BS Yediyurappa: ಪ್ರವಾಹ, ಕೋವಿಡ್ ಸಂಕಷ್ಟ, ಆಪರೇಷನ್ ಕಮಲ, ಜೈಲು ವಾಸ; ಸವಾಲುಗಳನ್ನು ಮೆಟ್ಟಿ ನಿಂತ ಛಲಗಾರ ಯಡಿಯೂರಪ್ಪ

4 ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಬಿಎಸ್ ಯಡಿಯೂರಪ್ಪ ತಮ್ಮ ಅಧಿಕಾರಾವಧಿಯಲ್ಲಿ ಏನೆಲ್ಲ ಸವಾಲುಗಳನ್ನು ಎದುರಿಸಿದರು? ಎಂಬ ಮಾಹಿತಿ ಇಲ್ಲಿದೆ...

BS Yediyurappa: ಪ್ರವಾಹ, ಕೋವಿಡ್ ಸಂಕಷ್ಟ, ಆಪರೇಷನ್ ಕಮಲ, ಜೈಲು ವಾಸ; ಸವಾಲುಗಳನ್ನು ಮೆಟ್ಟಿ ನಿಂತ ಛಲಗಾರ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ
Follow us
ಸುಷ್ಮಾ ಚಕ್ರೆ
|

Updated on: Jul 26, 2021 | 3:30 PM

ಬೆಂಗಳೂರು: ಹುದ್ದೆಯೊಂದನ್ನು ಅಲಂಕರಿಸುವ ಖುಷಿ ಮಿಶ್ರಿತ ಭಯ, ಏನನ್ನೋ ಸಾಧಿಸಿದ ನಿಟ್ಟುಸಿರು ಆ ಹುದ್ದೆಯಿಂದ ಇಳಿಯುವಾಗ ಇರುವುದಿಲ್ಲ. ಇದೇನೂ ಹೊಸ ವಿಚಾರವಲ್ಲ. ಮುಖ್ಯಮಂತ್ರಿ ಮತ್ತು ಪ್ರಧಾನಿ ಪಟ್ಟದಲ್ಲಿ ಕುಳಿತವರ ಕೊನೇ ದಿನವಂತೂ ತುಂಬಾ ಕ್ಲಿಷ್ಟಕರವಾದದ್ದು; ಅರು ಯಾವ ನಿರ್ಣಯವನ್ನೂ ತೆಗೆದುಕೊಳ್ಳುವ ಹಾಗಿಲ್ಲ. ಅಧಿಕಾರವಿರುತ್ತೆ, ಆದರೆ ಚಲಾವಣೆ ಮಾಡುವ ಹಾಗಿಲ್ಲ. ಸುತ್ತಮುತ್ತ ಇದ್ದವರು ಅದಾಗಲೇ ದೂರ ಹೋಗಿರುತ್ತಾರೆ. ಯಾರು ಹತ್ತಿರ ಇರುತ್ತಾರೋ ಅವರು ಸಹಾನುಭೂತಿಯನ್ನು ತೋರಿಸುತ್ತಿರುತ್ತಾರೆಯೇ ವಿನಹ ಗೌರವವನ್ನಲ್ಲ. ಇಂದು ಜುಲೈ 26, ಎರಡು ವರ್ಷದ ಹಿಂದೆ ಅವರು ಅಧಿಕಾರ ಸ್ವೀಕರಿಸಿದ ದಿನ. 2 ವರ್ಷಗಳ ಅಧಿಕಾರಾವಧಿಯನ್ನು ಸಂಭ್ರಮಿಸಬೇಕಾದ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹಾಗಾದರೆ, ಹೊಸ ಮುಖ್ಯಮಂತ್ರಿ (Karnataka New Chief Minister) ಯಾರು ಎಂಬ ವಿಚಾರದ ಕುರಿತು ಎಲ್ಲರ ಗಮನವಿದೆ. 4 ಬಾರಿ ಮುಖ್ಯಮಂತ್ರಿಯಾಗಿದ್ದ ಬಿಎಸ್ ಯಡಿಯೂರಪ್ಪ (BS Yediyurappa) ತಮ್ಮ ಅಧಿಕಾರಾವಧಿಯಲ್ಲಿ ಏನೆಲ್ಲ ಸವಾಲುಗಳನ್ನು ಎದುರಿಸಿದರು? ಎಂಬ ಮಾಹಿತಿ ಇಲ್ಲಿದೆ…

ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಹೆಚ್ಚಾಗಿದ್ದುದರಿಂದ ಇಲ್ಲಿ ಬಿಜೆಪಿ ಸರ್ಕಾರವನ್ನು ಅಸ್ತಿತ್ವಕ್ಕೆ ತರುವುದು ಸುಲಭದ ವಿಷಯವಾಗಿರಲಿಲ್ಲ. ಆದರೆ, ಅದಕ್ಕೆ ದಾರಿ ಮಾಡಿಕೊಟ್ಟಿದ್ದು ಇದೇ ಬಿಎಸ್ ಯಡಿಯೂರಪ್ಪ. ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಹರಸಾಹಸ ಪಟ್ಟ ಬಿಎಸ್ ಯಡಿಯೂರಪ್ಪ ಆಪರೇಷನ್ ಕಮಲದ ಪಿತಾಮಹ ಎನಿಸಿಕೊಂಡರು! ಬಿಜೆಪಿಯ ಆಪರೇಷನ್ ಕಮಲದ ದಾಳಕ್ಕೆ ಸಿಲುಕಿದವರ ಪಟ್ಟಿ ಸಣ್ಣದೇನಲ್ಲ.

ಆಪರೇಷನ್ ಕಮಲದ ಪಿತಾಮಹ: 2008ರಲ್ಲಿ ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬರಲು ಮೂರು ಸೀಟು ಕಡಿಮೆ ಬಿದ್ದಾಗ, ಸ್ವತಂತ್ರ ಅಭ್ಯರ್ಥಿಗಳನ್ನು ಮತ್ತು ಆಪರೇಷನ್ ಕಮಲದ ಮೂಲಕ ಇನ್ನೂ ಹಲವಾರು ಕಾಂಗ್ರೆಸ್ ಶಾಸಕರನ್ನು ತಮ್ಮತ್ತ ಸೆಳೆದು ಅಧಿಕಾರಕ್ಕೆ ಬಂದ ಯಡಿಯೂರಪ್ಪನವರ ಹೋರಾಟ ಬರೀ ಅಧಿಕಾರದ ಲಾಲಸೆಗಾಗಿ ಆಗಿರಲಿಲ್ಲ. 1983ರಿಂದ ರಾಜ್ಯದ ಮೂಲೆ ಮೂಲೆಯಲ್ಲಿ ಹಗಲು ರಾತ್ರಿ ಓಡಾಡಿ ಪಕ್ಷ ಕಟ್ಟುವಾಗ ಕೂಡ ಇದೇ ಛಲವಿತ್ತು. ಹತ್ತಿರದಿಂದ ನೋಡಿದವರು ಇದನ್ನು ಯಾರೂ ಮರೆಯಲಾರರು. ಹುಟ್ಟು ಹೋರಾಟಗಾರರಾದ ಯಡಿಯೂರಪ್ಪ ತಮ್ಮ ಹಠ, ಛಲದಿಂದಾಗಿಯೇ ಪ್ರಸಿದ್ಧಿ ಪಡೆದವರು.

ಸವಾಲುಗಳನ್ನು ಮೆಟ್ಟಿ ನಿಂತ ಹಠವಾದಿ:

