ಮೊದಲ ದಿನ ಆಮಿರ್ ಖಾನ್ ಸಿನಿಮಾ ‘ಸಿತಾರೆ ಜಮೀನ್ ಪರ್’ ಗಳಿಸಿದ್ದು ಎಷ್ಟು?
ಆಮಿರ್ ಖಾನ್ ಅಭಿನಯದ ‘ಸಿತಾರೆ ಜಮೀನ್ ಪರ್’ ಸಿನಿಮಾಗೆ ಉತ್ತಮ ವಿಮರ್ಶೆ ಸಿಕ್ಕಿದೆ. ಹಾಗಿದ್ದರೂ ಕೂಡ ಮೊದಲ ದಿನ ಈ ಸಿನಿಮಾ ಸಾಧಾರಣ ಓಪನಿಂಗ್ ಪಡೆದುಕೊಂಡಿದೆ. ಸುಧಾಮೂರ್ತಿ, ಸಚಿನ್ ತೆಂಡುಲ್ಕರ್ ಮುಂತಾದವರು ನೋಡಿ ಮೆಚ್ಚಿಕೊಂಡಿರುವ ‘ಸಿತಾರೆ ಜಮೀನ್ ಪರ್’ ಚಿತ್ರದ ಕಲೆಕ್ಷನ್ ಬಗ್ಗೆ ಇಲ್ಲಿದೆ ವಿವರ..

ಬಾಲಿವುಡ್ ನಟ ಆಮಿರ್ ಖಾನ್ (Aamir Khan) ಅವರು ಭಾರಿ ನಿರೀಕ್ಷೆ ಇಟ್ಟುಕೊಂಡು ಮಾಡಿರುವ ಸಿನಿಮಾ ‘ಸಿತಾರೆ ಜಮೀನ್ ಪರ್’. ಈ ಚಿತ್ರ ಜೂನ್ 20ರಂದು ಬಿಡುಗಡೆ ಆಗಿದೆ. ವಿವಿಧ ವೇದಿಕೆಗಳಲ್ಲಿ ಆಮಿರ್ ಖಾನ್ ಅವರು ‘ಸಿತಾರೆ ಜಮೀನ್ ಪರ್’ (Sitaare Zameen Par) ಸಿನಿಮಾದ ಪ್ರಮೋಷನ್ ಮಾಡಿದರು. ಹಲವು ಮಾಧ್ಯಮಗಳಿಗೆ ಅವರು ಸಂದರ್ಶನ ನೀಡಿದರು. ಹಾಗಿದ್ದರೂ ಕೂಡ ಸ್ಟಾರ್ ನಟನ ಸಿನಿಮಾಗೆ ಸಿಗಬೇಕಾದ ಓಪನಿಂಗ್ ಈ ಚಿತ್ರಕ್ಕೆ ಸಿಕ್ಕಿಲ್ಲ. ಹಾಗಾದರೆ ಈ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್ನಲ್ಲಿ ಎಷ್ಟು ಕಲೆಕ್ಷನ್ (Sitaare Zameen Par Collection) ಮಾಡಿದೆ? ಮೊದಲ ದಿನದ ಎಲ್ಲ ಶೋಗಳು ಪೂರ್ಣಗೊಳ್ಳುವುದಕ್ಕೂ ಮುನ್ನವೇ ಅಂದಾಜು ಲೆಕ್ಕ ಸಿಕ್ಕಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..
