7 ಮಂದಿ ಕೊಲೆ ಕೇಸ್: ಇಂದುಶೇಖರ್ ಮಗಳು ಈಗ ಅಪ್ರಾಪ್ತೆ ಅಲ್ಲ; ಗೊಂದಲದಲ್ಲಿ ಪೊಲೀಸರು, ತಜ್ಞರ ಮೊರೆ
ಇಡೀ ರಾಜ್ಯವನ್ನು ಬೆಚ್ಚಿಬಿಳಿಸಿರುವ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದಿರುವ 7 ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಂದೇ ರಹಸ್ಯಗಳು ಹೊರ ಬರ್ತಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇನ್ನು ಪ್ರಕರಣದಲ್ಲಿ ಭಾಗಿಯಾಗಿರುವ ಅಪ್ರಾಪ್ತ ಬಾಲಕಿ ವಯಸ್ಸಿನ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆದುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ.

ಮುಖ್ಯಾಂಶಗಳು
- ಒಂದೇ ಕುಟುಂಬದ 7 ಜನರ ಹತ್ಯೆ ಪ್ರಕರಣ
- ಆರೋಪಿ ಇಂದುಶೇಖರ್ ಮಗಳಿಗೆ 18 ವರ್ಷ
- ಅಪ್ರಾಪ್ತ ಬಾಲಕಿ ವಯಸ್ಸಿನ ಬಗ್ಗೆ ಕಾನೂನು ತಜ್ಞರ ಮೊರೆಹೋದ ಪೊಲೀಸರು
ಬೆಂಗಳೂರು, ನವೆಂಬರ್ 12: ರಾಜಾಜಿನಗರದಲ್ಲಿ ನಡೆದ ಏಳು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿತ್ಯ ಒಂದಿಲ್ಲೊಂದು ರಹಸ್ಯಗಳು ಬಯಲಾಗುತ್ತಿದೆ. ಇತ್ತೀಚೆಗೆ ಆಡಿಯೋವೊಂದು ವೈರಲ್ ಆಗಿತ್ತು. ಸದ್ಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಪ್ರಕರಣದಲ್ಲಿ ಭಾಗಿಯಾದ ಅಪ್ರಾಪ್ತ ಬಾಲಕಿ ವಯಸ್ಸಿನ ಬಗ್ಗೆ ಕಾನೂನು ತಜ್ಞರ ಮೊರೆ ಹೋಗಿದ್ದಾರೆ. ಅಪ್ರಾಪ್ತ ಬಾಲಕಿಗೆ ಈಗ 18 ವರ್ಷ ತುಂಬಿದ್ದು, ಪೊಲೀಸರು ದಾಖಲೆಗಳ ತಲಾಶ್ ನಡೆಸಿದ್ದಾರೆ.
ಕಾನೂನು ಸಲಹೆ ಪಡೆಯಲು ಮುಂದಾದ ಪೊಲೀಸರು
ಪ್ರಕರಣದ ಆರೋಪಿ ಇಂದುಶೇಖರ್ ಮಗಳು ಕೊಲೆ ನಡೆಯುವಾಗ ಅಪ್ರಾಪ್ತ ಬಾಲಕಿ ಆಗಿದ್ದಳು. ಆದರೆ ಇತ್ತೀಚೆಗಷ್ಟೇ ಬಾಲಕಿಗೆ 18 ವರ್ಷ ತುಂಬಿದೆ. ಆಕೆಯನ್ನ ಅಪ್ರಾಪ್ತೆಯಾಗಿ ಪರಿಗಣಿಸಬೇಕಾ ಅಥವಾ ಪ್ರಾಪ್ತೆಯಾಗಿ ಪರಿಗಣಿಸಬೇಕೆ ಎಂಬ ಗೊಂದಲ ಮೂಡಿದೆ. ಹೀಗಾಗಿ ಕಾನೂನು ಸಲಹೆ ಪಡೆಯಲು ಪೊಲೀಸರು ಮುಂದಾಗಿದ್ದು, ಕೋರ್ಟ್ ತೀರ್ಪುಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ 7 ಮಂದಿ ಕೊಲೆ ಪ್ರಕರಣ: ಸಂಬಂಧಿಕರ ಕರೆಗಳಿಗೆ ಬಾಲಕನಿಂದ ಉತ್ತರ ಕೊಡಿಸಿದ್ದ ಆರೋಪಿ, ಆಡಿಯೋ ವೈರಲ್!
16 ರಿಂದ 18 ವರ್ಷದ ಅಪ್ರಾಪ್ತರು ಕೊಲೆ ಕೇಸ್ಗಳಲ್ಲಿ ಭಾಗಿಯಾಗಿರುವ ಪ್ರಕರಣಗಳು, ಅವರ ಮಾನಸಿಕ ಸಾಮರ್ಥ್ಯ, ಅಪರಾಧದ ಪರಿಣಾಮ ಅರ್ಥ ಮಾಡಿಕೊಂಡಿದ್ದಾರಾ ಅಂತ ಪರಿಶೀಲನೆ ಮಾಡಬಹುದು. ಒಂದು ವೇಳೆ ಅವರು ಅರ್ಥ ಮಾಡಿಕೊಂಡಿದ್ದಾರೆ ಅಂತ ತಿಳಿದರೆ ವಯಸ್ಕರಂತೆ ವಿಚಾರಣೆ ಮಾಡಲು ಬಾಲ ನ್ಯಾಯಾಲಯಕ್ಕೆ ಮನವಿ ಸಲ್ಲಿಸಬಹುದು. ಜುವೆನೈಲ್ ಜಸ್ಟೀಸ್ ಬೋರ್ಡ್ ಇದಕ್ಕೆ ಅನುಮತಿ ನೀಡಿದರೆ ಬಾಲಕಿ ವಿಚಾರಣೆ ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪೊಲೀಸರು ಸದ್ಯ ಕಾನೂನಿನ ಸಲಹೆ ಪಡೆಯಲು ಮುಂದಾಗಿದ್ದಾರೆ.
ಸದ್ಯ ಅಪ್ರಾಪ್ತ ಬಾಲಕಿ ಮೇಲೆ ಇರುವ ಆರೋಪ ಏನು ಗೊತ್ತಾ?
ಪೊಲೀಸರ ಮಾಹಿತಿ ಪ್ರಕಾರ ಸಂಬಂಧಿಕರನ್ನು ಮನೆಗೆ ಕರೆಸಲು ಸಹಾಯ ಮಾಡಿದ್ದಾಳೆ. ಮೃತದೇಹಗಳನ್ನು ಪ್ಯಾಕ್ ಮಾಡಿ, ಸಾಗಿಸಲು ಸಹಾಯ ಮಾಡಿದ್ದಾಳೆ. ಆರೋಪಿ ತಂದೆ ಅವಳನ್ನು ದಾರಿ ತಪ್ಪಿಸಿದ್ದಾನೆ. ಮಾಂಸದ ಊಟ ತಯಾರಿಸುವಲ್ಲಿ ಅವಳ ಪಾತ್ರವಿದೆ. ಸದ್ಯ ಅಪ್ರಾಪ್ತೆ ಬಾಲಮಂದಿರದಲ್ಲಿದ್ದಾಳೆ. ಇತ್ತ ತಂದೆ ಇಂದುಶೇಖರ್ ಪೊಲೀಸ್ ಕಸ್ಟಡಿಯಲ್ಲಿದ್ದು, ಗ್ರಿಲ್ ಮುಂದುವರೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