ಮುಖ್ಯಮಂತ್ರಿಯಾಗಿದ್ದಾಗ ಬಿ.ಎಸ್. ಯಡಿಯೂರಪ್ಪ ಎಷ್ಟು ವಿವಾದಗಳಿಗೆ ಗುರಿಯಾಗಿದ್ದಾರೋ ಅಷ್ಟೇ ಸಾಧನೆಗಳನ್ನೂ ಮಾಡಿದ್ದಾರೆ. ರೈತನ ಹೆಸರಿನಲ್ಲಿ ಅಧಿಕಾರ ಸ್ವೀಕರಿಸಿದ 2008ರಲ್ಲಿ ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಕೃಷಿ ಬಜೆಟ್ ಅನ್ನು ಮಂಡನೆ ಮಾಡುವ ಮೂಲಕ ತಾನು ರೈತರ ಪರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. 2008ರಲ್ಲಿ, ಶೋಭಾ ಕರಂದ್ಲಾಜೆ ಮೂಗು ತೂರಿಸುತ್ತಾರೆ ಎಂಬ ಆರೋಪ ಪದೇ ಪದೇ ಕೇಳಿಬಂದಿತು. ರೆಡ್ಡಿ ಸಹೋದರರ ಸವಾಲ್ ಜೋರಾಗಿತ್ತು. ಆ ಆಂತರಿಕ ವಿಪ್ಲವದ ನಡುವೆ, ಲೋಕಾಯುಕ್ತ ಸಂತೋಷ ಹೆಗಡೆ ಅವರ ವರದಿ ಆಧಾರದ ಮೇಲೆ ಅಕ್ರಮ ಗಣಿಗಾರಿಕೆಯ ಆರೋಪ ಎದುರಿಸಿ, ರಾಜೀನಾಮೆ ಕೊಡಬೇಕಾಯ್ತು. ಈ ಅವಧಿಯಲ್ಲಿ ಅವರು ಯಾವ ಸಮುದಾಯಕ್ಕೂ ಮೋಸ ಮಾಡದೇ ಆಡಳಿತ ನೀಡಿದ್ದರು. ಭಾಗ್ಯಲಕ್ಷ್ಮಿ ಯೋಜನೆಯಡಿ ಹೆಣ್ಣು ಮಕ್ಕಳ ಹೆಸರಿನಲ್ಲಿ ಹತ್ತು ಸಾವಿರ ರೂಪಾಯಿ ಬ್ಯಾಂಕಿನಲ್ಲಿ ಇಡುವುದು, ಶಾಲಾ ಮತ್ತು ಹೈ ಸ್ಕೂಲ್ ಮಕ್ಕಳಿಗೆ ಸೈಕಲ್ ಸ್ಕೀಮ್ -ಹೀಗೆ ಹತ್ತು ಹಲವಾರು ಕಾರ್ಯಕ್ರಮ ನೀಡಿದ ಕೀರ್ತಿ ಯಡಿಯೂರಪ್ಪನವರದ್ದು.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ, ಅಲ್ಪಸಂಖ್ಯಾತ ಶಾಲಾ ಮಕ್ಕಳಿಗೆ ಮಾತ್ರ ಶಾಲಾ ಪ್ರವಾಸ ಕಾರ್ಯಕ್ರಮ ಘೋಷಣೆ ಮಾಡಿದ್ದರು. ಆಮೇಲೆ ತೀವ್ರ ರಾಜಕೀಯ ಟೀಕೆ ಬಂದ ಹಿನ್ನೆಲೆಯಲ್ಲಿ ಆ ಕಾರ್ಯಕ್ರಮವನ್ನು ಬದಲಾಯಸಿದರು. ಆದರೆ, ಯಡಿಯೂರಪ್ಪ ಆ ರೀತಿಯ ಕಾರ್ಯಕ್ರಮವನ್ನು ಯಾವತ್ತೂ ಘೋಷಿಸಿಲ್ಲ. ಮೊಟ್ಟ ಮೊದಲ ಬಾರಿಗೆ ಮಠಗಳಿಗೆ ನೇರವಾಗಿ ಹಣ ನೀಡಿದ್ದನ್ನು ಮಾತ್ರ ವಿರೋಧ ಪಕ್ಷಗಳು ಟೀಕಿಸುತ್ತವೆ. ಆದರೆ, ವಾಸ್ತವವೇ ಬೇರೆ. 2008ಕ್ಕೂ ಮೊದಲು ಅವರ ಕಾಲದಲ್ಲಿ, ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಮುದಾಯ ಅಭಿವೃದ್ಧಿಗೆ ನೀಡುತ್ತಿದ್ದ ಹಣಕ್ಕಿಂತ ನಾಲ್ಕು ಪಟ್ಟು ಜಾಸ್ತಿ ಹಣ ಬಿಡುಗಡೆ ಮಾಡಿದ್ದು ಸುದ್ದಿ ಆಗಲಿಲ್ಲ. ಅಥವಾ ತಪ್ಪು ಗ್ರಹಿಕೆಯನ್ನು ವ್ಯವಸ್ಥಿತವಾಗಿ ಬಿಂಬಿಸಲಾಯಿತು.

