Politics: ತೆಲಂಗಾಣ ಗರಡಿಯಲ್ಲಿ ಜೆಡಿಎಸ್ ಚುನಾವಣಾ ತಾಲೀಮು: ಉಳಿಸುತ್ತೋ ಉರುಳಿಸುತ್ತೋ ಉಳಿಯೇಟು
ಇತ್ತ ಬಿಜೆಪಿ ಹಾಗೂ ಕಾಂಗ್ರೆಸ್ ಪೇಸಿಎಂ ಗಲಾಟೆಯಲ್ಲಿ ಬ್ಯುಸಿಯಾಗಿದ್ದರೆ, ಅತ್ತ ಜೆಡಿಎಸ್ ‘ನೆಕ್ಸ್ಟ್ ಸಿಎಂ’ ಕುರ್ಚಿ ಕೆತ್ತುವ ಕೆಲಸ ಶುರು ಮಾಡಿದೆ. ಉಳಿಯೇಟು ಉಳಿಸುತ್ತೋ, ಉರುಳಿಸುತ್ತೋ ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಬೇಕು.
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಯಾತ್ರೆ, ಪ್ರವಾಸದ ಮೂಡ್ಗೆ ಜಾರಿವೆ. ಮತ್ತೊಂದೆಡೆ ರಾಜ್ಯದಲ್ಲಿ ಕೇವಲ ಎರಡೇ ಪಕ್ಷಗಳಿವೆಯೇನೋ ಎಂಬಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ವಾದ ಪ್ರತಿವಾದದ ಅಬ್ಬರ ಮಾಧ್ಯಮಗಳಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದೆ. ಹಾಗಾದರೆ ಜೆಡಿಎಸ್ನ ‘ಮಿಷನ್ 123 ಏನಾಯ್ತು’ ಎಂದು ಕೇಳಿದವರಿಗೆಲ್ಲ, ‘ನಿಮಗೆ ಅಚ್ಚರಿ ನೀಡ್ತೀವಿ ನೋಡ್ತಾ ಇರಿ ಎನ್ನುತ್ತಿದ್ದಾರೆ ಜೆಡಿಎಸ್ ನಾಯಕರು.
ರಾಜಕೀಯ ವಿಶ್ಲೇಷಣೆ: ಪ್ರಮೋದ್ ಶಾಸ್ತ್ರಿ, ಪೊಲಿಟಿಕಲ್ ಬ್ಯೂರೋ ಚೀಫ್, ಟಿವಿ9
ಇಷ್ಟಕ್ಕೂ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್ ಏನು ಮಾಡುತ್ತಿದೆ ಎಂಬ ಕುತೂಹಲ ಅನೇಕರಲ್ಲಿದೆ. ಕೆಲವರು ಈಗಾಗಲೇ ದಳವನ್ನು ಮುಂದಿನ ವಿಧಾನ ಸಭಾ ಚುನಾವಣೆಯ ಫಲಿತಾಂಶದ ಚಾರ್ಟ್ ಟೇಬಲ್ನ ಕೊನೆಯ ಕಾಲಂಗೆ ಇಳಿಸಿದ್ದಾರೆ. ಹಾಗಂತ ಜೆಡಿಎಸ್ ಸುಮ್ಮನೆ ಕುಳಿತಿಲ್ಲ. ಬಿಡದಿಯಲ್ಲೋ, ಪದ್ಮನಾಭನಗರದಲ್ಲೋ ತಾಜ್ ಹೊಟೆಲ್ನಲ್ಲೋ, ಎಲ್ಲಿಂದಲೋ ನಾವು ನಮ್ಮ ಕೆಲಸ ಮಾಡ್ತಾ ಇದಿವಿ. ಸೋ ಕಾಲ್ಡ್ ಪೊಲಿಟಿಕಲ್ ಪಂಡಿತರಿಗೆ ಶಾಕ್ ನೀಡ್ತೀವಿ ನೋಡ್ತಾ ಇರಿ ಅಂತಿದ್ದಾರೆ ಜೆಡಿಎಸ್ ನಾಯಕರು.
