ಬೆಂಗಳೂರು: ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಟ್ರೆ ಅವರು ತೋರುವ ಖಾಕಿ ಖದರೇ ಬೇರೆ. ಅವರ ತಾಖತ್ತು, ಗಟ್ಸೇ ಬೇರೆ. ಸ್ಯಾಂಟ್ರೋ ರವಿ(Santro Ravi) ಪ್ರಕರಣದಲ್ಲೂ ಅದೇ ಆಯಿತು. ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್(Alok Kumar) ಎಂಬ ಖಡಕ್ ಪೊಲೀಸ್ ಆಫೀಸರ್ ಸ್ಯಾಂಟ್ರೋ ರವಿ ಅಂಡಮಾನ್ ಬಿಲದಲ್ಲಿ ಬಚ್ಚಿಟ್ಟುಕೊಂಡಿದ್ದರೂ ಹಿಡಿದು ತರುತ್ತೇವೆ ಎಂದಾಗ ಜನ ಎದೆಯುಬ್ಬಿಸಿ ಅದು ಕಣ್ರೀ ನಮ್ ಪೊಲೀಸರ ತಾಖತ್ತು ಅಂದಿದ್ದರು. ಅದಾದಮೇಲೆ ಅದೇ ಅಲೋಕ್ ಕುಮಾರ್ ಮೈಸೂರಲ್ಲಿ ಕುಳಿತು ಯಃಕಶ್ಚಿತ್ ಪಾತಕಿಯ ಜಾಡು ಹಿಡಿಯುತ್ತಾ, ತಮ್ಮ ಪೊಲೀಸ್ ಟೀಮನ್ನು ಎಚ್ಚರಿಸುತ್ತಾ ಹೋದರು. ಮೂಲಕ್ಕೆ ಕೈಹಾಕಿದ ಪೊಲೀಸರು ಮೊದಲು ಮಾತನಾಡಿಸಿದ್ದು ಸ್ಯಾಂಟ್ರೋನ ಪತ್ನಿಯನ್ನು. ತಾವು ಆಲೋಚಿಸಿದಂತೆ ಅಲ್ಲಿ ಆರಂಭಿಕ ಮಾಹಿತಿ ಸಿಗುತ್ತಿದ್ದಂತೆ ಅಲ್ಲಿಂದಲೇ ಖಡಕ್ ಸ್ಕೆಚ್ ಹಾಕಿಬಿಟ್ಟರು. ಪಾತಕಿ ರವಿಯ ಮೂವರು ಜೊತೆಗಾರರನ್ನು ಅವರ ನೆರಳಿನಂತೆ ಹಿಂಬಾಲಿಸಿದರು. ಕೊನೆಗೆ ರಾಯರ ಸನ್ನಿಧಾನದಲ್ಲಿ ಭಕ್ತರ ಗೆಟಪ್ ಹಾಕಿ, ಹಾಲಲ್ಲಾದರು ಹಾಕು, ನೀರಲ್ಲಾದರೂ ಹಾಕು ಗುರು ರಾಘವೇಂದ್ರ ಎಂದು ಜಪಿಸುತ್ತಾ ಅವರ ಹಿಂದೆಯೇ ಆ ಜೊತೆಗಾರರ ಹಿಂದೆಯೇ ತೆರಳಿಬಿಟ್ಟರು. ಆದರೆ ಅವರಿಬ್ಬರಿಗೂ ತಮ್ಮ ನೆರಳಿನಂತೆ ಕರ್ನಾಟಕ ಪೊಲೀಸರು ಹಿಂದೆಬಿದ್ದಿದ್ದಾರೆ ಎಂಬುದು ಸುತರಾಂ ಗೊತ್ತಾಗಲಿಲ್ಲ. ಹೇಗಿತ್ತು ರೋಚಕ ಆಪರೇಶನ್? ಇಲ್ಲಿದೆ ಹೆಜ್ಜೆ ಗುರುತುಗಳು, ಓದಿ.
