
ಬೆಂಗಳೂರು, ನವೆಂಬರ್ 28: ಕೆಎಂಎಫ್ (KMF) ತುಪ್ಪಕ್ಕೆ ಎಲ್ಲೆಲ್ಲಿದ ಬೇಡಿಕೆ. ತಿರುಪತಿ ತಿಮ್ಮಪ್ಪನಿಂದ ಹಿಡಿದು ಪ್ರತಿಯೊಬ್ಬರಿಗೆ ನಂದಿನಿ ತುಪ್ಪ (Nandini Ghee) ಬೇಕು. ಇದನ್ನೇ ಬಂಡವಾಳ ಮಾಡಿಕೊಂಡು ನಕಲಿ ತುಪ್ಪ ಮಾರಾಟ ಮಾಡುತ್ತಿದ್ದ ಜಾಲವೊಂದು ಇತ್ತೀಚೆಗೆ ಪತ್ತೆಯಾಗಿತ್ತು. ಹೀಗಾಗಿ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ KMF ನಯಾ ಪ್ಲಾನ್ಗೆ ಮುಂದಾಗಿದೆ. ಕ್ಯೂ ಆರ್ ಕೋಡ್ ಬಳಕೆಗೆ ಸಿದ್ಧತೆ ನಡೆಸಿದೆ.
ಕರ್ನಾಟಕದ ಹೆಮ್ಮೆಯ ನಂದಿನಿ ತುಪ್ಪ ತಿರುಪತಿ ಲಡ್ಡುಗೆ ಬಳಕೆ ಮಾಡಲಾಗುತ್ತಿದೆ. ಜೊತೆಗೆ ಇದರ ಘಮಲು ವಿದೇಶಕ್ಕೂ ತಲುಪುತ್ತಿದೆ. ಆದರೆ ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಆರೋಪಿಗಳು ನಂದಿನಿ ಬ್ರಾಂಡ್ ತುಪ್ಪವನ್ನು ಕಲಬೆರಕೆ ಮಾಡಿ ಮಾರಾಟ ಮಾಡುತ್ತಿದ್ದ ಬೃಹತ್ ಜಾಲವನ್ನು ಸಿಸಿಬಿ ಪೊಲೀಸರು ಮತ್ತು ಕೆಎಂಎಫ್‌ನ ಜಾಗೃತ ದಳ ಬಯಲು ಮಾಡಿದೆ. ಈ ಪ್ರಕರಣದಿಂದ ಎಚ್ಚೆತ್ತ ಕೆಎಂಎಫ್ ಇದೀಗ ತುಪ್ಪದ ಪ್ಯಾಕೆಟ್ ಮತ್ತು ಬಾಟಲ್ಗೆ ಕ್ಯೂ ಆರ್ ಕೋಡ್ ಬಳಸಲು ಮುಂದಾಗಿದೆ.
ಇದನ್ನೂ ಓದಿ: ನಂದಿನಿ ಹೆಸರಲ್ಲಿ ನಕಲಿ ತುಪ್ಪ: ತಮಿಳುನಾಡಿನಲ್ಲಿ ಕಲಬೆರಕೆ ಮಾಡಿ ಕರ್ನಾಟಕದಲ್ಲಿ ಮಾರಾಟ
ಈ ಕುರಿತು ಕೆಎಂಎಫ್ ಅಧಿಕಾರಿಗಳು, ತಜ್ಞರ ಜೊತೆ ಸಭೆ ಮಾಡಿ ಚರ್ಚೆ ಮಾಡಿದ್ದಾರೆ. ಕ್ಯೂ ಆರ್ ಕೋಡ್ ಬಳಸಿದಲ್ಲಿ ತುಪ್ಪದ ಉತ್ಪಾದನೆ, ಪೂರೈಕೆ, ಯಾವ ಮಳಿಗೆ, ಯಾರಿಗೆ ಮಾರಾಟ ಮಾಡಿದ್ದಾರೆ ಎಂಬುದು ಈ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವುದರಿಂದ ತಿಳಿಯಲಿದೆ. ಆ ಮೂಲಕ ಗ್ರಾಹಕರು ಖರೀದಿ ಮಾಡಿರುವುದು ಅಸಲಿಯೋ, ನಕಲಿಯೋ ಎಂಬುದು ಗೊತ್ತಾಗಲಿದೆ. ಆದರೆ ಇದಕ್ಕೆ ಆಗುವ ಹೆಚ್ಚುವರಿ ವೆಚ್ಚವನ್ನು ಗ್ರಾಹಕರ ಮೇಲೆ ಹೊರೆಸದೇ ಕೆಎಂಎಫ್ ಭರಿಸಲು ಮುಂದಾಗಿದೆ.
ಇದನ್ನೂ ಓದಿ: ಇನ್ಮುಂದೆ ಸೌದಿ ಅರೇಬಿಯಾ, ಅಮೆರಿಕ, ಆಸ್ಟ್ರೇಲಿಯಾದಲ್ಲೂ ‘KMF ನಂದಿನಿ’ ಹವಾ
ಒಟ್ಟಿನಲ್ಲಿ ಜನರು ನಂಬಿಕೆಯಿಂದ ಖರೀದಿಸುತ್ತಿದ್ದ ಕೆಎಂಎಫ್ ತುಪ್ಪ ನಕಲಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇದೀಗ ಕೆಎಂಎಫ್ ಹೊಸ ದಾಳ ಪ್ರಯೋಗಕ್ಕೆ ಮುಂದಾಗಿದ್ದು, ಕ್ಯೂ ಆರ್ ಕೋಡ್ ಮೊರೆ ಹೋಗುತ್ತಿದೆ. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ವಿ ಆಗುತ್ತೆ ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.