ಈ ಪೈಕಿ ಗಮನ ಸೆಳೆಯುವ ಬೆಳವಣಿಗೆ ಅಂದರೆ, ಜೆಡಿಎಸ್ ಮುಖ್ಯಸ್ಥ ಎಚ್.ಡಿ.ಕುಮಾರಸ್ವಾಮಿ, ಟಿಆರ್ಎಸ್ ಪಕ್ಷದ ಸಭೆಯಲ್ಲಿ ಕಾಣಿಸಿಕೊಂಡಿದ್ದು. ಅಷ್ಟೇ ಅಲ್ಲದೆ ತಮ್ಮ 20ಕ್ಕೂ ಹೆಚ್ಚು ಶಾಸಕರನ್ನು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಎದುರು ಪರೇಡ್ ಮಾಡಿಸಿ ಪರಿಚಯ ಮಾಡಿಕೊಟ್ಟಿದ್ದು ಸಹ ಕುತೂಹಲವೇ. ಇದು ರಾಜ್ಯ ರಾಜಕಾರಣದೊಳಗೊಂದು ಚರ್ಚೆಯನ್ನು ಹುಟ್ಟುಹಾಕಿರುವುದೆಂತು ಸತ್ಯ. ಇಷ್ಟಕ್ಕೂ ಕುಮಾರಸ್ವಾಮಿ ಜೆಡಿಎಸ್ ಶಾಸಕರನ್ನ ಕೆಸಿಆರ್ ಮುಂದೆ ನಿಲ್ಲಿಸಿದ್ದೇಕೆ? ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದಾಗ ನನಗೆ ದೂರದ ಹೈದರಾಬಾದ್ನ ಲೆಕ್ಕಾಚಾರದ ಮಾಹಿತಿ ಸಿಕ್ಕಿತು.
ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರಿಗೆ ಪ್ರಧಾನಿಯಾಗಬೇಕೆನ್ನುವ ಕನಸು ಟಿಸಿಲೊಡೆದಿದೆ. ಆ ಕನಸನ್ನು ಪೂರ್ಣವಾಗಿ ಹೊಲಿದು ದಕ್ಷಿಣ ಭಾರತದ ಇತರ ಪಕ್ಷಗಳ ಜೊತೆ ಬೆಸೆದರೆ ಮಾತ್ರ ಅದಕ್ಕೊಂದು ಪೂರ್ಣ ರೂಪ ಸಿಗಲಿದೆ. ಆ ಬಳಿಕವಷ್ಟೇ ಕೆಸಿಆರ್ ಹೊಲಿದ ರಾಜಕೀಯದ ಬಟ್ಟೆಯನ್ನ ಪ್ರಧಾನಿ ಸೀಟಿನ ಮೇಲೆ ಎಸೆಯಲು ಸಾಧ್ಯ. ಹೀಗಾಗಿ ಟಿಆರ್ಎಸ್ ಮೊದಲ ಹೆಜ್ಜೆಯಾಗಿ ತನ್ನನ್ನ ಬಿಆರ್ಎಸ್ ಎಂದು ಮರು ನಾಮಕರಣ ಮಾಡಿಕೊಂಡು ರಾಷ್ಟ್ರೀಯ ಪಕ್ಷವಾಗಿಸಿಕೊಂಡಿತು. ಇದರ ಮುಂದುವರಿದ ಭಾಗವೇ ಜೆಡಿಎಸ್ ಜೊತೆಗಿನ ಮೈತ್ರಿ.
ಇತ್ತ ಕರ್ನಾಟಕದಲ್ಲಿ ಸಹ ಎಚ್.ಡಿ.ಕುಮಾರಸ್ವಾಮಿ ಅವರ ಮುಖ್ಯಮಂತ್ರಿ ಕನಸು ಪರಿಪೂರ್ಣವಾಗಿಲ್ಲ. ನೀಚಭಂಗ ರಾಜಯೋಗವನ್ನ ಚಕ್ರಾಧಿಪತ್ಯ ಯೋಗವಾಗಿ ಪರಿವರ್ತಿಸಲು ಕೇವಲ ಜ್ಯೋತಿಷಿಗಳಿಂದ ಮಾತ್ರ ಸಾಧ್ಯವಿಲ್ಲ. ಹೀಗಾಗಿ ಕುಮಾರಸ್ವಾಮಿ ಕೆಸಿಆರ್ ಹೆಗಲ ಮೇಲೆ ಗಲ್ಲವಿಟ್ಟಿದ್ದಾರೆ.
