AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಜಿಸಿಇಟಿ ಕೌನ್ಸೆಲಿಂಗ್ ಗೊಂದಲ: ಕೆಇಎ ನಡೆಗೆ ಪಿಜಿ ವಿದ್ಯಾರ್ಥಿಗಳು ಕಂಗಾಲು!

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪಿಜಿಸಿಇಟಿ ಎರಡನೇ ಸುತ್ತಿನ ಕೌನ್ಸೆಲಿಂಗ್ ಕುರಿತು ಸ್ಪಷ್ಟತೆ ನೀಡದಿರುವುದರಿಂದ ಸಾವಿರಾರು ಎಂಬಿಎ, ಎಂಸಿಎ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಸಾವಿರಾರು ಸೀಟುಗಳು ಖಾಲಿಯಿದ್ದರೂ ಪ್ರವೇಶ ಪ್ರಕ್ರಿಯೆ ವಿಳಂಬವಾಗುತ್ತಿದ್ದು, ತಕ್ಷಣವೇ ಎರಡನೇ ಸುತ್ತಿನ ಆಪ್ಶನ್ ಎಂಟ್ರಿಗೆ ಅವಕಾಶ ನೀಡುವಂತೆ ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ.

ಪಿಜಿಸಿಇಟಿ ಕೌನ್ಸೆಲಿಂಗ್ ಗೊಂದಲ: ಕೆಇಎ ನಡೆಗೆ ಪಿಜಿ ವಿದ್ಯಾರ್ಥಿಗಳು ಕಂಗಾಲು!
ಪಿಜಿಸಿಇಟಿ ಕೌನ್ಸೆಲಿಂಗ್ ಗೊಂದಲ
ವಿನಯ್​ ಕಾಶಪ್ಪನವರ್​
| Edited By: |

Updated on:Oct 07, 2026 | 9:06 AM

Share

ಮುಖ್ಯಾಂಶಗಳು

  • ಪಿಜಿಸಿಇಟಿ ಪ್ರವೇಶ ಪ್ರಕ್ರಿಯೆಯಲ್ಲಿ ಎರಡನೇ ಸುತ್ತಿನ ಕೌನ್ಸೆಲಿಂಗ್ ಗೊಂದಲದಿಂದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.
  • ಸಾವಿರಾರು ಪಿಜಿ ಸೀಟುಗಳು ಖಾಲಿಯಿದ್ದು ಆಪ್ಶನ್ ಎಂಟ್ರಿಗೆ ಅವಕಾಶ ನೀಡಲು ಆಗ್ರಹಿಸಿದ್ದಾರೆ.
  • ಅಕ್ಟೋಬರ್ 15ರಿಂದ ತರಗತಿ ಆರಂಭದ ಗಡುವಿದ್ದು ತಕ್ಷಣ ಪ್ರವೇಶ ಪ್ರಕಟಿಸಲು ಒತ್ತಾಯಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 07: ರಾಜ್ಯದಲ್ಲಿ ಎಂಬಿಎ, ಎಮ್​ಸಿಎ, ಎಮ್.ಟೆಕ್, ಎಮ್​ಇ ಸೇರಿದಂತೆ ವಿವಿಧ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಗ್ ಶಾಕ್ ನೀಡಿದೆ. ಮೊದಲ ಸುತ್ತಿನ PGCET ಸೀಟ್ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ಎರಡನೇ ಮತ್ತು ಮೂರನೇ ಸುತ್ತಿನ ಕೌನ್ಸೆಲಿಂಗ್ ನಡೆಯುತ್ತದೆಯೋ ಇಲ್ಲವೋ ಎಂಬ ಗೊಂದಲ ಶೈಕ್ಷಣಿಕ ವಲಯದಲ್ಲಿ ದೊಡ್ಡ ಮಟ್ಟದ ಆತಂಕ ಮೂಡಿಸಿದೆ.

