ಬೆಂಗಳೂರು: ನಗರದಲ್ಲಿನ ರಸ್ತೆ ಗುಂಡಿಗಳನ್ನು (Pothole) ಮುಚ್ಚುವಂತೆ ಆಗ್ರಹಿಸಿ ರಾಜ್ಯ ಕಾಂಗ್ರೆಸ್ (Congress) ನಾಯಕರು ಅ. 21ರಂದು ಧರಣಿ ಮಾಡಲು ಮುಂದಾಗಿದ್ದಾರೆ. ಅಲ್ಲದೇ ರೇಸ್ ಕೋರ್ಸ್ ರಸ್ತೆಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಮನೆಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ.
ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚುವಲ್ಲಿ ಸರ್ಕಾರ ವಿಫಲ: ರಾಮಲಿಂಗಾರೆಡ್ಡಿ
ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚುವಲ್ಲಿ ಸರ್ಕಾರ ವಿಫಲವಾಗಿದೆ. ಬೆಂಗಳೂರಿಗೆ ಸಿಎಂ ಬೊಮ್ಮಾಯಿ ಮತ್ತು ಸಚಿವರು ಅಷ್ಟ ದಿಕ್ಪಾಲಕರ ತರಹ ಇದ್ದಾರೆ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ ವ್ಯಂಗ್ಯವಾಡಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ನಗರದ ಬಹುತೇಕ ರಸ್ತೆಗಳಲ್ಲಿ ಗುಂಡಿಗಳು ಇವೆ. ಎಲ್ಲಿಯೂ ರಸ್ತೆಗಳಲ್ಲಿ ಓಡಾಡಲು ಆಗುತ್ತಿಲ್ಲ. ಮೂರು ವರ್ಷದಿಂದ ರಸ್ತೆ ಗುಂಡಿ ಮುಚ್ಚುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ವಾಗ್ದಾಳಿ ಮಾಡಿದರು.
ರಸ್ತೆ ಗುಂಡಿಗಳ ಬಗ್ಗೆ ಹೈಕೋರ್ಟ್ ಸರ್ಕಾರದ ಮುಖ್ಯ ಆಯುಕ್ತರನ್ನು ಕರೆಸಿ ವಾರ್ನಿಂಗ್ ಮಾಡಿತ್ತು. ಆದರು ಕೂಡ ರಸ್ತೆ ಗುಂಡಿಗಳು ಕಡಿಮೆಯಾಗಿಲ್ಲ. 2008 ರಿಂದ 2013 ವರೆಗೂ ಬಿಜೆಪಿ ಅಧಿಕಾರದಲ್ಲಿದ್ದಾಗ ಎಲ್ಲ ಪ್ರಮುಖ ರಸ್ತೆಗಳು ಹಾಳಾಗಿದ್ದವು. ಬಿಜೆಪಿ ಸರಕಾರ ಬಂದಾಗ ರಸ್ತೆಗಳಿಗೆ ಆದ್ಯತೆ ನೀಡುವುದಿಲ್ಲ. ಕೇವಲ ಅವರ ಶಾಸಕರಿಗೆ ಅನುದಾನ ಕೊಟ್ಟು ಸುಮ್ಮನಾಗುತ್ತಾರೆ ಎಂದು ಆರೋಪ ಮಾಡಿದರು .
2020-21 ರಲ್ಲಿ 198 ವಾರ್ಡ್ಗಳಿಗೆ ಒಂದು ಪೈಸೆ ಅನುದಾನ ಬಿಡುಗಡೆ ಮಾಡಲಿಲ್ಲ. 2021-22 ರಲ್ಲೂ ಬಿಡಿಗಾಸು ಬಿಡುಗಡೆ ಆಗಲಿಲ್ಲ. 202-23 ರ ಬಜೆಟ್ನಲ್ಲಿ ಹೊಸ ವಾರ್ಡ್ಗೆ 6 ಕೋಟಿ, ಹಳೆ ವಾರ್ಡ್ಗೆ 4 ಕೋಟಿ ಕೊಟ್ಟಿದ್ದಾರೆ. ಟೆಂಡರ್ ಕರೆಯೋದಕ್ಕೆ ಇನ್ನೂ ಅನುಮತಿ ಕೊಟ್ಟಿಲ್ಲ. ಮೂರು ವರ್ಷದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಒಂದು ರೂಪಾಯಿ ಅನುದಾನ ಕೂಡ ಬಿಡುಗಡೆ ಆಗಿಲ್ಲ. ಕೊಟ್ಟಿರುವ ಬಜೆಟ್ ಕನ್ನಡಿಯೊಳಗಿನ ಗಂಟಿನ ತರಹ ಆಗಿದೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:44 pm, Wed, 19 October 22