ಪರಪ್ಪನ ಅಗ್ರಹಾರ ಜೈಲು ಜಾಲಾಡಿದ ಹೊಸ ಅಧೀಕ್ಷಕ, 33 ಮೊಬೈಲ್, 22 ಸಿಮ್ ಸೇರಿದಂತೆ ಇತರೆ ವಸ್ತುಗಳು ಪತ್ತೆ
ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಕೆಲ ಕೈದಿಗಳಿಗೆ ವಿಶೇಷ ಆತಿಥ್ಯ ದೊರೆಯುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಅಲ್ಲದೇ ಜೈಲಿನಲ್ಲೇ ಕೈದಿಗಳು ಮದ್ಯ ತಯಾರಿ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಜೈಲಿನ ಅಧೀಕ್ಷಕರನ್ನು ಎತ್ತಂಗಡಿ ಮಾಡಿದ್ದು, ಇದೀಗ ಬಂದ ಹೊಸ ಅಧೀಕ್ಷಕ ಜೈಲನ್ನು ಜಾಲಾಡಿದ್ದಾರೆ. ಈ ವೇಳೆ, ಮೊಬೈಲ್, ಸಿಮ್ ಕಾರ್ಡ್ ಸೇರಿದಂತೆ ಇತರೆ ವಸ್ತುಗಳು ಪತ್ತೆಯಾಗಿವೆ.

ಬೆಂಗಳೂರು, (ನವೆಂಬರ್ 28): ಪರಪ್ಪನ ಅಗ್ರಹಾರ ಜೈಲು (Parappana Agrahara jail) ಎನ್ನುವುದು ಐಷಾರಾಮಿ ಸೌಲಭ್ಯಗಳ ತಾಣವಾಗಿದೆ. ಇಲ್ಲಿನ ಹೈಫೈ ಲೈಫ್‌ನ ವಿಡಿಯೋಗಳು ದಿನಕ್ಕೊಂದರಂತೆ ರಿವೀಲ್ ಆಗುತ್ತಿವೆ. ಅಷ್ಟೇ ಅಲ್ಲದೆ ಜೈಲಿನ ಮೂವರು ಅಧಿಕಾರಿಗಳ ತಲೆದಂಡವಾಗಿದೆ. ಇದರ ಬೆನ್ನಲ್ಲೇ ಇದೀಗ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿಗೆ ಮುಖ್ಯ ಅಧೀಕ್ಷರಾಗಿ ಅಂಶುಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಅಂಶುಕುಮಾರ್ ಅವರು ಇಡೀ ಜೈಲನ್ನೇ ಜಾಲಾಡಿದ್ದಾರೆ. ಈ ವೇಳೆ 33 ಮೊಬೈಲ್, 22 ಸಿಮ್ ಕಾರ್ಡ್ , 5 ಚಾರ್ಜರ್ ಸೇರಿದಂತೆ ಇತರೆ ವಸ್ತುಗಳು ಪತ್ತೆಯಾಗಿವೆ.
