ಲಕ್ಷಾಂತರ ಸಾರಿಗೆ ನೌಕರರ ಪಿಎಫ್ ಹಣಕ್ಕೆ ಕನ್ನ; ಡ್ರೈವರ್, ಕಂಡಕ್ಟರ್ಗಳ ಖಾತೆಗೆ ಜಮಾ ಆಗದ 2,500 ಕೋಟಿ ರೂ.!
ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಸೇರಿದಂತೆ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಲ್ಲಿ ನೌಕರರ ಸುಮಾರು 2,500 ಕೋಟಿ ರೂಪಾಯಿ ಪಿಎಫ್ (PF) ಹಣ ದುರ್ಬಳಕೆಯಾಗಿರುವ ಗಂಭೀರ ಆರೋಪ ಕೇಳಿಬಂದಿದೆ. ಸಂಸ್ಥೆಯ ಸ್ವಂತ ಖರ್ಚುಗಳಿಗೆ ಈ ಹಣವನ್ನು ಬಳಸಿಕೊಂಡಿದ್ದು, ನೌಕರರ ಪಿಎಫ್ ಹಣ ಕ್ಲೈಮ್ ಆಗದೆ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.

ಮುಖ್ಯಾಂಶಗಳು
- ಸಾರಿಗೆ ನೌಕರರ 2,500 ಕೋಟಿ ರೂಪಾಯಿ ಪಿಎಫ್ ಹಣ ದುರ್ಬಳಕೆಯಾಗಿದೆ.
- ಸಂಸ್ಥೆಯ ವೆಚ್ಚಕ್ಕೆ ಪಿಎಫ್ ಹಣ ಬಳಸಿರುವುದರಿಂದ ನೌಕರರಿಗೆ ಸಂಕಷ್ಟ ಎದುರಾಗಿದೆ.
- ಕ್ಲೈಮ್ ಆಗದೇ ನೌಕರರು ಪರದಾಡುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಬೆಂಗಳೂರು, ಅಕ್ಟೋಬರ್ 09: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಲ್ಲಿ ಹಗಲು-ರಾತ್ರಿ ಬೆವರು ಹರಿಸಿ ದುಡಿಯುವ ಚಾಲಕರು ಮತ್ತು ನಿರ್ವಾಹಕರಿಗೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ನೌಕರರು ತಮ್ಮ ಭವಿಷ್ಯದ ಭದ್ರತೆಗಾಗಿ ಹಾಗೂ ಕಷ್ಟಕಾಲದ ಬಳಕೆಗಾಗಿ ಕಷ್ಟಪಟ್ಟು ಕಟ್ಟಿದ್ದ ಸಾವಿರಾರು ಕೋಟಿ ರೂಪಾಯಿ ಪಿಎಫ್ (PF) ಹಣ ದುರ್ಬಳಕೆಯಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಹಣವನ್ನು ಸ್ವಂತ ಖರ್ಚುಗಳಿಗೆ ಬಳಸಿಕೊಂಡ ನಿಗಮಗಳು
ನಾಲ್ಕೂ ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ಬರುವ ಸುಮಾರು 1 ಲಕ್ಷದ 10 ಸಾವಿರ ನೌಕರರ ಪೈಕಿ ಸುಮಾರು 2,500 ಕೋಟಿ ರೂಪಾಯಿ ಪಿಎಫ್ ಹಣ ಟ್ರಸ್ಟ್ ತಲುಪದೇ ಮಿಸ್ ಯೂಸ್ ಆಗಿದೆ ಎಂದು ತಿಳಿದುಬಂದಿದೆ. ನಿಯಮಗಳ ಪ್ರಕಾರ ನೌಕರರ ವೇತನದಲ್ಲಿ ಕಡಿತಗೊಳಿಸುವ ಪಿಎಫ್ ಹಣವನ್ನು ಸಂಸ್ಥೆಯ ಇತರೆ ಖರ್ಚುಗಳಿಗೆ ಬಳಸುವಂತಿಲ್ಲ. ಆದರೆ, ನಿಗಮಗಳು ಈ ಹಣವನ್ನು ಡೀಸೆಲ್ ಖರೀದಿ ಹಾಗೂ ನೌಕರರ ಮಾಸಿಕ ವೇತನ ಪಾವತಿಯಂತಹ ಸ್ವಂತ ಖರ್ಚುಗಳಿಗೆ ಬಳಸಿಕೊಂಡಿವೆ ಎನ್ನಲಾಗಿದೆ.
ಬಿಎಂಟಿಸಿ ಒಂದರಲ್ಲೇ ಸಾವಿರ ಕೋಟಿ ರೂ. ಬಾಕಿ
ಪ್ರತಿ ತಿಂಗಳು ನೌಕರರ ಮೂಲ ವೇತನದಿಂದ ಶೇ 12 ರಷ್ಟು ಹಣ ಕಡಿತಗೊಳಿಸಿ, ನಿಗಮವೂ ಅಷ್ಟೇ ಪ್ರಮಾಣದ ಪಾಲು ಸೇರಿಸಿ ಪಿಎಫ್ ಟ್ರಸ್ಟ್‌ಗೆ ಪಾವತಿಸಬೇಕಿರುತ್ತದೆ. ಬಿಎಂಟಿಸಿ ಒಂದೇ ನಿಗಮದಿಂದ ತಿಂಗಳಿಗೆ 28 ಕೋಟಿ ರೂ.ನಂತೆ ವರ್ಷಕ್ಕೆ 336 ಕೋಟಿ ರೂ. ಪಾವತಿಯಾಗಬೇಕಿದ್ದು, ಒಟ್ಟು 1,000 ಕೋಟಿ ರೂ. ಬಾಕಿಯಿದೆ. ಇನ್ನುಳಿದ ಕೆಎಸ್‌ಆರ್‌ಟಿಸಿ, ವಾಯುವ್ಯ ಹಾಗೂ ಕಲ್ಯಾಣ ಕರ್ನಾಟಕ ನಿಗಮಗಳಿಂದ ಸುಮಾರು 1,500 ಕೋಟಿ ರೂಪಾಯಿ ಹಣ ಪಾವತಿಯಾಗದೇ ಉಳಿದಿದೆ.
ಇದರಿಂದಾಗಿ ಕಳೆದ ಎರಡು ತಿಂಗಳಿನಿಂದ ಮಗಳ ಮದುವೆ, ಮಕ್ಕಳ ಶಾಲಾ ಫೀಸು ಹಾಗೂ ವೈದ್ಯಕೀಯ ತುರ್ತು ಅಗತ್ಯಗಳಿಗಾಗಿ ಪಿಎಫ್ ಹಣ ಹಿಂಪಡೆಯಲು ಅರ್ಜಿ ಸಲ್ಲಿಸುತ್ತಿರುವ ನೌಕರರಿಗೆ ಹಣ ಕ್ಲೈಮ್ ಆಗದೆ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿದೆ. ತಮ್ಮ ಬೆವರಿನ ಹಣಕ್ಕಾಗಿ ಸಾರಿಗೆ ನೌಕರರು ಪರದಾಡುವಂತಾಗಿದ್ದು, ಅಧಿಕಾರಿಗಳ ಈ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:43 am, Fri, 9 October 26




