
ಬೆಂಗಳೂರು, ಡಿಸೆಂಬರ್ 31: ಕರ್ನಾಟಕದಲ್ಲಿ ಇತ್ತೀಚೆಗೆ ಪೊಲೀಸರೇ ಅಪರಾಧಗಳಲ್ಲಿ ಭಾಗಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಬೆಂಗಳೂರಿನಲ್ಲಿ ಬರೋಬ್ಬರಿ 7 ಕೋಟಿ ರೂ. ದರೋಡೆ ಪ್ರಕರಣ ಸೇರಿದಂತೆ ಇನ್ನೂ ಹಲವು ಪ್ರಕರಣಗಳಲ್ಲಿ ಖಾಕಿಯೂ ಶಾಮೀಲಾಗಿರುವುದು ಅಚ್ಚರಿ ಮೂಡಿಸಿತ್ತು. ಇದರ ಮಧ್ಯೆ ಪೊಲೀಸ್ ನೇಮಕಾತಿ ಹೆಸರಿನಲ್ಲಿಯೂ ಭ್ರಷ್ಟಾಚಾರದ ಆರೋಪ ಆಗಾಗ್ಗೆ ಕೇಳಿಬರುತ್ತಲೇ ಇರುತ್ತದೆ. ಇದೀಗ ಬಿಜೆಪಿ ನಾಯಕರಷ್ಟೇ ಅಲ್ಲದೇ ಮಾಜಿ IPS ಅಧಿಕಾರಿಯೂ ಆದ ಭಾಸ್ಕರ್ ರಾವ್ ಪೊಲೀಸ್ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದು, ಅವರ ಎಕ್ಸ್ ಪೋಸ್ಟ್ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ತಮ್ಮ ಎಕ್ಸ್ ಖಾತೆ ಮೂಲಕ ಗೃಹ ಸಚಿವರಿಗೆ ಟಾಂಗ್ ಕೊಟ್ಟ ಭಾಸ್ಕರ್, ಕರ್ನಾಟಕ ರಾಜ್ಯದ ಡಿಜಿ & ಐಜಿಪಿ ಕಚೇರಿಯಲ್ಲಿ 100ಕ್ಕೂ ಹೆಚ್ಚು ಪೊಲೀಸ್ ಇನ್ಸ್‌ಪೆಕ್ಟರ್‌ಗಳು ನೇಮಕಾತಿಗಾಗಿ ಕಾಯುತ್ತಿದ್ದಾರೆ. ಅನೇಕ ಹುದ್ದೆಗಳು ಖಾಲಿಯಾಗಿಯೇ ಉಳಿದಿವೆ. ಒಂದು ಪೊಲೀಸ್ ಠಾಣೆಯಲ್ಲಿ ಖಾಲಿಯಿದ್ದ ಹುದ್ದೆಗೆ 55 ಲಕ್ಷ ರೂ. ಬೇಡಿಕೆ ಇಡಲಾಗಿತ್ತು. ನಮ್ಮ ಅಭ್ಯರ್ಥಿಗೆ ಆ ಮೊತ್ತವನ್ನು ಹೊಂದಿಸಲು ಸಾಧ್ಯವಾಗಲಿಲ್ಲ.
ನಂತರ ಅವರು ಮಧ್ಯವರ್ತಿಗೆ ಕಚೇರಿ ಹುದ್ದೆ ನೀಡುವಂತೆ ಮನವಿ ಮಾಡಿದರು. ಆರಂಭದಲ್ಲಿ 3 ಲಕ್ಷ ರೂ. ಕೇಳಲಾಗಿದ್ದು, ಅಂತಿಮವಾಗಿ 1 ಲಕ್ಷ ರೂ.ಗೆ ವ್ಯವಹಾರ ನಿಶ್ಚಯವಾಯಿತು. ಇದು ಇಂದಿನ ವ್ಯವಸ್ಥೆಯ ಸ್ಥಿತಿ. ತಕ್ಷಣ ಫಲಿತಾಂಶ ಪಡೆಯಲು ಪ್ರಭಾವಿ ವ್ಯಕ್ತಿಗಳ ಪುತ್ರರಿಗೆ ಕೆಲಸ ಸುಲಭವಾಗಿ ಆಗುತ್ತದೆ. ನಮ್ಮ ಗೃಹ ಸಚಿವರು ಪ್ರಾಮಾಣಿಕರು, ಅವರಿಗೆ ಆದೇಶ ಬಂದಾಗ ಸಹಿ ಮಾಡುವುದರ ಹೊರತು ಬೇರೆ ಗೊತ್ತಿಲ್ಲ ಎಂದು ಬರೆದುಕೊಂಡಿದ್ದಾರೆ.
Over 100 Police Inspectors are waiting for posting in the Office of DG&IGP, Karnataka and Positions are lying unoccupied. Rs 55 lakhs was demanded for a Station. Our boy could not muster it. He told the Broker, get me an Office Position. Rs 3 lakhs but finally settled at Rs 1…
— Bhaskar Rao (@Nimmabhaskar22) December 30, 2025
ಇದನ್ನೂ ಓದಿ ಬೆಂಗಳೂರು: ಹಾಸಿಗೆಯ ಕೆಳಗೆ 11 ಲಕ್ಷ ರೂ. ಬಚ್ಚಿಟ್ಟಿದ್ದ ಕಾನ್ಸ್ಟೇಬಲ್ ಅರೆಸ್ಟ್
ಎಟಿಎಂಗಳಿಗೆ ಹಣ ಸಾಗಿಸುತ್ತಿದ್ದ ವಾಹನ ತಡೆದು ನಗರದಲ್ಲಿ7.11 ಕೋಟಿ ಹಣ ರಾಬರಿ ಪ್ರಕರಣ ಸಂಬಂಧ, ಪೊಲೀಸ್ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್ ಪ್ಲ್ಯಾನ್ ಪ್ರಕಾರವೇ ATM ವಾಹನ ದರೋಡೆ ಮಾಡಲಾಗಿತ್ತು. ಇದೇ ರೀತಿ ಸೈಬರ್ ವಂಚನೆ ಮಾಡಿದ್ದ ವ್ಯಕ್ತಿಯನ್ನು ವಿಚಾರಣೆಗೆಂದು ಬೆಂಗಳೂರು ಆಯುಕ್ತರ ಕಚೇರಿಗೆ ಕರೆದುಕೊಂಡು ಬಂದಿದ್ದಾಗ, ಆರೋಪಿಯ ಕಾರಿನಲ್ಲಿದ್ದ 11 ಲಕ್ಷ ರೂ. ಹಣವನ್ನು ಬೆಂಗಳೂರಿನ ಸೈಬರ್ ಕ್ರೈಮ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ತನ್ನ ಮನೆಯಲ್ಲಿ ಬಚ್ಚಿಟ್ಟಿದ್ದ ಘಟನೆಯೂ ಸಹ ಬೆಳಕಿಗೆ ಬಂದಿತ್ತು. ಈ ಎಲ್ಲಾ ಪ್ರಕರಣಗಳು ಬಹಿರಂಗಗೊಂಡ ನಂತರ ಡಿಜಿ ಹಾಗೂ ಐಜಿಪಿ ಸಲೀಂ, ಘಟಕದ ಎಲ್ಲಾ ಅಧಿಕಾರಿಗಳು ಅಧೀನದ ಪೊಲೀಸ್ ಸಿಬ್ಬಂದಿಯವರ ಮೇಲೆ ನಿಗಾ ವಹಿಸುವುದು ಸೇರಿದಂತೆ ಕೆಲವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.