ಹಿಂದೂಳಿದ ವರ್ಗಗಳ ಸ್ವಾಮೀಜಿಗಳ ಭೇಟಿ ಬೆನ್ನಲ್ಲೇ ಸಿಎಂ ಭೇಟಿಯಾದ ಲಿಂಗಾಯತ ಸ್ವಾಮೀಜಿ ನಿಯೋಗ
ಹಿಂದೂಳಿದ ವರ್ಗಗಳ ಸ್ವಾಮೀಜಿಗಳ ನಿಯೋಗ ಮೊನ್ನೇ ಅಷ್ಟೇ ಸಿಎಂ ಸಿದ್ದರಾಮಯ್ಯ ಭೇಟಿಯಾದ ಬೆನ್ನಲ್ಲೇ ಇದೀಗ ಲಿಂಗಾಯತ ಸಮುದಾಯದ ಸ್ವಾಮೀಜಿಗಳು ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದಾರೆ. ಹಾಗಾದ್ರೆ, ಲಿಂಗಾಯಯ ಸ್ವಾಮೀಜಿ ನಿಯೋಗ ಸಿಎಂ ಭೇಟಿ ಮಾಡಿದ್ಯಾಕೆ? ಬೇಡಿಕೆ ಇಟ್ಟಿದ್ದೇನು? ಇಲ್ಲಿದೆ ವಿವರ.

ಬೆಂಗಳೂರು, (ಜನವರಿ 08): ಮೊನ್ನೇ ಅಷ್ಟೇ ಹಿಂದೂಳಿದ ವರ್ಗಗಳ ಸ್ವಾಮೀಜಿಗಳ ನಿಯೋಗ ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಜಾತಿಗಣತಿ ವರದಿ ಬಿಡುಗಡೆ ಮಾಡುವಂತೆ ಮನವಿ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಲಿಂಗಾಯತ ಮಠಾಧೀಶರ ನಿಯೋಗ ಇಂದು (ಜನವರಿ 08) ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದು, ಬಸವಣ್ಣರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವಂತೆ ಮನವಿ ಮಾಡಿದೆ.
ಬಸವಲಿಂಗ ಪಟ್ಟಾದೇವರು ಸ್ವಾಮೀಜಿ ನೇತೃತ್ವದ ನಿಯೋಗ ಬೆಂಗಳೂರಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದು, ಜಗಜ್ಯೋತಿ ಬಸವೇಶ್ವರರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಅಥವಾ ರಾಯಭಾರಿಯನ್ನಾಗಿ ಘೋಷಿಸುವಂತೆ ಒತ್ತಾಯಿಸಿತು. ಇದಕ್ಕೆ ಸಿಎಂ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ವಿಚಾರವನ್ನು ಸಚಿವ ಸಂಪುಟದ ಮುಂದಿಟ್ಟು ತೀರ್ಮಾನ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ಸಿಎಂ ಭೇಟಿಯಾದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಈಶ್ವರ್ ಖಂಡ್ರೆ, ಜಗಜ್ಯೋತಿ ಬಸವೇಶ್ವರರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಅಥವಾ ರಾಯಭಾರಿಯಾಗಿ ಘೋಷಿಸುವಂತೆ ಸಿಎಂಗೆ ನಾವು ಮನವಿ ಮಾಡಿದ್ದೇವೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳುವುದಾಗಿ ಸಿಎಂ ತಿಳಿಸಿದ್ದಾರೆ. ಬಸವೇಶ್ವರರು ಎಲ್ಲ ಸಮುದಾಯಗಳಿಗೂ ಪ್ರತಿನಿಧಿಸುತ್ತಾರೆ. ಜಾತಿ, ಮತ, ಪಂಥ ಇಲ್ಲದೇ ಎಲ್ಲ ಸಮುದಾಯಗಳಿಗೂ ಪ್ರತಿನಿಧಿಸುತ್ತಾರೆ ಎಂದು ಹೇಳಿದರು.
ನಿಯೋಗದಲ್ಲಿ ಶ್ರೀಶೈಲ ಜಗದ್ಗುರುಗಳು, ಫಕೀರ ದಿಂಗಾಲೇಶ್ವರ ಸ್ವಾಮೀಜಿ, ಡಾ.ರಾಜಶೇಖರ ಶಿವಾಚಾರ್ಯರು, ಡಾ.ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ, ಶ್ರೀ ವೀರಭದ್ರ ಶಿವಾ ಕಡಕಂಚಿ, ಅಕ್ಕ ಅನ್ನಪೂರ್ಣತಾಯಿ, ಜ್ಞಾನ ಪ್ರಕಾಶ ಸ್ವಾಮೀಜಿ, ಡಾ.ಗಂಗಾಬಿಕೆ ಅಕ್ಕ, ಮಾದಾರ ಚನ್ನಯ್ಯ ಸ್ವಾಮೀಜಿ ಸೇರಿ ಒಟ್ಟು 48 ಸ್ವಾಮೀಜಿಗಳು, ಶರಣರು ನಿಯೋಗದಲ್ಲಿದ್ದರು.
ಹಾಗೇ ಸಚಿವರಾದ ಎಂ.ಬಿ.ಪಾಟೀಲ್, ಈಶ್ವರ ಖಂಡ್ರೆ ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ನಸೀರ್ ಅಹಮದ್ ಹಾಗೂ ಕ್ರೈಸ್ತ ಧರ್ಮ ಗುರುಗಳು ನಿಯೋಗದ ಜತೆಗಿದ್ದರು. ಇನ್ನುಸಾಂಸ್ಕೃತಿಕ ಮತ್ತು ಸಾಹಿತ್ಯಿಕ ವಲಯದಿಂದ ಎಸ್.ಜಿ.ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ಎಚ್.ಎಲ್.ಪುಷ್ಪ, ಮಾವಳ್ಳಿ ಶಂಕರ್, ವಸುಂಧರ ಭೂಪತಿ, ಕೆ.ಷರೀಫಾ, ಎಲ್.ಮುಕುಂದರಾಜು, ಜಾಗೃತ ಕರ್ನಾಟಕದ ಬಿ.ಸಿ.ಬಸವರಾಜು, ದೊಡ್ಡಿಪಾಳ್ಯ ನರಸಿಂಹಮೂರ್ತಿ ಉಪಸ್ಥಿತರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.