ಶಾರುಖ್ ಖಾನ್ ಮನೆ ಮೇಲೆ ಅನುಮಾನ, ಭೇಟಿ ನೀಡಿದ ಅಧಿಕಾರಿಗಳು
Shah Rukh Khan: ಶಾರುಖ್ ಖಾನ್ ಅವರ ಮನೆ ಮನ್ನತ್ ಮುಂಬೈನ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಅವರ ಮನೆಯ ಮುಂದೆ ಸದಾ ಅಭಿಮಾನಿಗಳು, ಪ್ರವಾಸಿಗರು ಇರುತ್ತಾರೆ. ಆದರೆ ಕೆಲ ತಿಂಗಳಿನಿಂದಲೂ ಇಲ್ಲಿ ನವೀಕರಣ ಕಾರ್ಯ ನಡೆಯುತ್ತಿದ್ದು, ಶಾರುಖ್ ಖಾನ್ ಅಲ್ಲಿ ವಾಸಿಸುತ್ತಿಲ್ಲ. ಇದೀಗ ಶಾರುಖ್ ಖಾನ್ ಅವರ ನವೀಕರಣಗೊಳ್ಳುತ್ತಿರುವ ಮನ್ನತ್ ಮನೆಗೆ ತಪಾಸಣೆಗೆಂದು ಅಧಿಕಾರಿಗಳು ಭೇಟಿ ನೀಡಿದ್ದರು.

ಶಾರುಖ್ ಖಾನ್ (Shah Rukh Khan) ಅವರ ಮನೆ ಮನ್ನತ್, ಮುಂಬೈನ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದು. ಮುಂಬೈನ ಅತ್ಯಂತ ದುಬಾರಿ ಮನೆಗಳಲ್ಲಿ ಶಾರುಖ್ ಖಾನ್ ಅವರ ಮನ್ನತ್ ಸಹ ಸೇರುತ್ತದೆ. ಮನ್ನತ್ ಮನೆಯ ಮುಂದೆ ಯಾವಾಗಲೂ ಅಭಿಮಾನಿಗಳು, ಪ್ರವಾಸಿಗರು ಹಾಜರಿರುತ್ತಾರೆ. ಅವರ ಮನೆ ನೋಡಲು ಬರುವವರಿಗೆಂದು ಮಾರುಕಟ್ಟೆಯೇ ತೆರೆದಿದೆ. ಆದರೆ ಕಳೆದ ಕೆಲ ತಿಂಗಳಿನಿಂದ ಶಾರುಖ್ ಖಾನ್ ಈ ಮನೆಯಲ್ಲಿಲ್ಲ. ಮನೆಯನ್ನು ನವೀಕರಣ ಮಾಡಿಸುತ್ತಿದ್ದಾರೆ. ಆದರೆ ಇದೀಗ ಶಾರುಖ್ ಖಾನ್ ಮನೆಯ ಮೇಲೆ ಅನುಮಾನ ಮೂಡಿ ಕೆಲ ಅಧಿಕಾರಿಗಳು ತಪಾಸಣೆಗೆಂದು ಭೇಟಿ ನೀಡಿದ್ದಾರೆ.
ಮನ್ನತ್ ಮನೆಯಲ್ಲಿ ನವೀಕರಣ ಕೆಲಸಗಳು ನಡೆಯುತ್ತಿವೆ. ಮನ್ನತ್ ಮನೆಯ ರೂಪುರೇಷೆಯನ್ನೇ ಬದಲಿಸಲು ಶಾರುಖ್ ಖಾನ್ ಮತ್ತು ಗೌರಿ ಖಾನ್ ನಿರ್ಧಾರ ಮಾಡಿದ್ದಾರೆ. ನಿರ್ಮಾಣ ಕಾರ್ಯಗಳು ಕೆಲ ತಿಂಗಳಿನಿಂದ ಭರದಿಂದ ಸಾಗಿದೆ. ಆದರೆ ಇತ್ತೀಚೆಗೆ ಸಾಮಾಜಿಕ ಕಾರ್ಯಕರ್ತನೋರ್ವ, ಶಾರುಖ್ ಖಾನ್ ಅವರು ಕೋಸ್ಟಲ್ ರೆಗ್ಯೂಲೇಷನ್ ಜೋನ್ ನಿಯಮಗಳನ್ನು ಉಲ್ಲಂಘಿಸಿ ಶಾರುಖ್ ಖಾನ್ ತಮ್ಮ ಮನೆಯ ನವೀಕರಣ ಮಾಡುತ್ತಿದ್ದಾರೆ ಎಂದು ದೂರು ನೀಡಿದ್ದರು.
