ಬೆಳಗಾವಿಯಲ್ಲಿ ಪುಂಡಾಟಿಕೆ ಪ್ರಕರಣ: ಘಟನೆಗೆ ಪೊಲೀಸರ ವೈಫಲ್ಯವೇ ನೇರ ಕಾರಣ- ಶಾಸಕ ಅಭಯ್ ಪಾಟೀಲ್ ಆರೋಪ
Belagavi News: ರಾತ್ರೋರಾತ್ರಿ ಕೆಲವು ಪುಂಡರು ಇಂತಹ ಕೃತ್ಯವೆಸಗಿದ್ದಾರೆ. ಈಗಾಗಲೇ ನಮ್ಮ ಪೊಲೀಸರು ಪುಂಡರನ್ನು ಬಂಧಿಸಿದ್ದಾರೆ. ಇಂತಹ ಘಟನೆ ಮರುಕಳಿಸದಂತೆ ಕ್ರಮಕೈಗೊಂಡಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ
ಬೆಳಗಾವಿ: ಇಲ್ಲಿ ಶುಕ್ರವಾರ ರಾತ್ರಿ ನಡೆದ ಘಟನೆಗೆ ಪೊಲೀಸರ ವೈಫಲ್ಯವೇ ನೇರ ಕಾರಣ ಎಂದು ಆರೋಪ ವ್ಯಕ್ತವಾಗಿದೆ. ನಿನ್ನೆ ರಾತ್ರಿಯೇ ಗೃಹ ಸಚಿವರ ಜತೆಗೆ ನಾನು ಮಾತನಾಡಿದ್ದೇನೆ. ಬೆಳಗಾವಿ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಘಟನೆ ಹಿಂದಿನ ರಾಜಕೀಯ ಷಡ್ಯಂತ್ರ ಅರಿತುಕೊಳ್ಳಬೇಕು. ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬೆಳಗಾವಿಯಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ್ ಪಾಟೀಲ್ ಆಗ್ರಹಿಸಿದ್ದಾರೆ.
ಕಾನೂನು ಭಾಹಿರವಾಗಿ ಯಾರೂ ನಡೆದುಕೊಳ್ಳಬಾರದು. ಸರ್ಕಾರ ಅಂತವರ ಮೇಲೆ ಸೂಕ್ತವಾದ ಕ್ರಮ ಕೈಗೊಳ್ಳುತ್ತದೆ ಎನ್ನುವ ವಿಶ್ವಾಸ ಇದೆ. ಕಾನೂನು ಕೈಗೆ ತೆಗೆದುಕೊಳ್ಳುವದು ತಪ್ಪು, ಅವರ ಮೇಲೆ ಸರ್ಕಾರ ಕ್ರಮ ಕೈಗೊಳುತ್ತದೆ ಎಂದು ಗದಗದಲ್ಲಿ ಸಂಸದ ಶಿವಕುಮಾರ್ ಉದಾಸಿ ಹೇಳಿಕೆ ನೀಡಿದ್ದಾರೆ. ಎಂಇಎಸ್ ಪುಂಡಾಟಿಕೆ ವಿರುದ್ಧ ಕರ್ನಾಟಕದ ಸಂಸದರು ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಅಟ್ಟಹಾಸ ಪ್ರಕರಣಕ್ಕೆ ಸಂಬಂಧಿಸಿ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ರಾತ್ರೋರಾತ್ರಿ ಕೆಲವು ಪುಂಡರು ಇಂತಹ ಕೃತ್ಯವೆಸಗಿದ್ದಾರೆ. ಈಗಾಗಲೇ ನಮ್ಮ ಪೊಲೀಸರು ಪುಂಡರನ್ನು ಬಂಧಿಸಿದ್ದಾರೆ. ಇಂತಹ ಘಟನೆ ಮರುಕಳಿಸದಂತೆ ಕ್ರಮಕೈಗೊಂಡಿದ್ದಾರೆ. ರಾತ್ರಿ ವೇಳೆ ಕಲ್ಲುತೂರುವುದು, ಬೆಂಕಿ ಹಚ್ಚುವುದು ಸರಿಯಾ? ರಾತ್ರಿ ವೇಳೆ ಗೂಂಡಾಗಿರಿ ಮಾಡುವುದು ಪುರುಷಾರ್ಥನಾ? ಎಂದು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸಿಎಂ ಬೊಮ್ಮಾಯಿ ಪ್ರಶ್ನೆ ಮಾಡಿದ್ದಾರೆ.