2007ರಲ್ಲಿ ಮೊದಲ ಬಾರಿ ಸಿಎಂ​​ ಆಗಿ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಮೂರು ದಿನ ಕೂಡ ಉಳಿಯಲಿಲ್ಲ. ದಕ್ಷಿಣ ಭಾರತದ ಮೊದಲ ಬಿಜೆಪಿ ಮುಖ್ಯಮಂತ್ರಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಬಿಎಸ್ ಯಡಿಯೂರಪ್ಪ, 2012ರಲ್ಲಿ ಮುಖ್ಯಮಂತ್ರಿಯಾಗಿದ್ದಾಗಲೇ ಜೈಲು ಸೇರುವ ಮೂಲಕ ಅಧಿಕಾರದಲ್ಲಿದ್ದಾಗಲೇ ಸೆರೆವಾಸ ಅನುಭವಿಸಿದ ಮೊದಲ ಮುಖ್ಯಮಂತ್ರಿಯೆಂಬ ಕುಖ್ಯಾತಿಯನ್ನೂ ಪಡೆದರು. ಈ ಘಟನೆ ಅವರ ರಾಜಕೀಯ ಜೀವನದಲ್ಲಿ ದೊಡ್ಡ ಕಪ್ಪುಚುಕ್ಕಿಯಾಗಿಯೇ ಉಳಿಯಿತು.

ಜೈಲು ವಾಸ ಅನುಭವಿಸಿದ ನಂತರ ಬಿಜೆಪಿ ನಾಯಕರ ವರ್ತನೆಗೆ ಅಸಮಾಧಾನಗೊಂಡು ಕೆಜೆಪಿ ಎಂಬ ತಮ್ಮದೇ ಆದ ಹೊಸ ಪಕ್ಷವನ್ನು ಕಟ್ಟಿದರು. ಕೆಜೆಪಿಯಿಂದ 2013ರಲ್ಲಿ ಚುನಾವಣೆ ಎದುರಿಸಿದ ಯಡಿಯೂರಪ್ಪ ತಾವೇನೋ ಗೆದ್ದುಬಂದರು. ಆದರೆ, ತಮ್ಮ ಪಕ್ಷವನ್ನು ನೆಲೆಯೂರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, ಮತ್ತೆ ಬಿಜೆಪಿಯೊಂದಿಗೆ ಕೆಜೆಪಿಯನ್ನು ವಿಲೀನಗೊಳಿಸಿದರು. ಆದರೆ, ಯಡಿಯೂರಪ್ಪ ರೆಬೆಲ್ ಆಗಿ ಬಿಜೆಪಿ ತೊರೆದು ಬೇರೊಂದು ಪಕ್ಷ ಕಟ್ಟಿದ್ದರಿಂದ ಕರ್ನಾಟಕದಲ್ಲಿ ಬಿಜೆಪಿಗೆ ಭಾರೀ ಹೊಡೆತ ಬಿದ್ದಿತು. ಯಡಿಯೂರಪ್ಪ ವಾಪಾಸ್ ಬಿಜೆಪಿಗೆ ಸೇರಿದರೂ ಬಿಜೆಪಿಯ ಕೆಲವು ನಾಯಕರು ಇದೇ ಕಾರಣಕ್ಕೆ ಯಡಿಯೂರಪ್ಪನವರ ವಿರುದ್ಧ ದ್ವೇಷ ಕಾರತೊಡಗಿದರು. ಯಡಿಯೂರಪ್ಪನವರ ಬಗ್ಗೆ ಅಸಮಾಧಾನವಿದ್ದರೂ ಅವರ ಬೆನ್ನ ಹಿಂದಿದ್ದ ವೀರಶೈವ-ಲಿಂಗಾಯತರ ಬೆಂಬಲ, ರೈತರಿಗೆ ಅವರ ಪರವಾಗಿದ್ದ ವಿಶ್ವಾಸವನ್ನು ಗಮನದಲ್ಲಿಟ್ಟುಕೊಂಡು 2018ರ ಚುನಾವಣೆಯಲ್ಲಿ ಯಡಿಯೂರಪ್ಪನವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಾಯಿತು.

