ವಯಸ್ಸಿನಲ್ಲಿ 70 ಕೆಲಸದಲ್ಲಿ 20 ನಮ್ಮ ಸೋಮಣ್ಣ: ಬಸವರಾಜ ಬೊಮ್ಮಾಯಿ ಶ್ಲಾಘನೆ
ಬೆಂಗಳೂರಿನಲ್ಲಿ ಮನೆಯಿದ್ದು ಹಕ್ಕುಪತ್ರ ಸಿಗದವರಿಗೆ, ಹಕ್ಕುಪತ್ರಗಳನ್ನ ಕೊಡುತ್ತೇನೆ. ಈ ಬಗ್ಗೆ ನಾನು ದೆಹಲಿಯಲ್ಲೂ ಮಾತನಾಡಿದ್ದೇನೆ ಎಂದು ಭರವಸೆ ನೀಡಿದರು.
ಬೆಂಗಳೂರು: ಕೊಳಚೆ ಪ್ರದೇಶದಲ್ಲಿ ಆಸ್ಪತ್ರೆ, ಶಾಲೆ, ಉದ್ಯಾನವನ, ಸ್ಕೇಟಿಂಗ್ ರಿಂಗ್, ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಿಸಿರುವ ಸೋಮಣ್ಣ ಅವರ ಕಾರ್ಯತತ್ಪರತೆ ನೋಡಿ ನನಗೆ ಸಂತಸದೊಂದಿಗೆ ಅಸೂಯೆಯೂ ಆಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ತುರ್ತು ಸೇವೆಗಾಗಿ ಪ್ರತಿ ವಾರ್ಡ್ನಲ್ಲಿಯೂ ಒಂದು ಆಸ್ಪತ್ರೆ ನಿರ್ಮಿಸಲಾಗುವುದು. ನಿರ್ಭಯಾ ಯೋಜನೆಯಡಿ ಹೆಣ್ಣುಮಕ್ಕಳ ಸುರಕ್ಷೆಗಾಗಿ ಸಿಸಿ ಕ್ಯಾಮೆರಾ ಅಳವಡಿಸುತ್ತೇವೆ. ಟ್ರಾಫಿಕ್ ಸಮಸ್ಯೆ ನಿವಾರಿಸಲು ಯೋಜನೆ ರೂಪಿಸಿದ್ದೇವೆ. ಬೆಂಗಳೂರು ನಗರ ಯೋಜನಾಬದ್ಧವಾಗಿ ಬೆಳೆಯುತ್ತಿಲ್ಲ. ಅದನ್ನು ಸರಿಪಡಿಸಲು ಯೋಜನೆ ರೂಪಿಸಿದ್ದೇವೆ. ಬೆಂಗಳೂರಿನಲ್ಲಿ ಮನೆಯಿದ್ದು ಹಕ್ಕುಪತ್ರ ಸಿಗದವರಿಗೆ, ಹಕ್ಕುಪತ್ರಗಳನ್ನ ಕೊಡುತ್ತೇನೆ. ಈ ಬಗ್ಗೆ ನಾನು ದೆಹಲಿಯಲ್ಲೂ ಮಾತನಾಡಿದ್ದೇನೆ ಎಂದು ಭರವಸೆ ನೀಡಿದರು.
