ಲಿಂಗರಾಜಪುರದಲ್ಲಿ ಕುಡಿಯುವ ನೀರಿಗೆ ಕೊಳಚೆ ಮಿಶ್ರಣ; ರೊಬೊಟಿಕ್ ತನಿಖೆ ಆರಂಭಿಸಿದ ಜಲಮಂಡಳಿ

ಬೆಂಗಳೂರಿನ ಲಿಂಗರಾಜಪುರಂನಲ್ಲಿ ಕುಡಿಯುವ ನೀರಿಗೆ ಕೊಳಚೆ ನೀರು ಮಿಶ್ರಣವಾಗಿ ನಿವಾಸಿಗಳು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. BWSSB ನೀರು ಸರಬರಾಜು ಸ್ಥಗಿತಗೊಳಿಸಿ, ರೋಬೋಟ್‌ಗಳ ಮೂಲಕ ಮಾಲಿನ್ಯದ ಮೂಲ ಪತ್ತೆಹಚ್ಚುತ್ತಿದೆ. 'ಸಂಚಾರಿ ಕಾವೇರಿ' ಮೂಲಕ ಉಚಿತ ನೀರು ಪೂರೈಕೆ ಮಾಡಲಾಗುತ್ತಿದ್ದು, ಆರೋಗ್ಯ ಸಮೀಕ್ಷೆಯನ್ನೂ ನಡೆಸಲಾಗುತ್ತಿದೆ. ಮಾಲಿನ್ಯ ನಿಯಂತ್ರಣಕ್ಕೆ ಮಂಡಳಿ ತ್ವರಿತ ಕ್ರಮ ಕೈಗೊಂಡಿದೆ.

ಲಿಂಗರಾಜಪುರದಲ್ಲಿ ಕುಡಿಯುವ ನೀರಿಗೆ ಕೊಳಚೆ ಮಿಶ್ರಣ; ರೊಬೊಟಿಕ್ ತನಿಖೆ ಆರಂಭಿಸಿದ ಜಲಮಂಡಳಿ
ಲಿಂಗರಾಜಪುರದಲ್ಲಿ ಕುಡಿಯುವ ನೀರಿಗೆ ಕೊಳಚೆ ನೀರು ಮಿಶ್ರಣ

Updated on: Jan 05, 2026 | 11:33 AM

ಬೆಂಗಳೂರು, ಜನವರಿ 05: ನಗರದ ಲಿಂಗರಾಜಪುರದ ಕೆಎಸ್‌ಎಫ್‌ಸಿ ಲೇಔಟ್‌ನಲ್ಲಿ ಕುಡಿಯುವ ನೀರಿಗೆ ಕೊಳಚೆ ನೀರು ಮಿಶ್ರಣವಾದ ಹಿನ್ನೆಲೆಯಲ್ಲಿ ನಿವಾಸಿಗಳು ಗಂಭೀರ ಆರೋಗ್ಯ ಬಿಕ್ಕಟ್ಟಿನ ಭಯದಲ್ಲಿ ಬದುಕುತ್ತಿದ್ದಾರೆ. ಕಳೆದ ಒಂದು ವಾರಕ್ಕೂ ಹೆಚ್ಚು ಕಾಲ 30ರಿಂದ 40 ಮನೆಗಳ ನಿವಾಸಿಗಳು ಜಠರ ಮತ್ತು ಕರುಳಿನ ಸೋಂಕು, ವಾಂತಿ, ಅತಿಸಾರ, ಹೊಟ್ಟೆ ನೋವು ಸೇರಿದಂತೆ ನೀರಿನಿಂದ ಹರಡುವ ಕಾಯಿಲೆಗಳಿಂದ ಬಳಲಿದ್ದು, ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಲುಷಿತ ನೀರಿನಿಂದ ಸ್ಥಳೀಯರ ಪರದಾಟ

ಮೊದಲಿಗೆ ಈ ಸಮಸ್ಯೆಯನ್ನು ಸೋಂಕು ಅಥವಾ ಫುಡ್ ಪಾಯ್ಸನಿಂಗ್ ಎಂದು ಭಾವಿಸಲಾಗಿತ್ತು. ಆದರೆ ನಲ್ಲಿಗಳಿಂದ ದುರ್ವಾಸನೆಯುಕ್ತ, ನೊರೆಯುಳ್ಳ ನೀರು ಹರಿಯಲು ಆರಂಭಿಸಿದಾಗ ಹಾಗೂ ಸಂಪ್‌ಗಳಲ್ಲಿ ಕೊಳಚೆ ನೀರಿನ ಪದರ ಕಂಡುಬಂದಾಗ ಮಾಲಿನ್ಯದ ತೀವ್ರತೆ ಬಹಿರಂಗವಾಯಿತು. ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಈ ಪ್ರದೇಶಕ್ಕೆ ನೀರು ಸರಬರಾಜನ್ನು ಸ್ಥಗಿತಗೊಳಿಸಿದ್ದು, ನಿವಾಸಿಗಳು ಖಾಸಗಿ ಟ್ಯಾಂಕರ್ ನೀರಿನ ಮೇಲೆ ಅವಲಂಬಿತರಾಗಿದ್ದಾರೆ.

