ಬೆಂಗಳೂರಿಗೆ ಇನ್ನು ಒಂದು ತಿಂಗಳು ಮಾತ್ರ ನೀರು: ಆಘಾತಕಾರಿ ಮಾಹಿತಿ ನೀಡಿದ ಕಾವೇರಿ ನೀರಾವರಿ ತಾಂತ್ರಿಕ ಸಮಿತಿ

| Updated By: Ganapathi Sharma

Updated on: Feb 26, 2024 | 7:40 AM

ಬರಗಾಲದ ಪರಿಣಾಮ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಪ್ರದೇಶಗಳಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿನ ಕೊರತೆ ಕಾಣಿಸಲಾರಂಭಿಸಿದೆ. ಬೆಂಗಳೂರಿನ ಹಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯವಾಗಿದೆ. ಈ ಸಮಸ್ಯೆಯ ಮಧ್ಯೆಯೇ ಕಾವೇರಿ ನೀರಾವರಿ ತಾಂತ್ರಿಕ ಸಮಿತಿ ಆಘಾತಕಾರಿ ಮಾಹಿತಿಯೊಂದನ್ನು ನೀಡಿದೆ. ಆ ಬಗ್ಗೆ ವಿವರ ಇಲ್ಲಿದೆ.

ಬೆಂಗಳೂರಿಗೆ ಇನ್ನು ಒಂದು ತಿಂಗಳು ಮಾತ್ರ ನೀರು: ಆಘಾತಕಾರಿ ಮಾಹಿತಿ ನೀಡಿದ ಕಾವೇರಿ ನೀರಾವರಿ ತಾಂತ್ರಿಕ ಸಮಿತಿ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಫೆಬ್ರವರಿ 26: ರಾಜ್ಯದಲ್ಲಿ ಬರದ (Drought) ಛಾಯೆ ಹೆಚ್ಚಾಗುತ್ತಿದ್ದು ಅನೇಕ ಜಿಲ್ಲೆಗಳಲ್ಲಿ ನೀರಿನ ಅಭಾವ ಕಾಣಲಾರಂಬಿಸಿದೆ. ಉತ್ತರ ಕರ್ನಾಟಕದ (North Karnataka) ಹಲವು ಜಿಲ್ಲೆಗಳಲ್ಲಿ ಹಲವೆಡೆ ಈಗಾಗಲೇ ಕುಡಿಯುವ ನೀರಿಗೂ ಅಭಾವ ಉಂಟಾಗಿದೆ. ಈ ಮಧ್ಯೆ ರಾಜಧಾನಿ ಬೆಂಗಳೂರಿನಲ್ಲಿಯೂ (Bengaluru) ನೀರಿನ ಸಮಸ್ಯೆ ಹೆಚ್ಚಾಗಲಾರಂಭಿಸಿದೆ. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಕಾವೇರಿ (Cauvery Water) ನೀರಾವರಿ ತಾಂತ್ರಿಕ ಸಮಿತಿ ಆಘಾತಕಾರಿ ಸುದ್ದಿಯನ್ನು ಹೊರಹಾಕಿದೆ. ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳ ಈಗಿನ ನೀರಿನ ಮಟ್ಟದ ಪ್ರಕಾರ ಬೆಂಗಳೂರಿಗೆ ಇನ್ನು ಒಂದು ತಿಂಗಳು ಮಾತ್ರ ನೀರು ಪೂರೈಕೆ ಮಾಡಬಹುದು ಎಂದು ಸಮಿತಿ ಹೇಳಿದೆ.

ಕಬಿನಿ, ಹೇಮಾವತಿ, ಹಾರಂಗಿ ಜಲಾಶಯಗಳ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಕಬಿನಿಯಲ್ಲಿ ಕೇವಲ 2.10 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಬೆಂಗಳೂರಿಗೆ ಒಂದು ತಿಂಗಳು ಮಾತ್ರ ನೀರು ಸಿಗಬಹುದು ಎಂದು ಕಾವೇರಿ ನೀರಾವರಿ ತಾಂತ್ರಿಕ ಸಮಿತಿ ಹೇಳಿದೆ.

ಸಿಲಿಕಾನ್ ಸಿಟಿಯಲ್ಲಿ ಮಿತಿ ಮೀರಿದ ಜಲದಾಹ

ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ಬರದ ಛಾಯೆ ಆವರಿಸಿದ್ದು, ಗಲ್ಲಿ ಗಲ್ಲಿಯಲ್ಲಿನ ಜಲಕ್ಷಾಮ ‘ಟಿವಿ9’ ಅಭಿಯಾನದಲ್ಲಿ ಬಯಲಾಗಿದೆ. ಕೆಂಗೇರಿಯ ಹರ್ಷ ಲೇಔಟ್ ಜನ ನೀರಿಲ್ಲದೇ ಹರ್ಷ ಕಳೆದುಕೊಂಡಿದ್ದಾರೆ. ವಾರಕ್ಕೋ, ಹದಿನೈದು ದಿನಕ್ಕೋ ಬರೋ ನೀರಿಗೂ ಕಾದು ಸುಸ್ತಾಗಿದ್ದಾರೆ. ಹೀಗೆ ಕಂಗಾಲಾದ ಜನರಿಗೆ ಟ್ಯಾಂಕರ್ ಮಾಫಿಯ ಕೂಡ ಮತ್ತಷ್ಟು ಸಂಕಷ್ಟ ತಂದಿಟ್ಟಿದ್ದು, ಹೈರಾಣಾಗಿ ಹೋಗಿದ್ದಾರೆ.

ಬತ್ತಿದ ತುಂಗೆಯ ಒಡಲು: 4 ಜಿಲ್ಲೆಗಳಲ್ಲಿ ಜಲಸಂಕಷ್ಟ

ಕುಡಿಯಲು ಮತ್ತು ಕೃಷಿಗೆ ಆಧಾರವಾಗಿರುವ ತುಂಗಭದ್ರಾ ಜಲಾಶಯ ಬರಿದಾಗುವ ಹಂತಕ್ಕೆ ಬಂದಿದ್ದು, ಬೇಸಿಗೆ ಆರಂಭಕ್ಕೂ ಮುನ್ನವೇ ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಯ ಜನರಿಗೆ ಜಲಸಂಕಷ್ಟ ಎದುರಾಗಿದೆ. 105.79 ಟಿಎಂಸಿ ನೀರು ಸಂಗ್ರಹ ಸಾಮಾರ್ಥ್ಯದ ಡ್ಯಾಂನಲ್ಲಿ ಕೇವಲ 9.4 ಟಿಎಂಸಿ ನೀರು ಮಾತ್ರ ಉಳಿದ್ದು, ನಾಲ್ಕು ಜಿಲ್ಲೆಯ ಜನರ ಆತಂಕ ಹೆಚ್ಚಾಗಿದೆ.

ಮತ್ತೊಂದೆಡೆ, ದಕ್ಷಿಣದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಸೃಷ್ಟಿಯಾಗದಿದ್ದರೂ ನೀರಿನ ಅಭಾವದ ಎಲ್ಲ ಮುನ್ಸೂಚನೆ ದೊರೆಯಲು ಆರಂಭವಾಗಿದೆ. ಹೀಗಾಗಿ ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸಂಭಾವ್ಯ ಸಮಸ್ಯೆ ತಡೆಗಟ್ಟಲು ಹಾಗೂ ಪರಿಹಾರಕ್ಕಾಗಿ ಈಗಾಗಲೇ ಕ್ರಮ ಆರಂಭಿಸಿದ್ದಾರೆ.

ಇದನ್ನೂ ಓದಿ: ರಾಯಚೂರು: ಕೃಷ್ಣಾ ನದಿ ಸಂಪೂರ್ಣ ಖಾಲಿ! ನದಿ ತೀರದ ಹಳ್ಳಿಗಳಲ್ಲಿ ನೀರಿಗೆ ಹಾಹಾಕಾರ, ಜನ – ಜಾನುವಾರು ಕಂಗಾಲು

ಒಟ್ಟಿನಲ್ಲಿ ಬರದ ಪರಿಣಾಮ ರಾಜ್ಯದ ಜಲಾಶಯಗಳು ಬತ್ತಿಹೋಗುತ್ತಿವೆ. ನೀರಿನ ಮೂಲಗಳು ತಳ ಹಿಡಿಯುತ್ತಿವೆ. ರಾಜ್ಯ ರಾಜಧಾನಿಯ ಗಲ್ಲಿ ಗಲ್ಲಿಯಲ್ಲೂ ನೀರಿಗೆ ಹಾಹಾಕಾರ ಶುರುವಾಗಿದ್ದರೆ, ಅತ್ತ ಬೆಂಗಳೂರಿನ ಜನರ ದಾಹ ತಣೆಸಬೇಕಿದ್ದ ಜಲಾಶಯಗಳು ಬರಿದಾಗುತ್ತಿರುವುದು ತಿಳಿದುಬಂದಿದೆ.

(ವರದಿ: ಸಂಜಯ್ಯಾ ಚಿಕ್ಕಮಠ, ರಾಮ್, ಶಾಂತಮೂರ್ತಿ)

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:35 am, Mon, 26 February 24