Karnataka Hijab Row: ಹಿಜಾಬ್ ವಿವಾದ; ವಿಚಾರಣೆ ಮುಂದೂಡಿದ ಕರ್ನಾಟಕ ಹೈಕೋರ್ಟ್

| Updated By: ganapathi bhat

Updated on: Feb 14, 2022 | 6:59 PM

Karnataka Hijab Hearing Updates: ಹಿಜಾಬ್ ವಿವಾದ ಸಂಬಂಧಿಸಿ ಇದೀಗ ಕರ್ನಾಟಕ ಹೈಕೋರ್ಟ್​ನಲ್ಲಿ ಪ್ರಕರಣ ನಡೆಯುತ್ತಿದ್ದು ವಿಚಾರಣೆಯನ್ನು ಮಂಗಳವಾರಕ್ಕೆ (ಫೆಬ್ರವರಿ 15) ಮುಂದೂಡಿ ಆದೇಶ ನೀಡಲಾಗಿದೆ.

Karnataka Hijab Row: ಹಿಜಾಬ್ ವಿವಾದ; ವಿಚಾರಣೆ ಮುಂದೂಡಿದ ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್
Follow us on

ಬೆಂಗಳೂರು: ಕರ್ನಾಟಕದಲ್ಲಿ ಆತಂಕದ ವಾತಾವರಣ ಸೃಷ್ಟಿಮಾಡಿದ್ದ ಹಿಜಾಬ್ ವಿವಾದ ಸಂಬಂಧಿಸಿ ಇದೀಗ ಕರ್ನಾಟಕ ಹೈಕೋರ್ಟ್​ನಲ್ಲಿ ಪ್ರಕರಣ ನಡೆಯುತ್ತಿದ್ದು ವಿಚಾರಣೆಯನ್ನು ಮಂಗಳವಾರಕ್ಕೆ (ಫೆಬ್ರವರಿ 15) ಮುಂದೂಡಿ ಆದೇಶ ನೀಡಲಾಗಿದೆ. ಅರ್ಜಿದಾರರ ಪರವಾಗಿ ದೇವದತ್ ಕಾಮತ್, ಸರ್ಕಾರದ ಪರವಾಗಿ ಎಜಿ ಪ್ರಭುಲಿಂಗ್ ನಾವದಗಿ ಹಾಗೂ ಇತರರು ವಾದ ಮಂಡಿಸಿದ್ದಾರೆ. ಹಿಜಾಬ್ ವಿವಾದದ ವಿಚಾರಣೆಗೆ ರಚಿಸಲಾಗಿರುವ ಮೂವರು ನ್ಯಾಯಮೂರ್ತಿಗಳ ಪೀಠ ಪ್ರಕರಣದ ವಿಚಾರಣೆ ನಡೆಸಿದೆ. ಇದೇ ವೇಳೆ, ಮಾಧ್ಯಮಗಳಲ್ಲಿ ಅರ್ಜಿದಾರರ ಮಾಹಿತಿ ನೀಡದಂತೆ ನಿರ್ಬಂಧಿಸಲು ಮನವಿ ಮಾಡಲಾಗಿದೆ. ಅರ್ಜಿದಾರರು ಅಪ್ರಾಪ್ತ ವಿದ್ಯಾರ್ಥಿನಿಯರು ಆಗಿದ್ದಾರೆ ಎಂದು ಅರ್ಜಿದಾರರ ಪರ ವಕೀಲ ಮೊಹಮ್ಮದ್ ತಾಹೀರ್ ಮನವಿ ಮಾಡಿದ್ದಾರೆ.

