Karnataka Rain: ಬೆಂಗಳೂರಿನ ಹಲವೆಡೆ ಸಂಜೆಯಿಂದ ಜೋರು ಮಳೆ; ಧರೆಗುರುಳಿದ ಮರದ ಕೊಂಬೆಗಳು, ಪರದಾಡುತ್ತಿರುವ ವಾಹನ ಸವಾರರು

| Updated By: ವಿವೇಕ ಬಿರಾದಾರ

Updated on: Aug 29, 2022 | 10:55 PM

ಬೆಂಗಳೂರು ನಗರದ ಹಲವೆಡೆ ಸಂಜೆಯಿಂದ ಧಾರಾಕಾರ ಮಳೆಯಾಗುತ್ತಿದ್ದು, ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಗೋಡಿ, ಚಂದಾಪುರ, ಸೂರ್ಯಸಿಟಿಯಲ್ಲಿ ಮಳೆಯಿಂದ ವಾಹನ ಸವಾರರು ಪರದಾಡುತ್ತಿದ್ದಾರೆ.

Karnataka Rain: ಬೆಂಗಳೂರಿನ ಹಲವೆಡೆ ಸಂಜೆಯಿಂದ ಜೋರು ಮಳೆ; ಧರೆಗುರುಳಿದ ಮರದ ಕೊಂಬೆಗಳು, ಪರದಾಡುತ್ತಿರುವ ವಾಹನ ಸವಾರರು
ಕಾರು ಮೇಲೆ ಬಿದ್ದ ಮರದ ಕೊಂಬೆ
Follow us on

ಬೆಂಗಳೂರು: ಬೆಂಗಳೂರು ನಗರದ ಹಲವೆಡೆ ಸಂಜೆಯಿಂದ ಧಾರಾಕಾರ ಮಳೆಯಾಗುತ್ತಿದ್ದು, ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಗೋಡಿ, ಚಂದಾಪುರ, ಸೂರ್ಯಸಿಟಿಯಲ್ಲಿ ಮಳೆಯಿಂದ ವಾಹನ ಸವಾರರು ಪರದಾಡುತ್ತಿದ್ದಾರೆ. ಮಳೆಯಿಂದಾಗಿ ಮಲ್ಲೇಶ್ವರಂನ 8ನೇ ಕ್ರಾಸ್‌ನಲ್ಲಿ ಮರದ ಕೊಂಬೆ ಧರೆಗುರುಳಿದೆ. ಕೊಂಬೆ ಬಿದ್ದ ಪರಿಣಾಮ ರಸ್ತೆ ಬದಿ ನಿಲ್ಲಿಸಿದ್ದ ಕಾರು ಜಖಂಗೊಂಡಿದೆ. ಕಾರಿನಲ್ಲಿ ಯಾರೂ ಇಲ್ಲದಿದ್ದರಿಂದ ಅನಾಹುತ ತಪ್ಪಿದೆ.

ಆರ್ ಆರ್ ನಗರದ ಬಲರಾಂ ಲೇಔಟ್‌ನಲ್ಲಿ ಬೈಕ್‌, ಕಾರುಗಳು ಜಲಾವೃತಗೊಂಡಿವೆ. ಬಾಣಸವಾಡಿಯ ಐಟಿಸಿ ಫ್ಯಾಕ್ಟರಿ ಬಳಿ ಮರದ ಕೊಂಬೆ ಧರೆಗುರುಳಿದೆ. ಕೆ.ಆರ್.ಮಾರ್ಕೆಟ್-ಚಿಕ್ಕಪೇಟೆ ರಸ್ತೆ ಜಲಾವೃತವಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ. ಶಿವಾನಂದ ಸರ್ಕಲ್‌, ನಾಯಂಡಹಳ್ಳಿ, ಲಗ್ಗೆರೆ ಸೇರಿದಂತೆ ನಗರದ ಬಹುತೇಕ ಅಂಡರ್‌ಪಾಸ್‌ಗಳಲ್ಲಿ ನೀರು ನಿಂತಿದೆ.

ಮಳೆಯಿಂದ ರಸ್ತೆಗಳು ಕೆರೆಯಂತಾಗಿದ್ದು, ಮೆಜೆಸ್ಟಿಕ್ ಸುತ್ತಮುತ್ತ ಜಿಟಿ ಜಿಟಿ ಮಳೆಯಿಂದ ಮನೆ ತಲುಪೋಕೆ ಮನೆ ತಲುಪೋಕೆ ವಾಹನ ಸವಾರರು ಪರದಾಡುತ್ತಿದ್ದಾರೆ. ಮಲ್ಲೇಶ್ವರಂನ ಕೆಲವು ರಸ್ತೆಗಳಲ್ಲಿ ನೀರು ತುಂಬಿದೆ. ಹಲವು ರಸ್ತೆಗಳಲ್ಲಿ ವಾಹನಗಳು ನಿಧಾನಗತಿಯಲ್ಲಿ ಚಲಿಸುತ್ತಿವೆ.

