ಮತ್ತೆ ಹಾಲಿನ ದರ ಹೆಚ್ಚಳಕ್ಕೆ ಪ್ರಸ್ತಾಪ: ಈ ಬಗ್ಗೆ ಸಚಿವ ಸೋಮಶೇಖರ್ ಹೇಳಿದ್ದಿಷ್ಟು…!
ಹಾಲಿನ ದರ ಹೆಚ್ಚಿಸಬೇಕೆಂದು 14 ಹಾಲು ಉತ್ಪಾದಕರ ಸಂಘಗಳು ಮನವಿ ಮಾಡಿವೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಬೆಂಗಳೂರು: ಹಾಲಿನ ದರ ಹೆಚ್ಚಿಸಬೇಕೆಂದು 14 ಹಾಲು ಉತ್ಪಾದಕರ ಸಂಘಗಳು ಮನವಿ ಮಾಡಿದ್ದು, ದರ ಹೆಚ್ಚಿಸಿದರೆ ರೈತರಿಗೆ ಹಣ ನೀಡುವುದಾಗಿ ಉತ್ಪಾದಕ ಸಂಘಗಳು ಹೇಳಿವೆ ಎಂದು ವಿಧಾನಸೌಧದಲ್ಲಿ ರಾಜ್ಯ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಗ್ರಾಹಕರು ಹಾಲಿನ ದರ ಹೆಚ್ಚಿಸಬೇಡಿ ಎಂದು ಒತ್ತಡ ಹಾಕುತ್ತಿದ್ದಾರೆ. ಹೀಗಾಗಿ ಈ ವಿಚಾರದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ನವೆಂಬರ್ನಲ್ಲಿ ಸಹಕಾರ ಸಪ್ತಾಹ
ಸಹಕಾರ ಸಪ್ತಾಹವನನ್ನು ಪ್ರತಿ ವರ್ಷದಂತೆ ಈ ವರ್ಷವು ಆಚರಣೆ ಮಾಡಲು ನಿರ್ಧರಿಸಲಾಗಿದೆ. ನವೆಂಬರ್ 14 ರಿಂದ 20ರ ವರೆಗೆ ಕಲ್ಬುರ್ಗಿಯಲ್ಲಿ 69ನೇ ಸಹಕಾರ ಸಪ್ತಾಹ ನಡೆಯಲಿದೆ. ಈ ಕಾರ್ಯಕ್ರಮವು 7 ಜಿಲ್ಲೆಗಳಲ್ಲಿ 7 ದಿನಗಳ ಕಾಲ ನಡೆಯಲಿದೆ. ಸಹಕಾರ ಸಪ್ತಾಹಕ್ಕೆ ಸಿಎಂ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ. ಸಹಕಾರ ಸಪ್ತಾಹಕ್ಕೆ ಪಕ್ಷಾತೀತವಾಗಿ ಎಲ್ಲಾ ಮುಖಂಡರಿಗೂ ಆಹ್ವಾನ ನೀಡಲಾಗುತ್ತದೆ ಎಂದರು.
ಈ ಹಿಂದೆ ಕೇಂದ್ರ ಸರ್ಕಾರ ಹಾಲು ಮತ್ತು ಹಾಲಿನ ಉತ್ಪನ್ನಗಳ ಮೇಲೆ ಶೇ 5ರಷ್ಟು ಸರಕು ಸೇವಾ ಸುಂಕ (GST) ವಿಧಿಸಿತ್ತು. ಇದರಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯಾಗಿವೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿದೆ. ಈಗ ಹಾಲು ಉತ್ಪಾದಕರ ಸಂಘಗಳು ಹಾಲಿನ ದರ ಏರಿಸುವಂತೆ ಮನವಿ ಮಾಡಿದ್ದು, ಇದರಿಂದ ಜನರಿಗೆ ತೀರ್ವ ಸಂಕಷ್ಟ ಎದುರಾಗಲಿದೆ.
ಎಷ್ಟು ದರ ಹೆಚ್ಚಳವಾಗಿದೆ
ಪ್ರತಿ ಉತ್ಪನ್ನದ ಮೇಲೆ ಸರಾಸರಿ ₹ 1ರಂದ ₹ 3ರವರೆಗೆ ಬೆಲೆ ಹೆಚ್ಚಾಗಿದೆ. ಈ ಮೊದಲು ಲೀಟರ್ ಮೊಸರಿಗೆ ₹ 43 ಇತ್ತು. ಜುಲೈ 18 ರಿಂದ ಅದು ₹ 46 ಆಗಿದೆ. ಅರ್ಧ ಲೀಟರ್ ಮೊಸರಿನ ಬೆಲೆ ₹ 22 ಇತ್ತು. ಜುಲೈ 18 ರಿಂದ ₹ 24 ಆಗಿದೆ. 200 ಎಂಎಲ್ ಮಜ್ಜಿಗೆ ಹಾಗೂ ಲಸ್ಸಿ ಮೇಲೆ ₹ 1 ಹೆಚ್ಚಳವಾಗಿದೆ. ಪಾಕೆಟ್ಗಳ ಮೇಲೆ ಹಳೆಯ ದರಗಳೇ ನಮೂದಾಗಿರುತ್ತವೆ. ಆದರೆ ಗ್ರಾಹಕರು ಹೊಸದಾಗಿ ನಿಗದಿಪಡಿಸಿರುವಷ್ಟು ದರ ನೀಡಿ ಖರೀದಿಸಬೇಕು ಎಂದು ಕೆಎಂಎಫ್ ಪ್ರಕಟಣೆಯಲ್ಲಿ ತಿಳಿಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:52 pm, Wed, 19 October 22