ಸ್ವತಃ ಆಮಿರ್ ಖಾನ್ ಅವರು ‘ಸಿತಾರೆ ಜಮೀನ್ ಪರ್’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಅನೇಕ ಹೊಸ ಕಲಾವಿದರಿಗೆ ಅವರು ಅವಕಾಶ ನೀಡಿದ್ದಾರೆ. ಆಮಿರ್ ಖಾನ್ ಜೊತೆ ನಾಯಕಿಯಾಗಿ ಜೆನಿಲಿಯಾ ದೇಶಮುಖ್ ನಟಿಸಿದ್ದಾರೆ. ಆರ್.ಎಸ್. ಪ್ರಸನ್ನ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಉತ್ತಮ ವಿಮರ್ಶೆ ಪಡೆದುಕೊಂಡಿರುವ ‘ಸಿತಾರೆ ಜಮೀನ್ ಪರ್’ ಸಿನಿಮಾ ಮೊದಲ ದಿನ ಕೇವಲ ಶೇಕಡ 17.73ರಷ್ಟು ಆಕ್ಯುಪೆನ್ಸಿ ಹೊಂದಿತ್ತು. ಹಾಗಾಗಿ ಕಲೆಕ್ಷನ್ ಕೂಡ ಸಾಧಾರಣ ಆಗಿದೆ.
ವರದಿಗಳ ಪ್ರಕಾರ, ‘ಸಿತಾರೆ ಜಮೀನ್ ಪರ್’ ಸಿನಿಮಾಗೆ ಮೊದಲ ದಿನ 10ರಿಂದ 13 ಕೋಟಿ ರೂಪಾಯಿ ಕಲೆಕ್ಷನ್ ಆಗಿರುವ ಸಾಧ್ಯತೆ ಇದೆ. ಆಮಿರ್ ಖಾನ್ ಅವರಂತಹ ಸ್ಟಾರ್ ಹೀರೋಗಳ ಸಿನಿಮಾಗೆ ಇದು ತುಂಬ ಸಣ್ಣ ಮೊತ್ತ. ಪಾಸಿಟಿವ್ ವಿಮರ್ಶೆ ಸಿಕ್ಕಿರುವುದರಿಂದ ಮುಂದಿನ ದಿನಗಳಲ್ಲಿ ಈ ಸಿನಿಮಾದ ಕಲೆಕ್ಷನ್ನಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ.
ಶುಕ್ರವಾರ (ಜೂನ್ 20) ನಿಖರವಾಗಿ ಎಷ್ಟು ಕಲೆಕ್ಷನ್ ಆಗಿದೆ ಎಂಬುದರ ಲೆಕ್ಕ ಶನಿವಾರ (ಜೂನ್ 21) ಬೆಳಗ್ಗೆ ವೇಳೆಗೆ ಸಿಗಲಿದೆ. ಶನಿವಾರ ಮತ್ತು ಭಾನುವಾರ ವೀಕೆಂಡ್ ರಜೆ ಇರುವುದರಿಂದ ಸಿನಿಮಾಗೆ ಪ್ರೇಕ್ಷಕರ ಸಂಖ್ಯೆ ಹೆಚ್ಚಬಹುದು ಎಂಬ ನಿರೀಕ್ಷೆ ಇದೆ. ಫ್ಯಾಮಿಲಿ ಪ್ರೇಕ್ಷಕರು ಈ ಸಿನಿಮಾ ಕಡೆಗೆ ಒಲವು ತೋರಿಸಬಹುದು.
ಇದನ್ನೂ ಓದಿ: Sitaare Zameen Par Review: ನಗಿಸಿ, ಅಳಿಸಿ ಮನರಂಜನೆ ನೀಡುವ ‘ಸಿತಾರೆ ಜಮೀನ್ ಪರ್’
ಇದು ಆಮಿರ್ ಖಾನ್ ಅವರ ಕಮ್ಬ್ಯಾಕ್ ಸಿನಿಮಾ. ಮೂರು ವರ್ಷದ ಗ್ಯಾಪ್ ಬಳಿಕ ಅವರು ದೊಡ್ಡ ಪರದೆ ಮೇಲೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ಬಾಸ್ಕೆಟ್ ಬಾಲ್ ಕೋಚ್ ಆಗಿ ನಟಿಸಿದ್ದಾರೆ. ಈ ಚಿತ್ರವನ್ನು ನೋಡಿದ ಸಚಿನ್ ತೆಂಡುಲ್ಕರ್, ಸುಧಾಮೂರ್ತಿ ಮುಂತಾದವರು ಮೆಚ್ಚುಗೆ ಸೂಚಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