ಗೋವಿಂದರಾಜನಗರ ಕ್ಷೇತ್ರದಲ್ಲಿ ಮಲ್ಟಿಸ್ಪೆಷಾಲಿಟಿ, ಡಯಾಲಿಸಿಸ್ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಬೇರೆ ಸಚಿವರು ನಮ್ಮ ಕ್ಷೇತ್ರಕ್ಕೂ ಏನಾದರೂ ಕೊಡಿ ಎಂದು ಕೇಳ್ತಾರೆ. ಆದರೆ ಸೋಮಣ್ಣಗೆ ಕೆಲಸ ಮಾಡಿಸಿಕೊಳ್ಳುವುದು ಚೆನ್ನಾಗಿ ಗೊತ್ತು. ಇಲ್ಲಿರುವವರೆಲ್ಲರೂ ಅದನ್ನ ಚೆನ್ನಾಗಿ ಕಲಿತಿದ್ದಾರೆ ಅನ್ಸುತ್ತೆ ವೇದಿಕೆ ಮೇಲಿದ್ದ ಸಚಿವರ ಬಗ್ಗೆ ತಮಾಷೆಯಿಂದ ಮಾತನಾಡಿದರು. ಮುಖ್ಯಮಂತ್ರಿಯ ಮಾತಿಗೆ ನಗುನಗುತ್ತಲೇ ಇಲ್ಲ ಎಂದು ಸಚಿವರಾದ ಆರ್.ಅಶೋಕ್ ಮತ್ತು ಮುನಿರತ್ನ ಕೈಯಾಡಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಸೋಮಣ್ಣ ಎಂದರೆ ಜಾತ್ಯತೀತ ವ್ಯಕ್ತಿ ಎಂದು ವಿಶ್ಲೇಷಿಸಿದರು. ಗೋವಿಂದರಾಜನಗರ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸಗಳು ಆಗಿವೆ. ಇದನ್ನು ನೋಡಿದರೆ ಖುಷಿಯಾಗುತ್ತೆ ಎಂದು ನುಡಿದರು. ‘ತಿಪ್ಪೆ ಹೋಗಿ ಕೊಪ್ಪರಿಗೆ ಆಯ್ತು’ ಎಂಬ ಗಾದೆಯೊಂದು ಹಳ್ಳಿಗಳ ಕಡೆಯಿದೆ. ಅದೇ ರೀತಿ ಸಚಿವ ವಿ.ಸೋಮಣ್ಣ ಕಸವನ್ನು ರಸ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರಳತೆಗೆ ಮೆಚ್ಚುಗೆ ಸೂಚಿಸಿದ ಅವರು, ಸಿಎಂ ಅಂದರೆ ಕಾಮನ್ ಮ್ಯಾನ್ ಎಂದ ಏಕೈಕ ವ್ಯಕ್ತಿ ಬಸವರಾಜ ಬೊಮ್ಮಾಯಿ. ಮೊನ್ನೆ ಕೇಂದ್ರ ಸಚಿವರ ಮಗಳ ಮದುವೆಯಲ್ಲಿ ನಾನು ಭಾಗಿಯಾಗಿದ್ದೆ. ಆಗ ನನ್ನೊಂದಿಗೆ ಮಾತನಾಡಬೇಕು ಎಂದು ಮುಖ್ಯಮಂತ್ರಿ ಕರೆ ಮಾಡಿ ತಿಳಿಸಿದ್ದರು. ಬಹಳ ಹೊತ್ತು ಕಾದರೂ ಬೊಮ್ಮಾಯಿ ಕಾಣಿಸಲಿಲ್ಲ. ಬಳಿಕ ನಾನು ಅವರಿಗೆ ಕರೆ ಮಾಡಿದಾಗ, ಟ್ರಾಫಿಕ್ನಲ್ಲಿದ್ದೇನೆ ಎಂದು ಹೇಳಿದರು. ಆಗ ಇವರು ನಿಜವಾಗಿಯೂ ಕಾಮನ್ಮೆನ್ ಎನಿಸಿತು ಎಂದು ತಿಳಿಸಿದರು.
