ಶಾರುಖ್ ಖಾನ್ ತಂಡದಲ್ಲಿ ಪಾಕ್ ಕ್ರಿಕೆಟಿಗರು; ತಂಡದಿಂದ ಹೊರ ಹಾಕ್ತಾರಾ ಕಿಂಗ್ ಖಾನ್?
Shah Rukh Khan's T20 Teams: ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯಿಂದಾಗಿ, ಶಾರುಖ್ ಖಾನ್ ಮಾಲೀಕತ್ವದ ಕ್ರಿಕೆಟ್ ತಂಡಗಳಲ್ಲಿ ಆಡುವ ಪಾಕಿಸ್ತಾನಿ ಮೂಲದ ಆಟಗಾರರ ಭವಿಷ್ಯ ಅನಿಶ್ಚಿತವಾಗಿದೆ. ಅಂತರರಾಷ್ಟ್ರೀಯ ಟಿ20 ಲೀಗ್ ಮತ್ತು ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಆಡುವ ಅಲಿ ಖಾನ್, ಇಬ್ರಾರ್ ಅಹ್ಮದ್ ಮತ್ತು ಸೈಫ್ ಬಾದರ್ ಮುಂತಾದ ಆಟಗಾರರನ್ನು ತಂಡದಿಂದ ತೆಗೆದುಹಾಕುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ.

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ (Pahalgam Attack) ದಾಳಿಯ ನಂತರ, ಭಾರತ ಮತ್ತು ಪಾಕಿಸ್ತಾನದ (India- Pakistan) ನಡುವೆ ಯುದ್ಧದಂತಹ ಪರಿಸ್ಥಿತಿ ಉದ್ಭವಿಸಿದೆ. ಅಲ್ಲದೆ ಉಭಯ ದೇಶಗಳ ನಡುವೆ ಎಲ್ಲಾ ರೀತಿಯ ಸಂಬಂಧಗಳು ಮುರಿದು ಬಿದ್ದಿದೆ. ಹಾಗೆಯೇ ಎರಡೂ ದೇಶಗಳ ಕ್ರಿಕೆಟ್ ತಂಡಗಳು ಕೂಡ ಇನ್ಮುಂದೆ ಪರಸ್ಪರ ಪಂದ್ಯಗಳನ್ನಾಡುವ ಸಾಧ್ಯತೆಗಳು ತೀರ ಕಡಿಮೆ. ಹೀಗಿರುವಾಗ ಪಾಕಿಸ್ತಾನಿ ಮೂಲಕ ಆಟಗಾರರು ಬಾಲಿವುಡ್ ಸ್ಟಾರ್ ಶಾರುಖ್ ಖಾನ್ (Shah Rukh Khan) ಮಾಲೀಕತ್ವದ ಟಿ20 ತಂಡದಲ್ಲಿ ಆಡುತ್ತಿದ್ದು, ಅವರನ್ನು ತಂಡದಿಂದ ಹೊರ ಹಾಕಲಾಗುತ್ತದೆಯೋ, ಇಲ್ಲವೋ ಎಂಬ ಪ್ರಶ್ನೆ ಮೂಡಿದೆ. ಶಾರುಖ್ ಖಾನ್ ಐಪಿಎಲ್‌ನಲ್ಲಿ (IPL) ಕೋಲ್ಕತ್ತಾ ನೈಟ್ ರೈಡರ್ಸ್ ಜೊತೆಗೆ, ಅಂತರರಾಷ್ಟ್ರೀಯ ಲೀಗ್ ಟಿ20, ಮೇಜರ್ ಲೀಗ್ ಕ್ರಿಕೆಟ್‌ನಲ್ಲಿಯೂ ತಂಡಗಳನ್ನು ಹೊಂದಿದ್ದಾರೆ. ಈ ತಂಡಗಳಲ್ಲಿ ಪಾಕಿಸ್ತಾನಿ ಮೂಲದ ಆಟಗಾರರು ಸಹ ಸೇರಿದ್ದಾರೆ.
