ಇಂದಿನಿಂದ ವಿಧಾನಸಭೆಯಲ್ಲಿ ‘ಸದನ ಕದನ’ ಶುರು: ಸರ್ಕಾರವನ್ನ ಕಟ್ಟಿಹಾಕಲು ವಿಪಕ್ಷಕ್ಕೆ ‘ಗ್ಯಾರಂಟಿ’ ಅಸ್ತ್ರ!
ಇಂದಿನಿಂದ ಜುಲೈ 14 ರವರೆಗೆ ಬಜೆಟ್ ಅಧಿವೇಶನ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಜಂಟಿ ಅಧಿವೇಶನ ನಡೆಯಲಿದ್ದು ಎರಡು ಸದನವನ್ನು ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಭಾಷಣ ಮಾಡಲಿದ್ದಾರೆ.
ಬೆಂಗಳೂರು: ಇಂದಿನಿಂದ(ಜುಲೈ 03) ಬಜೆಟ್ ಅಧಿವೇಶನ ಆರಂಭವಾಗಲಿದೆ(Karnataka Assembly Budget Session). ಆಡಳಿತ ಹಾಗೂ ವಿಪಕ್ಷಗಳ ನಡುವೆ ಗ್ಯಾರಂಟಿ(Congress Guarantees) ಸಮರ ಜೋರಾಗೋದು ಪಕ್ಕಾ. ಹತ್ತು ದಿನ ನಡೆಯಲಿರುವ 16ನೇ ವಿಧಾನಸಭೆಯ ಮೊದಲ ಅಧಿವೇಶನದಲ್ಲಿ ಹಲವು ಕುತೂಹಲಕಾರಿ ಬೆಳವಣಿಗೆಗಳು ಆಗಲಿವೆ. ಮೊದಲ ದಿನ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ.
ಇಂದಿನಿಂದ ಜುಲೈ 14 ರವರೆಗೆ ಬಜೆಟ್ ಅಧಿವೇಶನ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಜಂಟಿ ಅಧಿವೇಶನ ನಡೆಯಲಿದ್ದು ಎರಡು ಸದನವನ್ನು ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಭಾಷಣ ಮಾಡಲಿದ್ದಾರೆ. ರಾಜ್ಯಪಾಲರ ಭಾಷಣ ತೀವ್ರ ಕುತೂಹಲ ಮೂಡಿಸಿದ್ದು ರಾಜ್ಯಪಾಲರ ಭಾಷಣ ಮೇಲೆ ಮಂಗಳವಾರದಿಂದ ಚರ್ಚೆ ಆರಂಭವಾಗಲಿದೆ. ಒಟ್ಟು ಹತ್ತು ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಎಂಟು ದಿನ ಪ್ರಶ್ನೋತ್ತರ ಕಲಾಪಕ್ಕೆ ಸಮಯ ನಿಗದಿ ಮಾಡಲಾಗಿದೆ. ಇನ್ನು ಸಿಎಂ ಸಿದ್ದರಾಮಯ್ಯ ಜುಲೈ 07ರಂದು 14ನೇ ಬಜೆಟ್ ಮಂಡನೆ ಮಾಡಲಿದ್ದು ಸಿದ್ದರಾಮಯ್ಯನವರ ಹದಿನಾಲ್ಕನೇ ಬಜೆಟ್ ಮೇಲೆ ರಾಜ್ಯಕ್ಕೆ ಸಾಕಷ್ಟು ಕೊಡುಗೆಗಳ ನಿರೀಕ್ಷೆ ಇದೆ.
