ್ತೀಸಗಡ ಉಸ್ತುವಾರಿ ಪುರಂದರೇಶ್ವರಿ ಇತ್ತೀಚೆಗೆ ಒಂದು ಹೇಳಿಕೆ ನೀಡಿದ್ದರು. ‘2023ರ ಚುನಾವಣೆಗಳಿಗೆ ಬಿಜೆಪಿಯು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವುದಿಲ್ಲ’ ಎನ್ನುವುದು ಅವರ ಹೇಳಿಕೆಯ ಸಾರಾಂಶ. ಇದನ್ನು ಛತ್ತೀಸಗಡ ಮಾಜಿ ಮುಖ್ಯಮಂತ್ರಿ ರಮಣ್​ಸಿಂಗ್ ಮತ್ತು ಮಧ್ಯಪ್ರದೇಶದ ಹಾಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ನೀಡಿದ ಸ್ಪಷ್ಟ ಸಂದೇಶ ಎಂದೇ ರಾಜಕೀಯ ವಿಶ್ಲೇಷಕರು ವ್ಯಾಖ್ಯಾನಿಸಿದರು.

ಭವಿಷ್ಯದ ನಾಯಕರು ಮತ್ತು ಹೈಕಮಾಂಡ್ ಸಂಸ್ಕೃತಿ ಮುಂದಿನ ತಲೆಮಾರಿನ ಬಿಜೆಪಿ ನಾಯಕರನ್ನು ಬೆಳೆಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ‘ಚಾಣಕ್ಯ’ ಅಮಿತ್ ಶಾ ಪ್ರಯತ್ನಿಸುತ್ತಿದ್ದಾರೆ. 78 ವರ್ಷದ ಯಡಿಯೂರಪ್ಪ, 68 ವರ್ಷದ ರಮಣ್ ಸಿಂಗ್ ಮತ್ತು 68 ವರ್ಷದ ವಸುಂಧರಾ ರಾಜೆ ಅವರನ್ನು ಬದಿಗೆ ಸರಿಸಲು ಇದು ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. ಬಿಜೆಪಿಗೆ ಇಷ್ಟು ದಿನ ಅಪಥ್ಯವೆನಿಸಿದ್ದ, ಕಾಂಗ್ರೆಸ್​ ರಾಜಕೀಯ ಚಿಂತನೆಯ ಭಾಗವಾಗಿದ್ದ ಪ್ರಬಲ ಹೈಕಮಾಂಡ್​ ಸಂಸ್ಕೃತಿಗೆ ಹೊಸ ತಲೆಮಾರನ್ನು ಒಗ್ಗಿಸುವ ಉದ್ದೇಶವೂ ಹಳಬರನ್ನು ಬದಿಗೆ ಸರಿಸುವುದರ ಹಿನ್ನೆಲೆಯಲ್ಲಿ ಇರಬಹುದು ಎನ್ನುವುದನ್ನು ಅಲ್ಲಗಳೆಯಲು ಆಗುವುದಿಲ್ಲ. ಈ ನಾಯಕರು ಸಂಪಾದಿಸಿರುವ ಸಮುದಾಯಗಳ ವಿಶ್ವಾಸ ಮತ್ತು ಮತಬ್ಯಾಂಕ್​ಗಳು ವ್ಯಕ್ತಿನಿಷ್ಠವಾಗಬಾರದು. ಅವು ಇಡಿಯಾಗಿ ಪಕ್ಷಕ್ಕೆ ವರ್ಗಾವಣೆಯಾಗಬೇಕು ಎಂಬುದು ಪಕ್ಷದ ಹೈಕಮಾಂಡ್​ನ ಇಂದಿನ ಚಿಂತನೆ.