ಯುಎಇಯಲ್ಲಿ ನಡೆಯುವ ಅಂತರರಾಷ್ಟ್ರೀಯ ಟಿ20 ಲೀಗ್ನಲ್ಲಿ ಶಾರುಖ್ ಖಾನ್ ಮಾಲೀಕತ್ವದ ಅಬುಧಾಬಿ ನೈಟ್ ರೈಡರ್ಸ್ ತಂಡ ಕೂಡ ಆಡುತ್ತದೆ. ಈ ತಂಡದಲ್ಲಿ ಇಬ್ಬರು ಪಾಕಿಸ್ತಾನಿ ಅಥವಾ ಪಾಕಿಸ್ತಾನಿ ಮೂಲದ ಆಟಗಾರರು ಇದ್ದಾರೆ. ಅದರಲ್ಲಿ ಪಾಕಿಸ್ತಾನಿ ಮೂಲದ ವೇಗದ ಬೌಲರ್ ಅಲಿ ಖಾನ್ ಒಬ್ಬರಾಗಿದ್ದು, ಪ್ರಸ್ತುತ ಅವರು ಅಮೇರಿಕ ಅಂತರರಾಷ್ಟ್ರೀಯ ತಂಡದ ಪರವಾಗಿ ಆಡುತ್ತಿದ್ದಾರೆ. ಇದರಲ್ಲಿ ಎರಡನೇ ಹೆಸರು ಇಬ್ರಾರ್ ಅಹ್ಮದ್, ಏಪ್ರಿಲ್ 3, 2004 ರಂದು ಉತ್ತರ ವಜೀರಿಸ್ತಾನದಲ್ಲಿ ಜನಿಸಿದ ಇವರು ವೇಗದ ಬೌಲರ್ ಆಗಿದ್ದಾರೆ.
ಮೇಜರ್ ಲೀಗ್ನಲ್ಲೂ ಪಾಕ್ ಆಟಗಾರರು
ಶಾರುಖ್ ಖಾನ್ ಒಡೆತನದ ಮತ್ತೊಂದು ತಂಡವಾದ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡವು ಅಮೆರಿಕದ ಟಿ20 ಲೀಗ್ ಆಗಿರುವ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿಯೂ ಆಡುತ್ತದೆ. ಈ ತಂಡದಲ್ಲಿ ಪಾಕಿಸ್ತಾನಿ ಮೂಲದ ಅಲಿ ಖಾನ್ ಕೂಡ ಆಡುತ್ತಿದ್ದಾರೆ. ಇವರ ಜೊತೆಗೆ ಸೈಫ್ ಬಾದರ್ ಕೂಡ ಈ ತಂಡದಲ್ಲಿದ್ದಾರೆ. ಈ ಆಟಗಾರ ಪಾಕಿಸ್ತಾನದವರಾಗಿದ್ದು, ಸಿಯಾಲ್ಕೋಟ್ನಲ್ಲಿ ಜನಿಸಿದ್ದಾರೆ.
Ali Khan wins POTM for the outstanding spell of 4/33(4) 🔥 pic.twitter.com/QswDvKgOmq
— Rokte Amar KKR (@Rokte_Amarr_KKR) July 6, 2024
ಈ ಆಟಗಾರರಿಗೆ ತಂಡದಿಂದ ಗೇಟ್ಪಾಸ್?
ಪ್ರಸ್ತುತ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧಗಳು ತುಂಬಾ ಹದಗೆಟ್ಟಿವೆ. ಐಸಿಸಿ ಪಂದ್ಯಾವಳಿಗಳಲ್ಲಿ ಭಾರತ ಇನ್ನು ಮುಂದೆ ಪಾಕಿಸ್ತಾನದ ವಿರುದ್ಧ ಆಡುವುದಿಲ್ಲ ಎಂದು ಹೇಳಲಾಗುತ್ತಿದೆ. ಏಷ್ಯಾಕಪ್ ಪಂದ್ಯಾವಳಿಯೂ ರದ್ದಾಗುವ ಸಾಧ್ಯತೆಯಿದೆ. ಹೀಗಿರುವಾ್ ಶಾರುಖ್ ಖಾನ್ ಕೂಡ ಪಾಕಿಸ್ತಾನಿ ಅಥವಾ ಪಾಕಿಸ್ತಾನಿ ಮೂಲದ ಆಟಗಾರರನ್ನು ತಮ್ಮ ತಂಡದಿಂದ ಹೊರಗಿಡುತ್ತಾರೆಯೇ ಎಂಬುದು ಪ್ರಶ್ನೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:46 pm, Thu, 5 June 25
