ಲಾಲ್​ಬಾಗ್ ತೋಟಗಾರಿಕೆ ಇಲಾಖೆ ಅಧಿಕಾರಿಯಿಂದ ಮಹಿಳಾ ಸಿಬ್ಬಂದಿ ಮೇಲೆ ದೌರ್ಜನ್ಯ; ಮಹಿಳಾ ಆಯೋಗಕ್ಕೆ ದೂರು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 18, 2022 | 5:56 PM

ಲಾಲ್​ಬಾಗ್ ತೋಟಗಾರಿಕೆ ಇಲಾಖೆ ಅಪರ ನಿರ್ದೇಶಕ ಎನ್​. ಚಂದ್ರಶೇಖರ್ ಕಿರುಕುಳ ನೀಡುತ್ತಿರುವ ಬಗ್ಗೆ ಮಹಿಳಾ ಸಿಬ್ಬಂದಿ ತೋಟಗಾರಿಕಾ ಇಲಾಖೆಗೆ ದೂರು ನೀಡಿದರೂ ಅಧಿಕಾರಿಗಳು ತಲೆ ಕೆಡಿಸಿಕೊಂಡಿರಲಿಲ್ಲ. ಹೀಗಾಗಿ, ಅವರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.

ಲಾಲ್​ಬಾಗ್ ತೋಟಗಾರಿಕೆ ಇಲಾಖೆ ಅಧಿಕಾರಿಯಿಂದ ಮಹಿಳಾ ಸಿಬ್ಬಂದಿ ಮೇಲೆ ದೌರ್ಜನ್ಯ; ಮಹಿಳಾ ಆಯೋಗಕ್ಕೆ ದೂರು
ಲಾಲ್​ಬಾಗ್
Follow us on

ಬೆಂಗಳೂರು: ಮಹಿಳಾ ಸಿಬ್ಬಂದಿಯ ನರಳಾಟಕ್ಕೆ ಮುಕ್ತಿಯಿಲ್ಲವೇ? ಎಂದು ತಮ್ಮ ಅಧಿಕಾರಿಯ ದೌರ್ಜನ್ಯದ ವಿರುದ್ಧ ಮಹಿಳಾ ಸಿಬ್ಬಂದಿಗಳು ಕಿಡಿ ಕಾರಿದ್ದಾರೆ. ಲಾಲ್ ಬಾಗ್ ತೋಟಗಾರಿಕೆ ಇಲಾಖೆಯ  (Lal Bagh Horticulture Department) ಅಪರ ನಿರ್ದೇಶಕ ಎನ್. ಚಂದ್ರಶೇಖರ್ ವಿರುದ್ಧ ಮಹಿಳಾ ಸಿಬ್ಬಂದಿ ಕಿಡಿ ಕಾರಿದ್ದಾರೆ. ಈ ಬಗ್ಗೆ ಈಗಾಗಲೇ ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ(Minister Munirathna) ಮಾಹಿತಿ ಪಡೆದಿದ್ದಾರೆ. ಇಂದು ಸಂಜೆ ಸಚಿವ ಮುನಿರತ್ನ ಅವರನ್ನು ಲಾಲ್​ಬಾಗ್​ನ ಮಹಿಳಾ ಸಿಬ್ಬಂದಿ ಭೇಟಿ ಮಾಡಿ, ಅಪರ ನಿರ್ದೇಶಕರನ್ನು ಬದಲಾಯಿಸುವಂತೆ ಮನವಿ ಮಾಡಿದ್ದಾರೆ. ಎನ್​. ಚಂದ್ರಶೇಖರ್ ಕಳೆದ 3 ವರ್ಷಗಳಿಂದ ಇದೇ ಹುದ್ದೆಯಲ್ಲಿದ್ದಾರೆ. ಲಾಲ್ ಬಾಗ್​ನಲ್ಲಿ ಚಂದ್ರಶೇಖರ್ ಅವರ ಅಡಿಯಲ್ಲಿ ಒಟ್ಟು 65 ಸಿಬ್ಬಂದಿಗಳಿದ್ದಾರೆ.

