ಬೆಳಗಾವಿ ಕಂಡಕ್ಟರ್ ವಿರುದ್ಧ ಪೋಕ್ಸೋ ಕೇಸ್ ವಾಪಸ್ ಪಡೆದಿದ್ದೇವೆ: ಸಂತ್ರಸ್ತ ಬಾಲಕಿಯ ತಾಯಿ
ಬೆಳಗಾವಿಯಲ್ಲಿ ಕೆಎಸ್‌ಆರ್‌ಟಿಸಿ ನಿರ್ವಾಹಕ ಮೇಲಿನ ಪೋಕ್ಸೋ ದೂರನ್ನು ಸಂತ್ರಸ್ತ ಬಾಲಕಿಯ ತಾಯಿ ಹಿಂಪಡೆದಿದ್ದಾರೆ. ಬಸ್‌ನಲ್ಲಿ ಟಿಕೆಟ್ ವಿಚಾರವಾಗಿ ಜಗಳವಾಗಿದೆ. ಈ ವೇಳೆ ಕನ್ನಡ, ಮರಾಠಿಗರ ಗಲಾಟೆ ಅಂತ ಸುಳ್ಳು ಹಬ್ಬಿಸಲಾಗಿದೆ ಎಂದು ಸಂತ್ರಸ್ತ ಬಾಲಕಿಯ ತಾಯಿ ಹೇಳಿದ್ದಾರೆ. ಇನ್ನು, ಮಾರಿಹಾಳ ಠಾಣೆ ಸಿಪಿಐ ಅನ್ನು ವರ್ಗಾವಣೆ ಮಾಡಲಾಗಿದೆ.

ಬೆಳಗಾವಿ, ಫೆಬ್ರವರಿ 25: ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕ ಮಹಾದೇವಪ್ಪ (KSRTC Bus Conductor) ಮೇಲೆ ನೀಡಿರುವ ಪೋಕ್ಸೋ (POCSO) ದೂರನ್ನು ವಾಪಸ್ ಹಿಂಪಡೆದಿದ್ದೇವೆ ಎಂದು ಸಂತ್ರಸ್ತ ಬಾಲಕಿಯ ತಾಯಿ ಹೇಳಿದ್ದಾರೆ. ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಸಂತ್ರಸ್ತೆಯ ತಾಯಿ, ನಾವು ಕೂಡ ಕನ್ನಡಿಗರೇ. ಈ ವಿಚಾರದಲ್ಲಿ ಕನ್ನಡ-ಮರಾಠಿಗರ ನಡುವೆ ಜಗಳ ಆಗುತ್ತಿದೆ. ನಿರ್ವಾಹಕ ಮಹಾದೇವಪ್ಪ ಅವರ ಮೇಲೆ ನೀಡಿದ್ದ ದೂರನ್ನು ಹಿಂಪಡೆದಿದ್ದೇವೆ ಎಂದರು.
ನಮ್ಮ ಮಗ, ಮಗಳು ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋಗಿದ್ದರು. ಈ ವೇಳೆ ಬಸ್‌ನಲ್ಲಿ ಟಿಕೆಟ್ ವಿಚಾರವಾಗಿ ಜಗಳವಾಗಿದೆ. ಈ ವೇಳೆ ಕನ್ನಡ, ಮರಾಠಿಗರ ಗಲಾಟೆ ಅಂತ ಸುಳ್ಳು ಹಬ್ಬಿಸಲಾಗಿದೆ. ಇದರಿಂದ ಮಹಾರಾಷ್ಟ್ರ, ಕರ್ನಾಟಕದ ನಡುವೆ ಜಗಳ ಶುರುವಾಗಿದೆ. ಭಾಷೆ ಮರಾಠಿ ಆಗಿದ್ದರೂ, ನಾವು ಕನ್ನಡಿಗರೇ. ಇದರಿಂದ ನಮಗೂ ಬೇಸರವಾಗಿದೆ ಎಂದಿದ್ದಾರೆ.
ಪೋಕ್ಸೋ ಕೇಸ್ ಯಾಕೆ?
ತಮ್ಮ ಮೇಲೆ ನಡೆದ ಹಲ್ಲೆಯ ಸಂಬಂಧ ನಿರ್ವಾಹಕ ಮಹಾದೇವ ಹುಕ್ಕೇರಿ ಬೆಳಗಾವಿ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಬಾಲಕಿ ನಿರ್ವಾಹಕ ಮಹಾದೇವ ಹುಕ್ಕೇರಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದರು. ನಿರ್ವಾಹಕ ಮಹಾದೇವ ಹುಕ್ಕೇರಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗುತ್ತಿದ್ದಂತೆ, ಆಕ್ರೋಶ ವ್ಯಕ್ತವಾಗಿದೆ. ನಿರ್ವಾಹಕ ಮಹಾದೇವ ಹುಕ್ಕೇರಿ ಮೇಲಿನ ಪೋಕ್ಸೋ ಪ್ರಕರಣದ ತನಿಖೆ ನಡೆಸಿದ ತನಿಖಾಧಿಕಾರಿ ಇಂದು (ಫೆ.25) ಬೆಳಗಾವಿ ಪೊಲೀಸ್ ಆಯುಕ್ತರಿಗೆ ಬಿ ರಿಪೋರ್ಟ್ ಸಲ್ಲಿಕೆ ಮಾಡಿದ್ದಾರೆ.
