ವಿಐಪಿ ಸಂಚಾರದ ವೇಳೆ ಸೈರನ್ ಬಳಕೆ ಕಡಿಮೆ ಮಾಡಲು ಕರ್ನಾಟಕ ಪೊಲೀಸರಿಗೆ ಆದೇಶ: ಕಾರಣ ಇಲ್ಲಿದೆ
ಕರ್ನಾಟಕ ಪೊಲೀಸರಿಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ. ಎಂಎ ಸಲೀಂ ಮಹತ್ವದ ಸೂಚನೆ ನೀಡಿದ್ದಾರೆ. ಇನ್ನುಮುಂದೆ ಗಣ್ಯ ವ್ಯಕ್ತಿಗಳ ಸಂಚಾರದ ಸಂದರ್ಭದಲ್ಲಿ ಸೈರನ್ ಬಳಕೆ ಕಡಿಮೆ ಮಾಡುವಂತೆ ಅವರು ನಿರ್ದೇಶನ ನೀಡಿದ್ದಾರೆ. ಇದಕ್ಕೆ ಅವರು ಕೊಟ್ಟ ಕಾರಣಗಳೇನು? ಯಾವ ವಾಹನಗಳ ಸಂಚಾರದ ವೇಳೆ ಸೈರನ್ ಬಳಕೆಗೆ ಅನುಮತಿ ಇದೆ? ಮಾಹಿತಿ ಇಲ್ಲಿದೆ.

ಬೆಂಗಳೂರು, ಜುಲೈ 23: ಸಾರ್ವಜನಿಕ ಸ್ಥಳಗಳಲ್ಲಿ ಗಣ್ಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಶಬ್ದ ಮಾಲಿನ್ಯವನ್ನು ಕಡಿಮೆ ಮಾಡುವ ಉದ್ದೇಶದೊಂದಿಗೆ ಕರ್ನಾಟಕ ಪೋಲಿಸರಿಗೆ (Karnataka Police) ಮಾಹತ್ವದ ಆದೇಶ ಹೊರಡಿಸಲಾಗಿದೆ. ವಿವಿಐಪಿಗಳ ಸಂಚಾರದ ಸಂದರ್ಭದಲ್ಲಿ ಸೈರನ್ಗಳ ಬಳಕೆಯನ್ನು (Siren Use) ಕಡಿಮೆ ಮಾಡುವಂತೆ ರಾಜ್ಯದ ಎಲ್ಲಾ ಪೊಲೀಸ್ ಘಟಕಗಳಿಗೆ ಪೊಲೀಸ್ ಮಹಾ ನಿರ್ದೇಶಕ ಡಾ. ಎಂಎ ಸಲೀಂ (Dr AM Saleem) ಸೂಚಿಸಿದ್ದಾರೆ.
ಸೈರನ್ ಬಳಕೆ ಕಡಿಮೆ ಮಾಡುವ ಆದೇಶಕ್ಕೆ ಕಾರಣವೇನು?
ಈ ವಿಚಾರವಾಗಿ ಸಲೀಂ ಸುತ್ತೋಲೆ ಹೊರಡಿಸಿದ್ದು, ವಿವಿಐಪಿಗಳ ಸಂಚಾರದ ವೇಳೆ ಅತಿಯಾದ ಸೈರನ್ ಬಳಕೆಯಿಂದ ಅನೇಕ ಸವಾಲುಗಳು ಎದುರಾಗುತ್ತಿವೆ. ಅನಗತ್ಯವಾಗಿ ಸೈರನ್ ಬಳಕೆ ಮಾಡುವುದರಿಂದ ಗಣ್ಯರು ಯಾವ ರಸ್ತೆಯಲ್ಲಿ ಚಲಿಸುತ್ತಿದ್ದಾರೆ ಎಂಬ ಕುರಿತು ಅಗತ್ಯವಿಲ್ಲದವರಿಗೆ ಕೂಡ ಮಾಹಿತಿ ರವಾನೆಯಾಗುತ್ತದೆ. ಇದರಿಂದ ವಿಐಪಿಗಳಿಗೆ ಮತ್ತು ಅವರ ಭದ್ರತೆಗೆ ತೊಂದರೆ ಉಂಟಾಗುವ ಅಪಾಯ ಕೂಡ ಇದೆ ಎಂದು ಅವರು ಉಲ್ಲೇಖಿಸಿದ್ದಾರೆ.
‘ದಿಢೀರ್ ಸೈರನ್ನಿಂದ ಸಂಚಾರ ಗೊಂದಲ’
ಸಾರ್ವಜನಿಕರ ರಸ್ತೆಗಳಲ್ಲಿ ದಿಢೀರಾಗಿ ಸೈರನ್ ಮೊಳಗಿಸುವುದರಿಂದ ಬೇರೆ ವಾಹನಗಳ ಚಾಲಕರಿಗೆ ಗೊಂದಲ ಉಂಟಾಗುವ ಸಾಧ್ಯತೆ ಕೂಡ ಇದೆ. ಇದರಿಂದಾಗಿ ಅವರು ಅಡ್ಡಾದಿಡ್ಡಿ ವಾಹನ ಚಲಾಯಿಸಿ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ ಎಂದು ಅವರು ಸುತ್ತೋಲೆಯಲ್ಲಿ ವಿವರಿಸಿದ್ದಾರೆ.
ಅಷ್ಟೇ ಅಲ್ಲದೆ, ವಿವಿಐಪಿಗಳ ವಾಹನಗಳ ತುರ್ತು ಚಲನೆಗೆ ಸಂಬಂಧಿಸಿದಂತೆ ‘ವಯರ್ಲೆಸ್ ಕಮ್ಯುನಿಕೇಷನ್ ವ್ಯವಸ್ಥೆ. ಹಾಗೂ ಇತರ ತಂತ್ರಜ್ಞಾನಗಳನ್ನು ಉಪಯೋಗಿಸಿಕೊಂಡು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಅವರು ಪೊಲೀಸರಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಸಿಸಿಬಿ ಭರ್ಜರಿ ಕಾರ್ಯಚರಣೆ: ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ 9 ವಿದೇಶಿಗರ ಬಂಧನ
ಆ್ಯಬುಬುಲೆನ್ಸ್, ಪೊಲೀಸ್ ವಾಹನಗಳು ಮತ್ತು ಅಗ್ನಿಶಾಮಕ ದಳ ವಾಹನಗಳ ಸಂಚಾರದಂಥ ಅನಿವಾರ್ಯ ಪರಿಸ್ಥಿತಿಗಳಲ್ಲಿ ಮಾತ್ರ ಸೈರನ್ ಬಳಸಬೇಕು. ಈ ಆದೇಶವನ್ನು ಎಲ್ಲ ಅಧಿಕಾರಿಗಳು, ಸಿಬ್ಬಂದಿ, ಘಟಕ ಅಧಿಕಾರಿಗಳು ಪಾಲಿಸಬೇಕು ಎಂದು ಸಲಿಂ ಸೂಚನೆ ನೀಡಿದ್ದಾರೆ.