ಬೆಂಗಳೂರು, ನ.27: ನಿಗಮದ ಇತಿಹಾಸದಲ್ಲೇ ಇದೇ ಪ್ರಪ್ರಥಮ ಬಾರಿಗೆ KSRTC ಲಾರಿಗಳ ಖರೀದಿಗೆ ಮುಂದಾಗಿದೆ. ಸಾರ್ವಜನಿಕ ಸೇವೆಯಲ್ಲಿ ಈಗಾಗಲೇ ಮೈಲಿಗಲ್ಲು ಸಾಧಿಸಿರೋ KSRTC ಈಗ ಲಾಜಿಸ್ಟಿಕ್ಸ್ ವಿಭಾಗದಲ್ಲೂ ತನ್ನ ಅದೃಷ್ಟ ಪರೀಕ್ಷೆಗೆ ಇಳಿದಿದೆ. ಆರಂಭಿಕ ಹಂತದಲ್ಲೇ 100 ಕೋಟಿ ಆದಾಯದ ನಿರೀಕ್ಷೆ ಇಟ್ಟಿರೋ ಇಲಾಖೆ, ಮುಂದಿನ ದಿನಗಳಲ್ಲಿ ಹೆಚ್ಚುವರಿ ಲಾರಿಗಳನ್ನು ಖರೀದಿ ಮಾಡೋ ಲೆಕ್ಕಾಚಾರವನ್ನೂ ಹೊಂದಿದೆ.
ಇಡೀ ದೇಶದಲ್ಲೇ ಸಾರ್ವಜನಿಕ ಸಾರಿಗೆ ಸೇವೆಯಲ್ಲಿ ಛಾಪು ಮೂಡಿಸಿ ನೂರಾರು ಪ್ರಶಸ್ತಿಗಳನ್ನು ಪಡೆದಿರೋ ಕೆಎಸ್‌ಆರ್‌ಟಿಸಿ ಹೊಸ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. ನಿಗಮಕ್ಕೆ ವಾಣಿಜ್ಯ ಆದಾಯವನ್ನು ಹೆಚ್ಚಿಸಿಕೊಳ್ಳೋ ನಿಟ್ಟಿನಲ್ಲಿ ಲಾಜಿಸ್ಟಿಕ್ಸ್ ಸೇವೆ ಆರಂಭಿಸಲು ನಿರ್ಧರಿಸಿದೆ. ಯಾವ ರೀತಿ ಬಸ್‌ಗಳ ಸೇವೆಯನ್ನು ಇಡೀ ರಾಜ್ಯದಲ್ಲಿ ನೀಡಲಾಗ್ತಿದ್ಯೋ, ಅದೇ ಮಾದರಿಯಲ್ಲೇ ಲಾರಿಗಳ ಸೇವೆಯನ್ನೂ ಇಡೀ ರಾಜ್ಯಕ್ಕೆ ವಿಸ್ತರಿಸಲು ನಿರ್ಧರಿಸಿದೆ. ಒಂದು ವೇಳೆ ಈ ಪ್ಲಾನ್ ಕ್ಲಿಕ್ ಆಗಿ ಅಂದುಕೊಂಡಿರೋದಕ್ಕಿಂತ ಹೆಚ್ಚು ಲಾಭ ಸಿಗುವಂತಾದ್ರೆ ಇತರೆ ರಾಜ್ಯಗಳಿಗೂ ರೂಟ್ ಹಾಕಿ ಲಾರಿಗಳನ್ನು ಕಳಿಸಿ ಗುರಿ ಹೊಂದಿದೆ.
ಇದನ್ನೂ ಓದಿ: ಬೆಂಗಳೂರಿನಿಂದ ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ತೆರಳುವವರಿಗೆ ಕೆಎಸ್‌ಆರ್‌ಟಿಸಿ ವಿಶೇಷ ಬಸ್
ಪೈಲಟ್ ಪ್ರಾಜೆಕ್ಟ್ ಆಗಿರೋ ಈ ಲಾಜಿಸ್ಟಿಕ್ಸ್ ಸೇವೆಯ ಮೇಲೆ ಇಲಾಖೆಗೆ ಹೆಚ್ಚಿನ ನಿರೀಕ್ಷೆಯಿದೆ. ಸಾಮಾನ್ಯವಾಗಿ ನಿಗಮಗಳ ಬಸ್‌ಗಳನ್ನು ಹೇಗೆ ಡಿಪೋಗಳಲ್ಲಿ ನಿರ್ವಹಿಸಲಾಗುತ್ತೋ, ಅದೇ ರೀತಿ ಈ ಲಾರಿಗಳನ್ನು ಕೂಡ ನಿರ್ವಹಿಸಲು ಯೋಜಿಸಲಾಗಿದೆ. ಲಾರಿಯೊಂದಕ್ಕೆ 17.03 ಲಕ್ಷದ ಥರ 3.4 ಕೋಟಿ ರೂಪಾಯಿ ವೆಚ್ಚದಲ್ಲಿ 20 ಲಾರಿಗಳನ್ನು ಖರೀದಿ ಮಾಡಲಾಗಿದೆ. ಪೂಣೆಯಲ್ಲಿ ಈಗಾಗಲೇ ಲಾರಿಗಳ ಬಾಡಿ ಬಿಲ್ಡಿಂಗ್ ಕಾಮಗಾರಿಯೂ ಆರಂಭವಾಗಿದ್ದು, ಕೆಲವೇ ದಿನಗಳಲ್ಲಿ ನೂತನ ಕೆಎಸ್‌ಆರ್‌ಟಿಸಿ ಲಾರಿಗಳು ನಮ್ಮ ರಾಜ್ಯಕ್ಕೆ ಆಗಮಿಸಲಿವೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಸಾರಿಗೆ ಮುಖಂಡರು ಇದರಿಂದ ನಿಗಮಕ್ಕೆ ಲಾಭ ಬರಲಿದೆ ಎಂದು ತಿಳಿಸಿದ್ದಾರೆ.
ಇನ್ನು, ಅಂದುಕೊಂಡ ಸಮಯಕ್ಕೆ ಎಲ್ಲ ಕೆಲಸಗಳು ಮುಗಿದ್ರೆ, ಡಿಸೆಂಬರ್ 15ರಂದು ಈ ಲಾರಿಗಳು ಕೆಎಸ್‌ಆರ್‌ಟಿಸಿಯಿಂದ ಲೋಕಾರ್ಪಣೆಯಾಗಲಿದೆ. ವಾಣಿಜ್ಯ ಆದಾಯ ಜಾಸ್ತಿ ಮಾಡೋ ಉದ್ದೇಶದಿಂದ ಪ್ರಾರಂಭಿಸುತ್ತಿರೋ ಈ ಯೋಜನೆಯಿಂದ ಮೊದಲ ನಿರೀಕ್ಷೆಯೇ ಬರೊಬ್ಬರಿ 100 ಕೋಟಿ ರೂಪಾಯಿಯಾಗಿದೆ. ಒಂದು ವೇಳೆ ಜನರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ರೆ, ಹೆಚ್ಚಿನ ಲಾರಿಗಳನ್ನು ಖರೀದಿಸಿ ರಾಜ್ಯಕ್ಕೆ ಮಾತ್ರ ಸೀಮಿತವಾಗದಂತೆ ಪರರಾಜ್ಯಗಳಿಗೆ ಲಾಜಿಸ್ಟಿಕ್ಸ್ ಸೇವೆ ನೀಡೋ ಚಿಂತನೆ ಸಾರಿಗೆ ಇಲಾಖೆಯದ್ದಾಗಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