ಆಡಳಿತ-ವಿಪಕ್ಷಗಳ ನಡುವೆ ಕೋಲಾಹಲ ‘ಗ್ಯಾರಂಟಿ’
ಇನ್ನು ಈ ಅಧಿವೇಶನ ಹಲವು ಮಹತ್ವದ ಘಟನೆಗಳು, ನಿರ್ಧಾರಗಳಿಗೆ ಸಾಕ್ಷಿಯಾಗಲಿದೆ. ಪಂಚ ಗ್ಯಾರಂಟಿಗಳ ಪೈಕಿ, ಮೂರು ಗ್ಯಾರಂಟಿಗಳನ್ನ ಸರ್ಕಾರ ಈಡೇರಿಸುವ ಹಂತಕ್ಕೆ ತಲುಪಿದೆ. ಆದ್ರೆ ಕಂಡೀಷನ್, ಐದು ಕೆಜಿ ಅಕ್ಕಿಗೆ ಮಾತ್ರ ಹಣ ಕೊಡ್ತಿರೋದಕ್ಕೆ ಬಿಜೆಪಿ ಕೆಂಡಳವಾಗಿದೆ. ಇದನ್ನೇ ಅಸ್ತ್ರವಾಗಿಸಿಕೊಂಡು ಕಾಂಗ್ರೆಸ್ ಸರ್ಕಾರ ವಿರುದ್ಧ ಮುಗಿಬೀಳಲು ಬಿಜೆಪಿ ಶಾಸಕರು ನಿರ್ಧಾರ ಮಾಡಿದ್ದಾರೆ. ಸದನದ ಒಳಗಡೆ ಮತ್ತು ಹೊರಗಡೆ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಲು ಬಿಜೆಪಿ ನಾಯಕರು ಪ್ಲ್ಯಾನ್ ಮಾಡಿದ್ದಾರೆ. ಕೇಂದ್ರ ಸರ್ಕಾರದ ಐದು ಕೆಜಿ ಅಕ್ಕಿ ಹೊರತುಪಡಿಸಿ, ಹತ್ತು ಕೆಜಿ ಅಕ್ಕಿಗೆ ಹಣ ಕೊಡಬೇಕು. ಕೆಜಿಗೆ 34 ರೂಪಾಯಿ ನೀಡೋದಲ್ಲ. ಮಾರ್ಕೆಟ್ ದರ ಕೆಜಿಗೆ 60 ರೂಪಾಯಿ ಇದೆ. ಅಷ್ಟೇ ಕೊಡಬೇಕು ಅಂತಾ ಆಗ್ರಹಿಸಲಿದ್ದಾರೆ. ಸದನದ ಒಳಗೆ ಹಾಗೂ ಹೊರಗೆ ಸರ್ಕಾರವನ್ನ ಕಟ್ಟಿಹಾಕಿ, ಜನಮನ ಸೆಳೆಯೋದಕ್ಕೆ ಬಿಜೆಪಿ ನಾಯಕರು ಪ್ಲಾನ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Gruha Jyothi Scheme: ಹಿಂಬಾಕಿ ಉಳಿಸಿಕೊಂಡಿದ್ದರೂ ಗೃಹಜ್ಯೋತಿ ಪ್ರಯೋಜನ ಪಡೆಯಬಹುದು: ಬೆಸ್ಕಾಂ
ಇನ್ನು ಜೆಡಿಎಸ್ ಕೂಡ ಸದನದಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡಲು ರಣತಂತ್ರ ರೂಪಿಸಿದೆ. ಸರ್ಕಾರದ ಗ್ಯಾರಂಟಿ ಗೊಂದಲ, ಗ್ಯಾರಂಟಿಗಳಿಂದ ರಾಜ್ಯಕ್ಕೆ ಆಗುವ ನಷ್ಟ, ಗ್ಯಾರಂಟಿಗಳಿಂದ ಜನರು ಮುಂದೆ ಎದುರಿಸಬೇಕಾದ ತೊಂದರೆಯನ್ನು ರಾಜ್ಯದ ಜನತೆಗೆ ಸದನದ ಮೂಲಕ ತಿಳಿಸಲು ತಯಾರಿ ಮಾಡಿಕೊಂಡಿದೆ. ಈ ಮೂಲಕ ರಾಜ್ಯ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ಪ್ಲಾನ್ ಮಾಡಿದೆ. ಇತ್ತ ಸರ್ಕಾರ ವಿಪಕ್ಷಗಳ ಟೀಕೆಗೆ ಅವಕಾಶ ಕೊಡದಂತೆ ಸದನದಲ್ಲಿ ಎಚ್ಚರಿಕೆ ಹೆಜ್ಜೆ ಇಟ್ಟು ಗ್ಯಾರಂಟಿ ಗೊಂದಲಕ್ಕೆ ಸದನದಲ್ಲೆ ಉತ್ತರ ಕೊಡಲು ತೀರ್ಮಾನ ಮಾಡಿದೆ.
ಒಟ್ನಲ್ಲಿ ಇಂದು ನಡೆಯಲಿರುವ ಅಧಿವೇಶನ ಕೋಲಾಹಲ, ಕುತೂಹಲ ಎಲ್ಲದಕ್ಕೂ ಸಾಕ್ಷಿಯಾಗಲಿದೆ. ಗ್ಯಾರಂಟಿಗಳ ವಿಚಾರವಂತೂ ತೀವ್ರ ಗಲಾಟೆಯನ್ನ ಎಬ್ಬಿಸುವ ಸಾಧ್ಯತೆ ಇದೆ. ಈಗಾಗಲೇ ಸರ್ಕಾರ ಮತ್ತು ವಿಪಕ್ಷಗಳ ನಡುವೆ ಗ್ಯಾರಂಟಿ ಕದನ ತಾರಕಕ್ಕೇರಿದ್ದು ಸದನದಲ್ಲಿ ಸರ್ಕಾರ ಯಾವ ರೀತಿ ಕೌಂಟರ್ ಮಾಡುತ್ತೆ ಕಾದು ನೋಡಬೇಕಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