ಬೆಂಗಳೂರು: ಟಿಕೆಟ್ಗಾಗಿ ಪಾವತಿಸಿದ ಹಣದ ಚಿಲ್ಲರೆ ನೀಡುವಂತೆ ಕೇಳಿದ್ದಕ್ಕೆ ಮಹಿಳೆ ಮತ್ತು ಬಾಲಕಿ ಮೇಲೆ ಕೆಎಸ್ಆರ್ಟಿಸಿ (KSRTC) ಮಹಿಳಾ ಕಂಡಕ್ಟರ್ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ನಾಯಂಡಹಳ್ಳಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಏಪ್ರಿಲ್ 23ರಂದು ಘಟನೆ ನಡೆದಿತ್ತು. ಈ ವಿಚಾರವಾಗಿ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ. ಚನ್ನರಾಯಪಟ್ಟಣ-ಮೇಲುಕೋಟೆ-ಮಂಡ್ಯ-ಬೆಂಗಳೂರು ಮಾರ್ಗವಾಗಿ ಸಂಚರಿಸುತ್ತಿದ್ದ ಮಂಡ್ಯ ವಿಭಾಗಕ್ಕೆ ಸೇರಿದ ಕೆಎ13 ಎಫ್2106 ಸಂಖ್ಯೆಯ ಬಸ್ನಲ್ಲಿ ಘಟನೆ ನಡೆದಿದೆ. ಪ್ರಯಾಣಿಕರಾದ ಪುಷ್ಪಾ ಪಿಕೆ ಮತ್ತು ಅವರ 10 ವರ್ಷ ವಯಸ್ಸಿನ ಮಗಳು ಹಲ್ಲೆಗೊಳಗಾದವರು. ಘಟನೆ ಸಂಬಂಧ ಮಹಿಳಾ ಕಂಡಕ್ಟರ್ ಅನ್ನು ಅಮಾನತುಗೊಳಿಸಲಾಗಿದ್ದು, ಅವರೂ ಪ್ರತಿ ದೂರು ನೀಡಿದ್ದಾರೆ.
ಬಸ್ನಲ್ಲಿ ಮೂರು ಮಂದಿಗೆ 218 ರೂ. ಮೊತ್ತದ ಟಿಕೆಟ್ ಪಡೆದಿದ್ದು, 500 ರೂ. ಪಾವತಿಸಿದ್ದೆ. ನಿರ್ವಾಹಕಿ ಮಮತಾ (40) ವಾಪಸ್ 200 ರೂ. ಕೊಟ್ಟು ಬಾಕಿ ಇರುವ ಮೊತ್ತವನ್ನು ಇಳಿಯುವಾಗ ಕೊಡುವುದಾಗಿ ತಿಳಿಸಿ ಟಿಕೆಟ್ ಹಿಂಭಾಗ ಬರೆದುಕೊಟ್ಟಿದ್ದರು. ಬಸ್ ನಾಯಂಡಹಳ್ಳಿ ತಲುಪಿದಾಗ, ನಾನು ಬಿಎಚ್ಇಎಲ್ನಲ್ಲಿ ಇಳಿಯಬೇಕಿದೆ, ಬಾಕಿ ಮೊತ್ತ ಕೊಡಿ ಎಂದು ಕಂಡಕ್ಟರ್ ಬಳಿ ಕೇಳಿದೆ. ಆದರೆ ಬಾಕಿ ಹಣ ವಾಪಸ್ ನೀಡದ ಅವರು, ಚಿಲ್ಲರೆ ಇಲ್ಲದೆ ಯಾಕೆ ಪ್ರಯಾಣಿಸಿದ್ದೀರಿ ಎಂದು ನಿಂದಿಸಿದ್ದಾರೆ ಎಂದು ಪುಷ್ಪಲತಾ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಟಿಕೆಟ್ ಹಿಂಭಾಗದಲ್ಲಿ ನೀವೇ ಬರೆದುಕೊಟ್ಟಿದ್ದೀರಿ ಎಂದು ಶಾಂತವಾಗಿ ಅವರಿಗೆ ತಿಳಿಸಿದೆ. ಸಿಟ್ಟಾದ ಅವರು ನನ್ನನ್ನು ಹೊಡೆದು ತಳ್ಳಿದರು. ನನ್ನ ಪಕ್ಕವೇ ಇದ್ದ ಮಗಳನ್ನೂ ತಳ್ಳಿದರು. ಚಾಲಕ ಹಾಗೂ ನಿರ್ವಾಹಕಿ ಇಬ್ಬರೂ ನಮ್ಮನ್ನು ಬಿಎಚ್ಇಎಲ್ ನಿಲ್ದಾಣದಲ್ಲಿ ಇಳಿಯಲು