Oscar Fernandes Death: ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ನಿಧನ

TV9 Digital Desk

| Edited By: ganapathi bhat

Updated on:Sep 13, 2021 | 3:16 PM

ಆಸ್ಕರ್ ಫರ್ನಾಂಡಿಸ್ ನಿಧನ: ಆಸ್ಕರ್ ಫರ್ನಾಂಡಿಸ್ ಯುಪಿಎ ಸರ್ಕಾರದ ಆಡಳಿತದ ಅವಧಿಯಲ್ಲಿ ಕೇಂದ್ರ ಮಂತ್ರಿಯಾಗಿದ್ದರು. ರಸ್ತೆ, ಸಾರಿಗೆ, ಹೆದ್ದಾರಿ ಮತ್ತು ಕಾರ್ಮಿಕ ಸಚಿವರಾಗಿಯೂ ಕೆಲಸ ಮಾಡಿದ್ದರು. ರಾಜೀವ್ ಗಾಂಧಿ ಜೊತೆಗೆ ಸಂಸತ್ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು.

Oscar Fernandes Death: ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ನಿಧನ
ಆಸ್ಕರ್ ಫರ್ನಾಂಡಿಸ್


ಮಂಗಳೂರು: ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ಇಂದು (ಸೆಪ್ಟೆಂಬರ್ 13) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಕಳೆದ ಭಾನುವಾರ ಮನೆಯಲ್ಲಿ ಜಾರಿ ಬಿದ್ದು ಗಾಯಗೊಂಡ ಕಾರಣ ಆಸ್ಕರ್​ ಫರ್ನಾಂಡಿಸ್​ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ.

ಅವರು ಈ ಮೊದಲು ಮನೆಯಲ್ಲಿ ನಿಯಂತ್ರಣ ತಪ್ಪಿ ಜಾರಿ ಬಿದ್ದಿದ್ದರಿಂದ ತಲೆಗೆ ಏಟಾಗಿತ್ತು. ದೊಡ್ಡ ಪ್ರಮಾಣದಲ್ಲಿ ಗಾಯವಾಗಿಲ್ಲ ಎಂದು ಆಸ್ಕರ್ ನಿರ್ಲಕ್ಷ್ಯ ವಹಿಸಿದ್ದರು. ಆ ಬಳಿಕ, ಮಾಮೂಲಿ ಚಿಕಿತ್ಸೆಗೆ ಆಸ್ಪತ್ರೆಗೆ ತೆರಳಿದ್ದ ವೇಳೆ ತಲೆಯ ಒಳಭಾಗಕ್ಕೆ ಏಟು ಬಿದ್ದಿರುವುದು ತಿಳಿದುಬಂದಿತ್ತು. ಹಾಗಾಗಿ, ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗಿತ್ತು. ಬಳಿಕ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಕರ್ನಾಟಕ ಕಾಂಗ್ರೆಸ್ ನಾಯಕರಾದ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ರಾಜಕೀಯ, ಧಾರ್ಮಿಕ ಹಿರಿಯ ಮುಂದಾಳು ಬಿ ಜನಾರ್ದನ ಪೂಜಾರಿ ಹಾಗೂ ಸ್ಥಳೀಯ ರಾಜಕೀಯ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಆಸ್ಕರ್ ಫರ್ನಾಂಡಿಸ್ ಆರೋಗ್ಯ ವಿಚಾರಿಸಿದ್ದರು. ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದರು. ಎಐಸಿಸಿ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ದೂರವಾಣಿ ಮೂಲಕ ಫರ್ನಾಂಡಿಸ್ ಕುಟುಂಬದವರೊಂದಿಗೆ ಮಾತನಾಡಿದ್ದರು.

ಆಸ್ಕರ್ ಫರ್ನಾಂಡಿಸ್ ಯುಪಿಎ ಸರ್ಕಾರದ ಆಡಳಿತದ ಅವಧಿಯಲ್ಲಿ ಕೇಂದ್ರ ಮಂತ್ರಿಯಾಗಿದ್ದರು. ರಸ್ತೆ, ಸಾರಿಗೆ, ಹೆದ್ದಾರಿ ಮತ್ತು ಕಾರ್ಮಿಕ ಸಚಿವರಾಗಿಯೂ ಕೆಲಸ ಮಾಡಿದ್ದರು. ರಾಜೀವ್ ಗಾಂಧಿ ಜೊತೆಗೆ ಸಂಸತ್ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು. 1980ರಿಂದ 1996ರ ವರೆಗೆ ಕರ್ನಾಟಕದ ಉಡುಪಿ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿ ಆಯ್ಕೆ ಆಗಿದ್ದರು. ಬಳಿಕ, 1998ರಲ್ಲಿ ಹಾಗೂ 2004ರಲ್ಲಿ ರಾಜ್ಯಸಭೆಗೂ ಆಯ್ಕೆ ಆಗಿದ್ದರು.

ಇದನ್ನೂ ಓದಿ: ಆಸ್ಕರ್ ಫೆರ್ನಾಂಡಿಸ್ ಆರೋಗ್ಯ ಸ್ಥಿತಿ ಗಂಭೀರ; ಫೋನ್ ಮಾಡಿ ಯೋಗಕ್ಷೇಮ ವಿಚಾರಿಸಿದ ರಾಹುಲ್, ಸೋನಿಯಾ ಗಾಂಧಿ

ಮನೆಯಲ್ಲಿ ಜಾರಿ ಬಿದ್ದು ಆಸ್ಕರ್​ ಫರ್ನಾಂಡಿಸ್​ ತಲೆಗೆ ಗಾಯ; ಮಂಗಳೂರಿನ ಖಾಸಗಿ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ

(Senior Congress Leader Oscar Fernandes Passes Away in Mangaluru he was 80)

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada