ಫುಟ್ಪಾತ್ ಮೇಲೆಯೇ ಟ್ರಾನ್ಸ್ಫಾರ್ಮರ್ಗಳ ಸ್ಥಾಪನೆ; ಜನರ ಜೀವದ ಜೊತೆ ಆಟ ಆಡುತ್ತಿದೆಯಾ ಬೆಸ್ಕಾಂ?
ಬೆಂಗಳೂರಿನ ಸಾರ್ವಜನಿಕ ಸ್ಥಳಗಳಲ್ಲಿ ಬೆಸ್ಕಾಂ ಸ್ಥಾಪಿಸಿರುವ ಟ್ರಾನ್ಸ್‌ಫಾರ್ಮರ್‌ಗಳು ಸುರಕ್ಷತೆ ಇಲ್ಲದೆ ಜನರ ಜೀವಕ್ಕೆ ಮಾರಕವಾಗಿವೆ. ರಾಜಾಜಿನಗರ, ಮಲ್ಲೇಶ್ವರದಂತಹ ಪ್ರದೇಶಗಳಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಟ್ರಾನ್ಸ್‌ಫಾರ್ಮರ್‌ಗಳಿಂದ ವಿದ್ಯುತ್ ಅವಘಡಗಳ ಭೀತಿ ಹೆಚ್ಚಿದೆ. ಬೆಸ್ಕಾಂನ ಮುಂಜಾಗ್ರತಾ ಕ್ರಮಗಳ ನಿರ್ಲಕ್ಷ್ಯ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಡೆಡ್ಲಿ ಟ್ರಾನ್ಸ್ಫಾರ್ಮರ್ಗಳ ಚಿತ್ರಣ ಟಿವಿ9 ಕನ್ನಡ ನಡೆಸಿರುವ ರಿಯಾಲಿಟಿ ಚೆಕ್ನಲ್ಲಿ ಬಯಲಾಗಿದೆ.

ಬೆಂಗಳೂರು, ಡಿಸೆಂಬರ್ 06: ಬೆಂಗಳೂರಿನ (Bengaluru) ಸಾರ್ವಜನಿಕ ಸ್ಥಳಗಳೇ ಜನಸಾಮಾನ್ಯರಿಗೆ ಮಾರಕವಾಗುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತವಾಗಿದ್ದು, ಸಮರ್ಪಕ ವಿದ್ಯುತ್ ಪೂರೈಕೆ ಉದ್ದೇಶದಿಂದ ಬೆಸ್ಕಾಂ (BESCOM) ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಿರುವ ಟ್ರಾನ್ಸ್ಫಾರ್ಮರ್ ಸುತ್ತಮುತ್ತ ಸುರಕ್ಷತೆಯೇ ಇಲ್ಲದಂತಾಗಿದೆ. ಈ ಡೆಡ್ಲಿ ಟ್ರಾನ್ಸ್ಫಾರ್ಮರ್ ಗಳ ಚಿತ್ರಣ ಟಿವಿ9 ಕನ್ನಡ ನಡೆಸಿರುವ ರಿಯಾಲಿಟಿ ಚೆಕ್ನಲ್ಲಿ ಬಯಲಾಗಿದೆ.
ಕನಿಷ್ಠ ಮುಂಜಾಗ್ರತಾ ಕ್ರಮ ಕೈಗೊಳ್ಳದ ಬೆಸ್ಕಾಂ ವಿರುದ್ಧ ಆಕ್ರೋಶ
ಬೆಸ್ಕಾಂ ರಸ್ತೆ ಹಾಗೂ ಫುಟ್ಪಾತ್ಗಳ ಆಸುಪಾಸು ಸ್ಥಾಪಿಸಿರುವ ಟ್ರಾನ್ಸ್ಫಾರ್ಮರ್ ಜನರ ಜೀವ ತೆಗೆಯುವ ರೀತಿಯಲ್ಲಿ ಗೋಚರವಾಗುತ್ತಿದ್ದು, ಟ್ರಾನ್ಸ್ಫಾರ್ಮರ್ಗಳ ಸುತ್ತಮುತ್ತ ಕನಿಷ್ಠ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ಹೆಚ್ಚಾಗಿದೆ. ಬೆಂಗಳೂರಿನ ಹಲವಾರು ಕಡೆಗಳಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಟ್ರಾನ್ಸ್ಫಾರ್ಮರ್ಗಳ ಸ್ಥಾಪನೆ ಮಾಡಲಾಗಿದೆ. ರಾಜಾಜಿನಗರ ಸಮೀಪದ ಶ್ರೀ ರಾಂಪುರದಲ್ಲಿ ಮಧ್ಯ ರಸ್ತೆಯಲ್ಲಿ ಜನರ ಓಡಾಟಕ್ಕೆ ಅಡ್ಡಿಯಾಗುವ ಹಾಗೆ ಟ್ರಾನ್ಸ್ಫಾರ್ಮರ್ ಸ್ಥಾಪಿಸಲಾಗಿದೆ. ನಿತ್ಯ ಇಲ್ಲಿ ನೂರಾರು ಮಂದಿ ಓಡಾಟ ಮಾಡುತ್ತಿದ್ದು, ವಿದ್ಯುತ್ ಅವಘಡಗಳು ಸಂಭವಿಸಿದರೆ ಯಾರು ಹೊಣೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಜನರ ಸುರಕ್ಷತೆ ಮರೆತ ಬೆಸ್ಕಾಂ
ಮಲ್ಲೇಶ್ವರ ಬಳಿಯ ರೈಲ್ವೆ ಪ್ಯಾರಲಲ್ ರಸ್ತೆಯಲ್ಲೂ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ಫುಟ್ಪಾತ್ ಮೇಲೆಯೇ ಸ್ಥಾಪನೆ ಆಗಿರುವ ಟ್ರಾನ್ಸ್ಫಾರ್ಮರ್ಗಳ ಹೈ ಟೆನ್ಶನ್ ತಂತಿಗಳೇ ಹೊರಬಂದರೂ ಬೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಪ್ರಾಣ ಉಳಿಸಿಕೊಳ್ಳಲು ವಿಧಿ ಇಲ್ಲದೆ ಫುಟ್ಪಾತ್ ಬಿಟ್ಟು ರಸ್ತೆ ಮೇಲೆ ನಡೆಯುವ ಪರಿಸ್ಥಿತಿ ಎದುರಾಗಿದೆ. ಸಮರ್ಪಕ ವಿದ್ಯುತ್ ಪೂರೈಕೆ ನೆಪದಲ್ಲಿ ಸಿಕ್ಕ ಸಿಕ್ಕ ಸಾರ್ವಜನಿಕ ಸ್ಥಳಗಳಲ್ಲಿ ಟ್ರಾನ್ಸ್ಫಾರ್ಮರ್ ನಿರ್ಮಾಣ ಮಾಡುವ ಬೆಸ್ಕಾಂ, ಅಗತ್ಯ ಭದ್ರತಾ ಮಾರ್ಗಸೂಚಿಯನ್ನು ಮರೆತಂತಿದೆ. ಬೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾರ್ವಜನಿಕರ ಹಿತದೃಷ್ಟಿಯನ್ನೂ ಕಾಪಾಡಬೇಕಿದೆ.
ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




