ಬೆಂಗಳೂರು: ಕರ್ನಾಟಕ ಪೊಲೀಸರ ವಾಹನಕ್ಕೆ ಮಹಾರಾಷ್ಟ್ರ ಪೊಲೀಸರು ಭದ್ರತೆ ನೀಡಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಕರ್ನಾಟಕ ಪೊಲೀಸರಿಗೆ ಮಹಾರಾಷ್ಟ್ರ ಪೊಲೀಸರು ಭದ್ರತೆ ನೀಡುವಂತಾಗಿದೆ. ಅಧಿವೇಶನದ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಕರ್ನಾಟಕ ಪೊಲೀಸ್ ಸಿಬ್ಬಂದಿ ಕೊಲ್ಹಾಪುರ ಲಕ್ಷ್ಮೀದೇವಿ ದರ್ಶನಕ್ಕೆ ತೆರಳಿದ್ದರು. ಈ ವೇಳೆ, ಲಕ್ಷ್ಮೀದೇವಿ ದರ್ಶನ ಪಡೆದು ಬೆಳಗಾವಿಗೆ ಬರುತ್ತಿರುವ ಪೊಲೀಸರಿಗೆ ಮಹಾರಾಷ್ಟ್ರ ಪೊಲೀಸರು ಭದ್ರತೆ ನೀಡುವಂತಾಗಿದೆ.
ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಭಾಗ ಬೆಳಗಾವಿಯಲ್ಲಿ ಪರಿಸ್ಥಿತಿ ಬಿಗು ಆಗಿರುವ ಹಿನ್ನೆಲೆಯಲ್ಲಿ ಹೀಗೆ ಕ್ರಮ ತೆಗೆದುಕೊಳ್ಳಲಾಗಿದೆ. ಶುಕ್ರವಾರ ಕರ್ನಾಟಕದ ಸರ್ಕಾರಿ ವಾಹನಗಳ ಮೇಲೆ ಮರಾಠ ಹೋರಾಟಗಾರರು ಕಲ್ಲು ತೂರಾಟ ನಡೆಸಿದ್ದರು. ಇಂದು ಕೂಡ ಕರ್ನಾಟಕದ ವಾಹನಗಳ ಮೇಲೆ ಶಿವಸೇನೆ ಕಾರ್ಯಕರ್ತರು ದಾಳಿ ಮಾಡುತ್ತಿದ್ದಾರೆ. ಹೀಗಾಗಿ ಕೆಎಸ್ಆರ್ಪಿ ವಾಹನಕ್ಕೆ ಮಹಾರಾಷ್ಟ್ರ ಪೊಲೀಸರು ಭದ್ರತೆ ನೀಡಿದ್ದಾರೆ.
ಬೆಂಗಳೂರು: ಟೌನ್ಹಾಲ್ ಮುಂಭಾಗ ಕನ್ನಡಪರ ಸಂಘಟನೆಗಳ ಭಾರಿ ಪ್ರತಿಭಟನೆ
ಕರ್ನಾಟಕ ರಾಜಧಾನಿ ಬೆಂಗಳೂರಿನ ಟೌನ್ಹಾಲ್ನಲ್ಲಿ ಸಾವರ್ಕರ್ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಸಾವರ್ಕರ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗಿ ಆಗಲಿರುವ ಹಿನ್ನೆಲೆ ಪೊಲೀಸ್ ಬಿಗಿ ಬಂದೋಬಸ್ತ್ ನೀಡಲಾಗಿದೆ. ಕಾರ್ಯಕ್ರಮ ವಿರೋಧಿಸಿ ಕನ್ನಡ ಪರ ಸಂಘಟನೆ ಧರಣಿ ಹಿನ್ನೆಲೆ ಟೌನ್ಹಾಲ್ ಬಳಿ 100ಕ್ಕೂ ಅಧಿಕ ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ.