ಇನ್ನು ರಾಜಕೀಯದ ಅಸಲಿ ಆಟಕ್ಕೆ ಬರುವುದಾದರೆ ಜೆಡಿಎಸ್ ಹಾಗೂ ಬಿಆರ್ಎಸ್ ಊರ್ಫ್ ಟಿಆರ್ಎಸ್ ನಡುವೆ ಚುನಾವಣಾ ಮೈತ್ರಿ ಬಗ್ಗೆ ಮಾತುಕತೆಯಾಗಿದೆ. ಹಾಗಂತ ಟಿಆರ್ಎಸ್ ಕರ್ನಾಟಕ ರಾಜ್ಯ ರಾಜಕೀಯಕ್ಕೆ ಎಂಟ್ರಿ ಕೊಡ್ತಾ ಇಲ್ಲ. ಅವರ ಆಟವೇನಿದ್ದರೂ ಲೋಕಸಭಾ ಚುನಾವಣೆಗೆ ಮಾತ್ರ ಸೀಮಿತ. ಮೂಲಗಳ ಪ್ರಕಾರ ಲೋಕಸಭಾ ಚುನಾವಣೆಗೆ ಜೆಡಿಎಸ್ ಮತ್ತು ಟಿಆರ್ಎಸ್ ಎರಡೂ ಮೈತ್ರಿ ಮಾಡಿಕೊಂಡಿವೆ. ಲೋಕಸಭಾ ಚುನಾವಣೆಗೆ ಜೆಡಿಎಸ್, ಟಿಆರ್ಎಸ್ ಜೊತೆಗೆ ಗಟ್ಟಿಯಾಗಿ ನಿಲ್ಲಲಿದೆ. ಇದಕ್ಕೆ ಪ್ರತಿಯಾಗಿ ಟಿಆರ್ಎಸ್, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ಗೆ ಸಂಪೂರ್ಣವಾಗಿ ಸಹಾಯ ಮಾಡಲಿದೆ. ಅದರಲ್ಲೂ ತೆಲಂಗಾಣ ಆಂಧ್ರ ಗಡಿ ಪ್ರದೇಶದ ಸುಮಾರು 20ಕ್ಕೂ ಹೆಚ್ಚು ಕ್ಷೇತ್ರಗಳನ್ನು ಈಗಾಗಲೇ ಗುರುತಿಸಲಾಗಿದ್ದು, ತೆಲಗು ಪ್ರಭಾವ ಬೀರಬಲ್ಲ ಕ್ಷೇತ್ರಗಳಲ್ಲಿ ಟಿಆರ್ಸ್ ನಾಯಕರು ಹಾಗೂ ಕಾರ್ಯಕರ್ತರು ಜೆಡಿಎಸ್ ಪರ ಕೆಲಸ ಮಾಡಲಿದ್ದಾರೆ. ಅಲ್ಲದೇ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಸಹ ಟಿಆರ್ಎಸ್ ಸಹಾಯ ಮಾಡಲಿದೆ.
ಕರ್ನಾಟಕದ ಹಲವೆಡೆ ಜೆಡಿಎಸ್ನ ‘ಬಂಡವಾಳ’ವೇ ಬಿಆರ್ಎಸ್ ಆಗಿರಲಿದೆ. ಗಡಿಭಾಗದಲ್ಲಿ ತೆಲುಗು ಭಾಷಿಕ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆದ್ದಷ್ಟು ಲೋಕಸಭಾ ಚುನಾವಣೆಗೆ ಟಿಆರ್ಎಸ್ಗೆ ಲಾಭ ಎಂಬುದು ಕೆಸಿಆರ್ ಲೆಕ್ಕಾಚಾರ.