ಕೈದಿಗಳ ಬಳಿ ಮೊಬೈಲ್, ಸಿಮ್ ಕಾರ್ಡ್ ಪತ್ತೆ
ಹೊಸದಾಗಿ ಮುಖ್ಯ ಅಧೀಕ್ಷಕರಾಗಿ ನೇಮಕವಾಗಿರುವ ಅಂಶುಕುಮಾರ್ ಅವರು ಇಂದು (ನವೆಂಬರ್ 28) ಜೈಲಿನಲ್ಲಿ ಪರಿಶೀಲನೆ ನಡೆಸಿದರು. ಈ ವೇಳೆ 33 ಮೊಬೈಲ್, 22 ಸಿಮ್ ಕಾರ್ಡ್, 5 ಚಾರ್ಜರ್, 4 ಇಯರ್ ಬಡ್ಸ್, 49 ಸಾವಿರ ರೂ. ನಗದು, ಒಂದು ಇಯರ್ ಫೋನ್ ಹಾಗೂ 3 ಚಾಕು ತರಹದ ವಸ್ತುಗಳು ಪತ್ತೆಯಾಗಿವೆ. ಈ ವಸ್ತುಗಳನ್ನು ಬಳಸುತ್ತಿರುವವರು ಯಾರು? ಜೈಲಿಗೆ ಇವುಗಳನ್ನು ತಂದು ಕೊಟ್ಟವರು ಯಾರು? ಎನ್ನುವ ಪ್ರಶ್ನೆಗಳು ಉದ್ಭವಿಸಿದ್ದು, ಕೈದಿಗಳಿಗೆ ಬಳಸಲು ಅವಕಾಶ ಮಾಡಿಕೊಟ್ಟವರ ಮೇಲೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನ ಕರ್ಮಕಾಂಡ ತಡೆಗೆ ದಿಟ್ಟ ನಿರ್ಧಾರ; ಚೀಫ್ ಸೂಪರಿಂಟೆಂಡೆಂಟ್ ಹುದ್ದೆಗೆ IPS ಅಧಿಕಾರಿ
ಜೈಲಿನ ಕೆಲ ಬ್ಯಾರಕ್‌ಗಳಲ್ಲಿ ತಪಾಸಣೆ ವೇಳೆ ಕೈದಿಗಳ ಬಳಿಯಿದ್ದ ಮೊಬೈಲ್ ಫೋನ್, ನಗದು, ಮತ್ತಿತರ ಎಲೆಕ್ಟ್ರಾನಿಕ್ ಉಪಕರಣಗಳನ್ನ ವಶಕ್ಕೆ ಪಡೆಯಲಾಗಿದೆ. ಗುರುವಾರ ರಾತ್ರಿ 8:30ರಿಂದ 09:30 ಹಾಗೂ 11:05 ರಿಂದ 12:30ರ ವರೆಗೆ ಎರಡು ಬಾರಿ ತಪಾಸಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2021ರಿಂದ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಬಂಧನದಲ್ಲಿರುವ ಐಸಿಸ್ ಸಂಘಟನೆಯ ಉಗ್ರ ಜುಹಾಬ್ ಶಕೀಲ್ ಮನ್ನಾ, 2009ರಿಂದ ಬಂಧಿಯಾಗಿರುವ ಸೀರಿಯಲ್ ಕಿಲ್ಲರ್ ಉಮೇಶ್ ರೆಡ್ಡಿ, ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಇದೇ ವರ್ಷ ಬಂಧನವಾಗಿರುವ ಆರೋಪಿ ತರುಣ್ ರಾಜ್ ಜೈಲಿನೊಳಗೆ ಮೊಬೈಲ್ ಬಳಸುತ್ತಿರುವ ವಿಡಿಯೋಗಳು ಇತ್ತೀಚೆಗೆ ವೈರಲ್ ಆಗಿದ್ದವು.
ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಲ್ಲ, ಮದ್ಯದ ಫ್ಯಾಕ್ಟರಿ!: ತನಿಖೆ ವೇಳೆ ಶಾಕಿಂಗ್ ಮಾಹಿತಿ ಬಹಿರಂಗ
ಅಲ್ಲದೇ ಕೈದಿಗಳು ಮದ್ಯ ತಯಾರಿ ಮಾಡುತ್ತಿರುವ ವಿಡಿಯೋ ಸಹ ಬಯಲಿಗೆ ಬಂದಿದೆ. ಇದು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಇಂದು ಕಾರಾಗೃಹ ಇಲಾಖೆ ಎಡಿಜಿಪಿ ಬಿ. ದಯಾನಂದ್ ಅನುಪಸ್ಥಿತಿಯಲ್ಲೇ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಮಾಡಿದ್ದರು.
ವೈರಲ್ ಆಗಿರುವ ಫೋಟೋ, ವಿಡಿಯೋಗಳನ್ನೇ ತೋರಿಸಿ ಜೈಲು ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದರು. ಅಷ್ಟೇ ಅಲ್ಲ ಕರ್ತವ್ಯ ಲೋಪ ಆರೋಪದಲ್ಲಿ ಇಬ್ಬರನ್ನ ಸಸ್ಪೆಂಡ್ ಮಾಡಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



