Sitaare Zameen Par Review: ನಗಿಸಿ, ಅಳಿಸಿ ಮನರಂಜನೆ ನೀಡುವ ‘ಸಿತಾರೆ ಜಮೀನ್ ಪರ್’
Sitaare Zameen Par Movie Review: ಆಮಿರ್ ಖಾನ್ ಅವರ ಕಮ್ಬ್ಯಾಕ್ ಸಿನಿಮಾ ‘ಸಿತಾರೆ ಜಮೀನ್ ಪರ್’ ಇಂದು (ಜೂನ್ 20) ಬಿಡುಗಡೆ ಆಗಿದೆ. ಕ್ಲಾಸ್ ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ಆಮಿರ್ ಖಾನ್ ಈ ಸಿನಿಮಾ ಮಾಡಿದ್ದಾರೆ. ಒಂದಷ್ಟು ಕಾರಣಗಳಿಂದ ನಿರೀಕ್ಷೆ ಮೂಡಿಸಿದ್ದ ಈ ಸಿನಿಮಾ ಹೇಗಿದೆ ತಿಳಿಯಲು ಈ ವಿಮರ್ಶೆ ಓದಿ..

ಸಿನಿಮಾ: ಸಿತಾರೆ ಜಮೀನ್ ಪರ್. ನಿರ್ಮಾಣ: ಆಮಿರ್ ಖಾನ್. ನಿರ್ದೇಶನ: ಆರ್.ಎಸ್. ಪ್ರಸನ್ನ. ಪಾತ್ರವರ್ಗ: ಆಮಿರ್ ಖಾನ್, ಜೆನಿಲಿಯಾ ಮುಂತಾದವರು. ಸ್ಟಾರ್: 3.5/5
ಆಮಿರ್ ಖಾನ್ ನಟನೆಯ ಸಿನಿಮಾ ಎಂದರೆ ಖಂಡಿತವಾಗಿಯೂ ವಿಶೇಷವಾಗಿ ಇರುತ್ತವೆ ಎಂಬುದು ಅಭಿಮಾನಿಗಳ ನಂಬಿಕೆ. ಬಾಕ್ಸ್ ಆಫೀಸ್ ಫಲಿತಾಂಶ ಏನೇ ಇದ್ದರೂ ಕೂಡ ಆಮಿರ್ ಖಾನ್ (Aamir Khan) ಆಯ್ಕೆ ಮಾಡಿಕೊಳ್ಳುವ ಕಥಾವಸ್ತು ಬಗ್ಗೆ ಅಭಿಮಾನಿಗಳಿಂದ ಮೆಚ್ಚುಗೆ ಸಿಗುತ್ತದೆ. ಈ ಬಾರಿ ಅವರು ‘ಸಿತಾರೆ ಜಮೀನ್ ಪರ್’ ಸಿನಿಮಾದಲ್ಲಿ ವಿಶೇಷ ಚೇತನರ ಕಹಾನಿಯನ್ನು ಹೇಳಿದ್ದಾರೆ. ಈ ಸಿನಿಮಾ ಜೂನ್ 20ರಂದು ಬಿಡುಗಡೆ ಆಗಿದೆ. ಆಮಿರ್ ಖಾನ್ ಮತ್ತು ಜೆನಿಲಿಯಾ ದೇಶಮುಖ್ ಅವರು ಜೋಡಿಯಾಗಿ ಅಭಿನಯಿಸಿದ್ದಾರೆ. ‘ಸಿತಾರೆ ಜಮೀನ್ ಪರ್’ (Sitaare Zameen Par) ಸಿನಿಮಾ ವಿಮರ್ಶೆ ಇಲ್ಲಿದೆ..
ಸ್ಪ್ಯಾನಿಶ್ ಭಾಷೆಯ ‘ಚಾಂಪಿಯನ್ಸ್’ ಸಿನಿಮಾ 2018ರಲ್ಲಿ ಬಿಡುಗಡೆ ಆಗಿತ್ತು. ಅದೇ ಸಿನಿಮಾವನ್ನು ಈಗ ‘ಸಿತಾರೆ ಜಮೀನ್ ಪರ್’ ಎಂದು ಹಿಂದಿಯಲ್ಲಿ ರಿಮೇಕ್ ಮಾಡಲಾಗಿದೆ. ರಿಮೇಕ್ ಸಿನಿಮಾ ಆಗಿದ್ದರೂ ಕೂಡ ಭಾರತದ ಪ್ರೇಕ್ಷಕರಿಗೆ ಕನೆಕ್ಟ್ ಆಗುವ ರೀತಿಯಲ್ಲಿದೆ ಈ ಚಿತ್ರದ ಕಥೆ. ಅಲ್ಲದೇ, ಈ ಸಿನಿಮಾದಲ್ಲಿ ಇರುವುದು ಅಪರೂಪದ ಕಾನ್ಸೆಪ್ಟ್. ಆದ್ದರಿಂದ ‘ಸಿತಾರೆ ಜಮೀನ್ ಪರ್’ ಚಿತ್ರ ಡಿಫರೆಂಟ್ ಎನಿಸಿಕೊಳ್ಳುತ್ತದೆ.
ಆಮಿರ್ ಖಾನ್ ಅವರು 2007ರಲ್ಲಿ ‘ತಾರೆ ಜಮೀನ್ ಪರ್’ ಸಿನಿಮಾದಲ್ಲಿ ಅಭಿನಯಿಸಿದ್ದರು. ಆ ಸಿನಿಮಾದ ಥೀಮ್ನಲ್ಲಿಯೇ ‘ಸಿತಾರೆ ಜಮೀನ್ ಪರ್’ ಸಿನಿಮಾ ಮೂಡಿಬಂದಿದೆ. ಹಾಗಾಗಿ, ಅಂದು ‘ತಾರೆ ಜಮೀನ್ ಪರ್’ ನೋಡಿ ಇಷ್ಟಪಟ್ಟವರು ಇಂದು ‘ಸಿತಾರೆ ಜಮೀನ್ ಪರ್’ ಸಿನಿಮಾವನ್ನು ಕೂಡ ನೋಡಿ ಎಂಜಾಯ್ ಮಾಡಬಹುದು. ಈ ಚಿತ್ರದಲ್ಲಿ ಕೂಡ ಆಮಿರ್ ಖಾನ್ ಅವರು ಸೂಕ್ಷ್ಮವಾದ ವಿಷಯಗಳನ್ನು ಪ್ರೇಕ್ಷಕರ ಎದುರು ತೆರೆದಿಟ್ಟಿದ್ದಾರೆ.
ಈ ಸಿನಿಮಾದಲ್ಲಿ ಆಮಿರ್ ಖಾನ್ ಅವರು ಬಾಸ್ಕೆಟ್ ಬಾಲ್ ಕೋಚ್ ಮಾತ್ರ ಮಾಡಿದ್ದಾರೆ. ವಿಶೇಷ ಚೇತನ ವ್ಯಕ್ತಿಗಳಿಗೆ ಬಾಸ್ಕೆಟ್ ಬಾಲ್ ಕಲಿಸಿಕೊಡುವ ಕೆಲಸವನ್ನು ಕಥಾನಾಯಕನಿಗೆ ವಹಿಸಲಾಗುತ್ತದೆ. ವಿಶೇಷ ಚೇತನರಿಗೆ ಬಾಸ್ಕೆಟ್ ಬಾಲ್ ಕಲಿಸುವುದು ಸುಲಭವಲ್ಲ. ಆಗ ಉಂಟಾಗುವ ತಮಾಷೆಯ ಪ್ರಸಂಗಗಳನ್ನು ಈ ಚಿತ್ರದಲ್ಲಿ ಹೈಲೈಟ್ ಮಾಡಲಾಗಿದೆ. ಆ ದೃಶ್ಯಗಳೇ ಪ್ರೇಕ್ಷಕರಿಗೆ ನಗು ಉಕ್ಕಿಸುತ್ತದೆ.
‘ತಾರೆ ಜಮೀನ್ ಪರ್’ ಸಿನಿಮಾದಲ್ಲಿ ಕಾಮಿಡಿ ಮತ್ತು ಭಾವುಕ ದೃಶ್ಯಗಳ ಮಿಶ್ರಣವಿದೆ. ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಪ್ರೇಕ್ಷಕರನ್ನು ಅಳಿಸುವ ಗುಣ ಈ ಚಿತ್ರಕ್ಕಿದೆ. ವಿಶೇಷ ಚೇತನರ ಬದುಕನ್ನು ಇನ್ನೊಂದು ಆಯಾಮದಿಂದ ಅರ್ಥ ಮಾಡಿಕೊಳ್ಳಲು ಈ ಸಿನಿಮಾ ಒಂದು ಕೈಪಿಡಿ ರೀತಿ ಇದೆ. ನಗಿಸುತ್ತಲೇ ಬುದ್ಧಿ ಮಾತು ಹೇಳುವ ರೀತಿಯಲ್ಲಿ ಇಡೀ ಸಿನಿಮಾ ಮೂಡಿಬಂದಿದೆ.
ಇದನ್ನೂ ಓದಿ: ಮಗಳು, ಸಹೋದರಿ ಮದುವೆ ಆಗಿದ್ದು ಹಿಂದೂಗಳನ್ನೇ; ಲವ್ ಜಿಹಾದ್ ಆರೋಪಕ್ಕೆ ಆಮಿರ್ ಖಾನ್ ಉತ್ತರ
ಎಂದಿನಂತೆ ಆಮಿರ್ ಖಾನ್ ಅವರು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಎಲ್ಲಿಯೂ ಅನಗತ್ಯ ಬಿಲ್ಡಪ್ ಇಲ್ಲದೇ ಒಬ್ಬ ಕಾಮನ್ ಮ್ಯಾನ್ ಆಗಿ ಅವರ ಪಾತ್ರ ಕಾಣಿಸಿಕೊಂಡಿದೆ. ಆಮಿರ್ ಖಾನ್ ಅವರನ್ನು ಮಾಸ್ ಆಗಿ ನೋಡಲು ಇಷ್ಟಪಡುವ ಅಭಿಮಾನಿಗಳಿಗೆ ಇಲ್ಲಿ ನಿರಾಸೆ ಆಗಬಹುದು. ಆದರೆ ಕ್ಲಾಸ್ ಆಗಿ ನೋಡಲು ಬಯಸುವವರಿಗೆ ಈ ಚಿತ್ರ ಇಷ್ಟ ಆಗುತ್ತದೆ.
ವಿಶೇಷ ಚೇತನರ ಪಾತ್ರದಲ್ಲಿ ಕಾಣಿಸಿಕೊಂಡ ಕಲಾವಿದರ ನಟನೆ ಗಮನ ಸೆಳೆಯುತ್ತದೆ. ನಟಿ ಜೆನಿಲಿಯಾ ಅವರು ಕೆಲವೇ ದೃಶ್ಯಗಳಲ್ಲಿ ಬಂದು ಹೋಗುತ್ತಾರೆ. ಸಿನಿಮಾದ ಅವಧಿ ಕೊಂಚ ದೀರ್ಘವಾಯಿತು ಎಂಬ ಫೀಲ್ ಮೂಡುತ್ತದೆ. ಕೆಲವು ದೃಶ್ಯಗಳಿಗೆ ಕತ್ತರಿ ಹಾಕಿದ್ದರೆ ಸಿನಿಮಾದ ಅಂದ ಇನ್ನಷ್ಟು ಹೆಚ್ಚುತ್ತಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