ಇದಕ್ಕಾಗಿ ಕೆಸಿಆರ್ ತಮ್ಮ ಪುತ್ರ ಕೆ.ಟಿ.ರಾಮಾರಾವ್ ಅವರನ್ನೇ ಕಣಕ್ಕಿಳಿಸಿದ್ದಾರೆ. ಹಿಂದೊಮ್ಮೆ ಕುಮಾರಸ್ವಾಮಿ ಬಿಡಿದಿಯಲ್ಲಿ ಕಾರ್ಪೋರೇಟ್ ಮಾದರಿ ಕಾರ್ಯಾಗಾರ ಮಾಡಿದ್ದರು. ಅದರ ಮುಂದಿನ ಭಾಗವನ್ನು ಮೈಸೂರಿನಲ್ಲಿ ಹಮ್ಮಿಕೊಂಡಿದ್ದಾರೆ. ಜೆಡಿಎಸ್ನ ಈ ಕಾರ್ಯಾಗಾರಕ್ಕೆ ತೆಲಂಗಾಣ ಮುಖ್ಯಮಂತ್ರಿಯ ಪುತ್ರ ಹಾಗೂ ಸಚಿವ ಕೆಟಿಆರ್ ಎಂಟ್ರಿ ಕೊಟ್ಟಿದ್ದಾರೆ. ಅವರ ಜೊತೆ ತಮ್ಮ ತೆಲಂಗಾಣ ಸರ್ಕಾರದ ದಕ್ಷ ಸಚಿವರು, ನಿವೃತ್ತ ಹಿರಿಯ ಅಧಿಕಾರಿಗಳನ್ನ ಸಹ ಕರೆತಂದಿದ್ದಾರೆ. ಜೆಡಿಎಸ್ ನಾಯಕರಿಗೆ ಚುನಾವಣಾ ತಂತ್ರಗಾರಿಕೆ ಜೊತೆಗೆ ಪಕ್ಷ ಸಂಘಟನೆ ವಿಚಾರವನ್ನು ಸಹ ಮುಂದಿಡಲಿದ್ದಾರೆ. ಅಲ್ಲದೇ ಈ ಬಾರಿ ಕೃಷಿ, ಶಿಕ್ಷಣ, ಸಹಕಾರ, ಮಹಿಳೆ, ನೀರಾವರಿ ಕ್ಷೇತ್ರಗಳನ್ನು ಮುಂದಿಟ್ಟುಕೊಂಡು ‘ಪಂಚರತ್ನ ಮಾಡೆಲ್’ ಅನ್ನ ಘೋಷಣೆ ಮಾಡಿರುವ ಜೆಡಿಎಸ್ಗೆ ಕೆಟಿಆರ್ ತೆಲಂಗಾಣದ ದಲಿತ ಬಂಧು, ರೈತ ಬಂಧು ಯೋಜನೆಯನ್ನು ಪರಿಚಯಿಸಲಿದ್ದಾರೆ.
ಈ ಮೂಲಕ ಚುನಾವಣೆ ಪ್ರಚಾರದಲ್ಲಿ ಜೆಡಿಎಸ್ ಪ್ರಣಾಳಿಕೆಯ ಜೊತೆ ಟಿಆರ್ಎಸ್ ಯೋಜನೆಗಳು ಪ್ರಚಾರವಾಗಲಿ ಎಂಬ ಉದ್ದೇಶ ಇರಬಹುದು ಅಥವಾ ಜೆಡಿಎಸ್ ಪ್ರಣಾಳಿಕೆಯಲ್ಲೇ ತೆಲಂಗಾಣ ಸರ್ಕಾರದ ಮಾಡಲ್ ಅಳವಡಿಕೆ ಮಾಡಿದರೂ ಅಚ್ಚರಿ ಏನಿಲ್ಲ. ಹೀಗೆ ಜೆಡಿಎಸ್ ದೂರದ ಹೈದರಾಬಾದ್ ಗರಡಿಯಲ್ಲಿ ತನ್ನ ಚುನಾವಣೆ ತಾಲಿಮು ನಡೆಸುತ್ತಿದೆ. ಇತ್ತ ಬಿಜೆಪಿ ಹಾಗೂ ಕಾಂಗ್ರೆಸ್ ಪೇಸಿಎಂ ಗಲಾಟೆಯಲ್ಲಿ ಬ್ಯುಸಿಯಾಗಿದ್ದರೆ, ಅತ್ತ ಜೆಡಿಎಸ್ ‘ನೆಕ್ಸ್ಟ್ ಸಿಎಂ’ ಕುರ್ಚಿ ಕೆತ್ತುವ ಕೆಲಸ ಶುರು ಮಾಡಿದೆ. ಉಳಿಯೇಟು ಉಳಿಸುತ್ತೋ, ಉರುಳಿಸುತ್ತೋ ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಬೇಕು.