ಬೆಂಗಳೂರು: ಹಾಸಿಗೆಯ ಕೆಳಗೆ 11 ಲಕ್ಷ ರೂ. ಬಚ್ಚಿಟ್ಟಿದ್ದ ಕಾನ್ಸ್ಟೇಬಲ್ ಅರೆಸ್ಟ್
ಬೆಂಗಳೂರಿನ ಸೈಬರ್ ಕ್ರೈಮ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಸೈಬರ್ ವಂಚನೆ ಪ್ರಕರಣದ ಆರೋಪಿಯಿಂದ ವಶಪಡಿಸಿಕೊಂಡ 11 ಲಕ್ಷ ರೂ. ನಗದನ್ನು ತನ್ನ ಮನೆಯಲ್ಲಿ ಬಚ್ಚಿಟ್ಟಿದ್ದ ಘಟನೆ ಬೆಳಕಿಗೆ ಬಂದಿದ್ದು, ಸಂಪೂರ್ಣ ಪೊಲೀಸ್ ಠಾಣೆಗೆ ಮುಜುಗರ ತಂದಿದೆ. ಆಂತರಿಕ ತನಿಖೆ ನಂತರ ಹಣ ವಶಪಡಿಸಿಕೊಳ್ಳಲಾಗಿದ್ದು, ಹೆಡ್ ಕಾನ್‌ಸ್ಟೆಬಲ್ ಅಮಾನತುಗೊಳ್ಳುವ ಸಾಧ್ಯತೆ ಇದೆ.

ಬೆಂಗಳೂರು, ಡಿಸೆಂಬರ್ 06: ಬೆಂಗಳೂರಿನ (Bengaluru) ಸೈಬರ್ ಕ್ರೈಮ್ ಪೊಲೀಸ್ ಠಾಣೆ (CCPS) ಅಧಿಕಾರಿಯೊಬ್ಬರು ಶಂಕಿತ ವ್ಯಕ್ತಿಯ ನಗದು ತುಂಬಿದ ಚೀಲವನ್ನು ತನ್ನ ಮನೆಯಲ್ಲಿ ಅಡಗಿಸಿದ್ದ ವಿಚಾರ ಬೆಳಕಿಗೆ ಬಂದಿದ್ದು, ಸಂಪೂರ್ಣ ಪೊಲೀಸ್ ಠಾಣೆಗೆ ಮುಜುಗರ ತಂದಿದೆ. ಹೆಡ್ ಕಾನ್‌ಸ್ಟೆಬಲ್ ಜಬಿಯುಲ್ಲಾ ಐ. ಗುಡಿಯಾಲ್(48) ತಮ್ಮ ಮಲಗುವ ಕೋಣೆಯ ಹಾಸಿಗೆಯ ಕೆಳಗೆ ಸುಮಾರು 11 ಲಕ್ಷ ರೂ.ನಗದನ್ನು ಕೂಡಿಟ್ಟಿದ್ದು, ಘಟನೆ ಬೆಳಕಿಗೆ ಬಂದಾಗ ತಾನು ಸಂಗ್ರಹಿಸಿದ ಹಣವನ್ನು ಠಾಣೆಗೆ ಒಪ್ಪಿಸಲು ಮರೆತಿರುವುದಾಗಿ ಸಬೂಬು ಹೇಳಿದ್ದಾರೆ. ಅವರ ಸಹೋದ್ಯೋಗಿಗಳೂ ಈ ವಚಾರದಲ್ಲಿ ಮೌನ ವಹಿಸಿದ್ದು ಅನುಮಾನ ಹುಟ್ಟು ಹಾಕಿದೆ.