ಬಿಡಲಿಲ್ಲ. ಸುಮಾರು 500 ಮೀಟರ್ ದೂರದ ವರೆಗೆ ನಮ್ಮನ್ನು ಒಯ್ದರಲ್ಲದೆ ಹಲ್ಲೆ ಮಾಡಿದರು. ಮಗಳನ್ನು ಬಸ್ನಿಂದ ಹೊರಗೆ ತಳ್ಳಿದರು ಎಂದು ಪುಷ್ಪಲತಾ ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಘಟನೆಯ ನಂತರ ಮಲ್ಲೇಶ್ವರದ ಕೆಸಿ ಜನರಲ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದ ಬಳಿಕ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದರ ಆಧಾರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ದೂರಿನ ಹಿನ್ನೆಲೆಯಲ್ಲಿ ತನಿಖೆ ಬಾಕಿ ಇರುವ ಕಾರಣ ಕಂಡಕ್ಟರ್ ಮಮತಾರನ್ನು ಕೆಎಸ್ಆರ್ಟಿಸಿ ಅಮಾನತುಗೊಳಿಸಿದೆ. ಪ್ರಾಥಮಿಕ ವಿಚಾರಣೆಯಲ್ಲಿ ಕಂಡಕ್ಟರ್ ತಪ್ಪಿತಸ್ಥೆ ಎಂಬುದು ತಿಳಿದುಬಂದಿದೆ ಎಂದು ಕೆಎಸ್ಆರ್ಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಘಟನೆ ಸಂಬಂಧ ಹೆಚ್ಚಿನ ತನಿಖೆಯ ಹೊಣೆಯನ್ನು ಕೆಎಸ್‌ಆರ್‌ಟಿಸಿಯ ಸುರಕ್ಷತಾ ಶಾಖೆಗೆ ವಹಿಸಲಾಗಿದೆ. ಮಹಿಳಾ ಕಂಡಕ್ಟರ್ ಟಿಕೆಟ್ ವೆಚ್ಚದ ಬಾಕಿ ಹಣವನ್ನು ಪಾವತಿಸದ ಕಾರಣ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಟಿಕೆಟ್‌ನ ಹಿಂಭಾಗದಲ್ಲಿ ಅದನ್ನು ಬರೆದಿದ್ದಾರೆ ಎಂದು ಆರೋಪಿಸಲಾಗಿದೆ ಎಂಬುದಾಗಿ ಅಧಿಕಾರಿಯೊಬ್ಬರು ‘ನ್ಯೂಸ್9’ಗೆ ತಿಳಿಸಿದ್ದಾರೆ.
ಈ ಮಧ್ಯೆ, ಪ್ರಯಾಣಿಕರಾದ ಪುಷ್ಪಲತಾ ಅವರ ಸಂಬಂಧಿಕರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕಂಡಕ್ಟರ್ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಸ್ ಬೆಂಗಳೂರಿನಿಂದ ವಾಪಸಾಗುತ್ತಿದ್ದಾಗ ಪಗಡೆ ಕಲ್ಲಹಳ್ಳಿ ಗ್ರಾಮದಲ್ಲಿ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ. ಈ ವಿಚಾರವಾಗಿ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿಗೆ ಸಂಬಂಧಿಸಿ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