ದೂರು ಸ್ವೀಕರಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸುವ ನಿರ್ಧಾರ ಮಾಡಿದ್ದರು. ಇದೇ ಕಾರಣಕ್ಕೆ ತಪಾಸಣೆ ವೇಳೆ ಮಾರ್ಗದರ್ಶನಕ್ಕೆಂದು ಬಿಎಂಸಿ (ಬೃಹತ್ ಮುಂಬೈ ಕಾರ್ಪೊರೇಷನ್) ಅಧಿಕಾರಿಗಳ ನೆರವು ಕೇಳಿದ್ದರು. ಹೀಗಾಗಿ ಅರಣ್ಯ ಇಲಾಖೆ ಹಾಗೂ ಬಿಎಂಸಿ ಅಧಿಕಾರಿಗಳು ಜಂಟಿಯಾಗಿ ಶಾರುಖ್ ಖಾನ್ ಒಡೆತನದ ಮನ್ನತ್ ಮನೆಗೆ ಭೇಟಿ ನೀಡಿ, ನವೀಕರಣ ಕಾರ್ಯವನ್ನು ಕೂಲಂಕುಶವಾಗಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ:ಶಾರುಖ್ ಖಾನ್ ‘ಕಿಂಗ್’ ಚಿತ್ರಕ್ಕಾಗಿ ಸಾಂಗ್ ಮಾಡಿದ ಇಂಗ್ಲಿಷ್ ಸಿಂಗರ್ ಎಡ್ ಶೀರನ್
ಈ ವೇಳೆ ಸ್ಥಳದಲ್ಲಿ ಹಾಜರಿದ್ದ ಶಾರುಖ್ ಖಾನ್ ಅವರ ಸಿಬ್ಬಂದಿ, ಅಧಿಕಾರಿಗಳಿಗೆ ತಾವು ಬಿಎಂಸಿ ಹಾಗೂ ಇತರೆ ಇಲಾಖೆಗಳಿಂದ ಪಡೆದುಕೊಂಡಿರುವ ಪರವಾನಗಿಗಳನ್ನು, ಒಪ್ಪಿಗೆಗಳನ್ನು ತೋರಿಸಿ, ನವೀಕರಣದ ನಕ್ಷೆಯನ್ನು ತೋರಿಸಿದ್ದಾರೆ. ನಿಯಮಬಾಹಿರವಾಗಿ ಯಾವುದೇ ಕಾಮಗಾರಿಯನ್ನು ತಾವು ಮಾಡುತ್ತಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು, ಶಾರುಖ್ ಖಾನ್ ಅವರ ಮನ್ನತ್ ಮನೆಯ ನವೀಕರಣ ಕಾರ್ಯದ ಬಗ್ಗೆ ತಮ್ಮ ವರದಿಯನ್ನು ಕೆಲ ದಿನಗಳಲ್ಲಿ ಸಲ್ಲಿಸಲಿದ್ದಾರೆ. ಆದರೆ ಅರಣ್ಯ ಇಲಾಖೆ ಹಾಗೂ ಬಿಎಂಸಿ ಅಧಿಕಾರಿಗಳಿಗೆ ಯಾವುದೇ ನಿಯಮ ಉಲ್ಲಂಘನೆ ಕಂಡು ಬಂದಿಲ್ಲ ಎನ್ನಲಾಗಿದೆ.
ಶಾರುಖ್ ಖಾನ್ ಬಹಳ ವರ್ಷಗಳ ಹಿಂದೆ ಭಾರಿ ದೊಡ್ಡ ಮೊತ್ತದ ಹಣವನ್ನು ನೀಡಿ ಮನ್ನತ್ ಮನೆಯನ್ನು ಖರೀದಿ ಮಾಡಿದ್ದರು. ಮುಂಬೈನ ಅತ್ಯಂತ ಜನಪ್ರಿಯ ಮನೆ ಮನ್ನತ್. ಅಂಬಾನಿಯವರ ಆಂಟಿಲಾ ಮನೆ ನೋಡಲು ಬರುವವರಿಗಿಂತಲೂ ಮನ್ನತ್ ಮನೆ ನೋಡಲು ಬರುವವರ ಸಂಖ್ಯೆ ಹೆಚ್ಚು. ಶಾರುಖ್ ಖಾನ್ಗೆ ಸಹ ತಮ್ಮ ಆಸ್ತಿಗಳಲ್ಲೇ ಬಹಳ ಪ್ರೀತಿ ಇರುವ ಆಸ್ತಿಯೆಂದರೆ ಮನ್ನತ್. ಆ ಮನೆಯನ್ನು ಎಂದಿಗೂ ಮಾರುವುದಿಲ್ಲ ಎಂದು ಶಾರುಖ್ ಖಾನ್ ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