ಎಂಇಎಸ್ ಪುಂಡರಿಗೆ ನಮ್ಮ ಸರ್ಕಾರ ತಕ್ಕ ಪಾಠ ಕಲಿಸುತ್ತೆ. ಸಂಗೊಳ್ಳಿ ರಾಯಣ್ಣ ಹಾಗೂ ಕಿತ್ತೂರು ಚೆನ್ನಮ್ಮ ಕರ್ನಾಟಕದ ಹೆಮ್ಮೆಯ ವ್ಯಕ್ತಿಗಳು. ದೇಶ ಪ್ರೇಮಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ವ್ಯಕ್ತಿಗಳು. ಸಾಮರಸ್ಯದಿಂದ ಬಾಳುತ್ತಿರುವ ಈ ಸಂದರ್ಭದಲ್ಲಿ ಕನ್ನಡ ಧ್ವಜವನ್ನು ಸುಟ್ಟು ಅಪಮಾನ ಮಾಡಿದ್ರು. ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಭಗ್ನಗೊಳಿಸಿ ಅಪಚಾರ ಮಾಡಿದ್ದಾರೆ. ಪುಂಡಾಟಿಕೆ ಬಿಟ್ಟು ಸಾಮರಸ್ಯದಿಂದ ಬದುಕುವದನ್ನು ಕಲಿಯಬೇಕು ಮರಾಠಿಗರು ಎಂದು ಗದಗದಲ್ಲಿ ಸಚಿವ ಸಿಸಿ ಪಾಟೀಲ್ ಎಂಇಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ವಿಕಾರ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂಥವರನ್ನ ಬಂಧಿಸಿ ಕೂಡಲೇ ಜೈಲಿಗೆ ಅಟ್ಟಿ: ಟಿಎ ಶರವಣ ನಮ್ಮ ನೆಲ, ನಮ್ಮದೇ ನಾಡಿನ ಭಾವನಾತ್ಮಕ ಭಾಗವಾಗಿರುವ ಗಡಿನಾಡು ಬೆಳಗಾವಿಯಲ್ಲಿ ಎಂಇಎಸ್ನ ಪುಂಡರು ನಡೆಸಿರುವ ಗೂಂಡಾಗಿರಿ, ಪುಂಡಾಟಿಕೆ ಅಕ್ಷಮ್ಯವಾಗಿದೆ. ಇಂಥ ನೀಚರನ್ನು ಬಂಧಿಸಿ, ರಾಜ್ಯದಿಂದಲೇ ಗಡಿಪಾರು ಮಾಡಬೇಕು ಎಂದು ಜೆ.ಡಿ.ಎಸ್ ಹಿರಿಯ ನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಎ. ಶರವಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡ ನಾಡಿನ ಹೆಮ್ಮೆ, ಸ್ವಾಭಿಮಾನದ ಪ್ರತೀಕ, ಬ್ರಿಟಿಷರ ವಿರುದ್ಧ ಹೋರಾಡಿದ ಕೆಚ್ಛೆದೆಯ ಸೇನಾನಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಭಂಗ ಮಾಡಿರುವ ಕೃತ್ಯವಂತೂ ಸಹಿಸಲಸಾಧ್ಯ ಘಟನೆ ಆಗಿದೆ. ಇಂಥವರನ್ನ ಬಂಧಿಸಿ ಕೂಡಲೇ ಜೈಲಿಗೆ ಅಟ್ಟಿ. ಕನ್ನಡದ ಭಾಷೆ, ನೆಲ ಜಲದ ಭಾವನೆ ಗಳಿಗೆ ಧಕ್ಕೆ ತರುವ ಎಂ.ಇ. ಎಸ್. ದುಷ್ಟರ ಹೆಡೆಮುರಿಕಟ್ಟಿ ಎಂದು ಸರ್ಕಾರಕ್ಕೆ ಆಗ್ರಹ ಪಡಿಸಿದ್ದಾರೆ.
ಪ್ರಾದೇಶಿಕ ಪಕ್ಷ ಜೆಡಿಎಸ್ ಇಂದಿಗೂ ಕನ್ನಡಿಗರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಬದ್ಧತೆ ಹೊಂದಿರುವ ಪಕ್ಷವಾಗಿದ್ದು, ನಾಡ ದ್ರೋಹಿಗಳ ಈ ಆಟ್ಟಹಾಸವನ್ನು ಕೊನೆಗಾಣಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಆಧಿವೇಶನ ನಡೆಯುವಾಗಲೇ ಎಂಇಎಸ್ ಸರಣಿ ಹಿಂಸಾಚಾರ, ಸರಕಾರಿ ವಾಹನಗಳಿಗೆ ಬೆಂಕಿ ಇಟ್ಟಿರುವ ಘಟನೆ, ವ್ಯವಸ್ಥಿತ ಹಾಗೂ ಸಂಘಟಿತ ಪಿತೂರಿ ಆಗಿದ್ದು, ಇದರ ಹಿಂದೆ ಭಾಷಾ ಸೌಹಾರ್ದತೆಗೆ ಕೊಳ್ಳಿ ಇಡುವ ಸಂಚು ಇದೆ. ಇಂಥ ಪಿತೂರಿಕೋರರನ್ನೂ ಕಂಬಿ ಎಣಿಸುವಂತೆ ಮಾಡಬೇಕು ಎಂದು ಟಿ.ಎ.ಶರವಣ ಹೇಳಿದ್ದಾರೆ.
ಇದನ್ನೂ ಓದಿ: ಶಿವಾಜಿ ಪುತ್ಥಳಿಗೆ ಕಪ್ಪು ಮಸಿ ಸುರಿದ ಪ್ರಕರಣ: ಬೆಳಗಾವಿಯಲ್ಲಿ ದಿಢೀರ್ ಪ್ರತಿಭಟನೆ; ಬಿಗುವಿನ ವಾತಾವರಣ ನಿರ್ಮಾಣ