2018ರಲ್ಲಿ 113 ಸೀಟು ಸಿಕ್ಕೇ ಸಿಗುತ್ತದೆ ಎಂದುಕೊಂಡ ಬಿಜೆಪಿಗೆ 2018 ಶಾಕ್ ಆಯ್ತು. ಈ ಬಾರಿ 104 ಸೀಟಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂತು. ಈ ಚುನಾವಣೆಯಲ್ಲಿ 104 ಸೀಟುಗಳು ಬಂದಿದ್ದರಿಂದ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರೂ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ. ಇದೇ ಅವಕಾಶಕ್ಕಾಗಿ ಕಾದಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿಸಿ, ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಆದರೆ, ಅಲ್ಲೂ ತಮ್ಮ ಹಠ ಬಿಡದ ಬಿಎಸ್ ಯಡಿಯೂರಪ್ಪ ಮತ್ತೊಮ್ಮೆ ಆಪರೇಷನ್ ಕಮಲ ಮಾಡಿ, ಮೈತ್ರಿ ಸರ್ಕಾರದ ಕಾಂಗ್ರೆಸ್, ಜೆಡಿಎಸ್ ಸಚಿವರನ್ನು ತಮ್ಮ ತೆಕ್ಕೆಗೆ ಎಳೆದುಕೊಂಡು ಸರ್ಕಾರವನ್ನು ಬೀಳಿಸಿದರು. ಕೆಲವು ದಿನಗಳ ಹೈಡ್ರಾಮಾದ ನಂತರ ವಲಸಿಗ ಶಾಸಕರನ್ನು ಸೇರಿಸಿಕೊಂಡು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

