
ಬೆಂಗಳೂರು, ಫೆಬ್ರವರಿ 27: ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಮಹಾದೇವಪ್ಪ ಹುಕ್ಕೇರಿ ಮೇಲೆ ಮರಾಠಿ ಪುಂಡರು ಹಲ್ಲೆ ಮಾಡಿದ ಬಳಿಕ ಎರಡು ರಾಜ್ಯಗಳ ನಡುವೆ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿತ್ತು. ಇದು ಭಾಷಾ ಗಲಾಟೆಗೂ ಕಾರಣವಾಗಿತ್ತು. ಹೀಗಾಗಿ ಕರ್ನಾಟಕ-ಮಹಾರಾಷ್ಟ್ರ ನಡುವೆ ಭಾಷೆ ಗಲಾಟೆ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರ ಮುಂದಾಗಿ ಸಂವಿಧಾನದ ಅವಕಾಶಗಳಂತೆ ವಿಶೇಷಾಧಿಕಾರಿ ನೇಮಿಸುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ (Droupadi Murmu)
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಪತ್ರ ಬರೆದಿದ್ದಾರೆ.
ಇದೀಗ ಮತ್ತೊಮ್ಮೆ ಉಲ್ಬಣಗೊಂಡಿರುವ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಹಿನ್ನಲೆ ನಿಮಗೆ ಈ ಪತ್ರವನ್ನು ಬರೆಯಲಾಗುತ್ತಿದೆ. ಎರಡೂ ರಾಜ್ಯಗಳ ಸರ್ಕಾರಗಳು ವಿವಾದವನ್ನು ತಣ್ಣಗಾಗಿಸುವ ನಿಟ್ಟಿನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ-ರೂ, ಕಣ್ಣಿಗೆ ಕಾಣದ ಸಂಗತಿಗಳಿವೆ. ದೊಡ್ಡ ಪ್ರಮಾಣದ ಹಿಂಸಾಚಾರ, ಆಸ್ತಿಪಾಸ್ತಿ ನಷ್ಟ ಮತ್ತು ಗಡಿಯ ಎರಡೂ ಬದಿಗಳಲ್ಲಿನ ಆಡಳಿತಾತ್ಮಕ ವ್ಯವಸ್ಥೆಯ ಮೇಲೆ ಆಳವಾದ ಪರಿಣಾಮ ಬೀರಿದೆ. ಹಾಗಾಗಿ ಈ ಸಂದರ್ಭದಲ್ಲಿ ಸಾಂವಿಧಾನಿಕ ನಿಬಂಧನೆಗಳ ಪ್ರಕಾರ ಕೇಂದ್ರ ಸರ್ಕಾರದ ಪಾತ್ರವು ಪ್ರಾಮುಖ್ಯತೆಯನ್ನು ಪಡೆಯುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಕನ್ನಡಿಗರ ಸ್ವಾಭಿಮಾನ ಹತ್ತಿಕ್ಕಲು ಶಿವಸೇನೆ ಮತ್ತು ಎಂಇಎಸ್ ಪುಂಡರಿಗೆ ಬಿಡೋದಿಲ್ಲ: ಪ್ರವೀಣ್ ಶೆಟ್ಟಿ, ಕರವೇ
ರಾಷ್ಟ್ರಪತಿಗಳು ಭಾಷಾ ಅಲ್ಪಸಂಖ್ಯಾತರಿಗೆ ವಿಶೇಷ ಅಧಿಕಾರಿಯನ್ನು ನೇಮಿಸತಕ್ಕದ್ದು. ಅದರ ಅಡಿಯಲ್ಲಿ ಭಾಷಾ ಅಲ್ಪಸಂಖ್ಯಾತರಿಗೆ ಒದಗಿಸಲಾದ ರಕ್ಷಣೋಪಾಯಗಳಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ತನಿಖೆ ಮಾಡುವುದು ಮತ್ತು ರಾಷ್ಟ್ರಪತಿಗಳು ನಿರ್ದೇಶಿಸಬಹುದಾದಂತಹ ಮಧ್ಯಂತರಗಳಲ್ಲಿ ಆ ವಿಷಯಗಳ ಬಗ್ಗೆ ರಾಷ್ಟ್ರಪತಿಗಳಿಗೆ ವರದಿ ಮಾಡುವುದು ವಿಶೇಷ ಅಧಿಕಾರಿಯ ಕರ್ತವ್ಯವಾಗಿರತಕ್ಕದ್ದು ಮತ್ತು ರಾಷ್ಟ್ರಪತಿಗಳು ಅಂಥ ಎಲ್ಲಾ ವರದಿಗಳನ್ನು ಸಂಸತ್ತಿನ ಪ್ರತಿಯೊಂದು ಸದನದ ಮುಂದೆ ಇಡುವಂತೆ ಮಾಡತಕ್ಕದ್ದು ಮತ್ತು ಸಂಬಂಧಿತ ರಾಜ್ಯಗಳ ಸರ್ಕಾರಗಳಿಗೆ ಕಳುಹಿಸಬೇಕು.
ಇದನ್ನೂ ಓದಿ: ಬೆಳಗಾವಿ ಕಂಡಕ್ಟರ್ ವಿರುದ್ಧ ಪೋಕ್ಸೋ ಕೇಸ್ ವಾಪಸ್ ಪಡೆದಿದ್ದೇವೆ: ಸಂತ್ರಸ್ತ ಬಾಲಕಿಯ ತಾಯಿ
ಭಾಷಾ ಅಲ್ಪಸಂಖ್ಯಾತರ ವಿಶೇಷ ಅಧಿಕಾರಿಯನ್ನು ಕೂಡಲೇ ನೇಮಿಸುವಂತೆ ಕೇಂದ್ರ ಸರ್ಕಾರಕ್ಕೆ ದಯಮಾಡಿ ನಿರ್ದೇಶಿಸಬೇಕೆಂದು ವಿನಂತಿಸಲಾಗಿದೆ. ಅವರು ಗಡಿ ಪ್ರದೇಶಗಳಲ್ಲಿ ವಾಸಿಸುವ ಜನರು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳನ್ನು ಪರಿಶೀಲಿಸಿ ಮತ್ತು ಕೇಂದ್ರಕ್ಕೆ ವರದಿ ಸಲ್ಲಿಸುತ್ತಾರೆ. ಬಳಿಕ ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಒದಗಿಸಲು ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸಬಹುದಾಗಿದೆ. ನಂತರ ಎರಡೂ ಕಡೆಯ ಸಾಮಾನ್ಯ ಜನರು ಶಾಂತಿಯುತ ಜೀವನ ನಡೆಸಬಹುದಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:19 pm, Thu, 27 February 25