Karnataka Traders’ strike: ಇಂದಿನಿಂದ ಹಾಲು, ಹಾಲಿನ ಉತ್ಪನ್ನ ಮಾರಾಟ ಬಂದ್, 25 ರಂದು ವರ್ತಕರ ಮುಷ್ಕರ

ಸಣ್ಣಪುಟ್ಟ ವ್ಯಾಪಾರಿಗಳಿಗೆ ಕೊಡುತ್ತಿರುವ ಜಿಎಸ್​ಟಿ ನೋಟಿಸ್ ರಾಜ್ಯದಲ್ಲಿ ತಲ್ಲಣ ಸೃಷ್ಟಿ ಸುತ್ತಿದೆ. ಲಕ್ಷಾಂತರ ರೂಪಾಯಿ ತೆರಿಗೆ ಪಾವತಿಸಬೇಕು ಎಂಬ ನೋಟಿಸ್ ಕಂಡು ವ್ಯಾಪಾರಿಗಳು ಶಾಕ್ ಆಗಿದ್ದಾರೆ. ಇದನ್ನ ವಿರೋಧಿಸಿ ಪ್ರತಿಭಟನೆಗೂ ಕರೆ ಕೊಟ್ಟಿದ್ದಾರೆ. ಇದರಿಂದಾಗಿ ಇಂದಿನಿಂದ ಮೂರು ದಿನ ಹಾಲು, ಹಾಲಿನ ಉತ್ಪನ್ನ ಮಾರಾಟ ಭಾಗಶಃ ಬಂದ್ ಆಗಲಿದೆ.

Karnataka Traders’ strike: ಇಂದಿನಿಂದ ಹಾಲು, ಹಾಲಿನ ಉತ್ಪನ್ನ ಮಾರಾಟ ಬಂದ್, 25 ರಂದು ವರ್ತಕರ ಮುಷ್ಕರ
ಸಾಂದರ್ಭಿಕ ಚಿತ್ರ
Edited By:

Updated on: Jul 23, 2025 | 8:06 AM

ಬೆಂಗಳೂರು, ಜುಲೈ 23: ಈಗ ಎಲ್ಲೇ ವ್ಯಾಪಾರ ಮಾಡಿದರೂ ಗ್ರಾಹಕರು ಪಾವತಿ ಮಾಡುವುದು ಯುಪಿಐ (UPI) ಮೂಲಕವೇ. ಒಂದು ರೂಪಾಯಿ ಬೆಂಕಿ ಪೊಟ್ಟಣದಿಂದ ಹಿಡಿದು ಲಕ್ಷಾಂತರ ರೂಪಾಯಿ ಪಾವತಿ ಕೂಡ ಇದೇ ಮಾದರಿಯಲ್ಲಿ ಆಗುತ್ತದೆ. ಆದರೆ ಕಳೆದ ಕೆಲವು ದಿನಗಳಿಂದ ಯುಪಿಐ ಮೂಲಕ ಹಣ ಸ್ವೀಕರಿಸುತ್ತಿರುವ ವರ್ತಕರಿಗೆ ತೆರಿಗೆ ನೋಟಿಸ್ (Tax Notice) ಜಾರಿ ಮಾಡಲಾಗುತ್ತಿದೆ. ಲಕ್ಷ ಲಕ್ಷ ತೆರಿಗೆ ನೋಟಿಸ್ ನೋಡಿ ವ್ಯಾಪಾರಿಗಳು ದಿಕ್ಕೆಟ್ಟು ಹೋಗಿದ್ದಾರೆ. ಇದರ ವಿರುದ್ಧ ಸಿಡಿದೆದ್ದಿರುವ ಅಂಗಡಿ ಮಾಲೀಕರು, ಇಂದಿನಿಂದ ಹೋರಾಟಕ್ಕೆ ಸಜ್ಜಾಗಿದ್ದಾರೆ.