ಶಂಕಿತನ ಕಾರಿನಲ್ಲಿದ್ದ ಹಣ ಅಡಗಿಸಿಟ್ಟ ಕಾನ್ಸ್ಟೇಬಲ್
ಎರಡು ವಾರಗಳ ಹಿಂದೆ ಸಿಸಿಪಿಎಸ್ ತಂಡವು ಸೈಬರ್ ವಂಚನೆ ಪ್ರಕರಣದಲ್ಲಿ ಶಂಕಿತನೊಬ್ಬನನ್ನು ದೇವನಹಳ್ಳಿಯಲ್ಲಿ ಪತ್ತೆಹಚ್ಚಿತ್ತು. ಪೊಲೀಸರು ತನ್ನ ಹಿಂದೆ ಬಿದ್ದಿರುವುದನ್ನು ತಿಳಿದ ಶಂಕಿತನು ತನ್ನ ಕಾರನ್ನು ಬಿಟ್ಟು ಕಾಲ್ನಡಿಗೆಯಲ್ಲಿ ಪರಾರಿಯಾಗಿದ್ದನು. ಈ ವೇಳೆ ಶಂಕಿತನ ಕಾರಿನಲ್ಲಿ ನಗದು, ಲ್ಯಾಪ್‌ಟಾಪ್ ಮತ್ತು ಇನ್ನಿತರ ವಸ್ತುಗಳನ್ನು ಹೊಂದಿದ್ದ ಚೀಲ ಸಿಕ್ಕಿತ್ತು. ಜಬಿಯುಲ್ಲಾ ಇದನ್ನು ಗಮನಿಸಿದ್ದರೂ, ತಂಡಕ್ಕೆ ಮಾಹಿತಿ ನೀಡದೆ ಸುಮ್ಮನೆ ಚೀಲವನ್ನು ಮನೆಗೆ ತೆಗೆದುಕೊಂಡು ಹೋಗಿದ್ದರೆಂದು ತಿಳಿದು ಬಂದಿದೆ. ತನಿಖಾ ತಂಡ ಠಾಣೆಗೆ ಮರಳಿದಾಗ, ಶಂಕಿತ ಪರಾರಿಯಾಗಿದ್ದಾನೆ ಎಂಬ ವರದಿ ಮಾತ್ರ ಸಲ್ಲಿಸಲಾಯಿತು. ಬ್ರೀಫಿಂಗ್‌ನಲ್ಲಿ ಕಾರಿನಲ್ಲಿದ್ದ ಚೀಲ ಮತ್ತು ಅದರಲ್ಲಿನ ವಸ್ತುಗಳ ಪ್ರಸ್ತಾಪ ಯಾರೂ ಮಾಡಿರಲಿಲ್ಲ.
ಹಣ ಇಟ್ಟುಕೊಂಡಿದ್ದ ಪಿಸಿಗೆ ಅಮಾನತಿನ ಭಯ
ಕೆಲವು ದಿನಗಳ ನಂತರ ಶಂಕಿತನು ನಿರೀಕ್ಷಣಾ ಜಾಮೀನು ಪಡೆದು ತನ್ನ ಕಾರನ್ನು ವಾಪಸ್ಸು ಪಡೆಯಲು ಬಂದಾಗ ಕಾರಿನ ಟ್ರಂಕ್ ತೆರೆಯುತ್ತಿದ್ದಂತೆ ಲಕ್ಷಾಂತರ ರೂಪಾಯಿ ಹೊಂದಿದ್ದ ಬ್ಯಾಗ್ ಕಾಣೆಯಾದಿರುವುದು ಅವನ ಗಮನಕ್ಕೆ ಬಂದಿತ್ತು. ತಕ್ಷಣವೇ ಇದನ್ನು ಹಿರಿಯ ಅಧಿಕಾರಿಗಳಿಗೆ ತಿಳಿಲಾಗಿ, ಚೀಲವನ್ನು ಕೊನೆಯದಾಗಿ ಯಾರು ನಿರ್ವಹಿಸಿದರು ಎಂಬುದರ ಕುರಿತು ನಡೆದ ಆಂತರಿಕ ಪರಿಶೀಲನೆ ನಡೆಸಲಾಯಿತು. ಈ ವೇಳೇ ಉಪ ಪೊಲೀಸ್ ಆಯುಕ್ತ ಪಿ. ರಾಜಾ ಇಮಾಮ್ ಖಾಸಿಂ ಅವರು ಕಾನ್‌ಸ್ಟೆಬಲ್‌ನ್ನು ವಿಚಾರಣೆ ನಡೆಸಿದಾಗ, ಅವರು ಬ್ಯಾಗ್ ಅನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾಗಿ ಒಪ್ಪಿಕೊಂಡರು. ನಂತರ ಅವರ ಮನೆ ಮೇಲೆ ದಾಳಿ ನಡೆಸಿ ಚೀಲ ಮತ್ತು ಎಲ್ಲಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು. ಜಬಿಯುಲ್ಲಾ ವಿರುದ್ಧ ಕಠಿಣ ಶಿಸ್ತಿನ ಕ್ರಮ ಕೈಗೊಳ್ಳಲಾಗುತ್ತಿದ್ದು, ಅವರನ್ನು ಅಮಾನತುಗೊಳಿಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:14 am, Sat, 6 December 25