ಸಿಪಿಐ ದಿಢೀರ್ ವರ್ಗಾವಣೆ
ಕರ್ತವ್ಯಲೋಪ ಆರೋಪದ ಮೇಲೆ ಮಾರಿಹಾಳ ಠಾಣೆ ಸಿಪಿಐ ಗುರುರಾಜ್ ಕಲ್ಯಾಣಶೆಟ್ಟಿ ವರ್ಗಾವಣೆಯಾಗಿದ್ದಾರೆ. ಮಾರಿಹಾಳ ಠಾಣೆಯಿಂದ CCRBಗೆ ವರ್ಗಾವಣೆ ಮಾಡಿ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಆದೇಶ ಹೊರಡಿಸಿದ್ದರೆ. ಮಾರಿಹಾಳ ಠಾಣೆಗೆ CCRB ಇನ್ಸ್ಪೆಕ್ಟರ್ ಮಂಜುನಾಥ್ ನಾಯಕ್ರನ್ನು ನಿಯುಕ್ತಿಗೊಳಿಸಲಾಗಿದೆ. ಇನ್ನು, ಸಿಪಿಐ ಗುರುರಾಜ್ ಕಲ್ಯಾಣಶೆಟ್ಟಿ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.
ಕನ್ನಡ ಪರ ಸಂಘಟನೆಗಳ ಆಕ್ರೋಶ
ಕಂಡಕ್ಟರ್ ಮೇಲೆ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ, ರಾತ್ರೋರಾತ್ರಿ ಅದನ್ನು ಮಾಡಿದ್ದು ಯಾರು? ಕಾಣದ ಕೈಗಳು ಇಲ್ಲಿ ಕೆಲಸ ಮಾಡಿವೆ, ಕೇಸನ್ನು ದಾಖಲು ಮಾಡಿರುವ ಪೊಲೀಸ್ ಇನ್ಸ್ಪೆಕ್ಟರ್ ಮುಖಕ್ಕೆ ಎರಡು ಬಿಗಿಯಬೇಕು, ಅದ್ಹೇಗೆ ಅವನು ಪೋಕ್ಸೋ ಕೇಸನ್ನು ದಾಖಲಿಸುತ್ತಾನೆ? ಅವನೇನು ಕನ್ನಡಿಗನೋ ಅಥವಾ ಮಹಾರಾಷ್ಟ್ರದವನೋ? ಪೊಲೀಸ್ ಕಮೀಷನರ್ ಕೂಡಲೇ ಕಂಡಕ್ಟರ್ ಮೇಲೆ ಹಾಕಿರುವ ಕೇಸನ್ನು ವಾಪಸ್ಸು ಪಡೆಯಬೇಕು ಮತ್ತು ಗೃಹ ಸಚಿವರು ತಮ್ಮ ರಾಜಕೀಯ ದೊಂಬರಾಟವನ್ನು ಪಕ್ಕಕ್ಕಿಟ್ಟು ಬೆಳಗಾವಿ ಕನ್ನಡಿಗರ ಬಗ್ಗೆ ಯೋಚಿಸಬೇಕು ಎಂದು ಕರವೇ ಅಧ್ಯಕ್ಷ ಟಿಎ ನಾರಾಯಣಗೌಡ ಹೇಳಿದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಭಾಷೆಗೆ ಸಂಬಂಧಿಸಿದ ಎಲ ತಂಟೆ ತಗಾದೆಗಳನ್ನು ನಾವು ಕಿತ್ತು ಹಾಕಿದ್ದೇವೆ: ಲಕ್ಷ್ಮಿ ಹೆಬ್ಬಾಳ್ಕರ್, ಸಚಿವೆ
ಏನಿದು ಘಟನೆ?
‘ಕಳೆದ ಶುಕ್ರವಾರ ಮಧ್ಯಾಹ್ನ 12.30ರ ವೇಳೆಗೆ ಬೆಳಗಾವಿ ಸಿಬಿಟಿಯಿಂದ ಸುಳೇಬಾವಿಗೆ ಹೊರಟಿದ್ದ ಬಸ್‌ನಲ್ಲಿ ಓರ್ವ ಯುವಕ, ಯುವತಿ ಪ್ರಯಾಣಿಸುತ್ತಿದ್ದರು. ಟಿಕೆಟ್ ಪಡೆಯಲು ನಿರ್ವಾಹಕ ಹೇಳಿದಾಗ, ಮರಾಠಿ ಭಾಷೆಯಲ್ಲಿ ಯುವಕ ಉತ್ತರಿಸಿದ್ದಾನೆ. ಮರಾಠಿ ಭಾಷೆ ಅರ್ಥವಾಗುತ್ತಿಲ್ಲ. ಕನ್ನಡದಲ್ಲಿ ಮಾತನಾಡಿ ಎಂದು ಕಂಡಕ್ಟರ್ ಹೇಳಿದ್ದಾರೆ. ಈ ಕಾರಣಕ್ಕೆ ಯುವಕ-ಯುವತಿ ಇಬ್ಬರೂ ನಿರ್ವಾಹಕ ಮಹಾದೇವ ಅವರ ಮೇಲೆ ಮುಗಿಬಿದ್ದಿದ್ದಾರೆ. ಬಸ್ ಸುಳೇಬಾವಿ ಗ್ರಾಮ ಪ್ರವೇಶಿಸುತ್ತಿದ್ದಂತೆ ತಮ್ಮೂರಿನ ನಾಲ್ವರು ಯುವಕರನ್ನು ಕರೆಯಿಸಿಕೊಂಡು ನಿರ್ವಾಹಕನ ಮೇಲೆ ಹಲ್ಲೆ ಮಾಡಿದ್ದಾರೆ,’ ಎಂದು ಡಿಸಿಪಿ ರೋಹನ್ ಜಗದೀಶ ಘಟನೆಯ ವಿವರ ನೀಡಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:24 pm, Tue, 25 February 25