ವಾಣಿಜ್ಯ ತೆರಿಗೆ ಇಲಾಖೆಯ ನೋಟಿಸ್ ವಿರುದ್ಧ ವರ್ತಕರು ಸಮರ ಸಾರಿದ್ದಾರೆ. ಇಂದಿನಿಂದ ಹಾಲು, ಹಾಲಿನ ಉತ್ಪನ್ನ ಮಾರಾಟ ಬಂದ್ ಮಾಡಲಾಗುತ್ತದೆ. ಹಾಲು ಬಳಸದೆ ಟೀ-ಕಾಫಿ ಮಾಡುವ ಮೂಲಕ ಆಕ್ರೋಶ ಹೊರಹಾಕಲಿದ್ದಾರೆ. ಪ್ರತಿಭಟನಾರ್ಥವಾಗಿ ಕಪ್ಪು ಪಟ್ಟಿ ಧರಿಸಿ ಇತರೆ ವಸ್ತುಗಳ ಮಾರಾಟ ಮಾಡಲಾಗುತ್ತದೆ. ಜುಲೈ 25ರಂದು ಅಂಗಡಿ ಬಂದ್ ಮಾಡಿ, ಕುಟುಂಬ ಸಮೇತರಾಗಿ ಫ್ರೀಡಂ ಪಾರ್ಕ್​​ನಲ್ಲಿ ಬೃಹತ್ ಹೋರಾಟ ನಡೆಸಲಿದ್ದಾರೆ.

ತೆರಿಗೆ ನೋಟಿಸ್ ಗೊಂದಲ ಆಗಿದ್ಯಾಕೆ?

ಸಣ್ಣಪುಟ್ಟ ವ್ಯಾಪಾರಿಗಳಿಗೆ ವಾಣಿಜ್ಯ ಪಾವತಿಯ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಕಳೆದ ನಾಲ್ಕು ವರ್ಷಗಳ ತೆರಿಗೆ ಪಾವತಿ ಮಾಡಬೇಕೆಂದು ಲಕ್ಷ, ಕೋಟಿ ರೂಪಾಯಿ ಲೆಕ್ಕದಲ್ಲಿ ಕಳೆದ ಹದಿನೈದು ದಿನಗಳಿಂದ ಒಂದೇ ಬಾರಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡುತ್ತಿದೆ. ಈಗ ನೀಡಿರುವ ನೋಟಿಸ್ 2021-22 ರಲ್ಲೇ ನೀಡಿದ್ದರೆ, ಇಷ್ಟು ಗೊಂದಲ ಆಗುತ್ತಿರಲಿಲ್ಲ ಅನ್ನಿಸುತ್ತದೆ. ವಾಣಿಜ್ಯ ತೆರಿಗೆ ಇಲಾಖೆಗೆ ಶೇಕಡಾ 90 ರಷ್ಟು ವ್ಯಾಪಾರಿಗಳು ತೆರಿಗೆ ಪಾವತಿ ಮಾಡುತ್ತಿದ್ದಾರೆ. ಹಾಗಾಗಿ ವ್ಯಾಪಾರಿಗಳಿಗೆ ತೆರಿಗೆ ಪಾವತಿ ಮಾಡಿಸಲು ಸರಿಯಾದ ಸಲಹೆ ಸೂಚನೆ ನೀಡುವಂತೆ ಅಧಿಕಾರಿಗಳಿಗೆ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ. ಈ ಮಾಧ್ಯಮ ಪ್ರಕಟಣೆಯನ್ನು ಈ ಹಿಂದೆಯೇ ಹೊರಡಿಸಿದ್ದರೆ, ಕಮರ್ಷಿಯಲ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ಅಧಿಕಾರಿಗಳು, ಅಂಗಡಿ ಮಾಲೀಕರಿಗೆ ಟ್ಯಾಕ್ಸ್ ಪಾವತಿ ಮಾಡುವ ಬಗ್ಗೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು.

ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತರು ಹೇಳಿದ್ದೇನು?