ಜನವರಿ 2 ರಂದು ಸ್ಯಾಂಟ್ರೋ ರವಿಯ ಪತ್ನಿ ಮೈಸೂರಿನಲ್ಲಿ ದೂರು ದಾಖಲಿಸಿದ್ರು. ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ತನ್ನನ್ನ ವೇಶ್ಯಾವಾಟಿಕೆಗೆ ತಳ್ಳಲು ಯತ್ನಿಸ್ತಿದ್ದಾನೆ ಅಂತಾ, ಮೈಸೂರಿನ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ರು, ಇದಾಗಿ ದಿನ ಕಳೆಯೋ ಹೊತ್ತಿಗೆ ಮಾಜಿ ಸಿಎಂ ಕುಮಾರಸ್ವಾಮಿ ಸ್ಯಾಂಟ್ರೋ ರವಿ ಮತ್ತು ಬಾಂಬೆ ಫ್ರೆಂಡ್ಸ್ ಲಿಂಕ್ ಇದೆ ಅಂತಾ ದೊಡ್ಡ ರಾಜಕೀಯ ಬಾಂಬ್ ಸಿಡಿಸಿದ್ರು. ಅಲ್ಲಿಂದ ಕಾಂಗ್ರೆಸ್ ಕೂಡಾ ಸ್ಯಾಂಟ್ರೋ ರವಿ ಬಿಜೆಪಿ ಸಚಿವರ ಜೊತೆಗೆ ಇರೋ, ಸಿಎಂ ಬೊಮ್ಮಾಯಿ ಪುತ್ರನ ಜೊತೆಗೆ ಇರೋ ಫೋಟೋಗಳನ್ನ ವಿಡಿಯೋಗಳನ್ನ, ಸ್ಯಾಂಟ್ರೋ ರವಿಯ ವಾಟ್ಸಾಪ್ ಚಾಟ್ಗಳನ್ನ ರಿಲೀಸ್ ಮಾಡಿತ್ತು.
ಇದನ್ನೂ ಓದಿ: ಕರ್ನಾಟಕಕ್ಕೆ ಸ್ಯಾಂಟ್ರೋ ರವಿ: ಗುಜರಾತ್ನಿಂದ ಬೆಂಗಳೂರಿಗೆ ಕರೆತಂದ ಪೊಲೀಸರು, ಅಜ್ಞಾತ ಸ್ಥಳದಲ್ಲಿ ವಿಚಾರಣೆ
ಜೊತೆಗೆ ಇವನು ಅದೆಂಥಾ ಕ್ರಿಮಿನಲ್ ಅನ್ನೋ ಒಂದೊಂದೇ ಸಂಗತಿಯಗಳು ಹೊರ ಬೀಳ್ತಾ ಹೋಗಿದ್ವು. ಪೊಲೀಸರೂ ಕೂಡಾ ಸ್ಯಾಂಟ್ರೋ ರವಿ ಬಂಧನಕ್ಕೆ ಇನ್ನಿಲ್ಲದಂತೆ ಹುಡುಕಾಡಿದ್ರು ಆದ್ರೂ ಸಣ್ಣ ಸುಳಿವು ಸಿಕ್ಕಿರಲಿಲ್ಲ. ಇದೀಗ ಗುಜರಾತ್ನ ಅಹಮದಾಬಾದ್ನಲ್ಲಿ ಸ್ಯಾಂಟ್ರೊ ರವಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಮೈಸೂರಿನಿಂದ ಎಸ್ಕೇಪ್ ಆಗಿದ್ದ ಸ್ಯಾಂಟ್ರೋ ರವಿ, ಕೇರಳಕ್ಕೆ ಹೋಗಿದ್ದ, ಪದೇ ಪದೆ ಸಿಮ್ ಚೇಂಜ್ ಮಾಡ್ತಾ, ಲೊಕೇಷನ್ ಬದಲಿಸ್ತಾ ಓಡಾಡ್ತಿದ್ದ..ಕೇರಳದಿಂದ ತೆಲಂಗಾಣಕ್ಕೆ ಹೋಗಿದ್ದನಂತೆ ಬಳಿಕ ಮಹಾರಾಷ್ಟ್ರದಲ್ಲೂ ತಲೆ ಮರೆಸಿಕೊಂಡಿದ್ದ. ಇಂದು ಗುಜರಾತ್ನ ಅಹಮದಾಬಾದ್ಗೆ ತೆರಳಿದ್ದ, ಅಲ್ಲೇ ಲಾಕ್ ಆಗಿದ್ದ.