3 ದಶಕಗಳ ಕಾಲ ರೋಚಕವಾದ ರಾಜಕೀಯ ತಿರುವುಗಳನ್ನು ಕಂಡ ಯಡಿಯೂರಪ್ಪನವರಿಗೆ ಈ ಸರ್ಕಾರದಲ್ಲಿಯೂ ಸವಾಲುಗಳು ಎದುರಾಯಿತು. 17 ಶಾಸಕರು ರಾಜೀನಾಮೆ ನೀಡಿದ್ದ ಸ್ಥಾನಗಳಿಗೆ ಮತ್ತೆ ಚುನಾವಣೆ ಮಾಡಿಸಿ, ಅಲ್ಲಿಯೂ ಆ ಅಭ್ಯರ್ಥಿಗಳಿಗೆ ಬಿಜೆಪಿಯಿಂದ ಟಿಕೆಟ್ ಕೊಡಿಸಿ, ಗೆಲ್ಲಿಸಿಕೊಂಡು ಬಂದರು. ಇದರಿಂದ ಆ ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿದ್ದ ಮೂಲ ಬಿಜೆಪಿಗರ ಅಸಮಾಧಾನಕ್ಕೂ ಕಾರಣದರಾದರು. ಮತ್ತೊಂದೆಡೆ ಚುನಾವಣೆಯಲ್ಲಿ ಗೆದ್ದಿದ್ದ ಸಚಿವರಿಗೆ ಈ ಮೊದಲೇ ಆಶ್ವಾಸನೆ ನೀಡಿದಂತೆ ಸಚಿವ ಸ್ಥಾನ ಕೊಡಲೇಬೇಕಾದ ಅನಿವಾರ್ಯತೆಯಿತ್ತು. ಮೂಲ ಬಿಜೆಪಿಗರು ಮತ್ತು ವಲಸಿಗ ಬಿಜೆಪಿಗರ ನಡುವಿನ ಅಂತರವನ್ನು ಕಡಿಮೆ ಮಾಡದಿದ್ದರೆ ತಮ್ಮ ಖುರ್ಚಿಗೆ ಕಂಟಕ ಖಚಿತ ಎಂದರಿತ ಯಡಿಯೂರಪ್ಪ ಸಚಿವ ಸಂಪುಟ ಪುನಾರಚನೆ ಮಾಡಿ ವಲಸಿಗ ಶಾಸಕರಿಗೆ ಸಚಿವ ಸ್ಥಾನ ನೀಡಿದರು. ಇದರಿಂದ ಬಿಜೆಪಿ ಪಾಳಯದಲ್ಲಿ ಅಸಮಾಧಾನ ಮತ್ತಷ್ಟು ಹೆಚ್ಚಾಯಿತು. ವಲಸಿಗರಿಗೆ ಸಚಿವ ಸ್ಥಾನ ನೀಡಿದ್ದರಿಂದ ಬಿಜೆಪಿ ಹಿರಿಯ ನಾಯಕರಿಗೆ ಸಚಿವ ಸ್ಥಾನ ಕೈತಪ್ಪಿತು. ಇದರಿಂದ ಈ ವಿಷಯ ಹೈಕಮಾಂಡ್​ವರೆಗೂ ಹೋಯಿತು. ಆದರೆ, ಆಪರೇಷನ್ ಕಮಲದ ವೇಳೆ ತಾವು ನೀಡಿದ್ದ ಮಾತನ್ನು ಉಳಿಸಿಕೊಳ್ಳಬೇಕೆಂಬ ಕಾರಣದಿಂದ ಯಡಿಯೂರಪ್ಪ ತಮ್ಮ ಪಕ್ಷದವರ ವಿರೋಧ ಕಟ್ಟಿಕೊಂಡು ವಲಸಿಗರನ್ನು ಸಂಪುಟದಲ್ಲಿ ಉಳಿಸಿಕೊಂಡರು.

ಕಂಡು ಕೇಳರಿಯದ ಪ್ರವಾಹ: 2019ರಲ್ಲಿ ಕರ್ನಾಟಕದಲ್ಲಿ ಕಂಡು ಕೇಳರಿಯದ ಪ್ರವಾಹ ಎದುರಾಯಿತು. 2020ರಲ್ಲಿಯೂ ಭಾರೀ ನೆರೆಯಿಂದ ಊರಿಗೂರೇ ಮುಳುಗಡೆಯಾಯಿತು. ಮಲೆನಾಡು, ಉತ್ತರ ಕರ್ನಾಟಕ, ಕರಾವಳಿಯ ಸಾವಿರಾರು ಎಕರೆ ಜಮೀನು ಮಳೆಯಲ್ಲಿ ಕೊಚ್ಚಿಕೊಂಡು ಹೋಯಿತು. ನೂರಾರು ಜನರು ಮನೆ ಕಳೆದುಕೊಂಡು ಬೀದಿಗೆ ಬಂದರು. ಸಾಕಷ್ಟು ಜನರು ಪ್ರವಾಹದಲ್ಲಿ ಜೀವ ಕಳೆದುಕೊಳ್ಳಬೇಕಾಯಿತು. ಇದರ ನಡುವೆ ಕೊರೋನಾ ಎಂಬ ಹೊಸದೊಂದು ವೈರಸ್​ ಇಡೀ ಜಗತ್ತನ್ನು ಆತಂಕಕ್ಕೆ ದೂಡಿತು. ಆಗ 2020ರ ಮೇ ತಿಂಗಳಲ್ಲಿ ಮೊದಲ ಬಾರಿಗೆ ಇಡೀ ರಾಜ್ಯದಲ್ಲಿ ಲಾಕ್​ಡೌನ್ ಘೋಷಿಸಬೇಕಾದ ಅನಿವಾರ್ಯತೆ ಬಂದಿತು. ಅದಾದ ನಂತರ ಕೋವಿಡ್ 2 ಅಲೆಗಳನ್ನು ನಿಭಾಯಿಸಿದ ಯಡಿಯೂರಪ್ಪನವರ ಸರ್ಕಾರ ಈ ವರ್ಷ ಮೇ ತಿಂಗಳಲ್ಲಿ ಮತ್ತೊಮ್ಮೆ ಲಾಕ್​ಡೌನ್ ಘೋಷಣೆ ಮಾಡಿತು. ಭಾರೀ ನೆರೆ, ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ನಡೆದ ಹೋರಾಟ, ಕೋವಿಡ್​ ಅಲೆ, ಬಿಜೆಪಿ ಪಕ್ಷದೊಳಗಿನ ಅಸಮಾಧಾನ ಹೀಗೆ ಹಲವು ಸವಾಲುಗಳನ್ನು ಮೆಟ್ಟಿ ನಿಂತು ಯಶಸ್ವಿಯಾಗಿ ಸರ್ಕಾರವನ್ನು ಮುನ್ನೆಡೆಸಿದರು.