ಸಚಿವ ಮುನಿರತ್ನ ಎದುರು ಕಣ್ಣೀರಿಟ್ಟ ಲಾಲ್​ಬಾಗ್ ಮಹಿಳಾ ಸಿಬ್ಬಂದಿ

ಲಾಲ್​ಬಾಗ್ ನಿರ್ದೇಶನಾಲಯ ಕಚೇರಿಗೆ ತೋಟಗಾರಿಕೆ ಸಚಿವ ಮುನಿರತ್ನ ಶುಕ್ರವಾರ ಭೇಟಿ ನೀಡಿ ಮಹಿಳಾ ಸಿಬ್ಬಂದಿಯ ಅಹವಾಲು ಆಲಿಸಿದರು. ಅಪರ ನಿರ್ದೇಶಕ ಎನ್.ಚಂದ್ರಶೇಖರ್ ಅವ​ರನ್ನು ಕೂಡಲೇ ಬದಲಿಸಬೇಕು ಎಂದು ಕಣ್ಣೀರಿಟ್ಟು ಅಹವಾಲು ಸಲ್ಲಿಸಿದರು. ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಚಿವರು ನಿರ್ದೇಶನಾಲಯದ ಕಚೇರಿಗೆ ಭೇಟಿ ನೀಡಿದರು. ಈ ವೇಳೆ ಸಾಲಾಗಿ ನಿಂತ ಮಹಿಳಾ ಸಿಬ್ಬಂದಿ ಅಪರ ನಿರ್ದೇಶಕ ಎನ್.ಚಂದ್ರಶೇಖರ್ ಅವರನ್ನು ಬದಲಿಸಬೇಕು ಎಂದು ಆಗ್ರಹಿಸಿದರು. ಕಳೆದ 3 ವರ್ಷಗಳಿಂದ ಎನ್.ಚಂದ್ರಶೇಖರ್ ಇದೇ ಹುದ್ದೆಯಲ್ಲಿದ್ದಾರೆ. ಅವರ ಅಧೀನದಲ್ಲಿ 65 ಸಿಬ್ಬಂದಿ ಇದ್ದಾರೆ. ಇವರೆಲ್ಲರೂ ಸೇರಿ ಸಚಿವರಿಗೆ ದೂರು ನೀಡಿದ್ದಾರೆ. ಅವರನ್ನು ತಕ್ಷಣವೇ ವರ್ಗಾವಣೆ ಮಾಡಬೇಕು ಎಂದು ನೌಕರರ ಪಟ್ಟು ಹಿಡಿದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಸಚಿವ ಮುನಿರತ್ನ ನಿರ್ದೇಶಕ ನಾಗೇಂದ್ರ ಪ್ರಸಾದ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಮೂರು ತಿಂಗಳ ಹಿಂದೆಯೂ ಮಹಿಳಾ ಸಿಬ್ಬಂದಿ ದೂರು ನೀಡಿದ್ದರು. ಪ್ರತಿ ಸಿಬ್ಬಂದಿಯನ್ನೂ ಮುನಿರತ್ನ ಪ್ರತ್ಯೇಕವಾಗಿ ಮಾತನಾಡುತ್ತಿದ್ದಾರೆ. ಕೆಲಸ ಸ್ಥಗಿತಗೊಳಿಸಿದ ಮಹಿಳಾ ಸಿಬ್ಬಂದಿ ಲಾಲ್​ಬಾಗ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಮಹಿಳಾ ಸಿಬ್ಬಂದಿ ಜೊತೆ ಅಸಭ್ಯವಾಗಿ ವರ್ತಿಸುತ್ತಾರೆ, ಜಾತಿ ನಿಂದನೆ ಮಾಡುತ್ತಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.  ಚಂದ್ರಶೇಖರ್ ವರ್ಗಾವಣೆಗೆ ನೌಕರರು ಮೂರು ದಿನ ಗಡುವು ನೀಡಿದ್ದಾರೆ. ಮೂರು ದಿನಗಳಲ್ಲಿ ವರ್ಗಾವಣೆ ಮಾಡದಿದ್ದರೆ ಅನಿರ್ದಿಷ್ಟಾವಧಿ ಧರಣಿ ನಡೆಸಲು ನೌಕರರು ತೀರ್ಮಾನಿಸಿದ್ದಾರೆ. ಈ ಬಗ್ಗೆ ಸೋಮವಾರ ಸಭೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ತೋಟಗಾರಿಕಾ ಇಲಾಖೆಗೆ ದೂರು ನೀಡಿದರೂ ಅಧಿಕಾರಿಗಳು ತಲೆ ಕೆಡಿಸಿಕೊಂಡಿರಲಿಲ್ಲ. ಹೀಗಾಗಿ, ಇದೀಗ ಲಾಲ್ ಬಾಗ್ ಮಹಿಳಾ ಸಿಬ್ಬಂದಿಗಳು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.

ಮಹಿಳಾ ಸಿಬ್ಬಂದಿ ನೀಡಿರುವ ದೂರು ಏನು?:
– ಒಂದಿಲ್ಲೊಂದು ತಗಾದೆ ತೆಗೆದು ಮಾನಸಿಕ ಕಿರುಕುಳ
– ಅವಾಚ್ಯ ಶಬ್ದಗಳಿಂದ ನಿರಂತರ ನಿಂದನೆ
– ಲಾಲ್ ಬಾಗ್ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ 10ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿಗಳಿಂದ ದೂರು
– ಕೊಠಡಿಗೆ ಕರೆಸಿ ಮೈ, ಕೈ ಮುಟ್ಟುವುದು
– ವೈಯಕ್ತಿಕ ವಿಚಾರ ಕೆದಕುವುದು, ಕಾರಣವಿಲ್ಲದೆ ಅರಚುತ್ತಾರೆಂಬ ಆರೋಪ
– ರಜೆ ಕೇಳಿದರೆ ಕೊಡದೆ ಹಿಂಸೆ ನೀಡುತ್ತಿರುವ ಆರೋಪ

ಈ ಕಾರಣಗಳಿಂದ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ. ಮಂಗಳವಾರ ಲಾಲ್ ಬಾಗ್​ಗೆ ಮಹಿಳಾ ಆಯೋಗ ಭೇಟಿ ನೀಡಲಿದೆ ಎಂದು ಟಿವಿ9ಗೆ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಪ್ರಮೀಳಾ ನಾಯ್ಡು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹಿಜಾಬ್ ವಿವಾದ: ಗದಗ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಮತ್ತು ವಿದ್ಯಾರ್ಥಿನಿಯರ ನಡುವೆ ವಾಗ್ವಾದ

ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ ಲಾಲ್‌ಬಾಗ್‌, ಕಬ್ಬನ್ ಪಾರ್ಕ್​ಗಿಂತಲೂ ಅತಿದೊಡ್ಡ ಪಾರ್ಕ್; ತೋಟಗಾರಿಕೆ ಇಲಾಖೆ ಹೊಸ ಪ್ಲಾನ್

Published On - 5:03 pm, Fri, 18 February 22