ಸಮವಸ್ತ್ರ, ಹಿಜಾಬ್ ಧರಿಸುವ ಬಗ್ಗೆ ಸರ್ಕಾರದ ಆದೇಶಗಳು, ಶಾಸಕರ ಆದೇಶಗಳು, ಕಾಲೇಜು ಅಭಿವೃದ್ದಿ ಸಮಿತಿಗೆ ಹಿಜಾಬ್ ನಿರ್ಬಂಧಿಸುವ ಅಧಿಕಾರವಿಲ್ಲ ಎಂಬ ಬಗ್ಗೆ ಇಂದು ವಾದ ಮಾಡಲಾಗಿದೆ. ಶಾಸಕರಿಗೇ ಸಮವಸ್ತ್ರ ಅಧಿಕಾರ ನೀಡಿದ್ದು ಸರಿಯಲ್ಲ. ಸರ್ಕಾರ ತನ್ನ ಜವಾಬ್ದಾರಿಯನ್ನು ಇತರರಿಗೆ ಹಸ್ತಾಂತರ ಮಾಡುವಂತಿಲ್ಲ ಎಂದು ಹೇಳಿದ್ದಾರೆ. ಕೇರಳ, ಮದ್ರಾಸ್, ಬಾಂಬೆ, ಮಲೇಷಿಯಾ ಕೋರ್ಟ್​ಗಳ ತೀರ್ಪನ್ನು ಉಲ್ಲೇಖಿಸಿ ದೇವದತ್ ವಾದ ಮಂಡಿಸಲಾಗಿದೆ. ಅವರ ಆಚರಣೆ ನಮಗೆ ಏನನ್ನಿಸುತ್ತದೆ ಎಂಬುದು ಮುಖ್ಯವಲ್ಲ. ಅವರಿಗೆ ಅದು ಅತ್ಯಗತ್ಯ ಆಚರಣೆಯೇ ಎಂದು ಪರಿಶೀಲಿಸಬೇಕು ಎಂದು ಹೈಕೋರ್ಟ್ ಪ್ರಶ್ನೆಗೆ ದೇವದತ್ ಕಾಮತ್ ತಿಳಿಸಿದ್ದಾರೆ.

ಕಾಲೇಜಿಗೆ ದಾಖಲಾದಾಗಿನಿಂದಲೂ ಹಿಜಾಬ್ ಧರಿಸುತ್ತಿದ್ದರು. ಸಮವಸ್ತ್ರದ ಬಣ್ಣದ ಹಿಜಾಬ್ ಧರಿಸುತ್ತಿದ್ದರು. ವಿದ್ಯಾರ್ಥಿನಿಯರು ಈ ಆಚರಣೆಯನ್ನು ತಪ್ಪದೇ ಪಾಲಿಸುತ್ತಿದ್ದಾರೆ. ಹಿಜಾಬ್ ಧರಿಸಬೇಕು, ಉದ್ದದ ನಿಲುವಂಗಿ ಧರಿಸಬೇಕೆಂದು ಧರ್ಮಗ್ರಂಥದಲ್ಲಿದೆ ಎಂದು ದೇವದತ್ ಕಾಮತ್ ಹೇಳಿದ್ದಾರೆ. 2016 ರಲ್ಲಿ ಹೈಕೋರ್ಟ್ ವಿಚಾರಣೆ ನಡೆಸುವಾಗ ಸಿಬಿಎಸ್‌ಇ ಪರಿಷ್ಕೃತ ಆದೇಶ ನೀಡಿತ್ತು. ಹಿಜಾಬ್ ಧರಿಸಿ ಬರುವವರು ಅರ್ಧ ಗಂಟೆ ಮುಂಚೆ ಬರುವಂತೆ ಆದೇಶಿಸಿತ್ತು. ಹಿಜಾಬ್ ಪರಿಶೀಲನೆ ನಡೆಸಲು ನಮಗೆ ಆಕ್ಷೇಪ ಇಲ್ಲ. ಕೇಂದ್ರೀಯ ವಿದ್ಯಾಲಯಗಳಲ್ಲಿ ಈಗಲೂ ಹಿಜಾಬ್​ಗೆ ಅವಕಾಶವಿದೆ. ಉಡುಪಿನ ಬಣ್ಣ ಹೋಲುವ ಹಿಜಾಬ್ ಧರಿಸಲು ಅವಕಾಶವಿದೆ ಎಂದು ವಾದ ಮಂಡಿಸಿದ್ದಾರೆ.

ಸಂವಿಧಾನದ 25(1) ರಡಿ ಇರುವ ಹಕ್ಕುಗಳನ್ನು ಸಾರ್ವಜನಿಕ ಸುವ್ಯವಸ್ಥೆ ಕಾರಣಕ್ಕೆ ಮಾತ್ರ ನಿರ್ಬಂಧಿಸಬಹುದು. ಕಾಲೇಜು ಅಭಿವೃದ್ದಿ ಸಮಿತಿಗೆ ಸರ್ಕಾರ ಹೆಚ್ಚಿನ ಅಧಿಕಾರ ನೀಡಿದೆ. ಸಂವಿಧಾನದ 25(1)ನೇ ವಿಧಿಯ ರಕ್ಷಣೆ ಹೊಣೆ ಸಮಿತಿಗೆ ನೀಡಿದೆ.
ಸರ್ಕಾರದ ಈ ನಡೆ ಸಂಪೂರ್ಮ ಕಾನೂನುಬಾಹಿರವಾಗಿದ್ದು, ನೀವು ಹೇಳುತ್ತಿರುವ ಹಕ್ಕು ನಿರ್ಬಂಧರಹಿತ ಪರಿಪೂರ್ಣ ಹಕ್ಕೇ?
ಎಂದು ದೇವದತ್ ಕಾಮತ್​ಗೆ ಸಿಜೆ ರಿತುರಾಜ್ ಅವಸ್ತಿ ಪ್ರಶ್ನೆ ಮಾಡಿದ್ದಾರೆ. ಸಂವಿಧಾನದ 25(1) ರಲ್ಲಿ ಮೂರು ಬಗೆಯ ನಿರ್ಬಂಧವಿದೆ. ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ, ಆರೋಗ್ಯದ ಪ್ರಶ್ನೆಯಿದ್ದರೆ ನಿರ್ಬಂಧ ವಿಧಿಸಲಾಗುವುದು. ಈ ಕೇಸಿನಲ್ಲಿ ಸಾರ್ವಜನಿಕ ಸುವ್ಯವಸ್ಥೆ ಕಾರಣಕ್ಕೆ ನಿರ್ಬಂಧಿಸಲಾಗಿದೆ. ಸಾರ್ವಜನಿಕ ಸುವ್ಯವಸ್ಥೆ ಎಂದರೇನು ವಿಶ್ಲೇಷಿಸಿ ಎಂದು ಸಿಜೆ ಕೇಳಿದ್ದಾರೆ.

