ಇಂದಿನಿಂದ ವಿಧಾನಮಂಡಲ ಅಧಿವೇಶನ ಆರಂಭ, ಪ್ರತಿಪಕ್ಷಗಳ ಅಸ್ತ್ರಗಳನ್ನ ಸಮರ್ಥವಾಗಿ ಎದುರಿಸುತ್ತಾರಾ ಸಿಎಂ?

| Updated By: ಆಯೇಷಾ ಬಾನು

Updated on: Sep 13, 2021 | 7:28 AM

ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರ ರಚನೆಯಾದ ಬಳಿಕ ಇದೇ ಮೊದಲ ಬಾರಿಗೆ ಅಧಿವೇಶನ ನಡೆಯುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಇದು ಚೊಚ್ಚಲ ಅಧಿವೇಶನವಾಗಿದ್ದು. ಪ್ರತಿಪಕ್ಷಗಳ ಅಸ್ತ್ರಗಳಿಗೆ ಅದ್ಹೇಗೆ ತಿರುಗೇಟು ನೀಡ್ತಾರೆ. ಅದೆಷ್ಟು ಸಮರ್ಥವಾಗಿ ಎದುರಿಸುತ್ತಾರೆ ಅನ್ನೋ ಕುತೂಹಲ ಗರಿಗೆದರಿದೆ.

ಇಂದಿನಿಂದ ವಿಧಾನಮಂಡಲ ಅಧಿವೇಶನ ಆರಂಭ, ಪ್ರತಿಪಕ್ಷಗಳ ಅಸ್ತ್ರಗಳನ್ನ ಸಮರ್ಥವಾಗಿ ಎದುರಿಸುತ್ತಾರಾ ಸಿಎಂ?
ಸಿಎಂ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ, ಇದೇ ಮೊದಲ ಬಾರಿಗೆ ವಿಧಾನ ಮಂಡಲದ ಅಧಿವೇಶನ ನಡೆಯಲಿದೆ. ಇಂದಿನಿಂದ ಹತ್ತು ದಿನ ಅಂದ್ರೆ ಸೆಪ್ಟೆಂಬರ್ 24ರವರೆಗೆ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಬೆಲೆ ಏರಿಕೆ, ಜಾತಿ ಗಣತಿ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ, ಕೊವಿಡ್ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ, ಉಪಕರಣ‌ ಖರೀದಿಯಲ್ಲಿ‌ನ ಅವ್ಯವಹಾರ, ನೆರೆ ನಿರ್ವಹಣೆ, ಕಾನೂನು ಸುವ್ಯವಸ್ಥೆ ಸೇರಿದಂತೆ ಹಲವು ಅಸ್ತ್ರಗಳು ಪ್ರತಿಪಕ್ಷಗಳ ಬತ್ತಳಿಕೆಯಲ್ಲಿದ್ದು, ಸರ್ಕಾರದ ವಿರುದ್ಧ ಮುಗಿಬೀಳಲು ಸಜ್ಜಾಗಿವೆ. ಆದರೆ ಸಂಸದೀಯ ವ್ಯವಹಾರಗಳ ಖಾತೆ ಸಚಿವರಾಗಿ ಜೆ.ಸಿ.ಮಾಧುಸ್ವಾಮಿ ಮರಳಿರುವ ಕಾರಣ ವಿಪಕ್ಷಗಳನ್ನು ಕಟ್ಟಿ ಹಾಕುವ ವಿಶ್ವಾಸವನ್ನು ರಾಜ್ಯ ಸರ್ಕಾರ ಹೊಂದಿದೆ.

ಸುಗ್ರೀವಾಜ್ಞೆ ಸೇರಿ 18 ವಿಧೇಯಕಗಳು ಮಂಡನೆಗೆ ರೆಡಿ
ಅಂದಹಾಗೆ ಕಳೆದ ಅಧಿವೇಶನದಲ್ಲಿ ತಡೆ ಹಿಡಿಯಲಾಗಿರೋ ವಿಧೇಯಕಗಳು, ಸುಗ್ರೀವಾಜ್ಞೆಗಳು ಸೇರಿ ಒಟ್ಟು 18ವಿಧೇಯಕಗಳು ಮಂಡನೆಯಾಗಲಿವೆ‌. ಅಂದಹಾಗೆ ಮಂಡನೆಯಾಗಲಿರುವ ವಿಧೇಯಕಗಳು ಯಾವುವು ಅಂತಾ ನೋಡೋದಾದ್ರೆ

ಮಂಡನೆಯಾಗಲಿರುವ ವಿಧೇಯಕಗಳು
ಬೆಂಗಳೂರು ನೀರು‌ ಸರಬರಾಜು ಮತ್ತು ಗ್ರಾಮಸಾರ ತಿದ್ದುಪಡಿ ವಿಧೇಯಕ, ಕರ್ನಾಟಕ ಕಳ್ಳಭಟ್ಟಿ ವ್ಯಾಪಾರಿಗಳ, ಮಾದಕ ವಸ್ತು ಅಪರಾಧಿಗಳ ವಿಧೇಯಕ, ಜೂಜುಕೋರರ, ಗೂಂಡಾಗಳ ಅನೈತಿಕ ವ್ಯವಹಾರ ಅಪರಾಧಿಗಳ ವಿಧೇಯಕ, ಕೊಳಚೆ ಪ್ರದೇಶ ಕಬಳಿಸುವವರ, ಆಡಿಯೋ-ವಿಡಿಯೋ ಕಳ್ಳ ಮುದ್ರಕರ ವಿಧೇಯಕ, ಅಪಾಯಕಾರಿ ಚಟುವಟಿಕೆಗಳ ಪ್ರತಿಬಂಧಕ ತಿದ್ದುಪಡಿ ವಿಧೇಯಕ, ಬಂಧಿಗಳ ಗುರುತಿಸುವಿಕೆ ವಿಧೇಯಕ ದಂಡ ಪ್ರಕ್ರಿಯಾ ಸಂಹಿತೆ ವಿಧೇಯಕ, ಬಂಧಿಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ, ಕೃಷಿ ಸಂಬಂಧಿ ಕೀಟಗಳು ಮತ್ತು ರೋಗಗಳ ತಿದ್ದುಪಡಿ ವಿಧೇಯಕ, ಸ್ಟಾಂಪ್ ತಿದ್ದುಪಡಿ ವಿಧೇಯಕ, ಖಾದಿ ಮತ್ತು ಗ್ರಾಮೋದ್ಯೋಗಗಳ ತಿದ್ದುಪಡಿ ವಿಧೇಯಕ, ಪೌರಸಭೆಗಳ ಮತ್ತು ಇತರ ಕೆಲವು ಕಾನೂನು ವಿಧೇಯಕ, ಸ್ಥಳೀಯ ನಿಧಿ ಪ್ರಾಧಿಕಾರಗಳ ಆರ್ಥಿಕ ಹೊಣೆಗಾರಿಕೆ ವಿಧೇಯಕ ಮಂಡನೆಯಾಗಲಿವೆ.

ಸದನಕ್ಕೆ ಬರಲಿದ್ದಾರೆ ಮಾಜಿ ಸಿಎಂ.. ಮಾಜಿ ಸಚಿವರು
ಕಳೆದ ಅಧಿವೇಶನದಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಮತ್ತು ಸಚಿವರಾಗಿದ್ದ ಜಗದೀಶ್ ಶೆಟ್ಟರ್ ಈ ಅಧಿವೇಶನದಲ್ಲಿ ಮಾಜಿ ಸಿಎಂ, ಮಾಜಿ ಸಚಿವರಾಗಿ ಸದನದಲ್ಲಿ ಕಾಣಿಸಿಕೊಳ್ಳಲಿದ್ದಾರೆ‌. ಇಬ್ಬರೂ ಕೂಡಾ ಆಡಳಿತ ಪಕ್ಷದ ಕೊನೆಯ ಸಾಲಿನ ಆಸನಗಳನ್ನೇ ಆರಿಸಿಕೊಳ್ಳುವುದು ಬಹುತೇಕ ನಿಶ್ಚಿತವಾಗಿದೆ. ಇದರ ಜೊತೆಗೆ ಕಳೆದ ಅಧಿವೇಶನದಲ್ಲಿ ಸಚಿವರಾಗಿದ್ದವರು ಈ ಬಾರಿ ಮಾಜಿ ಸಚಿವರಾಗಿ ಆಡಳಿತ ಪಕ್ಷದ ಶಾಸಕರ ಸಾಲಿನಲ್ಲಿ ಕುಳಿತುಕೊಳ್ಳಲಿದ್ದಾರೆ‌. ವಿಶೇಷ ಅಂದ್ರೆ 6 ಜನ ಸಚಿವರು ಮೊದಲ ಬಾರಿಗೆ ಸಚಿವರಾಗಿ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಇನ್ನು ಅಧಿವೇಶನದ ಕೊನೆಯ ದಿನ ಮಧ್ಯಾಹ್ನದ ಬಳಿಕ ಸಂಸದೀಯ ಮೌಲ್ಯಗಳ ಕುರಿತು ಜಂಟಿ ಅಧಿವೇಶನ ನಡೆಯಲಿದೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಜಂಟಿ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಇದರ ಜೊತೆಗೆ ಸದನದಲ್ಲಿ ಯಾವುದೇ ಸಚಿವರು ಗೈರಾಗದಂತೆ ವಿಧಾನಸಭಾ ಸ್ಪೀಕರ್ ಸೂಚಿಸಿದ್ದು, ಅಡಳಿತ ಪಕ್ಷದ ಮುಖ್ಯ ಸಚೇತಕರು ಯಾರು ಅನ್ನೋದು ಇಂದು ಸದನದಲ್ಲಿ ಘೋಷಣೆಯಾಗುವ ನಿರೀಕ್ಷೆ ಇದೆ.

ಒಟ್ನಲ್ಲಿ ಸಿಎಂ ಬೊಮ್ಮಾಯಿಗೆ ಚೊಚ್ಚಲ ಅಧಿವೇಶನ ಸವಾಲಾಗಿದ್ದು ಪ್ರತಿಪಕ್ಷಗಳ ಅಸ್ತ್ರವನ್ನ ಅದ್ಹೇಗೆ ನಿಭಾಯಿಸ್ತಾರೆ ಅನ್ನೋದೆ ಸದ್ಯಕ್ಕಿರುವ ಕುತೂಹಲ.

ಇದನ್ನೂ ಓದಿ: ವಯಸ್ಸಿನಲ್ಲಿ 70 ಕೆಲಸದಲ್ಲಿ 20 ನಮ್ಮ ಸೋಮಣ್ಣ: ಬಸವರಾಜ ಬೊಮ್ಮಾಯಿ ಶ್ಲಾಘನೆ

Published On - 7:27 am, Mon, 13 September 21