ಸಾವಿರಾರು ಸೀಟುಗಳು ಖಾಲಿ: ಎರಡನೇ ಸುತ್ತಿನ ಅವಕಾಶಕ್ಕೆ ವಿದ್ಯಾರ್ಥಿಗಳ ಆಗ್ರಹ

ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಸೀಟ್ ಮ್ಯಾಟ್ರಿಕ್ಸ್ ಸಲ್ಲಿಕೆಯಲ್ಲಿ ಉಂಟಾದ ವಿಳಂಬದಿಂದಾಗಿ ಈ ಬಾರಿಯ ಕೌನ್ಸೆಲಿಂಗ್ ಪ್ರಕ್ರಿಯೆ ಈಗಾಗಲೇ ಸಾಕಷ್ಟು ತಡವಾಗಿದೆ. KEA ಪ್ರಕಟಿಸಿದ ಮೊದಲ ಸುತ್ತಿನ ಫಲಿತಾಂಶದಲ್ಲಿ 23,164 ಸೀಟ್‌ಗಳನ್ನು ಹಂಚಿಕೆ ಮಾಡಲಾಗಿತ್ತು. ಆದಾಗ್ಯೂ, ಇನ್ನೂ 9,574 ಎಮ್​ಸಿಎ, 2,195 ಎಮ್​ಬಿಎ ಹಾಗೂ 1,821 ಎಮ್​.ಟೆಕ್ ಸೀಟುಗಳು ಖಾಲಿಯಾಗಿಯೇ ಉಳಿದಿವೆ.

ಕಳೆದ ವರ್ಷಗಳಂತೆ 2ನೇ ಸುತ್ತಿನಲ್ಲಿ ಆಪ್ಶನ್ ಎಂಟ್ರಿ ಬದಲಾಯಿಸಿ, ಉತ್ತಮ ಕಾಲೇಜು ಪಡೆಯಬಹುದು ಎಂಬ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ KEA ಸ್ಪಷ್ಟ ಮಾಹಿತಿ ನೀಡದಿರುವುದು ನಿರಾಸೆ ಮೂಡಿಸಿದೆ. ಒಂದೇ ಸುತ್ತಿನಲ್ಲಿ ಪ್ರವೇಶ ಪ್ರಕ್ರಿಯೆ ಮುಗಿಸಲು ಪ್ರಾಧಿಕಾರ ಮುಂದಾಗಿದೆಯೇ ಎಂಬ ಅನುಮಾನ ಮೂಡಿದ್ದು, ಸೀಟು ಪಡೆಯದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಸಂಕಷ್ಟಕ್ಕೆ ಸಿಲುಕಿದೆ.

ಕಾಲಮಿತಿ ಒತ್ತಡ: ಸುಪ್ರೀಂ ಕೋರ್ಟ್ ತೀರ್ಪಿನತ್ತ ಎಲ್ಲರ ಚಿತ್ತ

ಇನ್ನೊಂದೆಡೆ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಹೊರಡಿಸಿರುವ ವೇಳಾಪಟ್ಟಿಯಂತೆ ಅಕ್ಟೋಬರ್ 15ರಿಂದ ಪಿಜಿ ತರಗತಿಗಳು ಕಡ್ಡಾಯವಾಗಿ ಆರಂಭವಾಗಬೇಕಿದೆ. ಪ್ರವೇಶ ಗಡುವು ವಿಸ್ತರಿಸುವಂತೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು ಸಲ್ಲಿಸಿದ್ದ ಮನವಿಗೆ ಸುಪ್ರೀಂ ಕೋರ್ಟ್ ನಿಗದಿತ ವೇಳಾಪಟ್ಟಿ ಪಾಲಿಸಲು ನಿರ್ದೇಶಿಸಿದೆ. ಕೆಇಎ ವೆಬ್‌ಸೈಟ್‌ನಲ್ಲೂ ಸೂಕ್ತ ಮಾಹಿತಿಯಿಲ್ಲದೆ ಕಾಲೇಜು ಆಯ್ಕೆ ಮತ್ತು ಹಣಕಾಸಿನ ವ್ಯವಸ್ಥೆ ಮಾಡಿಕೊಳ್ಳಲು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.

LIVE TV

ಮೊದಲ ಸುತ್ತಿನಲ್ಲಿ ಆಯ್ಕೆಯಾದವರಿಗೆ ಶುಲ್ಕ ಪಾವತಿಸಲು ಅಕ್ಟೋಬರ್ 7 ಹಾಗೂ ಕಾಲೇಜು ಪ್ರವೇಶಕ್ಕೆ ಅಕ್ಟೋಬರ್ 8ರ ಕೊನೆಯ ದಿನವಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಜೊತೆ ಚೆಲ್ಲಾಟವಾಡದೆ, ತಕ್ಷಣವೇ ಕೆಇಎ 2ನೇ ಹಾಗೂ 3ನೇ ಸುತ್ತಿನ ಕೌನ್ಸೆಲಿಂಗ್ ಪ್ರಕಟಿಸಬೇಕು ಎಂದು ವಿದ್ಯಾರ್ಥಿಗಳು ಆನ್‌ಲೈನ್ ಅಭಿಯಾನದ ಮೂಲಕ ಒತ್ತಾಯಿಸುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:46 am, Wed, 7 October 26

Follow Us
ವಿನಯ್​ ಕಾಶಪ್ಪನವರ್​
ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More