ಕರ್ನಾಟಕದ ಯಡಿಯೂರಪ್ಪ ಅವರನ್ನು ಗಮನದಲ್ಲಿರಿಸಿಕೊಂಡು ಹೇಳುವುದಾದರೆ, ಕರ್ನಾಟಕದಲ್ಲಿ ಮತದಾರರು ಮತ್ತು ಬಿಜೆಪಿ ನಡುವಣ ಸಂಬಂಧಕ್ಕಿಂತಲೂ, ಮತದಾರರು ಮತ್ತು ಯಡಿಯೂರಪ್ಪ ನಡುವಣ ಸಂಬಂಧವೇ ಮುಖ್ಯವಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬರಲು ಇದ್ದ ಹಲವು ಕಾರಣಗಳ ಪೈಕಿ ಜಾತಿಗಳಿಗೆ ಅತೀತರಾದ ನೆಲೆಯಲ್ಲಿ ಯಡಿಯೂರಪ್ಪ ಸಂಪಾದಿಸಿಕೊಂಡಿದ್ದ ವಿಶ್ವಾಸವೂ ಒಂದು. ಯಡಿಯೂರಪ್ಪ ಅವರನ್ನು ಲಿಂಗಾಯತ ನಾಯಕ ಎನ್ನುವುದು ಅವರ ವ್ಯಕ್ತಿತ್ವವನ್ನು ಅತ್ಯಂತ ಬಡಕಲಾಗಿಸುವ ಮಾದರಿಯಾಗುತ್ತದೆ. ಲಿಂಗಾಯತ ಸಮುದಾಯದ ಆಚೆಗೂ ಯಡಿಯೂರಪ್ಪ ಅವರನ್ನು ನಾಯಕ ಎಂದು ಒಪ್ಪಿಕೊಂಡಿದ್ದ ಜನವರ್ಗದ ಪ್ರಮಾಣವೂ ದೊಡ್ಡಮಟ್ಟದಲ್ಲಿದೆ.

ಇದನ್ನೂ ಓದಿ: BS Yediyurappa: ಪ್ರವಾಹ, ಕೋವಿಡ್ ಸಂಕಷ್ಟ, ಆಪರೇಷನ್ ಕಮಲ, ಜೈಲು ವಾಸ; ಸವಾಲುಗಳನ್ನು ಮೆಟ್ಟಿ ನಿಂತ ಛಲಗಾರ ಯಡಿಯೂರಪ್ಪ

BS Yediyurappa Photos 6

ಬಿ.ಎಸ್.ಯಡಿಯೂರಪ್ಪ

ಮತದಾರರು ಮತ್ತು ಯಡಿಯೂರಪ್ಪ ನಡುವಣ ಸಂಬಂಧದಲ್ಲಿ ಪಕ್ಷ ಇದ್ದುದು 3ನೇ ನಂತರದ ಸ್ಥಾನದಲ್ಲಿ. ಆದರೆ ಈಗ ಬಿಜೆಪಿಯ ಉನ್ನತ ನಾಯಕತ್ವಕ್ಕೆ ಮತದಾರರು ಮತ್ತು ಪಕ್ಷದ ನಡುವೆ ಸಮುದಾಯಗಳನ್ನು ಆಕರ್ಷಿಸುವ ಇಂಥ ಪ್ರಬಲ ನಾಯಕರು ಬೇಡವೆನಿಸುತ್ತಿದೆ. ವಿವಿಧ ರಾಜ್ಯಗಳ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ತಳೆಯುತ್ತಿರುವುದು ನಿಲುವು ಇದನ್ನೇ ಪುಷ್ಟೀಕರಿಸುತ್ತದೆ. ಅವರಿಗೆ ಸಮುದಾಯ ಮತ್ತು ಪಕ್ಷ ಮೊದಲೆರೆಡು ಸ್ಥಾನದಲ್ಲಿರಬೇಕು. ನಾಯಕರು 3ನೇ ಸ್ಥಾನದಲ್ಲಿರಬೇಕು ಎಂಬುದು ನಿರೀಕ್ಷೆ.

ಈ ನಿರೀಕ್ಷೆ ದಕ್ಷಿಣ ಭಾರತದಲ್ಲಿ ಈಡೇರೀತೇ ಎಂಬುದು ಪ್ರಶ್ನೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಏಕೈಕ ರಾಜ್ಯ ಕರ್ನಾಟಕ. ಇಲ್ಲಿ ಶೂನ್ಯದಿಂದ ಬಿಜೆಪಿಯನ್ನು ಮೇಲೆತ್ತಿ ನಿಲ್ಲಿಸಿದವರು ಬಿ.ಎಸ್.ಯಡಿಯೂರಪ್ಪ ಮತ್ತು ಅನಂತಕುಮಾರ್ ಜೋಡಿ. 1988ರಲ್ಲಿ ಯಡಿಯೂರಪ್ಪ ಮೊದಲ ಬಾರಿಗೆ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರಾದರು. 1989ರಲ್ಲಿ ಯಡಿಯೂರಪ್ಪ ನಾಯಕತ್ವದಲ್ಲಿ ವಿಧಾನಸಭೆ ಚುನಾವಣೆ ಎದುರಿಸಿದ ಬಿಜೆಪಿಯ ಮತಗಳಿಕೆ ಪ್ರಮಾಣ ಶೇ 4, 1994ಲ್ಲಿ ಇದು ಶೇ 17ಕ್ಕೆ, 2004ರಲ್ಲಿ ಇದು ಶೇ 28ಕ್ಕೆ, 2008ರಲ್ಲಿ ಇದು ಶೇ 34ಕ್ಕೆ ಏರಿತು. ಆದರೆ 2013ರಲ್ಲಿ ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಕಟ್ಟಿದಾಗ ಈ ಮುನ್ನಡೆ ಉಳಿಯಲಿಲ್ಲಿ. ಆಗ ಬಿಜೆಪಿಯದ್ದು ಶೇ 20ರಷ್ಟು ಮತಗಳಿಕೆ, ಕೆಜೆಪಿಯದ್ದು ಶೇ 10ರಷ್ಟು ಮತಗಳಿಕೆ. ಯಡಿಯೂರಪ್ಪ ಮತ್ತೆ ಬಿಜೆಪಿಗೆ ಬಂದ ನಂತರ ನಡೆದ ಚುನಾವಣೆಯಲ್ಲಿ, ಅಂದರೆ 2018ರಲ್ಲಿ ಬಿಜೆಪಿ ಪಡೆದದ್ದು ಶೇ 36ರಷ್ಟು ಮತಗಳು. ಸೂಕ್ಷ್ಮವಾಗಿ ಗಮನಿಸಿ ನೋಡಿ, ಈ ಅಂಕಿಅಂಶಗಳು ಏನು ಹೇಳುತ್ತವೆ?

ಯಡಿಯೂರಪ್ಪ ಅವರಂಥ ಪ್ರಬಲ ನಾಯಕರನ್ನು ಬದಿಗೆ ಸರಿಸುವ ಮೂಲಕ ಹೈಕಮಾಂಡ್​ ಜೂಜಾಟಕ್ಕೆ ಇಳಿದಂತೆ ಇದೆ. ವಯೋ ಸಹಜ ಕಾರಣಕ್ಕೆ ಯಡಿಯೂರಪ್ಪ ಅವರನ್ನು ಬದಿಗೆ ಸರಿಸಲಾಗುತ್ತಿದೆ ಎಂದು ಬಹಿರಂಗವಾಗಿ ಕೊಡುತ್ತಿರುವ ಕಾರಣವೇ ನಿಜವಾದರೆ ಅವರ ಉತ್ತರಾಧಿಕಾರಿಯಾಗಿ ಯಾರನ್ನಾದರೂ ಈ ಹೊತ್ತಿಗೆ ಬೆಳೆಸಬೇಕಿತ್ತಲ್ಲವೇ?

ಬಿಜೆಪಿಯ ಈ ಪ್ರವೃತ್ತಿ ಕರ್ನಾಟಕದಲ್ಲಿ ಮಾತ್ರವಲ್ಲ ಹರಿಯಾಣ ಮತ್ತು ಮಧ್ಯಪ್ರದೇಶದಲ್ಲಿ ಪ್ರತಿಫಲಿಸುತ್ತಿದೆ. ಹರಿಯಾಣದ ಮನೋಹರ್​ ಲಾಲ್ ಖಟ್ಟರ್ (67), ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ಅವರ ಜನಪ್ರಿಯತೆಯ ಬಗ್ಗೆಯೂ ಬಿಜೆಪಿಗೆ ತುಸು ಆತಂಕವಿದೆ. ಬಹುಶಃ ಅದಕ್ಕೇ ಇರಬೇಕು ಖಟ್ಟರ್ ಉತ್ತರಾಧಿಕಾರಿ ಯಾರು ಎಂಬುದು ಇಂದಿಗೂ ಬಗೆಹರಿಯದ ಪ್ರಶ್ನೆ ಮತ್ತು ಯಡಿಯೂರಪ್ಪ ಅವರಷ್ಟೇ ಸರ್ಕಸ್ ಮಾಡಿ ಮುಖ್ಯಮಂತ್ರಿ ಆದ ಶಿವರಾಜ್​ ಸಿಂಗ್ ಚೌಹಾಣ್​ ಅವರಿಗೆ ತಮ್ಮಿಷ್ಟದಂತೆ ಸಂಪುಟ ರಚಿಸಿಕೊಳ್ಳಲೂ ಈವರೆಗೆ ಸಾಧ್ಯವಾಗಿಲ್ಲ.