ಈ ಬಗ್ಗೆ ಸ್ಪಷ್ಟನೆ ನೀಡಿರುವ ಕಮರ್ಷಿಯಲ್ ಟ್ಯಾಕ್ಸ್ ಡಿಪಾರ್ಟ್‌ಮೆಂಟ್‌ನ ಅಡಿಷನಲ್ ಕಮಿಷನರ್ ಚಂದ್ರಶೇಖರ್ ನಾಯ್ಕ್, ಒಟ್ಟು ವಹಿವಾಟನ್ನು ಗಮನಿಸಿ ನೋಟಿಸ್ ಕೊಡಲಾಗಿದೆ. ದಾಖಲೆ ಸಮೇತ ಸ್ಪಷ್ಟನೆ ನೀಡಿದರೆ ಟ್ಯಾಕ್ಸ್ ಕಟ್ಟುವ ಪ್ರಮಯೇ ಬರಲ್ಲ ಎಂದು ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ಜೋರಾದ ರಾಜಕೀಯ ಜಟಾಪಟಿ

ಈ ನಡುವೆ ರಾಜಕೀಯ ಜಟಾಪಟಿಯೂ ಜೋರಾಗಿ ನಡೆಯುತ್ತಿದೆ. ಸೋಮವಾರವಷ್ಟೇ ತೆರಿಗೆ ಇಲಾಖೆಯ ನೋಟಿಸ್ ಬಗ್ಗೆ ಡಿಸಿಎಂ ಡಿಕೆ ಪ್ರತಿಕ್ರಿಯಿಸಿದ್ದರು. ಬಿಜೆಪಿ ಬಾಳೆಹಣ್ಣು ತಿಂದು ನಮ್ಮ ಬಾಯಿಗೆ ಒರೆಸುತ್ತಿದೆ ಎಂದಿದ್ದರು. ಈ ಮಾತಿಗೆ ಬಿಜೆಪಿ ಎಂಎಲ್​ಸಿ ಸಿಟಿ ರವಿ ತಿರುಗೇಟು ಕೊಟ್ಟಿದ್ದಾರೆ. ಕೋತಿ ಕೆಲಸ ಮಾಡಿದ್ದು ನೀವು ಎಂದು ಡಿಕೆಶಿಗೆ ತಿರುಗೇಟು ಕೊಟ್ಟಿದ್ದಾರೆ.

ಇದನ್ನೂ ಓದಿ: ತಳ್ಳುವ ಗಾಡಿ ವ್ಯಾಪಾರಿಗೂ ವಾಣಿಜ್ಯ ಇಲಾಖೆ ನೋಟಿಸ್​: ಮತ್ತೆ ನಗದು ವ್ಯವಹಾರದತ್ತ ಮುಖಮಾಡಿದ ವರ್ತಕರು

ಮತ್ತೊಂದೆಡೆ, ವಾಣಿಜ್ಯ ತೆರಿಗೆ ಇಲಾಖೆ ರಾಜ್ಯ ಸರ್ಕಾರದ ಅಡಿ ಬರುತ್ತದೆ ಎಂಬುದು ಬಿಜೆಪಿ ಶಾಸಕ ಎಸ್ ಸುರೇಶ್ ಕುಮಾರ್ ವಾದ. ಇಲಾಖೆ ನಮ್ಮದಾದರೂ ಮಾನದಂಡ ಕೇಂದ್ರದ್ದು ಎಂಬುದು ಕಾಂಗ್ರೆಸ್​​ನ ಪ್ರತಿವಾದ.

ಇದನ್ನೂ ಓದಿ: ಜುಲೈ 25ಕ್ಕೆ ವರ್ತಕರ ಮುಷ್ಕರ: ಏನೇನಿರಲಿದೆ, ಏನೇನಿರಲ್ಲ? ಇಲ್ಲಿದೆ ಮಾಹಿತಿ

ರಾಜಕೀಯ ಜಟಾಪಟಿಯ ನಡುವೆ ಕೆಲವು ವ್ಯಾಪಾರಿಗಳು ಯುಪಿಐ ಬಳಕೆಗೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಚಿಕ್ಕಬಳ್ಳಾಪುರದಲ್ಲಿ ಜನ ಮತ್ತೆ ಮತ್ತೆ ಎಟಿಎಂಗಳ ಮೊರೆ ಹೋಗಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