- Kannada News Karnataka Raichur Raichur: Krishna River is completely empty! In the villages on the banks of the river, people and livestock are suffering from water scarcity
ರಾಯಚೂರು: ಕೃಷ್ಣಾ ನದಿ ಸಂಪೂರ್ಣ ಖಾಲಿ! ನದಿ ತೀರದ ಹಳ್ಳಿಗಳಲ್ಲಿ ನೀರಿಗೆ ಹಾಹಾಕಾರ, ಜನ – ಜಾನುವಾರು ಕಂಗಾಲು
Raichur Krishna River: ಬಿಸಲುನಗರಿ ರಾಯಚೂರಿನಲ್ಲಿ (Raichur) ಈ ಬಾರಿ ನೀರಿಗೆ ಹಾಹಾಕಾರ ಶುರುವಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಬೇಸಗೆ (Summer) ಆರಂಭಕ್ಕೂ ಮುನ್ನವೇ ಜನ ನೀರಿಗಾಗಿ ಪರಿತಪಸುತ್ತಿದ್ದಾರೆ. ಒಂದೆಡೆ ಬೇಸಿಗೆ ನೆತ್ತಿ ಸುಡುತ್ತಿದ್ದರೆ, ಬಾಯಾರಿಕೆ ಜನರನ್ನು ಕೊಲ್ಲುವ ಸ್ಥಿತಿ ನಿರ್ಮಾಣ ಮಾಡುತ್ತಿದೆ. ಅಷ್ಟಕ್ಕೂ ರಾಯಚೂರಿಗರಿಗೆ ತಲೆ ನೋವಾಗಿರುವುದು ಕೃಷ್ಣಾ ನದಿ (Krishna River) ಒಡಲು ಬರಿದಾಗಿರುವುದರಿಂದ.
Updated on: Feb 24, 2024 | 6:00 PM

ಕೃಷ್ಣಾ ನದಿ ಸಂಪೂರ್ಣ ಖಾಲಿಯಾಗಿದ್ದು ನದಿ ತೀರದ ಜನ ಕಂಗಾಲಾಗುವಂತೆ ಮಾಡಿದೆ. ನೀರಿಲ್ಲದೇ ನದಿಯಲ್ಲಿನ ಜಲಚರಗಳು ಸಾವನ್ನಪ್ಪುತ್ತಿವೆ. ತುಂಬಿ ಹರಿಯೋ ಕೃಷ್ಣೆಯನ್ನು ನೋಡಿದ್ದ ಜನ ಈಗ ಹನಿ ನೀರಿಲ್ಲದ ನದಿಯತ್ತ ನೋಡಿದ್ರೆ ಕಣ್ಣಂಚು ಒದ್ದೆಯಾಗುತ್ತದೆ. ಇದೇ ಕೃಷ್ಣಾ ನದಿ ನಂಬಿಕೊಂಡಿದ್ದ ಈ ಭಾಗದ ಗ್ರಾಮಸ್ಥರಿಗೆ ನೀರಿನ ಸಮಸ್ಯೆ ಎದುರಾಗಿದೆ.

ರಾಯಚೂರು ತಾಲ್ಲೂಕಿನ ದೇವಸುಗೂರು ಮಾರ್ಗದಿಂದ ಆತ್ಕೂರು ಬಳಿ ಹರಿಯೋ ಕೃಷ್ಣಾ ನದಿ ಬರಿದಾಗಿದೆ. ಪ್ರತಿ ಬಾರಿ ವರ್ಷವಿಡೀ ಮೈತುಂಬಿ ಹರಿಯುತ್ತಿದ್ದ ನದಿ ಈಗ ಒಣಗಿ ಹೋಗಿದೆ. ಕೃಷ್ಣಾ ನದಿಯಲ್ಲಿನ ಬೊಗಸೆ ನೀರನ್ನ ಪಂಪ್ ಸೆಟ್ ಗಳ ಮೂಲಕ ಬಳಸಿಕೊಳ್ಳಲು ಗ್ರಾಮಸ್ಥರು ಶತ ಪ್ರಯತ್ನ ಮಾಡುತ್ತಿದ್ದಾರೆ. ಆದ್ರೆ ಅದು ಸಾಧ್ಯವಾಗ್ತಿಲ್ಲ.