ಇದನ್ನೂ ಓದಿ: ಬ್ರಾಹ್ಮಣ ಸಮುದಾಯದ ನಾಯಕರನ್ನು ಸಿಎಂ ಮಾಡುವತ್ತ ಬಿಜೆಪಿ ಹೈಕಮಾಂಡ್ ಒಲವು?

BS Yediyurappa

ಭಾವುಕರಾದ ಬಿ ಎಸ್ ಯಡಿಯೂರಪ್ಪ

ಬಂಡೆದ್ದವರು ಹಿಂದಿರುಗುತ್ತಾರೆ ಹೈಕಮಾಂಡ್ ಧೋರಣೆಗೆ ಬೇಸತ್ತು ಅಥವಾ ಬೇರೆ ಯಾವುದೇ ಕಾರಣವಿರಲಿ ಬಿಜೆಪಿಯಿಂದ ಹೊರಗೆ ಹೋಗುವ ಇಂಥ ಸಮೂಹ ನಾಯಕರು ಮತ್ತೆ ಪಕ್ಷದ ತೆಕ್ಕೆಗೆ ಹಿಂದಿರುಗುತ್ತಾರೆ ಎನ್ನುವುದು ಇತಿಹಾಸದ ಪುಟಗಳಲ್ಲಿ ನಿರೂಪಿತವಾಗಿರುವ ಸತ್ಯ. ಕರ್ನಾಟಕದ ಯಡಿಯೂರಪ್ಪ ಕೆಜೆಪಿ ಕಟ್ಟಿದ್ದು, ಅದನ್ನು ವಿಸರ್ಜಿಸಿ ಮತ್ತೆ ಬಿಜೆಪಿಯ ಭಾಗವಾಗಿದ್ದನ್ನು ನೆನೆಯಬಹುದು. ನಿಮಗೆ ಇನ್ನಷ್ಟು ಉದಾಹರಣೆಗಳು ಬೇಕು ಎಂದಾದರೆ ಮಧ್ಯಪ್ರದೇಶದ ಉಮಾಭಾರತಿ, ಉತ್ತರ ಪ್ರದೇಶದ ಕಲ್ಯಾಣ್ ಸಿಂಗ್ ಅವರನ್ನು ನೆನಪಿಸಿಕೊಳ್ಳಬಹುದು.

ಇಷ್ಟೆಲ್ಲಾ ಹೇಳಿದ ಮೇಲೆ ಇನ್ನೊಂದು ಮಾತು ಪ್ರಸ್ತಾಪಿಸದಿದ್ದರೆ ಹೇಗೆ? ಎಂದಾದರೂ ಸರಿಯೇ, ಭಾರತದ ರಾಜಕೀಯ ಇತಿಹಾಸವನ್ನು ಸಮಗ್ರವಾಗಿ ಯಾರು ಎಂದೇ ಬರೆದರೂ ಯಡಿಯೂರಪ್ಪ ಅವರಿಗೊಂದು ಅಧ್ಯಾಯ ಇರಲೇಬೇಕು. ದಕ್ಷಿಣ ಭಾರತದಲ್ಲಿ ಕಮಲ ಅರಳಿಸಿದ ಈ ನಾಯಕ ಮೂಲೆಗುಂಪಾದ ನಂತರ ನಡೆಯುವ ಚುನಾವಣೆಗೆ ಇನ್ನು 2 ವರ್ಷ ಬಾಕಿಯಿದೆ. ಅದರ ಫಲಿತಾಂಶವೂ ಯಡಿಯೂರಪ್ಪ ಅಧ್ಯಾಯವಿರುವ ಪುಸ್ತಕದಲ್ಲಿಯೇ ಖಂಡಿತ ದಾಖಲಾಗುತ್ತದೆ.

(BS Yediyurappa Karnataka Political Analysis Mass Leaders versus New High command culture in BJP)

ಇದನ್ನೂ ಓದಿ: ಯಡಿಯೂರಪ್ಪಗೆ ಇನ್ನೂ 15 ದಿನ ಸಮಯ ಕೊಡಬೇಕಿತ್ತು: ನೆರೆ ಮಧ್ಯೆ ಸಿಎಂ ಬದಲಿಸಿದ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಇದನ್ನೂ ಓದಿ: ಮುಂದಿನ ಸಂಪುಟದಲ್ಲಿ ಯಡಿಯೂರಪ್ಪ ಪಾತ್ರ ಇರಲ್ಲ. ಇನ್ನು ಮಕ್ಕಳ ಪಾತ್ರ ಎಲ್ಲಿಂದ ಬಂತು?: ಸಂಸದ ಬಿ ವೈ ರಾಘವೇಂದ್ರ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