ಕೋರ್ಟ್ ಕಲಾಪದ ಸಂಪೂರ್ಣ ವಿವರ ಇಲ್ಲಿದೆ: Karnataka Hijab Hearing: ಅರ್ಜಿದಾರರ ಮಾಹಿತಿ ನೀಡದಂತೆ ನಿರ್ಬಂಧಿಸಲು ಮನವಿ; ವಿಚಾರಣೆ ನಾಳೆಗೆ ಮುಂದೂಡಿಕೆ

ಎಲ್ಲಾ ಒಪ್ಪಿದರೆ ಯೂಟ್ಯೂಬ್ ನೇರಪ್ರಸಾರ ನಿಲ್ಲಿಸಲು ಪರಿಶೀಲಿಸಬಹುದು

ಅರ್ಜಿದಾರರ ಪರವಾಗಿ ನಮ್ಮ ವಾದವೂ ಇದೆ ಎಂದು ಕೇರಳದ ಹಿರಿಯ ವಕೀಲ ಕಾಳೀಶ್ವರಮ್ ರಾಜ್ ಹೇಳಿದ್ದಾರೆ. ಬೇರೆ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆ ಸಾಮಾಜಿಕ ಜಾಲತಾಣಗಳಲ್ಲಿ ಕಲಾಪ ವರದಿಯಾಗುತ್ತಿದೆ. ಇದರಿಂದ ಬೇರೆ ರಾಜ್ಯಗಳ ಚುನಾವಣೆ ಮೇಲೆ ಪ್ರಭಾವ ಸಾಧ್ಯತೆ ಇದೆ ಎನ್ನಲಾಗಿದೆ. ಅರ್ಜಿದಾರರ ಪರ ರವಿವರ್ಮಕುಮಾರ್ ವಾದ ಮಂಡಿಸಿದ್ದಾರೆ. ಎಲ್ಲ ಒಪ್ಪಿದರೆ ಯೂಟ್ಯೂಬ್ ನೇರಪ್ರಸಾರ ನಿಲ್ಲಿಸಲು ಪರಿಶೀಲಿಸಬಹುದು ಎಂದು ಮುಖ್ಯ ನ್ಯಾಯಮೂರ್ತಿ ತಿಳಿಸಿದ್ದಾರೆ. ಹಲವು ವಕೀಲರಿಂದ ವಾದಿಸಲು ಹಕ್ಕುಮಂಡನೆ ಮಾಡಲಾಗಿದೆ. ನಾಳೆ ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಲಾಗಿದೆ.

ಇದನ್ನೂ ಓದಿ: ಹೈಕೋರ್ಟ್​ ಆದೇಶವನ್ನು ಎಲ್ಲರೂ ಪಾಲಿಸಬೇಕು; ಆಗ ಸಮಸ್ಯೆ ಬಗೆಹರಿಸಲು ಸಾಧ್ಯ: ಬಸವರಾಜ ಬೊಮ್ಮಾಯಿ

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಹಿಜಾಬ್ ಧರಿಸಿ ಶಾಲೆಗೆ ಬಂದ ವಿದ್ಯಾರ್ಥಿನಿ ಮುಖದ ಮೇಲೆ ‘ಅಪ್ನಾ ಟೈಮ್ ಆಯೇಗಾ’ ಅಂತ ಬರೆಯಲಾದ ಮಾಸ್ಕ್!

Published On - 4:58 pm, Mon, 14 February 22