ಸ್ಯಾಂಟ್ರೋ ರವಿಯ ಅತ್ಯಾಪ್ತ ಲಕ್ಷ್ಮೀತ್ ಅಲಿಯಾಸ್ ಚೇತನ್ ಲಾಕ್ ಮಾಡಿದ್ದೇ ಬಲು ರೋಚಕ. ರಾಯರ ಭಕ್ತರ ನೆಪದಲ್ಲಿ ರಾಯಚೂರು ಪೊಲೀಸರು ಫಿಲ್ಡ್ ಗೆ ಎಂಟ್ರಿ ಕೊಟ್ಟಿದ್ದರು. ಎಸ್ಪಿ ನಿಖಿಲ್, ಎಎಸ್ಪಿ, ಓರ್ವ ಡಿಎಸ್ಪಿ, ಮೂವರು ಸರ್ಕಲ್ ಇನ್ಸ್ ಪೆಕ್ಟರ್ ಸೇರಿ ಒಟ್ಟು 30 ಜನ ಖಾಕಿಧಾರಿಗಳ ಟೀಂ ಭರ್ಜರಿ ಕಾರ್ಯಾಚರಣೆ ನಡೆಸಿತ್ತು. ಜಸ್ಟ್ 3 ಗಂಟೆ 30 ನಿಮಿಷದ ಆಪರೇಷನ್ ನಲ್ಲಿ ಲಕ್ಷ್ಮೀತ್ @ ಚೇತನ್ ಚಿಕ್ಕಿಬಿದ್ದಿದ್ದಾನೆ. ಇದೇ ಗುರುವಾರ ಬೆಳಿಗ್ಗೆ 9.30ಕ್ಕೆ ಲಕ್ಷ್ಮೀತ್ ಮಂತ್ರಾಲಯಕ್ಕೆ ಆಗಮಿಸಿದ್ದ. ಕಾರ್ ನಲ್ಲಿ ಪತ್ನಿ, ಮಗಳು, ತಾಯಿ ಹಾಗೂ ಚಾಲಕನೊಂದಿಗೆ ಬಂದಿದ್ದ. ಬಳಿಕ ಖಾಸಗಿ ಲಾಡ್ಜ್ ನಲ್ಲಿ ಫ್ರೆಷ್ ಆಗಿ ರಾಯರ ದರ್ರಶನಕ್ಕೆ ತೆರಳಿದ್ದ. ಲಾಡ್ಜ್ನಿಂದ ಹಿಡಿದು ರಾಯರ ಸನ್ನಿಧಿವರೆಗೂ ಪೊಲೀಸರು ಕಾರ್ಯಕರಣೆ ನಡೆಸಿ ಈ ಆಪರೇಷನ್ ಮುಗಿಸಿದ್ದಾರೆ.