ಸ್ಥಳದಲ್ಲಿ ಕಾರ್ಯಕ್ರಮ ವಿರೋಧಿಸಿ ಕನ್ನಡ ಪರ ಸಂಘಟನೆಗಳ ಪ್ರತಿಭಟನೆ ನಡೆಯುತ್ತಿದೆ. ಕನ್ನಡ ಪರ ಸಂಘಟನೆಗಳು ಟೌನ್ಹಾಲ್ಗೆ ನುಗ್ಗಲು ಯತ್ನಿಸಿವೆ. ಮತ್ತೊಂದೆಡೆ ಹಿಂದೂಪರ ಸಂಘಟನೆ ಕಾರ್ಯಕರ್ತರ ಆಕ್ರೋಶ ವ್ಯಕ್ತವಾಗಿದೆ. ಒಂದೆಡೆ ಹಿಂದೂಪರ ಸಂಘಟನೆಗಳು ಸಾವರ್ಕರ್ಗೆ ಜೈಕಾರ ಕೂಗಿದರೆ ಮತ್ತೊಂದೆಡೆ ಕನ್ನಡ ಪರ ಸಂಘಟನೆಗಳು ಸಾವರ್ಕರ್ಗೆ ಧಿಕ್ಕಾರ ಕೂಗಿವೆ. ಕನ್ನಡ ಪರ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೋರಾಟಗಾರರು ಟೌನ್ಹಾಲ್ ಪ್ರವೇಶಿಸಿರುವ ಸಾಧ್ಯತೆ ಇರುವುದರಿಂದ ಟೌನ್ಹಾಲ್ನ ಸಭಾಂಗಣದ ಒಳಗೆ ಪೊಲೀಸರಿಂದ ಶೋಧಕಾರ್ಯ ನಡೆಯುತ್ತಿದೆ. ಟೌನ್ಹಾಲ್ ಒಳಗಿದ್ದ ಮತ್ತಿಬ್ಬರು ಹೋರಾಟಗಾರರು ವಶಕ್ಕೆ ಪಡೆಯಲಾಗಿದೆ.
ಬಾಗಲಕೋಟೆ: ಸಂಗೊಳ್ಳಿ ರಾಯಣ್ಣ ಮೂರ್ತಿ ಧ್ವಂಸ ಘಟನೆ ಖಂಡಿಸಿ ಬೈಕ್ ಮೆರವಣಿಗೆ
ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಧ್ವಂಸ ಪ್ರಕರಣ ಖಂಡಿಸಿ ಕರವೇ ಕಾರ್ಯಕರ್ತರು ಬೈಕ್ ರಾಲಿ ನಡೆಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಬೈಕ್ ಮೆರವಣಿಗೆ ಮಾಡಿದ್ದಾರೆ. ಶಿವಾಜಿ ವೃತ್ತದಿಂದ ತಹಶೀಲ್ದಾರ್ ಕಚೇರಿಯವರೆಗೆ ರಾಲಿ ಮಾಡಿದ್ದು ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಕೆ ಮಾಡಿದ್ದಾರೆ.
ಇದನ್ನೂ ಓದಿ: ಕನ್ನಡಿಗರು ಮರಾಠಿಗರ ಗುದ್ದಾಟ, ಗಡಿ ವಿವಾದ; ಡಿಸೆಂಬರ್ 13 ರಿಂದ ಏನೇನಾಯ್ತು? ಇಲ್ಲಿದೆ ಸಂಪೂರ್ಣ ವಿವರ
ಇದನ್ನೂ ಓದಿ: ಬೆಳಗಾವಿಯಲ್ಲಿ ಪುಂಡಾಟಿಕೆ ಪ್ರಕರಣ: ಘಟನೆಗೆ ಪೊಲೀಸರ ವೈಫಲ್ಯವೇ ನೇರ ಕಾರಣ- ಶಾಸಕ ಅಭಯ್ ಪಾಟೀಲ್ ಆರೋಪ