ಹೀಗೆ ಕೃಷ್ಣಾ ನದಿ ಬರಿದಾಗಲು ಭೀಕರ ಬರಗಾಲ ಮಾತ್ರ ಕಾರಣವಲ್ಲ. ಈ ಹಿಂದೆ ಈ ಭಾಗದಲ್ಲಿ ಹಿನ್ನೀರು ಸಂಗ್ರಹಣೆ ಮಾಡಿ, ಬೇಸಿಗೆಯಲ್ಲಿ ಜನರಿಗೆ ಅನಕೂಲ ಮಾಡಿಕೊಡಲು ನದಿಯಲ್ಲಿ ತಡೆಗೋಡೆ ನಿರ್ಮಿಸಲಾಗಿತ್ತು. ಆಗ ಎಂಥ ಬರಗಾಲ ಬಂದ್ರೂ ಹಿನ್ನೀರು ಜನರ ಬಳಕೆಗೆ ಸಿಗ್ತಿತ್ತು.

ಆದರೆ, ತಡೆಗೋಡೆ ಈ ಹಿಂದೆ ಪ್ರವಾಹಕ್ಕೆ ಕೊಚ್ಚಿ ಹೋದ ಬಳಿಕ ಅಧಿಕಾರಿಗಳು, ಜನಪ್ರತಿನಿಧಿಗಳು ತಡೆಗೋಡೆ ಮರುನಿರ್ಮಾಣ ಮಾಡಿಲ್ಲ. ಹೀಗಾಗಿ ನೀರು ಸಂಗ್ರಹಣೆಯಾಗದೇ ಭೀಕರ ದುರಂತ ಎದುರಾಗಿದೆ ಅಂತ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಿನಲ್ಲಿ ಗಡಿ ಭಾಗದ ಜನರ ಜೀವನಾಡಿಯಾಗಿರುವ ವರ್ಷವಿಡಿ ತುಂಬಿ ಹರಿಯುತ್ತಿದ್ದ ಕೃಷ್ಣಾ ನದಿ ಬತ್ತಿರುವುದು ಜನರನ್ನು ಸಂಕಷ್ಟಕ್ಕೀಡು ಮಾಡಿದೆ. ನದಿ ತೀರದ ಜನ ಹನಿ ನೀರಿಗೂ ಪರದಾಡುವಂತೆ ಮಾಡಿದೆ.

ಇದಷ್ಟೇ ಅಲ್ಲದೇ ಜಾನುವಾರುಗಳು ಕೂಡ ನೀರಿಗಾಗಿ ಪರಿತಪಿಸುತ್ತಿವೆ. ನದಿಯುದ್ದಕ್ಕೂ ಅಲೆದಾಡಿ ನೀರಿಗಾಗಿ ಹಾಹಾಕಾರ ನಡೆಸ್ತಿವೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಈ ಭಾಗದ ಜನರಿಗೆ ಸೂಕ್ತ ನೀರಿನ ವ್ಯವಸ್ಥೆ ಮಾಡಬೇಕಿದೆ.

ರಾಜ್ಯದ ಹಲವೆಡೆ ಈ ವರ್ಷ ಇದೇ ಪರಿಸ್ಥಿತಿ ಇದೆ. ಮುಂಗಾರು ಮಳೆ ಕೊರತೆ, ಹಿಂಗಾರು ಅವಧಿಯಲ್ಲಿಯೂ ಮಳೆ ಸರಿಯಾಗಿ ಬಾರದೆ ಇರುವುದು ಜನರನ್ನು ಸಂಕಷ್ಟಕ್ಕೀಡು ಮಾಡಿದೆ. ಒಂದೆಡೆ ಕೃಷಿಗೆ ನೀರಿನ ಸಮಸ್ಯೆಯಾದರೆ ಮತ್ತೊಂದೆಡೆ ಕುಡಿಯುವ ನೀರಿಗೂ ತತ್ವಾರ ಎದುರಾಗುವ ಎಲ್ಲ ಲಕ್ಷಣ ಗೋಚರಿಸುತ್ತಿದೆ.



