ಮೈಸೂರು ರಸ್ತೆ, ಶಿವಾನಂದ ವೃತ್ತ, ರಾಜರಾಜೇಶ್ವರಿನಗರದಲ್ಲಿ ಭಾರಿ ಮಳೆಯಿಂದ ರಸ್ತೆಗಳು ಜಲಾವೃತಗೊಂಡು, ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ವಿಜಯನಗರ, ಸಿಟಿ ಮಾರ್ಕೆಟ್‌, ಬಸವನಗುಡಿ, ಶಾಂತಿನಗರ, ಕೋರಮಂಗಲ, ಪ್ಯಾಲೇಸ್ ರಸ್ತೆ, ಮಲ್ಲೇಶ್ವರಂ, ಹೆಬ್ಬಾಳ ಸುತ್ತಮುತ್ತ ಮಳೆ ಯಾಗುತ್ತಿದ್ದು, ಬಾಣಸವಾಡಿಯ ಐಟಿಸಿ ಫ್ಯಾಕ್ಟರಿ ಬಳಿ ಮರದ ಕೊಂಬೆ ಧರೆಗುರುಳಿದೆ.

ಚಾಮರಾಜನಗರ ತಾಲೂಕಿನಲ್ಲಿ ಮಳೆಯಿಂದ ಕಾಲುವೆಗಳಿಗೆ ನುಗ್ಗಿದ ನೀರು

ಚಾಮರಾಜನಗರ: ಚಾಮರಾಜನಗರ ತಾಲೂಕಿನಲ್ಲಿ ಮಳೆಯಿಂದ ಕಾಲುವೆಗಳು ಉಕ್ಕಿ ಹರಿಯುತ್ತಿವೆ. ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರ ಜಲಾವೃತಗೊಂಡಿದ್ದು, ಕಾಲುವೆ ತುಂಬಿ ಹರಿಯುತ್ತಿರುವುದರಿಂದ ಮನೆಗಳಿಗೆ ನೀರು ನುಗ್ಗಿದೆ. ಜ್ಯೋತಿಗೌಡನಪುರಕ್ಕೆ ಸಂಪರ್ಕ ಕಡಿತಗೊಂಡಿದ್ದರಿಂದ ಜನರು ಪರದಾಡುತ್ತಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿಯಲ್ಲಿ ಮಳೆಯಿಂದ ವಿದ್ಯುತ್ ಕಂಬದ ಮೇಲೆ ಮರ ಉರುಳಿಬಿದ್ದಿದೆ. ಮರ ಬಿದ್ದಿದ್ದರಿಂದ ಟೆಂಪೊ ಮೇಲೆ ವಿದ್ಯುತ್​ ಲೈನ್ ಬಿದ್ದಿದೆ. ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದರಿಂದ ಅನಾಹುತ ತಪ್ಪಿದೆ.

ಖಾಸಗಿ ಆಸ್ಪತ್ರೆ , ಅಂಗಡಿ ಮುಗ್ಗಟ್ಟುಗಳಿಗೆ ನುಗ್ಗಿದ ನೀರು

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರದಲ್ಲಿ ಧಾರಾಕರ ಮಳೆ ಹಿನ್ನೆಲೆ ಖಾಸಗಿ ಆಸ್ಪತ್ರೆ, ಅಂಗಡಿ ಮುಗ್ಗಟ್ಟು ಸೇರಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ನಗರದ ಮಹಾ ಕಾಳಿ ರಸ್ತೆ, ಬಜಾರ್ ರಸ್ತೆಯ ಕೆಲವು ಅಂಗಡಿಗಳಿಗೆ ಕೂಡ ನೀರು ನುಗ್ಗಿದೆ. ಹಾಗೇ ವಾಪಸಂದ್ರದಲ್ಲಿ ಕೆಲವು ಮನೆಗಳಿಗೆ ನೀರು ನುಗ್ಗಿದೆ.

ರಾಯಚೂರು ಜಿಲ್ಲೆಯಲ್ಲಿ ಮಳೆಯಿಂದ ಅಪಾರ ಬೆಳೆ ಹಾನಿ

ರಾಯಚೂರು: ಲಿಂಗಸುಗೂರು ತಾಲೂಕಿನ ಪರಾಂಪುರ ತಾಂಡಾದಲ್ಲಿ ಮಳೆಯಿಂದ ಅಪಾರ ಬೆಳೆ ನಾಶವಾಗಿದೆ. ಸಣ್ಣ ಕಾಲುವೆ ಒಡೆದಿದ್ದರಿಂದ ಗದ್ದೆಗಳಿಗೆ ನೀರು ನುಗ್ಗಿದ್ದು, ಜೋಳ, ಸಜ್ಜೆ, ಹತ್ತಿ, ತೊಗರಿ ಬೆಳೆ ಸಂಪೂರ್ಣ ಜಲಾವೃತಗೊಂಡಿವೆ. ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದಿದ್ದ ಬೆಳೆ ನೀರುಪಾಲಾಗಿದೆ. ಬೆಳೆ ಪರಿಹಾರಕ್ಕೆ ನೀಡುವಂತೆ ಸರ್ಕಾರಕ್ಕೆ ರೈತರು ಆಗ್ರಹಿಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:55 pm, Mon, 29 August 22