
ಬೆಂಗಳೂರು, ಡಿಸೆಂಬರ್ 01: ರಕ್ಷಣಾ ವ್ಯವಸ್ಥೆಗೆ ನೆರವಾಗಬಲ್ಲ ದೇಶದ ಮೊಟ್ಟ ಮೊದಲ ‘ಸ್ವದೇಶಿ ರಕ್ಷಣಾ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ’ವನ್ನು ಕರ್ನಾಟಕ ಮೂಲದ ಸ್ಟಾರ್ಟ್‌ಅಪ್ ಕಂಪನಿ ನ್ಯೂರಾಲಿಕ್ಸ್ ಎಐ ಅಭಿವೃದ್ಧಿಪಡಿಸಿದೆ. ದೆಹಲಿಯ ಮಾಣಿಕ್ ಶಾ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ‘ಚಾಣಕ್ಯ ಡಿಫೆನ್ಸ್’ ಸಂವಾದದಲ್ಲಿ ಭಾರತದ ಮೊದಲ ಸಂಪೂರ್ಣ ‘ಸ್ವದೇಶೀ ರಕ್ಷಣಾ ಎಐ-ಏಸ್-ಎ-ಸರ್ವಿಸ್’ (ALAAS) ಅನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಿಡುಗಡೆ ಮಾಡಿದ್ದಾರೆ.
ಕನ್ನಡಿಗರೇ ಸ್ಥಾಪಿಸಿದ್ದ ನ್ಯೂರಾಲಿಕ್ಸ್ ಡೀಪ್ ಟೆಕ್ ಕಂಪನಿ ರಕ್ಷಣಾ ಸಚಿವಾಲಯದ IDEX ADITY 2.0 ಉಪಕ್ರಮದಡಿ ಭಾರತೀಯ ಸೇನೆಗಾಗಿ ಈ ಎಐ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಇದು ಸ್ವದೇಶಿ ಆವಿಷ್ಕಾರದ ಮೂಲಕ ಮುಂದಿನ ತಲೆಮಾರಿನ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶ ಹೊಂದಿರೋದಾಗಿ ನ್ಯೂರಾಲಿಕ್ಸ್ ಎಐ ಸಹ-ಸ್ಥಾಪಕರಾದ ವಿಕ್ರಂ ಜಯರಾಂ ಹೇಳಿದ್ದಾರೆ. ಸ್ವದೇಶಿ ರಕ್ಷಣಾ ಎಐ ಅಭಿವೃದ್ಧಿಯು ದೇಶದ ಸೈನ್ಯವನ್ನು ಬಲಪಡಿಸಿದೆ.‘ಆತ್ಮನಿರ್ಭರ ಭಾರತ’ದ ಹಾದಿಗೆ ಇದು ಮತ್ತಷ್ಟು ಶಕ್ತಿ ನೀಡಿದೆ ಎಂದು ರಾಜನಾಥ್ ಸಿಂಗ್ ಕೂಡ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಇಂಟರ್ನೆಟ್ ಇಲ್ಲದೆಯೇ ನಿಮ್ಮ ಫೋನ್‌ನಲ್ಲಿ ಲೈವ್ ಟಿವಿ ಉಚಿತವಾಗಿ ವೀಕ್ಷಿಸಬಹುದು; ಹೇಗೆ ಗೊತ್ತೇ?
ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರಲು ಹಾಗೂ ರಾಷ್ಟ್ರ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ರಕ್ಷಣಾ ಸಚಿವಾಲಯವು IDEX ADITY 2.0 ಮೂಲಕ ದೇಶದ ಸ್ಟಾರ್ಟ್‌ಅಪ್‌ಗಳು ಮತ್ತು ಆವಿಷ್ಕಾರ ಮಾಡುವವರಿಗೆಅವಕಾಶ ನೀಡುತ್ತಿದೆ. ಈ ಅವಕಾಶವನ್ನು ಬಳಸಿಕೊಂಡು, ನ್ಯೂರಾಲಿಕ್ಸ್ ಎಐ ‘ಸ್ವದೇಶೀ ರಕ್ಷಣಾ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ’ವನ್ನು ಅಭಿವೃದ್ಧಿಪಡಿಸಿದೆ. ಇದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಈ ತಂತ್ರಜ್ಞಾನವನ್ನು ಸ್ವದೇಶಿ ಲಾರ್ಜ್ ಲ್ಯಾಂಗ್ವೇಜ್ ಮಾದರಿ (LLM) ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ನೆರವಾಗುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ. ಕಮಾಂಡ್ ಸಪೋರ್ಟ್, ಡಾಕ್ಯುಮೆಂಟ್ ಇಂಟೆಲಿಜೆನ್ಸ್, ಸ್ಪೀಚ್ ಇಂಟರ್ಫೇಸ್,ಆಪರೇಷನಲ್ ಎನಾಲಿಟಿಕ್ಸ್, ವಿದೇಶಿ ಕ್ಲೌಡ್ ಸೇವೆಗಳು, ಇಂಟರ್‌ನೆಟ್ ಸಂಪರ್ಕ, ಡೇಟಾ ಇಂಟಿಗ್ರೇಶನ್ ಮುಂತಾದವುಗಳಲ್ಲಿ ಈ ಎಐ ತಂತ್ರಜ್ಞಾನ ನೆರವಾಗಲಿದೆ. ಅಲ್ಲದೆ, ಆಮದು ತಂತ್ರಜ್ಞಾನಗಳ ಅವಲಂಬನೆಯನ್ನು ಇದು ಕಡಿಮೆ ಮಾಡಲಿದೆ ಎಂದು ನ್ಯೂರಾಲಿಕ್ಸ್ ಪ್ರಕಟಣೆ ತಿಳಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:58 am, Mon, 1 December 25