ಭಕ್ತರಂತೆ ಓಡಾಡಿಕೊಂಡಿದ್ದ ರಾಯಚೂರು ಪೊಲೀಸರು ಆತನ ಪ್ರತಿ ಹೆಜ್ಜೆಯನ್ನು ವಾಚ್ ಮಾಡಿ ಎಸ್ಪಿ ನಿಖಿಲ್ಗೆ ಪಿನ್ ಟು ಪಿನ್ ಅಪ್ಡೇಟ್ ನೀಡಿದ್ದಾರೆ. ಮಫ್ತಿಯಲ್ಲಿದ್ದ ಪೊಲೀಸ್ ಕೋಟೆ ಮಧ್ಯದಲ್ಲೇ ಓಡಾಡಿಕೊಂಡಿದ್ದ ಲಕ್ಷ್ಮೀತ್ ನಂತರ ರಾಯರ ದರ್ಶನ ಪಡೆದು ಮತ್ತೆ ಹೊಟೆಲ್ ಗೆ ಆಗಮಿಸಿದ್ದ. ಕೊನೆಗೆ ಮದ್ಯಾಹ್ನ 1:30ಕ್ಕೆ ಅದೇ ಖಾಸಗಿ ಹೊಟೆಲ್ ನಲ್ಲಿ ಲಾಕ್ ಆಗಿದ್ದಾನೆ. ಇದಾದ ಬಳಿಕ ರಾಯಚೂರು ಪೊಲೀಸರು ವಿಚಾರಣೆ ನಡೆಸಿ ಸತ್ಯ ಬಾಯ್ಬಿಡಿಸಿದ್ದಾರೆ. ವಿಚಾರಣೆ ವೇಳೆ ಸ್ಯಾಂಟ್ರೋ ರವಿ ಗುಜರಾತ್ನಲ್ಲಿರುವುದು ತಿಳಿದು ಬಂದಿದೆ.
ಮತ್ತೊಂದೆಡೆ ಸ್ಯಾಂಟ್ರೋ ರವಿ ಮೊದಲ ಪತ್ನಿ ಸ್ಯಾಂಟ್ರೋ ರವಿ ಸ್ನೇಹಿತರ ಬಗ್ಗೆ ಒಂದೊಂದೆ ಮಾಹಿತಿ ಬಿಚ್ಚಿಟ್ಟಿದ್ದರು. ಹೊರ ರಾಜ್ಯದ ನಾಲ್ಕು ಸ್ನೇಹಿತರ ಬಗ್ಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ಪೊಲೀಸರು ನಾಲ್ವರು ಸ್ನೇಹಿತರನ್ನ ಟ್ರ್ಯಾಕ್ ಮಾಡಿದರು. ಎಲ್ಲರೂ ಅವರವರ ಊರಲ್ಲೇ ಇದ್ದರು. ಆದ್ರೆ ಕೊಚ್ಚಿಯ ರಾಮ್ ಜೀ ಮಾತ್ರ ಕಳೆದ ನಾಲ್ಕು ದಿನದಿಂದ ಊರು ಬಿಟ್ಟಿದ್ದ. ಊರು ಬಿಟ್ಟಿದ್ದರಿಂದ ಅನುಮಾನ ಗಟ್ಟಿಮಾಡಿಕೊಂಡ ಪೊಲೀಸರು ರಾಮ್ ಜೀ ಮೊಬೈಲ್ ಟ್ರ್ಯಾಕಿಂಗ್ ಮಾಡಿದ್ದರು. ಎರಡು ದಿನ ರಾಮ್‌ಜೀ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ನಿನ್ನೆ ಬೆಳಗ್ಗೆ ರಾಮ್ ಜೀ ಫೋನ್ ಆನ್ ಆಗಿದೆ. ಈ ವೇಳೆ ಗುಜರಾತ್ ನ ಅಹಮದಾಬಾದ್ನಲ್ಲಿ ವರ್ಕ್ ತೋರಿಸಿದೆ. ತಕ್ಷಣ ಮೈಸೂರು ಪೊಲೀಸರು ಅಹಮದಾಬಾದ್ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ಬಾಂಬೆಯಲ್ಲಿದ್ದ ಒಂದು ಟೀಂ ಅಹಮದಾಬಾದ್ ಗೆ ಪಯಣ ಬೆಳೆಸಿದೆ.
