ಬೆಂಗಳೂರು, ನವೆಂಬರ್ 27: ಕೇರಳದ ಪ್ರಸಿದ್ಧ ಯಾತ್ರಾ ಸ್ಥಳ ಶಬರಿಮಲೆಗೆ (Shabarimala) ಅಯ್ಯಪ್ಪನ ದರ್ಶನಕ್ಕಾಗಿ ತೆರಳುವವರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬೆಂಗಳೂರಿನಿಂದ ಬಸ್ ವ್ಯವಸ್ಥೆ ಮಾಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನಿಂದ ಶಬರಿಮಲೆಗೆ ವೋಲ್ವೋ ಬಸ್ ಕಾರ್ಯಚರಣೆ ನಡೆಸಲಿದೆ. ಬೆಂಗಳೂರಿಂದ ನೀಲಕ್ಕಲ್ (ಪಂಪಾ, ಶಬರಿಮಲೈ) ಮಾರ್ಗವಾಗಿ ವೋಲ್ವೋ ಬಸ್ ಸಂಚರಿಸಲಿದೆ.
ಡಿಸೆಂಬರ್ 1 ರಿಂದ ಶಬರಿಮಲೆಗೆ ವೋಲ್ವೋ ಬಸ್ ಸಂಚರಿಸಲಿದೆ. ವೋಲ್ವೊ ಬಸ್ನ ಟಿಕೆಟ್ ದರ, ಮಾರ್ಗ, ಸಂಚಾರದ ವೇಳಾಪಟ್ಟಿಯ ಕುರಿತು ಕೆಎಸ್‌ಆರ್‌ಟಿಸಿ ಮಾಹಿತಿ ನೀಡಿದೆ.
ವಯಸ್ಕರಿಗೆ ಬೆಂಗಳೂರಿಂದ ಶಬರಿಮಲೆಗೆ 1600 ರೂಪಾಯಿ ದರ ನಿಗದಿ ಮಾಡಲಾಗಿದೆ. ಶಾಂತಿನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 1.50 ಕ್ಕೆ ಹೊರಡಲಿರುವ ವೋಲ್ವೋ ಬಸ್ ಮರುದಿನ ಬೆಳಿಗ್ಗೆ 6.45 ಕ್ಕೆ ಪಂಪಾ ತಲುಪಲಿದೆ. ಅಂದು ಸಂಜೆ ಮತ್ತೆ ಪಂಪಾದಿಂದ ಹೊರಟು ಮರುದಿನ ಬೆಳಿಗ್ಗೆ 10 ಗಂಟೆಗೆ ಬೆಂಗಳೂರು ತಲುಪಲಿದೆ.
ಮತ್ತೊಂದು ರಾಜಹಂಸ ಬಸ್ (ನಾನ್‌ಎಸಿ) ಕೂಡ ಶಬರಿಮಲೆಗೆ ಸಂಚರಿಸಲಿದೆ. ರಾಜಹಂಸ ಬಸ್ ಶಾಂತಿನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 1 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 8.15ಕ್ಕೆ ಪಂಪಾ ತಲುಪಲಿದೆ. ಆ ದಿನ ಸಂಜೆ 5 ಗಂಟೆಗೆ ಪಂಪಾದಿಂದ ಹೊರಟು ಮರುದಿನ ಮಧ್ಯಾಹ್ನ 12 ಗಂಟೆಗೆ ಬೆಂಗಳೂರು ತಲುಪಲಿದೆ. ರಾಜಹಂಸದಲ್ಲಿ ಬೆಂಗಳೂರಿನಿಂದ ಶಬರಿಮಲೆಗೆ ಪ್ರತಿ ಟಿಕೆಟ್ ಬೆಲೆ 940 ರೂ. ಆಗಿದೆ.
ಕೆಎಸ್‌ಆರ್‌ಟಿಸಿ ಅಧಿಕೃತ ವೆಬ್ಸೈಟ್ (www.ksrtc.in) ಮೂಲಕ ಅಥವಾ ರಾಜ್ಯದಾದ್ಯಂತ ಪ್ರಮುಖ ಬಸ್ ಡಿಪೋಗಳಲ್ಲಿ ಕಾರ್ಯನಿರ್ವಹಿಸುವ ಕೆಎಸ್‌ಆರ್‌ಟಿಸಿ ಟಿಕೆಟ್ ಕೌಂಟರ್‌ಗಳಲ್ಲಿ ಟಿಕೆಟ್ ಕಾಯ್ದಿರಿಸುವಂತೆ ಸಂಸ್ಥೆಯು ಪ್ರಯಾಣಿಕರಿಗೆ ಸಲಹೆ ನೀಡಿದೆ.
ಕೆಎಸ್‌ಆರ್‌ಟಿಸಿ ಪ್ಯಾಸೆಂಜರ್ ಅಡ್ವೈಸರಿಯಲ್ಲಿರುವ ಮಾಹಿತಿ ಪ್ರಕಾರ, ಕರ್ನಾಟಕ ರಾಜ್ಯದಾದ್ಯಂತ ಮತ್ತು ನೆರೆಯ ರಾಜ್ಯಗಳ ಪ್ರಮುಖ ಕಡೆಗಳಲ್ಲಿ ಒಟ್ಟು 707 ಟಿಕೆಟ್ ಕೌಂಟರ್‌ಗಳು ಕಾರ್ಯನಿರ್ವಹಿಸುತ್ತಿವೆ.
ಇದನ್ನೂ ಓದಿ: ಅಂಬಾರಿ, ಪಲ್ಲಕ್ಕಿ ಉತ್ಸವಕ್ಕಾಗಿ ಕೆಎಸ್ಆರ್ಟಿಸಿಗೆ ಅತ್ಯುತ್ತಮ ಸಾರ್ವಜನಿಕ ಸಂಸ್ಥೆ ಪ್ರಶಸ್ತಿ
ಪ್ರತಿ ವರ್ಷ ಡಿಸೆಂಬರ್ ಹಾಗೂ ಜನವರಿಯಲ್ಲಿ ಭಕ್ತರು ಶಬರಿಮಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರೆ ಕೈಗೊಳ್ಳುತ್ತಾರೆ. ಜನವರಿಯಲ್ಲಿ ಮಕರ ಸಂಕ್ರಮಣದ ದಿನ ದೇಗುಲದಲ್ಲಿ ವಾರ್ಷಿಕ ಉತ್ಸವ ನಡೆಯಲಿದ್ದು, ಮಕರ ಜ್ಯೋತಿಯ ದರ್ಶನವಾಗುತ್ತದೆ. ಉತ್ಸವದ ದಿನ ಲಕ್ಷಾಂತರ ಭಕ್ತರು ಶಬರಿಮಲೆಗೆ ತೆರಳುತ್ತಾರೆ. ಕರ್ನಾಟಕದಿಂದಲೂ ಹೆಚ್ಚಿನ ಸಂಖ್ಯೆಯ ಭಕ್ತರು ಶಬರಿಮಲೆಗೆ ಯಾತ್ರೆ ಕೈಗೊಳ್ಳುತ್ತಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