ಏಳು ಶವಗಳನ್ನು ಸಾಗಿಸಲು ಪ್ರೆಸ್ ಬೋರ್ಡ್ ಹಾಕಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಇಂದುಶೇಖರ್: ಸ್ಫೋಟಕ ಸತ್ಯ ಬಯಲು
ರಾಜ್ಯದ ಸರಣಿ ಹತ್ಯೆ ಪ್ರಕರಣದಲ್ಲಿ ಏಳು ಶವಗಳನ್ನು ಸಾಗಿಸಲು ಆರೋಪಿ ಇಂದುಶೇಖರ್ 'ಪ್ರೆಸ್' ಹೆಸರನ್ನು ದುರ್ಬಳಕೆ ಮಾಡಿಕೊಂಡ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ತಪಾಸಣೆಯಿಂದ ತಪ್ಪಿಸಿಕೊಳ್ಳಲು ಪತ್ರಿಕೋದ್ಯಮದ ಬ್ಯಾನರ್, ಸ್ಟಿಕ್ಕರ್ ಬಳಸಿದ್ದನು. ಪೊಲೀಸರು ಆತನ ಮಾಸ್ಟರ್ ಪ್ಲ್ಯಾನ್ ಕಂಡು ದಂಗಾಗಿದ್ದಾರೆ. ಇದು ಕರ್ನಾಟಕದಲ್ಲಿ ನಡೆದ ಭಯಾನಕ ಅಪರಾಧದ ತನಿಖೆಯಲ್ಲಿ ಮಹತ್ವದ ತಿರುವು ನೀಡಿದೆ.

ಬೆಂಗಳೂರು, ನ.16: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಸರಣಿ ಹತ್ಯೆ ಹಾಗೂ ಏಳು ಶವಗಳ ನಿಗೂಢ ವಿಲೇವಾರಿ ಪ್ರಕರಣದ ತನಿಖೆಯಲ್ಲಿ ಪೊಲೀಸರೇ ದಂಗಾಗುವಂತಹ ಸ್ಫೋಟಕ ಮಾಹಿತಿಗಳು ಹೊರಬರುತ್ತಿವೆ. ಪ್ರಕರಣದ ಪ್ರಮುಖ ಆರೋಪಿ ಇಂದುಶೇಖರ್, ಹಂತ ಹಂತವಾಗಿ ಏಳು ಶವಗಳನ್ನು ಯಾರಿಗೂ ಕಿಂಚಿತ್ತೂ ಅನುಮಾನ ಬಾರದಂತೆ ಸಾಗಿಸಲು ಹೂಡಿದ್ದ ಮಾಸ್ಟರ್ ಪ್ಲ್ಯಾನ್ ಈಗ ಬಯಲಾಗಿದೆ. ತಪಾಸಣೆಯಿಂದ ತಪ್ಪಿಸಿಕೊಳ್ಳಲು ಆತ ಪತ್ರಿಕೋದ್ಯಮದ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಆರೋಪಿ ಇಂದುಶೇಖರ್ ಶವಗಳನ್ನು ಸಾಗಿಸಲು ತನ್ನ ಯೆಲ್ಲೋ ಬೋರ್ಡ್ ಟೊಯೋಟಾ ಇಟಿಯೋಸ್ ಕಾರನ್ನು ಬಳಸಿದ್ದನು. ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು ಕಾರು ತಡೆದು ತಪಾಸಣೆ ನಡೆಸದಿರಲಿ ಎಂಬ ಉದ್ದೇಶದಿಂದ, ಕಾರಿನ ಮುಂಭಾಗದ ಗ್ಲಾಸ್ ಮೇಲೆ ‘PRESS’ ಸಿಂಬಲ್ ಹಾಕಿಸಿಕೊಂಡಿದ್ದನು.
ಅಷ್ಟೇ ಅಲ್ಲದೆ, ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಪತ್ರಕರ್ತರ ಪ್ರವಾಸ ಎಂದು ಬರೆಸಿದ ದೊಡ್ಡ ಬ್ಯಾನರ್ ಒಂದನ್ನು ಮಾಡಿಸಿ, ಕಾರಿನ ನಂಬರ್ ಪ್ಲೇಟ್ ಕಾಣದಂತೆ ಅಡ್ಡಲಾಗಿ ಕಟ್ಟಿಕೊಂಡಿದ್ದನು. ಪತ್ರಿಕೆ ಹೆಸರಿನಲ್ಲಿ ಹೋದರೆ ಯಾರಿಗೂ ಅನುಮಾನ ಬರುವುದಿಲ್ಲ ಎಂಬ ಲೆಕ್ಕಾಚಾರ ಆತನದ್ದಾಗಿತ್ತು. ಒಂದು ವೇಳೆ ದಾರಿಯಲ್ಲಿ ಯಾರಾದರೂ ಅನುಮಾನಗೊಂಡು ಪ್ರಶ್ನಿಸಿದರೆ, ತಕ್ಷಣವೇ ತನ್ನ ಬಳಿಯಿದ್ದ ಠಾಣಾ ವರದಿಯ ಪತ್ರಿಕೆ ಹಾಗೂ ವಿಸಿಟಿಂಗ್ ಕಾರ್ಡ್ ತೋರಿಸಿ ನಾವು ಪತ್ರಕರ್ತರು, ಪ್ರವಾಸಕ್ಕೆ ಹೋಗುತ್ತಿದ್ದೇವೆ ಎಂದು ನಂಬಿಸಿ ಸುಲಭವಾಗಿ ಪಾರಾಗುತ್ತಿದ್ದನು.
ಇದನ್ನೂ ಓದಿ: 7 ಮಂದಿ ಕೊಲೆ ಕೇಸ್: ಇಂದುಶೇಖರ್ ಮಗಳು ಈಗ ಅಪ್ರಾಪ್ತೆ ಅಲ್ಲ; ಗೊಂದಲದಲ್ಲಿ ಪೊಲೀಸರು, ತಜ್ಞರ ಮೊರೆ
ಪ್ರಕರಣದ ಹಿಂದಿನ ಹಿನ್ನೆಲೆ
ಈ ಹಿಂದೆ ನಡೆದ ಸರಣಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕರು ಒಟ್ಟು ಏಳು ಮಂದಿಯನ್ನು ಕೊಂದು ಶವಗಳನ್ನು ವಿವಿಧೆಡೆ ಎಸೆದು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದರು. ಒಂದೇ ಬಾರಿ ಸಾಗಿಸಿದರೆ ಸಿಕ್ಕಿಬೀಳುವ ಭಯದಿಂದ ಹಂತ ಹಂತವಾಗಿ ಈ ಕೃತ್ಯ ಎಸಗಲಾಗಿತ್ತು. ಆರೋಪಿ ಇಂದುಶೇಖರ್ ಇದೇ ರೀತಿಯ ಬ್ಯಾನರ್ ಕಟ್ಟಿಕೊಂಡು ಸಕಲೇಶಪುರ ಘಾಟಿ, ಮಂಗಳೂರು ಸೇರಿದಂತೆ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ರಾಜಾರೋಷವಾಗಿ ಓಡಾಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ರಾಜ್ಯದ ಇತರ ಭಾಗಗಳಲ್ಲೂ ಇದೇ ತಂತ್ರ ಬಳಸಿ ಶವಗಳನ್ನು ಸಾಗಿಸಿರುವ ಬಗ್ಗೆ ಪೊಲೀಸರು ಬಲವಾದ ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದು, ತೀವ್ರ ವಿಚಾರಣೆ ಮುಂದುವರಿದಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