ಅನುಮಾನದ ಮೇಲೆ ಅಹಮದಾಬಾದ್ ಗೆ ಪೊಲೀಸರು ತೆರಳಿದ್ದರು. ಮೈಸೂರು ಪೊಲೀಸರ ಬಳಿ ಸ್ಯಾಂಟ್ರೋ ರವಿಯ ಮೂರು ಫೋಟೋಗಳಿದ್ದವು. ಟೋಪನ್ ಇಲ್ಲದ ಸ್ಯಾಂಟ್ರೋ, ಗಡ್ಡಮೀಸೆ ಇಲ್ಲದ ಸ್ಯಾಂಟ್ರೋ, ಗಡ್ಡ ಬಿಟ್ಟ ಸ್ಯಾಂಟ್ರೋ ಹೀಗೆ ಸ್ಯಾಂಟ್ರೋ ರವಿಯ ಮೂರು ವೇಷಗಳ ಫೋಟೋಗಳಿದ್ದವು. ಪೊಲೀಸರ ಗೆಸ್ ನಂತೆ ಈ ಬಾರಿ ಕೂಡ ಸ್ಯಾಂಟ್ರೋ ರವಿ ವೇಶ ಬದಲಿಸಿದ್ದ. ಇದನ್ನು ಅರಿತಿದ್ದ ಮೈಸೂರು ಪೊಲೀಸರಿಗೆ ಸ್ಯಾಂಟ್ರೋ ಗುರುತು ಪತ್ತೆ ಹಚ್ಚಲು ಸಹಾಯವಾಗಿತ್ತು.
ಇದನ್ನೂ ಓದಿ: Santro Ravi: ವೈಟ್ ಕಾಲರ್ ಕ್ರಿಮಿನಲ್ ಸ್ಯಾಂಟ್ರೋ ರವಿ ಬಂಧನ: ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಿಷ್ಟು
ರಾಯಚೂರು ಎಸ್ಪಿ ನಿಖಿಲ್ ತಂಡ ಸ್ಯಾಂಟ್ರೊ ರವಿ ಓಡಾಟದ ಪ್ರಾಥಮಿಕ ಮಾಹಿತಿ ಕೊಟ್ಟಿದ್ದರು. ನಂತರ ಎಸ್ಪಿ ನಿಖಿಲ್ ತಂಡ ನೀಡಿದ್ದ ಮಾಹಿತಿ, ಮೈಸೂರು ಟೀಂ ಮಾಹಿತಿ ಮ್ಯಾಚ್ ಮಾಡಲಾಗಿದೆ. ಬಳಿಕ ಮೈಸೂರಿನಲ್ಲಿ ಆಪರೇಟ್ ಮಾಡ್ತಿದ್ದ ತಂಡಕ್ಕೆ ಎಸ್ಪಿ ನಿಖಿಲ್ ತಂಡ ಮಾಹಿತಿ ನೀಡಿ ಅಲರ್ಟ್ ಮಾಡಿದೆ. ನಿಖಿಲ್ ಟೀಮ್ ಮಾಹಿತಿ ಹಿನ್ನಲೆ ನಡು ದಾರಿಯಲ್ಲಿ ಸ್ಯಾಂಟ್ರೊ ರವಿ ಕಾರ್ ಟ್ರಾಕ್ ಮಾಡಲಾಗಿತ್ತು. ರವಿ ಕಾರ್ನ್ನು ಟ್ರಾಕ್ ಮಾಡಿ ರವಿ ಮತ್ತು ಶೃತೇಶ್ ಕುಮಾರ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಕರ್ನಾಟಕ ಪೊಲೀಸರ ವಶಕ್ಕೆ ನೀಡಲಾಗಿದೆ.
ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:06 pm, Sat, 14 January 23