Karnataka Weather: ಮಲೆನಾಡು, ಕರಾವಳಿ ಭಾಗದಲ್ಲಿ ಇಂದು, ನಾಳೆ ಮಳೆ; ಬೆಂಗಳೂರಿನಲ್ಲೂ ವರ್ಷಧಾರೆ

| Updated By: Digi Tech Desk

Updated on: Aug 07, 2021 | 10:53 AM

Karnataka Rains: ಕಳೆದೊಂದು ವಾರದಿಂದ ಆರ್ಭಟಿಸುತ್ತಿರುವ ಮಳೆ ಆಗಸ್ಟ್​ 8ರವರೆಗೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮುಂದುವರೆಯಲಿದೆ ಎನ್ನಲಾಗಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಲಿದೆ.

Karnataka Weather: ಮಲೆನಾಡು, ಕರಾವಳಿ ಭಾಗದಲ್ಲಿ ಇಂದು, ನಾಳೆ ಮಳೆ; ಬೆಂಗಳೂರಿನಲ್ಲೂ ವರ್ಷಧಾರೆ
ಹವಾಮಾನ ವರದಿ
Follow us on

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ವರುಣಾರ್ಭಟ ಜೋರಾಗಿದ್ದು ಕಳೆದೊಂದು ವಾರದಿಂದ ಮಲೆನಾಡು, ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ (Heavy Rain). ಜುಲೈ ತಿಂಗಳ ಭೀಕರ ಮಳೆಯನ್ನು ನೋಡಿ ಕಂಗಾಲಾಗಿದ್ದ ಜನ ಸಾವರಿಸಿಕೊಳ್ಳುವಷ್ಟರಲ್ಲಿ ಆಶ್ಲೇಷಾ ಮಳೆ ಅಬ್ಬರಿಸಲಾರಂಭಿಸಿರುವುದು ಆತಂಕ ಮೂಡಿಸಿದೆ. ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಧೋ ಎಂದು ಭೋರ್ಗರೆವ ಮಳೆ ಇನ್ನಾದರೂ ಶಾಂತವಾಗಲಿ ಎಂದು ಜನ ಪ್ರಾರ್ಥಿಸುವಂತಾಗಿದೆ. ಈ ಬಾರಿ ಹೆಚ್ಚೂಕಡಿಮೆ ಮೇ ತಿಂಗಳಿನಿಂದಲೇ ಮಳೆಗಾಲದ (Rainy Season) ವಾತಾವರಣ ಆವರಿಸಿಕೊಂಡಿತ್ತಾದ್ದರಿಂದ ಮಲೆನಾಡು, ಕರಾವಳಿಯ ಕೃಷಿಕರಿಗೆ ಮಳೆ ಅಡ್ಡಪರಿಣಾಮ ಬೀರಲಾರಂಭಿಸಿದ್ದು, ಇನ್ನೊಂದು ವಾರ ಇದೇ ರೀತಿ ವಾತಾವರಣ (Karnataka Weather) ಮುಂದುವರೆದರೂ ಈ ವರ್ಷದ ಫಸಲು ಕೈಗೆ ಬರುವುದು ಕಷ್ಟ ಎನ್ನುವಂತಾಗಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿರುವ ಮಳೆ ಮುನ್ಸೂಚನೆ ವರದಿ ಪ್ರಕಾರ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಇಂದು ವ್ಯಾಪಕವಾಗಿ ಸಾಧಾರಣದಿಂದ ಉತ್ತಮ ಮಳೆಯಾಗುವ ಸಾಧ್ಯತೆ ಇದ್ದು, ಮಲೆನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆಯಾಗಬಹುದು. ಇತ್ತ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಹಗುರ ಮಳೆಯಾಗುವ ಸಂಭವವಿದೆ ಎಂದು ಅಂದಾಜಿಸಲಾಗಿದೆ.

ಕಳೆದೊಂದು ವಾರದಿಂದ ಆರ್ಭಟಿಸುತ್ತಿರುವ ಮಳೆ ಆಗಸ್ಟ್​ 8ರವರೆಗೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮುಂದುವರೆಯಲಿದೆ ಎನ್ನಲಾಗಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಲಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಇಂದು ಮೋಡ ಕವಿದ ವಾತಾವರಣದೊಂದಿಗೆ ಮಳೆಯಾಗುವ ನಿರೀಕ್ಷೆ ಇದೆ.

ಕಳೆದ 24 ಗಂಟೆಯಲ್ಲಿ ಬೆಂಗಳೂರಿನ ಬೊಮ್ಮನಹಳ್ಳಿಯ ಸಿಂಗಸಂದ್ರದಲ್ಲಿ 13 ಮಿ.ಮೀ. ಮಳೆಯಾಗಿದೆ. ಅಂತೆಯೇ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ರೆಂಜಾಳದಲ್ಲಿ 120 ಮಿ.ಮೀ. ಮಳೆಯಾಗಿದ್ದು, ನಿನ್ನೆ ರಾಜ್ಯದಲ್ಲೇ ಅತ್ಯಧಿಕ ಮಳೆಯಾಗಿರುವ ಪ್ರದೇಶ ಇದಾಗಿದೆ. ಕಳೆದ ಒಂದು ವಾರದಿಂದ ಬಿಡುವು ನೀಡಿದ್ದ ಮಳೆ ನಿನ್ನೆಯಿಂದ ಬೆಂಗಳೂರಿಗೆ ತಂಪೆರೆಯುತ್ತಿದೆ. ಇತ್ತ ಕರ್ನಾಟಕದ ಕರಾವಳಿ ಭಾಗದಲ್ಲೂ ಮಳೆ ವಾತಾವರಣ ಮುಂದುವರೆಯಲಿದ್ದು, ಇಂದು ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.

ದಾವಣಗೆರೆ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ಇಂದು ಮೋಡ ಕವಿದ ವಾತಾವರಣವಿದ್ದು, ಹಗುರ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲೂ ಸಾಧಾರಣ ಮಳೆಯಾಗಲಿದೆ. ಬೀದರ್, ಬಾಗಲಕೋಟೆ, ಧಾರವಾಡ, ಹಾವೇರಿ, ಗದಗ, ವಿಜಯನಗರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಹಗುರ ಮಳೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ:
Rain : ಮಳೆ ಬಂತು ಮಳೆ : ನಾ ಹೋತೆ ಒಡೆಯಾ, ಕಮಲೀನಾ ನಾ ಕರಕಂಡೇ ಬತ್ತೆ

(Karnataka Weather Today rainfall expected over Malnad and Coastal Karnataka till August 8 Bengaluru may also get rain)

Published On - 8:42 am, Sat, 7 August 21