ರೋಬೋಟ್‌ಗಳನ್ನು ಬಳಸಿ ತನಿಖೆ ಆರಂಭ

ಸಾರ್ವಜನಿಕ ಆರೋಗ್ಯವನ್ನು ಕಾಪಾಡುವ ಮುನ್ನೆಚ್ಚರಿಕೆ ಕ್ರಮವಾಗಿ ಲಿಂಗರಾಜಪುರಂನ ಕೆಲವು ಭಾಗಗಳಿಗೆ ನೀರು ಸರಬರಾಜು ಮಾಲಿನ್ಯದ ವರದಿಗಳ ನಂತರ ನಿಲ್ಲಿಸಲಾಗಿದೆ ಎಂದು ಬಿಡಬ್ಲ್ಯೂಎಸ್ಎಸ್ಬಿ ತಿಳಿಸಿದೆ. ಮಾಲಿನ್ಯದ ಮೂಲವನ್ನು ನಿಖರತೆ ಮತ್ತು ವೇಗದಿಂದ ಗುರುತಿಸಲು, ಮಂಡಳಿಯು ಸಿಬ್ಬಂದಿಯೊಂದಿಗೆ ಸುಧಾರಿತ ರೋಬೋಟ್‌ಗಳನ್ನು ಬಳಸಿಕೊಂಡು ತನಿಖೆಯನ್ನು ಪ್ರಾರಂಭಿಸಿದೆ. ಮಾಲಿನ್ಯದ ಮೂಲ ಪತ್ತೆಹಚ್ಚಲು ಬಿಡಬ್ಲ್ಯೂಎಸ್ಎಸ್ಬಿ ರೋಬೋಟಿಕ್ ತಂತ್ರಜ್ಞಾನ ಬಳಸಿ ತನಿಖೆ ಆರಂಭಿಸಿದ್ದು, ಕುಡಿಯುವ ನೀರಿನ ಪೈಪ್‌ಲೈನ್‌ನಲ್ಲಿ ಕೊಳಚೆ ನೀರು ಮಿಶ್ರಣವಾಗಿರುವುದು ದೃಢಪಟ್ಟಿದೆ. ಇದರಿಂದಾಗಿ ಯಾವುದೇ ಸಾಂಕ್ರಾಮಿಕ ರೋಗ ಕಂಡುಬರದೆ ಇದ್ದರೂ, ಜ್ವರ, ಫುಡ್ ಪಾಯ್ಸನಿಂಗ್ ಸಮಸ್ಯೆಗಳು ಎದುರಾಗಿವೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

‘ಸಂಚಾರಿ ಕಾವೇರಿ’ ಮೂಲಕ ಉಚಿತ ನೀರು

ನೀರಿನ ಸಮಸ್ಯೆಯನ್ನು ಶೀಘ್ರ ಪರಿಹರಿಸಲು ಎಂಜಿನಿಯರಿಂಗ್ ತಂಡಗಳಿಗೆ ಸೂಚನೆ ನೀಡಲಾಗಿದ್ದು, ತಾತ್ಕಾಲಿಕವಾಗಿ ‘ಸಂಚಾರಿ ಕಾವೇರಿ’ ಟ್ಯಾಂಕರ್‌ಗಳ ಮೂಲಕ ಉಚಿತ ನೀರು ಪೂರೈಕೆ ಮಾಡಲಾಗುತ್ತಿದೆ. ಸಾರ್ವಜನಿಕ ಆರೋಗ್ಯ ಕಾಪಾಡಲು ಆರೋಗ್ಯ ಸಮೀಕ್ಷೆಯೂ ನಡೆಯಲಿದೆ. ಮಾಲಿನ್ಯದ ಪರಿಣಾಮವನ್ನು ನಿರ್ಣಯಿಸಲು ಆರೋಗ್ಯ ಅಧಿಕಾರಿಗಳು ಸೋಮವಾರ (ಜನವರಿ 5) ಪೀಡಿತ ಪ್ರದೇಶದಲ್ಲಿ ಆರೋಗ್ಯ ಸಮೀಕ್ಷೆ ನಡೆಸಲಿದ್ದಾರೆ. ತಪಾಸಣೆ ಮತ್ತು ದುರಸ್ತಿ ಕಾರ್ಯದ ಸಮಯದಲ್ಲಿ ಅಧಿಕಾರಿಗಳೊಂದಿಗೆ ಸಹಕರಿಸಲು ಮತ್ತು ಪೈಪ್ ನೀರು ಸರಬರಾಜು ಸಂಪೂರ್ಣವಾಗಿ ಪುನಃಸ್ಥಾಪನೆಯಾಗುವವರೆಗೆ ಟ್ಯಾಂಕರ್ ಸೇವೆಗಳನ್ನು ಬಳಸಿಕೊಳ್ಳಲು ನಿವಾಸಿಗಳಿಗೆ ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.