ಇತ್ತೀಚಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಂದು ಅಚ್ಚರಿ ಕೊಟ್ಟರು. ಅಮಿತ್ ಶಾ ಬಳಿಗೆ ಕರೆದೊಯ್ದು ಎಸ್ಟಿ ಹೋರಾಟದ ಬಗ್ಗೆ ಹೇಳಿದರು. ಅಮಿತ್ ಶಾ ಕೂಡ ಬೇಡಿಕೆ ಈಡೇರಿಸುವ ಮಾತಾಡಿದರು. 60 ಲಕ್ಷ ಕುರುಬ ಸಮುದಾಯಕ್ಕೆ ನ್ಯಾಯ ಸಿಗುವ ವಿಶ್ವಾಸ ಮೂಡಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕೊವಿಡ್ 3ನೇ ಅಲೆ ತಡೆಯಲು ಸಿದ್ಧತೆ ಕೊರೊನಾ ಸೋಂಕಿನ 3ನೇ ಅಲೆಯ ಆತಂಕ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಆಸ್ಪತ್ರೆಯನ್ನು ನವೀಕರಣ ಮಾಡಲಾಗಿದೆ. ಕೊವಿಡ್ 3ನೇ ಅಲೆ ತಡೆಯಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಬೆಂಗಳೂರಿನಲ್ಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ಸಂತಸದ ದಿನ ಬೆಂಗಳೂರು ದಕ್ಷಿಣಕ್ಕೆ ಇದು ಸಂತೋಷದ ದಿನ. ನನೆಗುದಿಗೆ ಬಿದ್ದಿದ್ದ ಕೆಎಸ್‌ಆರ್‌ಟಿಸಿ ಆಸ್ಪತ್ರೆ ನವೀಕರಣಗೊಳಿಸಲಾಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಜನತೆಯ ಪರವಾಗಿ ಮುಖ್ಯಮಂತ್ರಿಗೆ ಧನ್ಯವಾದ ತಿಳಿಸುತ್ತೇನೆ. ನಾನೂ ಸಹ ಸಂಸದರ ನಿಧಿಯಡಿ ₹ 35 ಲಕ್ಷ ಅನುದಾನ ನೀಡಿದ್ದೇನೆ. ಹಲವು ಖಾಸಗಿ ಕಂಪನಿಗಳು ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಆಸ್ಪತ್ರೆಗೆ ಸಹಾಯ ಮಾಡಿವೆ. ಅವರ ಕಾರ್ಯ ಮುಂದುವರೆಯಲಿ, ನನ್ನಿಂದಾದ ಎಲ್ಲ ಸಹಕಾರವನ್ನೂ ನಾನು ನೀಡುತ್ತೇನೆ ಎಂದು ಭರವಸೆ ನೀಡಿದರು.
ಕಂದಾಯ ಸಚಿವ ಆರ್.ಅಶೋಕ್ ಅವರು ವಿಪತ್ತು ನಿರ್ವಹಣಾ ನಿಧಿಯಡಿ 64 ಲಕ್ಷ ಅನುದಾನ ನೀಡಿದ್ದಾರೆ ಅವರಿಗೂ ಧನ್ಯವಾದ. ಕೋವಿಡ್ ಆತಂಕ ದೂರಾದ ನಂತರವೂ ಆಸ್ಪತ್ರೆಯನ್ನು ಮುಂದುವರಿಸಬೇಕು ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ. ಜಯನಗರದ ಬಡ ಜನತೆಗೆ ಈ ಆಸ್ಪತ್ರೆ ಉಪಯೋಗವಾಗಬೇಕು. ಮನೆಯಲ್ಲಿ ಕುಳಿತು ಆರೋಗ್ಯ ಸೌಲಭ್ಯ ತಲುಪಬೇಕು ಎಂಬುದು ಸಿಎಂ ಗುರಿ ಎಂದು ಸಂತಸ ವ್ಯಕ್ತಪಡಿಸಿದರು.
(CM Basavaraj Bommai Appraise Minister Somanna For his Good Works)
ಇದನ್ನೂ ಓದಿ: ಇವರಿಬ್ಬರು ನಮ್ಮ ಇಲಾಖೆಯ ತಿಮಿಂಗಿಲಗಳು; ಇನ್ನಾದ್ರೂ ಒಳ್ಳೆಯದು ಮಾಡ್ರೊ: ಅಧಿಕಾರಿಗಳಿಗೆ ವಿ ಸೋಮಣ್ಣ ಕ್ಲಾಸ್
ಇದನ್ನೂ ಓದಿ: 120 ಆ್ಯಂಬುಲೆನ್ಸ್ಗಳಿಗೆ ಚಾಲನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