ದೇಶದಲ್ಲೇ ಮೊದಲ ಬಾರಿಗೆ ಕೃಷಿ ಬಜೆಟ್ ಮಂಡನೆ ಮಾಡುವ ಮೂಲಕ ಜನನಾಯಕ ಎನಿಸಿಕೊಂಡ ಯಡಿಯೂರಪ್ಪ, ಶೇ. 1ರ ಬಡ್ಡಿ ದರದಲ್ಲಿ ರೈತರಿಗೆ ಸಾಲ ನೀಡುವ ಯೋಜನೆಯನ್ನು ಜಾರಿಗೆ ತಂದರು. ರೈತರಿಗೆ ಇಸ್ರೇಲ್ ಮತ್ತು ಚೀನಾ ಪ್ರವಾಸ ನಡೆಸಲು ಅವಕಾಶ ನೀಡಿದರು. ಹೀಗೆ ಹಲವು ಕಾರಣಗಳಿಂದ ಕರ್ನಾಟಕ ಕಂಡ ಅತ್ಯುತ್ತಮ ಮುಖ್ಯಮಂತ್ರಿಗಳಲ್ಲಿ ಒಬ್ಬರು ಎನಿಸಿಕೊಂಡಿರುವ ಯಡಿಯೂರಪ್ಪ ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲರಾಗಿಯೂ ನಾನು ಸೇವೆ ಸಲ್ಲಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಹೀಗಾಗಿ, ಅವರ ಮುಂದಿನ ರಾಜಕೀಯ ಭವಿಷ್ಯ ಏನಾಗಲಿದೆ? ಅವರ ಮುಂದಿರುವ ಆಯ್ಕೆಯೇನು? ಎಂಬುದು ಸದ್ಯದ ಕುತೂಹಲವಾಗಿದೆ.

ಇದನ್ನೂ ಓದಿ: BS Yediyurappa Profile: ಗುಮಾಸ್ತನಿಂದ ಮುಖ್ಯಮಂತ್ರಿ ಗಾದಿಯುವರೆಗೂ ಬಿಎಸ್ ಯಡಿಯೂರಪ್ಪ ನಡೆದುಬಂದ ಹಾದಿ ಸುಲಭದ್ದೇನಲ್ಲ

2 ತಿಂಗಳ ಹಿಂದೆಯೇ ರಾಜೀನಾಮೆಗೆ ನಿರ್ಧರಿಸಿದ್ದೆ; ರಾಜ್ಯಪಾಲ ಹುದ್ದೆ ಅಲಂಕರಿಸುವುದಿಲ್ಲ –ನಿರ್ಗಮಿತ ಮುಖ್ಯಮಂತ್ರಿ ಯಡಿಯೂರಪ್ಪ

(BS Yediyurappa Faced Critical Challenges Like Flood and Covid-19  Pandemic During his Chief Minister Period of Karnataka)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